ADVERTISEMENT

ಅರಸನಹಳ್ಳಿ ಪ್ರಜೆಗಳಿಗೆ ದುರ್ವಾಸನೆ

ಮಡುಗಟ್ಟಿ ನಿಂತಿದೆ ಇಡೀ ಊರಿನ ಚರಂಡಿ ನೀರು; ಸಾಂಕ್ರಾಮಿಕ ರೋಗ ಭೀತಿ

ಈರಪ್ಪ ಹಳಕಟ್ಟಿ
Published 4 ಫೆಬ್ರುವರಿ 2017, 6:06 IST
Last Updated 4 ಫೆಬ್ರುವರಿ 2017, 6:06 IST
ಚಿಕ್ಕಬಳ್ಳಾಪುರ: ತಾಲ್ಲೂಕಿನ ಕುಪ್ಪಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಸನಹಳ್ಳಿ ಗ್ರಾಮದ ಮುಖ್ಯ ಚರಂಡಿ ಮಾರ್ಗ ತನಗೆ ಸೇರಿದ ಜಮೀನಿನಲ್ಲಿದೆ ಎಂದು ಗ್ರಾಮದ ನಿವಾಸಿಯೊಬ್ಬರು ಚರಂಡಿ ಮಾರ್ಗ ಮುಚ್ಚಿ ಹಾಕಿದ ಪರಿಣಾಮ ಇಡೀ ಊರಿಗೆ ಊರೇ ಕಳೆದ ಆರು ತಿಂಗಳಿಂದ ಗಬ್ಬೆದ್ದು ನಾರುತ್ತಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಗ್ರಾಮಸ್ಥರನ್ನು ಆವರಿಸಿಕೊಂಡಿದೆ.
 
ಇಡೀ ಊರಿನಾದ್ಯಂತ ಚರಂಡಿ ತ್ಯಾಜ್ಯ ಮತ್ತು ಕೊಳಚೆ ನೀರಿನಿಂದ ಮಡುಗಟ್ಟಿವೆ. ದುರ್ವಾಸನೆ ಮತ್ತು ಸೊಳ್ಳೆಗಳ ಕಾಟದ ನಡುವೆ ಹಿಡಿಶಾಪ ಹಾಕುತ್ತ ದಿನ ದೂಡುತ್ತಿರುವ ಗ್ರಾಮಸ್ಥರು ಸ್ಥಳೀಯ ‘ಒಳ ರಾಜಕೀಯ’ದ ಪರಿಣಾಮದಿಂದ ಊರಿಗೆ ಈ ಗತಿ ಬಂದಿರುವುದಾಗಿ ಅಳಲು ತೋಡಿಕೊಳ್ಳುತ್ತಿದ್ದು, ಈವರೆಗೆ ಜಿಲ್ಲಾಡಳಿತ, ಆರೋಗ್ಯ ಇಲಾಖೆ ಈ ಬಗ್ಗೆ ಎಚ್ಚೆತ್ತುಕೊಳ್ಳದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 
 
ಏನಾಗಿದೆ ಇಲ್ಲಿ?: ‘ಊರ ಹೊರಗೆ ರೈಲ್ವೆ ಹಳಿಯ ಪಕ್ಕದಲ್ಲಿರುವ ಸರ್ವೆ ನಂಬರ್ 71/4ರಲ್ಲಿರುವ ಜಮೀನು ತಮಗೆ ಸೇರಬೇಕು ಎಂದು ತಗಾದೆ ತೆಗೆದಿರುವ ಗ್ರಾಮದ ನಿವಾಸಿ ವೆಂಕಟರಾಮ್ ಅವರು ಆ ಜಮೀನಿನಲ್ಲಿ ಹಾದು ಹೋಗಿದ್ದ ಚರಂಡಿಯನ್ನು ಸಂಪೂರ್ಣವಾಗಿ ಮುಚ್ಚಿ ಹಾಕಿದ್ದಾರೆ. ಇದರಿಂದ 6 ತಿಂಗಳಿಂದ ಊರಿನಲ್ಲಿ ಚರಂಡಿ ಸಮಸ್ಯೆ ತಲೆದೋರಿದೆ’ ಎನ್ನುವುದು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಚನ್ನಕೇಶವಗೌಡ ಅವರ ಆರೋಪ.
 
