ADVERTISEMENT

ಅಂಡರ್‌ಪಾಸ್‌ ರಂಧ್ರದಲ್ಲಿ ಗುಬ್ಬಿ ಗೂಡು

ವಿಶ್ವ ಗುಬ್ಬಚ್ಚಿಗಳ ದಿನದಂದು ಕಂಡ ಗುಬ್ಬಿ ಜೀವನ, ನಶಿಸುತ್ತಿರುವ ಗುಬ್ಬಿ ಸಂತತಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2017, 12:48 IST
Last Updated 21 ಮಾರ್ಚ್ 2017, 12:48 IST
ಅಂಡರ್‌ಪಾಸ್‌ ರಂಧ್ರದಲ್ಲಿ ಗುಬ್ಬಿ ಗೂಡು
ಅಂಡರ್‌ಪಾಸ್‌ ರಂಧ್ರದಲ್ಲಿ ಗುಬ್ಬಿ ಗೂಡು   

ಶಿಡ್ಲಘಟ್ಟ: ಮೊದಲು ಯಥೇಚ್ಚವಾಗಿ ಕಂಡುಬರುತ್ತಿದ್ದ ಗುಬ್ಬಿಗಳ ಸಂತತಿ ಈಗ ಕಡಿಮೆಯಾಗಿವೆ. ಗುಬ್ಬಿಗಳ ಚಿವ್‌.. ಚಿವ್‌.. ನಾದವು ಮೊಬೈಲ್‌ ರಿಂಗಣ ಹಾಗೂ ವಿವಿಧ ಶಬ್ಧಗಳ ನಡುವೆ ಪ್ರಾಮುಖ್ಯತೆ ಕಳೆದುಕೊಳ್ಳುತ್ತಿದೆ. ಆದರೂ ಗುಬ್ಬಿಗಳು ಛಲ ಬಿಡದ ತ್ರಿವಿಕ್ರಮರಂತೆ ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ನಡೆಸಿವೆ. ವಿಶ್ವ ಗುಬ್ಬಚ್ಚಿಗಳ ದಿನವಾದ ಸೋಮವಾರ ಕಂಡ ಅವುಗಳ ಜೀವನ ದರ್ಶನವು  ಪ್ರೇರಣಾದಾಯಕವಾಗಿದೆ. 

ನಗರದಲ್ಲಿ  ನಿರ್ಮಿಸಿರುವ ರೈಲ್ವೆ  ಅಂಡರ್‌ಪಾಸ್‌ಗಳಲ್ಲಿ ನೀರು ಬಸಿದು ಹೋಗಲು ರೂಪಿಸಿರುವ ಹಲವಾರು ರಂಧ್ರಗಳಲ್ಲಿ ಗೂಡು ಮಾಡಿಕೊಂಡು ಗುಬ್ಬಚ್ಚಿಗಳು ತಮ್ಮ ಸಂತತಿಯ ಮುಂದುವರಿಕೆಗಾಗಿ ಸಾಹಸ ನಡೆಸಿವೆ. ಮಳೆ ಬಂದಾಗ ಮಾತ್ರ ನೀರು ಹರಿಯುವ ಈ ರಂಧ್ರಗಳು ಈಗ ಗುಬ್ಬಿ ಮನೆಗಳಾಗಿವೆ. ಎಷ್ಟೇ ವಾಹನ ಸಂಚಾರವಿದ್ದರೂ, ಅಕ್ಕ ಪಕ್ಕ ಜನ ಓಡಾಡಿದರೂ ತಿಳಿಯದಂತೆ ಪುರ್ರನೆ ರಂಧ್ರದೊಳಗೆ ಹೋಗಿ ಮರಿಗಳಿಗೆ ತಿನ್ನಿಸಿ ಬರುತ್ತವೆ. ತಮ್ಮದೇ ಧಾವಂತದಲ್ಲಿ ಸಂಚರಿಸುವ ಜನರ ಗಮನಕ್ಕೆ ಬಾರದಂತೆ ಗುಬ್ಬಿಗಳ ಬದುಕು ಸಾಗಿವೆ. 

ಹಿಂದೆ ಗುಬ್ಬಿಗಳು ಮನೆ ಪ್ರವೇಶಿಸಿದರೆ ಮತ್ತೆ ಮತ್ತೆ ಓಡಿಸಿದರೂ ಮತ್ತೆ ನುಗ್ಗಿ ಮನೆಯೊಳಗೇ ಸಂಸಾರ ಮಾಡಿಕೊಂಡಿರುತ್ತಿದ್ದವು. ದಿನಬೆಳಗಾದರೆ ಮನೆಯೊಳಗೆ ಬಂದು ಲೂಟಿಮಾಡುತ್ತಾ, ಸಂಜೆಯಾದೊಡನೆ ಬೀದಿ ಬದಿಯ ವಿದ್ಯುತ್ ತಂತಿಯ ಮೇಲೆ ತೋರಣದಂತೆ ಸಾಲಾಗಿ ಕುಳಿತುಕೊಳ್ಳುತ್ತಿದ್ದ ಗುಬ್ಬಿಗಳು ಹೊಸ ಆವಾಸ ಸ್ಥಾನಗಳನ್ನು ಹುಡುಕಬೇಕಾದ ಅನಿವಾರ್ಯತೆಯನ್ನು ಎದುರಿಸಿವೆ.

