ADVERTISEMENT

ಮೆರವಣಿಗೆ ನಡೆಸಲೂ ಜಾಗವಿಲ್ಲ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2018, 9:48 IST
Last Updated 5 ಫೆಬ್ರುವರಿ 2018, 9:48 IST
ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಸಂಚಾರ ದಟ್ಟಣೆ
ಚಾಮರಾಜನಗರದ ಭುವನೇಶ್ವರಿ ವೃತ್ತದಲ್ಲಿ ಸಂಚಾರ ದಟ್ಟಣೆ   

ಚಾಮರಾಜನಗರ: ವಿವಿಧ ಜನಾಂಗಳ, ಸಂಘ ಸಂಸ್ಥೆಗಳ ಸಮಸ್ಯೆಗಳು, ಬೇಡಿಕೆಗಳ ಈಡೇರಿಕೆ, ನಗರದ ದುರವಸ್ಥೆ, ಘಟನೆಗಳು –ಹೀಗೆ ಒಂದಿಲ್ಲೊಂದು ಕಾರಣಕ್ಕೆ ಕೇಂದ‌್ರ ಮತ್ತು ರಾಜ್ಯ ಸರ್ಕಾರಗಳು, ಜಿಲ್ಲಾಡಳಿತದ ವಿರುದ್ಧ ನಗರದಲ್ಲಿ ಆಗಾಗ ಪ್ರತಿಭಟನೆಗಳು ನಡೆಯುತ್ತಿರುತ್ತವೆ.

ಹೆಚ್ಚಿನ ಪ್ರತಿಭಟನೆಗಳು ಆರಂಭವಾಗುವ ಮೂಲ ಸ್ಥಾನ ಚಾಮರಾಜೇಶ್ವರ ದೇವಸ್ಥಾನ. ಅಲ್ಲಿಂದ ಶುರುವಾಗುವ ಪ್ರತಿಭಟನೆ ಭುವನೇಶ್ವರಿ ವೃತ್ತದ ಮೂಲಕ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿ ಹಾದು ಜಿಲ್ಲಾಡಳಿತ ಭವನ ತಲುಪುತ್ತವೆ. ಕೆಲವು ಮೆರವಣಿಗೆಗಳು ಆಯಾ ಸಂಘಟನೆ, ಸಂಸ್ಥೆಯ ಕಚೇರಿಯಿಂದ ಆರಂಭವಾಗುತ್ತವೆ. ಇನ್ನು ಕೆಲವು ಪ್ರತಿಭಟನೆಗಳು ಭುವನೇಶ್ವರಿ ವೃತ್ತ ಅಥವಾ ಸಂತೇಮರಹಳ್ಳಿ ವೃತ್ತದಲ್ಲಿ ರಸ್ತೆ ತಡೆ ನಡೆಸುವ ಮೂಲಕ ನಡೆಯುತ್ತವೆ.

ಪ್ರತಿಭಟನೆಯ ಈ ಸಂಪ್ರದಾಯಗಳಿಗೆ ಈಗ ಬ್ರೇಕ್‌ ಬಿದ್ದಂತಾಗಿದೆ. ಜಿಲ್ಲಾಡಳಿತ ಭವನಕ್ಕೆ ತೆರಳುವ ಪ್ರತಿಭಟನಾ ಮೆರವಣಿಗೆಗಳು ಆರಂಭವಾಗುತ್ತಿರುವುದೇ ಭವನದ ಪ್ರವೇಶದ್ವಾರದಿಂದ. ರಸ್ತೆ ತಡೆದು ಪ್ರತಿಭಟನೆ ನಡೆಸುವ ಪರಿಕಲ್ಪನೆಗಳು ಅತಿ ವಿರಳವಾಗುತ್ತಿದೆ. ಕೆಲವು ಪ್ರತಿಭಟನೆಗಳು ಜಾಗ ಲಭ್ಯವಿರುವಲ್ಲಿ ನಡೆಯುತ್ತಿವೆ.

