ADVERTISEMENT

ಸಣ್ಣ ಈರುಳ್ಳಿ ಧಾರಣೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2018, 9:34 IST
Last Updated 23 ಜನವರಿ 2018, 9:34 IST
ಸಣ್ಣ ಈರುಳ್ಳಿ
ಸಣ್ಣ ಈರುಳ್ಳಿ   

ಚಾಮರಾಜನಗರ: ಸಾಂಬಾರು ಪ್ರಿಯರಿಗೆ ತೀವ್ರ ನಿರಾಶೆ ಉಂಟು ಮಾಡಿದ್ದ ಸಣ್ಣ ಈರುಳ್ಳಿ ಬೆಲೆ ಕೊನೆಗೂ ಇಳಿಕೆ ಕಂಡಿದೆ. ತರಕಾರಿ, ಹಣ್ಣು, ಹೂವಿನ ಧಾರಣೆ ಸ್ಥಿರವಾಗಿದ್ದು, ಕಳೆದ ಎರಡು ತಿಂಗಳಿಂದ ಬೆಲೆ ಹೆಚ್ಚಳದಿಂದ ತತ್ತರಿಸಿದ್ದ ಜನರಿಗೆ ಸ್ವಲ್ಪ ಸಮಾಧಾನ ತಂದಿದೆ.

ಸಾಂಬಾರು ಈರುಳ್ಳಿ ಎಂದೇ ಕರೆಯಲಾಗುವ ಸಣ್ಣ ಈರುಳ್ಳಿಯ ಬೆಲೆ ಪ್ರತಿ ಕೆ.ಜಿ.ಗೆ ₹ 200ರ ಗಡಿ ತಲುಪಿತ್ತು. ಕಳೆದ ಮೂರು–ನಾಲ್ಕು ತಿಂಗಳಿನಿಂದ ಇದೇ ಬೆಲೆ ಕಾಯ್ದುಕೊಂಡಿತ್ತು. ಒಂದೆರಡು ವಾರದಿಂದ ಹಂತ ಹಂತವಾಗಿ ಇಳಿಮುಖವಾಗುತ್ತಿದ್ದು, ಪ್ರಸ್ತುತ ₹ 80ಕ್ಕೆ ಇಳಿಕೆಯಾಗಿದೆ. ದಪ್ಪ ಈರುಳ್ಳಿ ಕೆ.ಜಿಗೆ ₹ 40 ಧಾರಣೆ ಇದೆ.

ಅರಿಸಿನ, ಹಸಿಮೆಣಸಿನ ಬೆಳೆ ನಡುವೆಯೂ ಸಣ್ಣ ಈರುಳ್ಳಿ ಬೆಳೆಯುತ್ತಾರೆ. ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಶೇ 90ರಷ್ಟು ಸಣ್ಣಈರುಳ್ಳಿಗೆ ತಮಿಳುನಾಡು ಮುಖ್ಯ ಮಾರುಕಟ್ಟೆಯಾಗಿದೆ. ಜಿಲ್ಲೆಯಲ್ಲಿ ಅದರ ಬಳಕೆ ತೀರಾ ಕಡಿಮೆ. ಮದುವೆ ಮುಂತಾದ ಶುಭ ಸಮಾರಂಭಗಳಲ್ಲಿ ಸಾಂಬಾರು ತಯಾರಿಸಲು ಹೆಚ್ಚಾಗಿ ಸಣ್ಣ ಈರುಳ್ಳಿ ಬಳಸುತ್ತಾರೆ.

ADVERTISEMENT

‘ಬೆಲೆ ಹೆಚ್ಚಳದಿಂದ ಗ್ರಾಹಕರು ಸಣ್ಣ ಈರುಳ್ಳಿ ಖರೀದಿಸಲು ಒಲವು ತೊರಿಸುತ್ತಿಲ್ಲ. ಜತೆಗೆ ಮಾರುಕಟ್ಟೆಯಲ್ಲಿ ಈರುಳ್ಳಿ ಆವಕ ಹೆಚ್ಚಳವಾಗಿದೆ. ಶುಭ ಸಮಾರಂಭಗಳು ಕಡಿಮೆ ಇರುವುದರಿಂದ ಬೆಲೆ ಇಳಿಕೆಯಾಗಿದೆ’ ಎಂದು ತರಕಾರಿ ವ್ಯಾಪಾರಿ ಭಾಗ್ಯಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

ತರಕಾರಿ ಬೆಲೆ ಏರಿಳಿತ: ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಕಳೆದೆರಡು ವಾರದಿಂದ ಏರಿಳಿತ ಕಾಣುತ್ತಿದ್ದು, ವ್ಯಾಪಾರದ ಭರಾಟೆ ಜೋರಾಗಿದೆ. ಹಸಿಮೆಣಸಿಕಾಯಿ, ಕ್ಯಾರೆಟ್‌, ಬೀಟ್‌ರೂಟ್‌ ಸೇರಿದಂತೆ ಇತರೆ ತರಕಾರಿ ಬೆಲೆಗಳು ಇಳಿಕೆಯಾಗಿದೆ. ದಪ್ಪ ಮೆಣಸಿಕಾಯಿ, ಆಲೂಗಡ್ಡೆ, ಹೂಕೋಸು ಕೊಂಚ ತುಟ್ಟಿಯಾಗಿದ್ದು, ಉಳಿದಂತೆ ಟೊಮೆಟೊ, ಬೀನ್ಸ್‌್, ಸೌತೆಕಾಯಿ, ಹೀರೇಕಾಯಿ ಮತ್ತು ಹಣ್ಣುಗಳ ಬೆಲೆ ಸ್ಥಿರವಾಗಿದೆ.