ADVERTISEMENT

ಗುಬ್ಬಿ ಮನುಷ್ಯರ ಸಹವಾಸ ಅಪೇಕ್ಷಿಸಿ ಬರುವ ಹಕ್ಕಿ. ನಾವು ಉಪಯೋಗಿಸುವ ದವಸ ಧಾನ್ಯಗಳೇ ಸಾಮಾನ್ಯವಾಗಿ ಗುಬ್ಬಿಗಳ ಆಹಾರ. ನಾವು ತಿಂದು ಬಿಟ್ಟ ಅಹಾರ ಪದಾರ್ಥಗಳೂ ಅವುಗಳಿಗೆ ಪ್ರಿಯವೇ.

ಆಗಾಗ ಮನೆಯಂಗಳದಲ್ಲೇ ಸಿಕ್ಕುವ ಹುಳು ಹುಪ್ಪಡಿಗಳೂ, ಜೇಡಗಳೂ ಬಾಯಿ ರುಚಿಗೆ ಆಗಬಹುದು.

ಗೂಡು ಕಟ್ಟಿ ಮರಿಮಾಡಲು ಮನೆಯ ಮಾಡು, ಹಂಚಿನ ಸಂದು ಅಥವಾ ಮನೆಯ ಗೋಡೆಗಳಲ್ಲಿರಬಹುದಾದ ಬಿರುಕು ಬೇಕು. ಹಿಂದೆ ಮನೆಗಳಲ್ಲಿ ಗೋಡೆಯ ಮೇಲೆ ಕಟ್ಟು ಹಾಕಿಸಿರುವ ದೇವರಪಟಗಳನ್ನು ನೇತು ಹಾಕಿರುತ್ತಿದ್ದರು. ಅವುಗಳ ಹಿಂದೆ ಸ್ಥಳವಂತೂ ಗುಬ್ಬಿಗಳ ಗೂಡಿಗೆ ಮೀಸಲಾಗಿರುತ್ತಿತ್ತು. ಗುಬ್ಬಿ ಸ್ನೇಹ ಜೀವಿ.‘ಹಿಂದೆಲ್ಲಾ ಗ್ರಾಮೀಣ ಪರಿಸರದ ಮನೆಗಳಲ್ಲಿ ಗುಬ್ಬಿಗಳಿಗೆ ಬೇಕಾದ ಆಹಾರ ಪದಾರ್ಥಗಳು, ಹುಳುಗಳೂ, ಮನೆಯೊಳಗೆ ಬಲೆ ಹೆಣೆಯುವ ಜೇಡಗಳು ಸಾಕಷ್ಟು ಸಿಗುತ್ತಿದ್ದವು. ವಾಸಕ್ಕೆ ಬೇಕಾದ ಪೊದೆಗಳು, ಗೂಡು ಕಟ್ಟಲು ಬೇಕಾದ ಹೆಂಚಿನ ಮಾಡುಗಳೂ ಯಥೇಚ್ಚವಾಗಿದ್ದವು. ಈಗ ಜನ ವಸತಿ ಕಾಂಕ್ರೀಟ್‌ ಮಯವಾಗಿದೆ. ಬದಲಾದ ಪರಿಸರ, ಬದಲಾದ ವಾತಾವರಣ, ಅವುಗಳ ಸಹಜ ವಾಸಸ್ಥಳದ ನಾಶ. ಕೀಟನಾಶಕಗಳ ಅತಿಯಾದ ಬಳಕೆ. ವಾತಾವರಣವನ್ನೆಲ್ಲಾ ತುಂಬಿಕೊಳ್ಳುತ್ತಿರುವ ಹಲವಾರು ರೀತಿಯ ವಿದ್ಯುತ್‌ಕಾಂತೀಯ ಅಲೆಗಳ ಪರಿಣಾಮದಿಂದ ಗುಬ್ಬಿಗಳು ಸಂಪೂರ್ಣವಾಗಿ ಕಣ್ಮರೆಯಾಗುವ ಹಾದಿಯಲ್ಲಿವೆ. ಪುಟ್ಟ ಗುಬ್ಬಿ ಕಣ್ಮರೆಯಾಗುತ್ತಿರುವ ಜೊತೆಯಲ್ಲಿ ಅದು ನೀಡುವ ಎಚ್ಚರಿಕೆ ಇಲ್ಲಿ ಮುಖ್ಯವಾಗುತ್ತದೆ’ ಎನ್ನುತ್ತಾರೆ ಶಿಕ್ಷಕ ಶ್ರೀಕಾಂತ್‌.

ಗುಬ್ಬಿಗಳಿಗೂ ಒಂದು ದಿನ
2010 ರಿಂದ ಪ್ರತಿ ವರ್ಷ ಮಾ.20 ರಂದು ‘ವರ್ಲ್ಡ್ ಸ್ಪಾರೋ ಡೆ’ ಹೆಸರಿನಲ್ಲಿ ಗುಬ್ಬಿಗಳಿಗಾಗಿ ಪ್ರಪಂಚದಾದ್ಯಂತ ಒಂದು ದಿನದ ಆಚರಣೆ ನಡೆಸಲಾಗತ್ತಿದೆ. ಇದು ಗುಬ್ಬಚ್ಚಿಯನ್ನು ಮಾತ್ರ ಉಳಿಸುವ ಆಂದೋಲನವಾಗಿರದೇ ಆ ಮೂಲಕ ನಶಿಸುತ್ತಿರುವ ಎಲ್ಲ ಜೀವವೈವಿಧ್ಯಗಳ ಬಗ್ಗೆ ಮತ್ತು ಅವುಗಳ ಸಹಜ ಪರಿಸರವನ್ನು ಕಾಪಾಡುವ ಅಗತ್ಯದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಈ ‘ಗುಬ್ಬಿ ದಿನಾಚರಣೆ’ಯ ಉದ್ದೇಶವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.