ADVERTISEMENT

ಎಲ್ಲೆಲ್ಲೂ ಕಾಮಗಾರಿ!: ಇದಕ್ಕೆ ಕಾರಣ ಜಿಲ್ಲಾಕೇಂದ್ರದಲ್ಲಿ ಎಲ್ಲೆಡೆ ನಡೆಯುತ್ತಿರುವ ರಸ್ತೆ ವಿಸ್ತರಣೆ ಕಾಮಗಾರಿಗಳು. ಸಂತೇಮರಹಳ್ಳಿ ವೃತ್ತದಿಂದ ಸತ್ಯಮಂಗಲ ರಸ್ತೆ, ಚಿಕ್ಕಂಗಡಿಬೀದಿ, ದೊಡ್ಡ ಅಂಗಡಿಬೀದಿ, ನಗರಸಭೆ ಕಚೇರಿ, ಚಾಮರಾಜೇಶ್ವರ ಸ್ವಾಮಿ ದೇವಸ್ಥಾನ, ಭುವನೇಶ್ವರಿ ವೃತ್ತ, ಬಿ. ರಾಚಯ್ಯಜೋಡಿ ರಸ್ತೆ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಓಡಾಡುವುದೇ ದುಸ್ತರವಾಗಿದೆ. ಕೆಲಸದ ಅನಿವಾರ್ಯತೆ ಇಲ್ಲದೆ ನಾಗರಿಕರು ಮನೆಯಿಂದ ಹೊರಬರಲೂ ಹಿಂದೇಟು ಹಾಕುತ್ತಿದ್ದಾರೆ. ಇದರ ನಡುವೆ ಪ್ರತಿಭಟನಾಕಾರರೂ ಸಂಕಟಕ್ಕೆ ಒಳಗಾಗಿದ್ದಾರೆ.

ಎಲ್ಲ ಪ್ರಮುಖ ರಸ್ತೆಗಳನ್ನು ಅಗೆದು ಹಾಕಿರುವುದರಿಂದ ನಡೆದುಕೊಂಡು ಹೋಗಲು ಹರಸಾಹಸ ಪಡಬೇಕು. ವಾಹನಗಳ ಚಾಲನೆ ಇನ್ನೂ ತ್ರಾಸದಾಯಕ. ಪ್ರತಿಭಟನೆಗೆ ಸಂಘಟನೆಗಳ ಮುಖಂಡರಿಗೆ ಸದಸ್ಯರನ್ನು ಒಟ್ಟುಗೂಡಿಸುವುದೇ ಕಷ್ಟವಾಗಿದೆ. ಹೀಗಿರುವಾಗ ಕಿತ್ತುಹಾಕಿದ ರಸ್ತೆಯಲ್ಲಿ ದೂಳಿನ ಸ್ನಾನ ಮಾಡಿಸಿಕೊಂಡು ಮೆರವಣಿಗೆ ಸಾಗುವ ಕಷ್ಟವನ್ನು ಅನುಭವಿಸಲು ಯಾರೂ ತಯಾರಿಲ್ಲ ಎನ್ನುತ್ತಾರೆ ಸಂಘಟನೆಯೊಂದರ ಮುಖಂಡರು.