‘ಊರು ಹುಟ್ಟಿದಾಗಿನಿಂದಲೇ ಇದ್ದ ಮುಖ್ಯ ಚರಂಡಿ ಮಾರ್ಗವನ್ನು ವೆಂಕಟರಾಮ್ ಅವರು ರಾಜಕೀಯ ದುರುದ್ದೇಶದಿಂದ ಮುಚ್ಚಿ ಹಾಕಿದ್ದಾರೆ. ಈ ಬಗ್ಗೆ ನಾನು ಶಾಸಕರು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ, ತಹಶೀಲ್ದಾರ್‌, ನಂದಿ ಗಿರಿಧಾಮ ಪೊಲೀಸ್‌ ಠಾಣೆಗೆ ದೂರು ಕೊಟ್ಟಿರುವೆ’ ಎಂದು ಹೇಳಿದರು.
 
‘ಆ ಜಮೀನಿಗೆ ಪರಿಹಾರ ಕೊಡುವ ಶಕ್ತಿ ಪಂಚಾಯಿತಿಗೆ ಇಲ್ಲ. ಆದರೂ ನನ್ನ ಸ್ವಂತ ಹಣದಲ್ಲಿ ಪರಿಹಾರ ನೀಡುತ್ತೇನೆ ಚರಂಡಿ ಮಾರ್ಗ ಮುಚ್ಚಬೇಡಿ ಎಂದು ಮನವಿ ಮಾಡಿಕೊಂಡರೂ ವೆಂಕಟರಾಮ್ ಅವರು ಕೇಳಲಿಲ್ಲ. ಯಾರೊಬ್ಬರೂ ಆ ಜಮೀನಿನ ಬಗ್ಗೆ ವ್ಯಾಜ್ಯ ಹೂಡದಿದ್ದರೂ ಅವರು ಜಮೀನಿನಲ್ಲಿ ಕಲ್ಲು ನೆಟ್ಟು ಅದರ ಮೇಲೆ ಈ ಸ್ವತ್ತಿನ ಪ್ರವೇಶಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಬರೆಯಿಸಿದ್ದಾರೆ. ಇದರಿಂದ ಊರಿನ ಜನರು ಮತ್ತು ಅಧಿಕಾರಿಗಳು ಜಮೀನ ತಂಟೆಗೆ ಹೋಗಲು ಭಯ ಬೀಳುತ್ತಿದ್ದಾರೆ’ ಎಂದು ತಿಳಿಸಿದರು.
 
ತಹಶೀಲ್ದಾರ್‌ ಏನಂತಾರೆ?: ‘ಅರಸನಹಳ್ಳಿ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಈ ಹಿಂದೆ ನಾನು ಆ ಊರಿಗೆ ಭೇಟಿ ನೀಡಿದ್ದೆ. ಆ ವೇಳೆ ಚರಂಡಿ ಮುಚ್ಚಿದ ವ್ಯಕ್ತಿ ನ್ಯಾಯಾಲಯದಲ್ಲಿ ಈ ಬಗ್ಗೆ ವ್ಯಾಜ್ಯವಿದೆ ಎಂದು ಹೇಳಿದನಾದರೂ ಅದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಹಾಜರುಪಡಿಸಲಿಲ್ಲ. ಹೀಗಾಗಿ ಸ್ಥಳೀಯ ಪಿಡಿಒಗೆ (ಪಂಚಾಯಿತಿ ಅಭಿವೃದ್ಧಿ ಅಧಿಕಾರಿ) ಪೊಲೀಸರ ರಕ್ಷಣೆಯಲ್ಲಿ ಮುಚ್ಚಿರುವ ಚರಂಡಿ ತೆರವುಗೊಳಿಸುವಂತೆ ಹೇಳಿದ್ದೆ’ ಎಂದು ತಹಶಿಲ್ದಾರ್‌ ಮೋಹನ್‌ ಹೇಳಿದರು. 
 
