ADVERTISEMENT

ಹೆದ್ದಾರಿ ಗಸ್ತು ವಾಹನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 9:25 IST
Last Updated 18 ಫೆಬ್ರುವರಿ 2017, 9:25 IST
ಚಾಮರಾಜನಗರ: ‘ರಾಜ್ಯ ಸರ್ಕಾರ ಜಿಲ್ಲಾ ಪೊಲೀಸ್‌ ಘಟಕಕ್ಕೆ ಮೂರು ಹೆದ್ದಾರಿ ಗಸ್ತು ವಾಹನ ಮಂಜೂರು ಮಾಡಿದ್ದು, ಇಂದಿನಿಂದ ಕಾರ್ಯ ನಿರ್ವಹಿಸಲಿವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕುಲದೀಪ್‌ ಕುಮಾರ್ ಆರ್. ಜೈನ್ ತಿಳಿಸಿದರು.
 
ನಗರದ ಜಿಲ್ಲಾ ಪೊಲೀಸ್‌ ಕಚೇರಿ ಆವರಣದಲ್ಲಿ ಶುಕ್ರವಾರ ಹೆದ್ದಾರಿ ಗಸ್ತು ವಾಹನಕ್ಕೆ ಚಾಲನೆ ನೀಡಿದ ನಂತರ ಅವರು ಮಾತನಾಡಿದರು.
ತಾಂತ್ರಿಕ ಕಾರಣಗಳಿಂದ ಹೆದ್ದಾರಿ ಗಸ್ತು ವಾಹನ ಸ್ಥಗಿತಗೊಂಡಿತ್ತು. ಕಳೆದ ವಾರ ದುರಸ್ತಿಪಡಿಸಲಾಗಿದೆ. ಇಬ್ಬರು ಚಾಲಕರನ್ನು ಒಳಗೊಂಡು ವಾಹನವು ಹೆದ್ದಾರಿ ವ್ಯಾಪ್ತಿ 24*7 ಸಂಚರಿಸಲಿದೆ ಎಂದು ವಿವರಿಸಿದರು.
 
ಪ್ರತಿ ವಾಹನವು 50ರಿಂದ 60 ಕಿ.ಮೀ. ವ್ಯಾಪ್ತಿಯಲ್ಲಿ ಗಸ್ತು ನಡೆಸಲಿದೆ. ಈಗಾಗಲೇ, ಗುಂಡ್ಲುಪೇಟೆ–ಊಟಿ ರಸ್ತೆ ಯಲ್ಲಿ ಒಂದು ವಾಹನ ಕಾರ್ಯ ನಿರ್ವಹಿಸುತ್ತಿದೆ ಎಂದ ಅವರು, ಸತ್ತಿ, ಮೂಗೂರು ರಸ್ತೆವರೆಗೆ ಒಂದು ವಾಹನ ಕಾರ್ಯ ನಿರ್ವಹಿಸಲಿದೆ. ಇದರ ಮುಖ್ಯ ಕಚೇರಿಯು ಚಾಮರಾಜನಗರದಲ್ಲಿದೆ ಎಂದು ತಿಳಿಸಿದರು.
 
ಟಗರಪುರ, ಹನೂರು ಮಾರ್ಗದಲ್ಲಿ ಮತ್ತೊಂದು ವಾಹನ ಕಾರ್ಯ ನಿರ್ವಹಿಸ ಲಿದೆ. ಇದರ ಕೇಂದ್ರ ಕಚೇರಿಯು ಕೊಳ್ಳೇಗಾಲ ಪಟ್ಟಣದಲ್ಲಿದೆ. ಈ ವಾಹನ ಯಳಂದೂರು ಪಟ್ಟಣದವರೆಗೂ ಕಾರ್ಯ ನಿರ್ವಹಿಸಲಿದೆ. 3ನೇ ವಾಹನವು ಹನೂರಿನಿಂದ ಮಲೆ ಮಹದೇಶ್ವರ ಬೆಟ್ಟದವರೆಗೆ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು.
 
ಈ ವಾಹನಗಳಲ್ಲಿ 360 ಡಿಗ್ರಿ ಸುತ್ತುವ ಕ್ಯಾಮೆರಾ, ಅಪಘಾತದಲ್ಲಿ ಗಾಯಗೊಂಡವರನ್ನು ಸಾಗಿಸಲು ಸ್ಟ್ರೆಕ್ಚರ್, ಪಬ್ಲಿಕ್‌ ಅಡ್ರೆಸಿಂಗ್‌ ಸಿಸ್ಟಂ, ಸರ್ಚ್‌ಲೈಟ್‌ ಸೇರಿದಂತೆ ತುರ್ತು ಸಂದರ್ಭಗಳಿಗೆ ಅನುಕೂಲವಾಗು ವಂತಹ ಉಪಕರಣಗಳಿವೆ ಎಂದು ಮಾಹಿತಿ ನೀಡಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಮುತ್ತು ರಾಜು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.