ADVERTISEMENT

ಇಂದು, ನಾಳೆ ಪರಿವರ್ತನಾ ಯಾತ್ರೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2018, 9:02 IST
Last Updated 20 ಜನವರಿ 2018, 9:02 IST
ಕೊಳ್ಳೇಗಾಲದಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆಯ ವೇದಿಕೆ ನಿರ್ಮಾಣದ ಸಿದ್ಧತೆ ನಡೆದಿದೆ
ಕೊಳ್ಳೇಗಾಲದಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆಯ ವೇದಿಕೆ ನಿರ್ಮಾಣದ ಸಿದ್ಧತೆ ನಡೆದಿದೆ   

ಚಾಮರಾಜನಗರ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದ ನವಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯು 20ರಂದು ಜಿಲ್ಲೆಗೆ ಕಾಲಿಡಲಿದೆ. ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ ಸಭೆಗಳನ್ನು ಆಯೋಜಿಸಲಾಗಿದ್ದು, ವೇದಿಕೆ ನಿರ್ಮಾಣದ ಕಾರ್ಯಗಳು ಭರದಿಂದ ಸಾಗಿವೆ.

ಶನಿವಾರ ಸಂಜೆ ಸತ್ತೇಗಾಲದ ಮೂಲಕ ಜಿಲ್ಲೆಗೆ ಪ್ರವೇಶಿಸಲಿರುವ ಯಾತ್ರೆಯು ಹನೂರು ತಲುಪಲಿದೆ. ಅಲ್ಲಿನ ಮಹದೇಶ್ವರ ಕ್ರೀಡಾಂಗಣದಲ್ಲಿ ಸಂಜೆ 6 ಗಂಟೆಗೆ ಸಮಾವೇಶ ನಡೆಯಲಿದೆ. ಬಳಿಕ, ಮುಖಂಡರು ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿ ವಾಸ್ತವ್ಯ ಹೂಡಲಿದ್ದಾರೆ.

ಭಾನುವಾರ ಬೆಳಿಗ್ಗೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, 10 ಗಂಟೆಗೆ ಕೊಳ್ಳೇಗಾಲ ತಲುಪಲಿದೆ. ಅಲ್ಲಿನ ಎಂಜಿಎಸ್‌ವಿ ಕಾಲೇಜು ಆವರಣದಲ್ಲಿ ನಡೆಯಲಿದೆ. ನಂತರ, ಯಳಂದೂರು, ಸಂತೇಮರಹಳ್ಳಿ ಮಾರ್ಗವಾಗಿ ನಗರಕ್ಕೆ ಬರಲಿದೆ.

ADVERTISEMENT

ನಗರದ ಹಳೆ ಖಾಸಗಿ ಬಸ್‌ ನಿಲ್ದಾಣದಲ್ಲಿ ಮಧ್ಯಾಹ್ನ 2 ಗಂಟೆಗೆ ಬೃಹತ್ ಸಮಾವೇಶ ನಡೆಯಲಿದೆ. ಯಾತ್ರೆಯು ಸಂಜೆ 5 ಗಂಟೆ ಸುಮಾರಿಗೆ ಗುಂಡ್ಲುಪೇಟೆಯನ್ನು ತಲುಪಲಿದ್ದು, ದೇವರಾಜ ಅರಸು ಕ್ರೀಡಾಂಗಣದಲ್ಲಿ ಸಭೆ ನಡೆಯಲಿದೆ. ಮುಖಂಡರು ಅಲ್ಲಿಯೇ ಉಳಿದುಕೊಳ್ಳಲಿದ್ದು, ಮರುದಿನ ಬೆಳಿಗ್ಗೆ ಎಚ್‌.ಡಿ ಕೋಟೆಯತ್ತ ಪ್ರಯಾಣ ಬೆಳೆಸಲಿದ್ದಾರೆ.

ಜನಾಕರ್ಷಣೆಗೆ ಕಸರತ್ತು: ಕೆಲವೆಡೆ ಯಾತ್ರೆಗೆ ಸಾಕಷ್ಟು ಜನರನ್ನು ಸೇರಿಸುವಲ್ಲಿ ಸ್ಥಳೀಯ ಮುಖಂಡರು ವಿಫಲರಾಗಿದ್ದು, ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಜಿಲ್ಲೆಯು ಕಾಂಗ್ರೆಸ್‌ನ ಭದ್ರಕೋಟೆಯಾಗಿರುವುದರಿಂದ ಇಲ್ಲಿ ಜನರನ್ನು ಸೇರಿಸುವುದು ಮುಖಂಡರಿಗೆ ದೊಡ್ಡ ಸವಾಲಾಗಿದೆ.