ಕೆಲವು ಪ್ರತಿಭಟನಾ ಗುಂಪುಗಳು ಜಿಲ್ಲಾಡಳಿತ ಭವನಕ್ಕೆ ಖಾಸಗಿ ವಾಹನ, ಆಟೊಗಳಲ್ಲಿ ತೆರಳಿ ಅಲ್ಲಿ ಪ್ರತಿಭಟನೆ ನಡೆಸುತ್ತಾರೆ. ಇನ್ನು ಕೆಲವು ಸಂಘಟನೆಗಳು ತಮಗೆ ಅನುಕೂಲವಾಗುವ ಸ್ಥಳದಲ್ಲಿ ಸೇರಿ ಪ್ರತಿಭಟನೆ ನಡೆಸಿ ಮುಗಿಸುತ್ತಾರೆ. ವಿವಿಧ ಮಹನೀಯರ ಜಯಂತಿ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ಕಾಣಿಸುತ್ತಿದ್ದ ಕಲಾತಂಡಗಳ ಮೆರವಣಿಗೆ ಈಗ ನಡೆಯುತ್ತಿಲ್ಲ. ಸದಾ ರಸ್ತೆ ತಡೆ ನಡೆಯುತ್ತಿದ್ದ ಭುವನೇಶ್ವರಿ ವೃತ್ತದಲ್ಲಿ ಈಗ ನಿಲ್ಲಲೂ ಜಾಗವಿಲ್ಲದ ಪರಿಸ್ಥಿತಿ ಇದೆ. ಬೆಳಿಗ್ಗೆ ಮತ್ತು ಸಂಜೆ ವಾಹನ ದಟ್ಟಣೆ ತೀವ್ರವಾಗಿರುತ್ತದೆ.

ಜಾಗವೇ ಸಿಗುತ್ತಿಲ್ಲ: ‘ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಅಂಗನವಾಡಿ ನೌಕರರನ್ನು ಕಡೆಗಣಿಸಿರುವುದನ್ನು ಖಂಡಿಸಿ ಇತ್ತೀಚೆಗೆ ಪ್ರತಿಭಟನೆ ನಡೆಸಿದೆವು. ಬೇರೆಲ್ಲೂ ಜಾಗ ಸಿಗದ ಕಾರಣ ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಮಾಡುವಂತಾಯಿತು. ಆದರೆ, ಪ್ರತಿಭಟನೆ ನಡೆದಿದ್ದು ನಗರದ ಜನರಿಗೆ ತಿಳಿಯಲಿಲ್ಲ. ಮರುದಿನ ಪತ್ರಿಕೆಗಳನ್ನು ಓದಿದ ಬಳಿಕವೇ ಗೊತ್ತಾಗಿದ್ದು. ಪ್ರತಿಭಟನೆ, ಮೆರವಣಿಗೆಯ ಉದ್ದೇಶವೇ ಇದರಿಂದ ಈಡೇರುತ್ತಿಲ್ಲ’ ಎನ್ನುತ್ತಾರೆ ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಸಮಿತಿಯ ಎ. ನಾಗಮಣಿ.

ಎಲ್ಲೆಡೆ ರಸ್ತೆಗಳನ್ನು ಕಿತ್ತುಹಾಕಿರುವುದರಿಂದ ತುಂಬಾ ಕಷ್ಟವಾಗುತ್ತಿದೆ. ದೂಳಿನಿಂದಾಗಿ ಜನರಲ್ಲಿ ತೀವ್ರ ಅನಾರೋಗ್ಯದ ಸಮಸ್ಯೆ ಕಾಡುತ್ತಿದೆ. ಚಿಕಿತ್ಸೆಗೆಂದು ಹಳ್ಳಿಗಳಿಂದ ಬರುವ ರೋಗಿಗಳ ಆರೋಗ್ಯ ಮತ್ತಷ್ಟು ಹದಗೆಡುತ್ತಿದೆ ಎನ್ನುತ್ತಾರೆ ಅವರು.

ಎರಡು ತಿಂಗಳಿನಲ್ಲಿ ಎಲ್ಲ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳಿ ಆರು ತಿಂಗಳು ಕಳೆದಿದೆ. ಇನ್ನೂ ಎಲ್ಲವನ್ನು ಕಿತ್ತುಹಾಕುವ ಕೆಲಸವೇ ಪೂರ್ಣಗೊಂಡಿಲ್ಲ. ಹೀಗಾದರೆ ನಗರದಲ್ಲಿ ಓಡಾಡುವುದು, ವಾಸಿಸುವುದು ಹೇಗೆ ಎಂದು ಪ್ರಶ್ನಿಸುತ್ತಾರೆ ಸಾರ್ವಜನಿಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.