‘ಬಳಿಕ ಏನಾಯ್ತೋ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಸ್ಥಳೀಯ ಪಿಡಿಒನಿಂದ ಮಾಹಿತಿ ಪಡೆಯುತ್ತೇನೆ. ಶೀಘ್ರದಲ್ಲಿಯೇ ಆ ಗ್ರಾಮಕ್ಕೆ ಭೇಟಿ ನೀಡಿ ಚರಂಡಿ ಅತಿಕ್ರಮಣ ತೆರವಿಗೆ ಕ್ರಮಕೈಗೊಳ್ಳುತ್ತೇನೆ’ ಎಂದು ತಿಳಿಸಿದರು. 
 
‘ಚರಂಡಿ ಸಮಸ್ಯೆಯಿಂದಾಗಿ ನಾವು ಊರೊಳಗೆ ಗಣತಿಗೆ ಹೋಗಲು ಭಯವಾಗುತ್ತಿದೆ. ಜನರು ಚರಂಡಿಯನ್ನು ನೀನು ಸ್ವಚ್ಛಗೊಳಿಸು ಎಂದು ನಮ್ಮನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಹೀಗಾಗಿ ಕೊನೆ ಪಕ್ಷ ಬ್ಲಿಚಿಂಗ್‌ ಪೌಡರ್‌ನ್ನಾದರೂ ಕೊಡಿ ನಾವೇ ಚರಂಡಿಗೆ ಸಿಂಪಡಿಸುತ್ತೇವೆ ಎಂದು ಗ್ರಾಮ ಪಂಚಾಯಿತಿಯವರಿಗೆ ಮನವಿ ಮಾಡಿಕೊಂಡೆ. ಏನೂ ಪ್ರಯೋಜನವಾಗಲಿಲ್ಲ’ ಎಂದು ಸ್ಥಳೀಯ ಆಶಾ ಕಾರ್ಯಕರ್ತೆ ಭಾರತಿ ಅಳಲು ತೋಡಿಕೊಂಡರು. 
 
ಕಂದಾಯ ಇಲಾಖೆಯವರು ಕೂಡಲೇ ಸರ್ವೆ ಮಾಡಿ, ದಾಖಲೆ ಪರಿಶೀಲನೆ ನಡೆಸಿ ಮುಚ್ಚಿದ ಚರಂಡಿ ತೆರವುಗೊಳಿಸಬೇಕು. ಆರೋಗ್ಯ ಇಲಾಖೆ ಅಧಿಕಾರಿಗಳು ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತೆ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ. 
 
**
ಮನೆಯೊಳಗೆ ಹುಳುಗಳು ಹರಿದಾಡುತ್ತವೆ
ಚರಂಡಿ ಕಟ್ಟಿಕೊಂಡು ಬಚ್ಚಲು ನೀರು ಹೊರಗೆ ಹೋಗುತ್ತಿಲ್ಲ. ಹುಳುಗಳು ಮನೆಯೊಳಗೆ ಹರಿದು ಬರುತ್ತಿವೆ. ಮಳೆಗಾಲದಲ್ಲಿಯಂತೂ ಕೊಳಚೆ ನೀರು ಮನೆಗೆ ನುಗ್ಗುತ್ತದೆ. ಈ ಬಗ್ಗೆ ಪಂಚಾಯಿತಿಗೆ ಜನರು ಹತ್ತಾರು ಬಾರಿ ಅರ್ಜಿ ಕೊಟ್ಟರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಬಂದು ಪರಿಶೀಲನೆ ಮಾಡಿ ಹೋದರೂ ಏನೊಂದು ಕೆಲಸವಾಗಲಿಲ್ಲ.
-ಭಾಗ್ಯಮ್ಮ, ಸ್ಥಳೀಯ ನಿವಾಸಿ
 