‘ನಗರಕ್ಕೆ ಹಾಸನ, ಮೈಸೂರು ಸೇರಿದಂತೆ ನಗರದ ಸುತ್ತಲಿನ ಗ್ರಾಮಗಳಿಂದ ಮಾರುಕಟ್ಟೆಗೆ ತರಕಾರಿ ಪೂರೈಕೆಯಾಗುತ್ತಿದ್ದು, ಕಳೆದ ಎರಡು ವಾರಗಳಿಂದ ಕೆಲವು ತರಕಾರಿ ಪೂರೈಕೆ ಹೆಚ್ಚಾಗಿದೆ. ಜತೆಗೆ, ವ್ಯಾಪಾರ ಉತ್ತಮವಾಗಿ ನಡೆಯುತ್ತಿದೆ’ ಎಂದು ವ್ಯಾಪಾರಿಯೊಬ್ಬರು ತಿಳಿಸಿದರು.

ಹಣ್ಣು, ಹೂವು ಸ್ಥಿರ: ಹಣ್ಣು ಮತ್ತು ಹೂವಿನ ಬೆಲೆ ಸ್ಥಿರವಾಗಿದೆ. ಏಲಕ್ಕಿ ಬಾಳೆಹಣ್ಣಿನ ಬೆಲೆ ಕೆ.ಜಿ.ಗೆ ₹ 60 ಹಾಗೂ ಪಚ್ಚಬಾಳೆ ಹಣ್ಣಿಗೆ ₹ 30ರಿಂದ 40 ಧಾರಣೆ ಇದೆ. ಹೂವಿನ ಬೆಲೆಯು ಕಳೆದ ವಾರಕ್ಕಿಂತ ತುಸು ಏರಿಕೆಯಾದೆ. ಚೆಂಡು ಹೂವು ₹ 10, ಕಾಕಡ ₹ 10, ಕನಕಾಂಬರ ₹ 50ರಿಂದ 60, ಸೂಜಿ ಮಲ್ಲಿಗೆ ₹ 20, ಗುಲಾಬಿ ₹ 5 ಹಾಗೂ ಹೂವಿನ ಹಾರ ₹ 50ರಿಂದ 300ರವರೆಗೂ ಮಾರಾಟವಾಗುತ್ತಿವೆ.

* * 

ಮಾರುಕಟ್ಟೆಯಲ್ಲಿ ಅಗತ್ಯ ತರಕಾರಿ ಇಳಿಕೆಯಾಗಿರುವುದರಿಂದ ಖುಷಿ ನೀಡಿದೆ. ಮುಂದಿನ ದಿನಗಳಲ್ಲಿ ಇದೇ ಬೆಲೆ ಇದ್ದರೆ ಅನುಕೂಲವಾಗುತ್ತದೆ.
–ಯಶೋಧಮ್ಮ
ಗ್ರಾಹಕಿ

ತರಕಾರಿ ಬೆಲೆ(ಕೆಜಿಗೆ):
ಹಸಿಮೆಣಸಿಕಾಯಿ ₹ 20
ಬೂದುಗುಂಬಳ ₹ 15
ಸಿಹಿಕುಂಬಳ ಕಾಯಿ ₹ 15
ಬಿಳಿ ಬದನೆಕಾಯಿ ₹ 30
ಬೀನ್ಸ್‌ ₹ 20
ಕ್ಯಾರೆಟ್‌ ₹ 30
ಸೌತೆಕಾಯಿ ₹ 20
ಆಲೂಗಡ್ಡೆ ₹ 20
ಮೂಲಂಗಿ ₹ 15
ಶುಂಠಿ ₹ 50
ಬೀಟ್‌ರೂಟ್‌ ₹ 20
ಹೀರೇಕಾಯಿ ₹ 30

ಹಣ್ಣಿನ ಧಾರಣೆ(ಕೆಜಿಗೆ):
ಸೇಬು ₹ 80 ರಿಂದ 100
ಕಿತ್ತಳೆ ₹ 60 ರಿಂದ 80
ಮೂಸಂಬಿ ₹ 80
ದ್ರಾಕ್ಷಿ ₹100
ದಾಳಿಂಬೆ ₹ 100
ಸಪೋಟ ₹ 60

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.