ADVERTISEMENT

15 ಅಧಿಕಾರಿಗಳಿಗೆ ಷೋಕಾಸ್ ನೋಟಿಸ್

ವಿವಿಧ ಇಲಾಖೆಗಳ ಕಚೇರಿಗೆ ಸಿಇಒ ದಿಢೀರ್‌ ಭೇಟಿ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2017, 8:16 IST
Last Updated 16 ನವೆಂಬರ್ 2017, 8:16 IST

ಚಾಮರಾಜನಗರ: ನಿಗದಿತ ವೇಳೆಯಲ್ಲಿ ಕಚೇರಿಗೆ ಹಾಜರಾಗದ ವಿವಿಧ ಇಲಾಖೆಗಳ 15 ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್ ಕುಮಾರ್ ಕಾರಣ ಕೇಳಿ ಷೋಕಾಸ್‌ ನೋಟಿಸ್‌ ಜಾರಿ ಮಾಡಿದ್ದಾರೆ.

ಬುಧವಾರ ಬೆಳಿಗ್ಗೆ 10 ಗಂಟೆಗೆ ಕಚೇರಿ ಅವಧಿ ಪ್ರಾರಂಭವಾಗುತ್ತಿದ್ದಂತೆಯೇ ಜಿಲ್ಲಾಡಳಿತ ಭವನದ ಮಹಡಿಯಲ್ಲಿ ಇರುವ ವಿವಿಧ ಇಲಾಖೆಯ ಕಚೇರಿಗಳಿಗೆ ಅವರು ಹಠಾತ್‌ ಭೇಟಿ ನೀಡಿ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರ ಹಾಜರಾತಿ ಪರಿಶೀಲಿಸಿದರು.

ಮೊದಲಿಗೆ ಕಾರ್ಮಿಕ ಇಲಾಖೆಗೆ ಭೇಟಿ ಕೊಟ್ಟ ವೇಳೆ ಜಿಲ್ಲಾ ಕಾರ್ಮಿಕ ಅಧಿಕಾರಿ ಇರದಿದ್ದುದು ಕಂಡುಬಂತು. ಉಳಿದ ಸಿಬ್ಬಂದಿಯಿಂದ ಕಚೇರಿ ಹಾಜರಾತಿ ವಿವರ ಪಡೆದರು.

ADVERTISEMENT

ಬಳಿಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮೀನುಗಾರಿಕೆ ಇಲಾಖೆ, ಸಹಕಾರ ಇಲಾಖೆ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಖಾದಿ ಮತ್ತು ಗ್ರಾಮೋದ್ಯೋಗ, ಕೈಮಗ್ಗ ಜವಳಿ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಆಹಾರ ನಾಗರಿಕ ಸರಬರಾಜು ನಿಗಮ ಮುಂತಾದ ಇಲಾಖಾ ಕಚೇರಿಗಳಿಗೆ ತೆರಳಿದರು. ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಇನ್ನೂ ಹಾಜರಾಗದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿ ಇಲಾಖೆಯಲ್ಲೂ ಹಾಜರಿ ದಾಖಲಾತಿ ಪುಸ್ತಕಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು. ಕಚೇರಿ ಅವಧಿ ಪ್ರಾರಂಭವಾದರೂ ಕರ್ತವ್ಯಕ್ಕೆ ಹಾಜರಾಗದಿದ್ದ 15 ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದರು.

‘ನಾನು ನಿಮ್ಮ ಕಚೇರಿಗೆ ಭೇಟಿ ನೀಡಿದ ಸಮಯದಲ್ಲಿ ದಾಖಲೆ ಪರಿಶೀಲಿಸಿದಾಗ ಕೆಲ ಸಿಬ್ಬಂದಿ ಮಾತ್ರ ಹಾಜರಾತಿ ಹಾಕಿರುವುದು ಕಂಡುಬಂದಿದೆ. ನಿಗದಿತ ಸಮಯದಲ್ಲಿ ಕರ್ತವ್ಯಕ್ಕೆ ಹಾಜರಾಗುವುದು ಕಡ್ಡಾಯ. ಆದರೆ ನೀವು ಮತ್ತು ನಿಮ್ಮ ಸಿಬ್ಬಂದಿ ನಿಗದಿತ ಸಮಯಕ್ಕೆ ಕಚೇರಿಗೆ ಹಾಜರಾಗದ ಬಗ್ಗೆ ನೋಟಿಸ್ ತಲುಪಿದ 24 ಗಂಟೆಯೊಳಗೆ ವಿವರಣೆ ನೀಡಬೇಕು. ತಪ್ಪಿದ್ದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಅಧಿಕಾರಿಗಳು ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಕಚೇರಿಗೆ ಹಾಜರಾಗಬೇಕು. ಸಿಬ್ಬಂದಿಗೂ ಈ ಬಗ್ಗೆ ತಿಳಿವಳಿಕೆ ನೀಡಬೇಕು. ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸಬೇಕು ಎಂದು ಅವರು ನೋಟಿಸ್‌ನಲ್ಲಿ ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.