**
ರಕ್ಷಣೆ ಕೊಡಲು ನಾವು ಸಿದ್ಧ 
ಇಂತಹ ಪ್ರಕರಣದಲ್ಲಿ ಭಾಗವಹಿಸಲು ನಮಗೆ ಅಧಿಕಾರವಿಲ್ಲ. ಮುಚ್ಚಿರುವ ಚರಂಡಿ ತೆರವುಗೊಳಿಸಲು ಪಿಡಿಒ, ತಹಶೀಲ್ದಾರ್ ಬಂದರೆ ಅಧಿಕಾರಿಗಳಿಗೆ ತೊಂದರೆಯಾಗದಂತೆ ನಾವು ಭದ್ರತೆ ಕೊಡುತ್ತೇವೆ. ಅಧಿಕಾರಿಗಳು ಬರೀ ಬಾಯಿಮಾತಿನಲ್ಲಿ ಹೇಳಿದರೆ ಆಗದು ಈ ಬಗ್ಗೆ ನಮಗೆ ಲಿಖಿತ ಆದೇಶ ನೀಡಬೇಕು. ಆವಾಗ ನಮಗೆ ಹೆಚ್ಚುವರಿ ಸಿಬ್ಬಂದಿ ಕರೆಯಿಸಿಕೊಂಡು ಬಂದೋಬಸ್ತ್‌ ವ್ಯವಸ್ಥೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದು ಹೆಸರು ಹೇಳಲು ಇಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. 
 
**
ರಾಜಕೀಯ ದುರುದ್ದೇಶದಿಂದ ವೆಂಕಟರಾಮ್ ಅವರು ಊರಿನ ಮುಖ್ಯ ಚರಂಡಿಯನ್ನು ಮುಚ್ಚಿ ಹಾಕಿದ್ದಾರೆ. ಮುಚ್ಚಿರುವ ಚರಂಡಿ ತೆರವಿಗೆ ಶಾಸಕರು ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ.
-ಚನ್ನಕೇಶವಗೌಡ,
ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ 
 
**
ಅಂಗನವಾಡಿ ಮುಂದೆ ಕೊಳಚೆ ನೀರು ಮಡುಗಟ್ಟಿ ನಿಂತು ಸೊಳ್ಳೆಗಳು ವಿಪರೀತ ಉತ್ಪತ್ತಿಯಾಗುತ್ತಿವೆ. ದುರ್ವಾಸನೆ ಸಹಿಸಿಕೊಂಡು ತಲೆನೋವು ಬರುತ್ತಿದೆ. ಆಗಾಗ ಮಕ್ಕಳು ಚರಂಡಿಯಲ್ಲಿ ಬಿದ್ದು ಬಟ್ಟೆ ಗಲೀಜು ಮಾಡಿಕೊಳ್ಳುತ್ತಾರೆ. ಇದರಿಂದ ಮಕ್ಕಳ ಆರೋಗ್ಯದ ಬಗ್ಗೆ ನಮಗೆ ಚಿಂತೆಯಾಗಿದೆ. 
-ಲಕ್ಷ್ಮಮ್ಮ,
ಅಂಗನವಾಡಿ ಕಾರ್ಯಕರ್ತೆ
 
**
ನಾನು ಚರಂಡಿ ಮುಚ್ಚಿಲ್ಲ
ನಾನು ಯಾವುದೇ ಚರಂಡಿ ಮುಚ್ಚಿಲ್ಲ. ಚರಂಡಿ ಮುಚ್ಚಿದೆ ಎನ್ನಲಾದ ಜಾಗದಲ್ಲಿ ಸರ್ಕಾರಿ ಕುಂಟೆ ಇತ್ತು. ಅದನ್ನು ಪಂಚಾಯಿತಿಯವರೇ ಮುಚ್ಚಿದ್ದಾರೆ. ಈ ಬಗ್ಗೆ ಪಿಡಿಒ ಅವರನ್ನೇ ನೀವು ಕೇಳಬೇಕು. ಬಳಿಕ ಕುಪ್ಪಹಳಿ ಪಿಡಿಒ ಮೋಹನ್ ಅವರಿಗೆ ಕರೆ ಮಾಡಿದರೆ ಅವರು ಕರೆ ಸ್ವೀಕರಿಸಲಿಲ್ಲ.
-ವೆಂಕಟರಾಮ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.