ಇದಕ್ಕಾಗಿ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ತೀವ್ರ ಕಸರತ್ತು ನಡೆಸಿದ್ದು, ವಿವಿಧ ಬಡಾವಣೆಗಳಿಗೆ ತೆರಳಿ ಭಿತ್ತಿಪತ್ರಗಳನ್ನು ಅಂಟಿಸುವ, ಕರಪತ್ರಗಳನ್ನು ಹಂಚುವ ಜತೆಗೆ, ಆಟೊಗಳಲ್ಲಿ ಧ್ವನಿವರ್ಧಕಗಳ ಮೂಲಕ ಪ್ರಚಾರ ನಡೆಸುತ್ತಿದ್ದಾರೆ. ಹನೂರು, ಕೊಳ್ಳೇಗಾಲ ಮತ್ತು ಗುಂಡ್ಲುಪೇಟೆಗಳಲ್ಲಿ ಕನಿಷ್ಠ 10,000 ಜನರನ್ನು ಮತ್ತು ಜಿಲ್ಲಾ ಕೇಂದ್ರದಲ್ಲಿ 15–20 ಸಾವಿರ ಜನರನ್ನು ಸೇರಿಸುವುದು ಅವರ ಗುರಿಯಾಗಿದೆ.

ಜನರನ್ನು ಸೆಳೆಯುವುದು ಮಾತ್ರವಲ್ಲದೆ, ಕಾಂಗ್ರೆಸ್‌ ಪಕ್ಷಕ್ಕೆ ಇರುವ ಬೆಂಬಲವನ್ನು ತೋರಿಸುವುದು ಸಹ ಯಾತ್ರೆಯ ಉದ್ದೇಶ. ಮುಂದಿನ ಚುನಾವಣೆ ಪ್ರಚಾರಕ್ಕೆ ಇದು ಗಟ್ಟಿಯಾದ ತಳಹದಿ ಹಾಕಲಿದೆ ಎಂದು ಹೆಸರು ಹೇಳಲಿಚ್ಛಿಸದ ಪಕ್ಷದ ಮುಖಂಡರೊಬ್ಬರು ತಿಳಿಸಿದರು.

ಗರಿಗೆದರಿದ ಚಟುವಟಿಕೆ: ಯಾತ್ರೆಯನ್ನು ಅದ್ಧೂರಿಯಾಗಿ ನಡೆಸುವುದರ ಜತೆಗೆ, ಟಿಕೆಟ್‌ ಹಂಚಿಕೆ ಸಂಬಂಧ ನಾಯಕರ ಮನವೊಲಿಕೆಗೆ ಈ ಸಂದರ್ಭವನ್ನು ಬಳಸಿಕೊಳ್ಳಲು ಜಿಲ್ಲೆಯ ಮುಖಂಡರು ಮುಂದಾಗಿದ್ದಾರೆ ಎನ್ನಲಾಗಿದೆ.

ನಾಲ್ಕೂ ಕ್ಷೇತ್ರಗಳಲ್ಲಿ ಟಿಕೆಟ್‌ ಆಕಾಂಕ್ಷಿಗಳು ಈಗಾಗಲೇ ಪ್ರಭಾವಿ ಮುಖಂಡರ ಮನವೊಲಿಕೆಗೆ ಪ್ರಯತ್ನ ನಡೆಸಿದ್ದಾರೆ. ವರಿಷ್ಠರನ್ನು ಭೇಟಿ ಮಾಡಿ ತಮ್ಮ ಬಯಕೆ ಹಂಚಿಕೊಳ್ಳಲು ಯಾತ್ರೆ ವೇದಿಕೆ ಒದಗಿಸಲಿದೆ. ಹೀಗಾಗಿ, ಯಾತ್ರೆಯ ಸಿದ್ಧತೆಯ ಹೊಣೆಗಾರಿಕೆಗಳನ್ನು ವಹಿಸಿಕೊಳ್ಳಲು ಉತ್ಸಾಹ ತೋರುತ್ತಿದ್ದಾರೆ.

ವೇದಿಕೆಯ ಸಿದ್ಧತೆ ವೀಕ್ಷಣೆ

ಕೊಳ್ಳೇಗಾಲ: ನಗರದ ಎಂ.ಜಿ.ಎಸ್.ವಿ ಮೈದಾನದಲ್ಲಿ ಭಾನುವಾರ ನಡೆಯಲಿರುವ ಪರಿವರ್ತನಾ ಯಾತ್ರೆಯ ಸಮಾರಂಭಕ್ಕೆ ಸಿದ್ದವಾಗುತ್ತಿರುವ ವೇದಿಕೆಯನ್ನು ಸಂಸದ ಪ್ರತಾಪ್‌ ಸಿಂಹ ಶುಕ್ರವಾರ ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಘಟಕದ ಕಾರ್ಯದರ್ಶಿ ಸರ್ವೇಶ್‌ ಬಸವಯ್ಯ, ಮುಖಂಡರಾದ ಶ್ರೀಧರ ಮೂರ್ತಿ, ಮಾಂಬಳ್ಳಿ ನಂಜುಂಡಸ್ವಾಮಿ, ಜಿ.ಪಿ ಶಿವಕುಮಾರ್, ಸುರೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ನಾಗರಾಜು, ನಗರಸಭೆ ಸದಸ್ಯ ಗಿರೀಶ್, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.