ADVERTISEMENT

ಅರ್ಧ ಮನೆಗೆ, ಇನ್ನರ್ಧ ಚರಂಡಿಗೆ

ಕೆಂಪೇಗೌಡ ಎನ್.ವೆಂಕಟೇನಹಳ್ಳಿ
Published 4 ಡಿಸೆಂಬರ್ 2017, 9:17 IST
Last Updated 4 ಡಿಸೆಂಬರ್ 2017, 9:17 IST
ಟಿ.ಜಿ.ಟ್ಯಾಂಕ್‌ ರಸ್ತೆಯಲ್ಲಿ ಜಕ್ಕಲ ಮಡಗು ನೀರು ಪೂರೈಕೆಯಾಗುವ ದಿನ ಕಾಣುವ ಸಾಮಾನ್ಯ ದೃಶ್ಯ
ಟಿ.ಜಿ.ಟ್ಯಾಂಕ್‌ ರಸ್ತೆಯಲ್ಲಿ ಜಕ್ಕಲ ಮಡಗು ನೀರು ಪೂರೈಕೆಯಾಗುವ ದಿನ ಕಾಣುವ ಸಾಮಾನ್ಯ ದೃಶ್ಯ   

ಚಿಕ್ಕಬಳ್ಳಾಪುರ: ನಗರಸಭೆಯ 9ನೇ ವಾರ್ಡ್‌ ವ್ಯಾಪ್ತಿಯ ಗಂಗಮ್ಮನ ಗುಡಿ ರಸ್ತೆಗೆ ಹೊಂದಿಕೊಂಡಿರುವ ಟಿ.ಜಿ ಟ್ಯಾಂಕ್‌ ರಸ್ತೆಯಲ್ಲಿ ಅನೇಕ ತಿಂಗಳಿಂದ ಜಕ್ಕಲ ಮಡಗು ಕುಡಿಯುವ ನೀರು ವ್ಯರ್ಥವಾಗಿ ಹರಿದು ಚರಂಡಿ ಪಾಲಾಗುತ್ತಿರುವುದು ಸಾರ್ವಜನಿಕರಲ್ಲಿ ಆಕ್ರೋಶ ಉಂಟು ಮಾಡಿದೆ.

ನಗರದ ಅನೇಕ ಬಡಾವಣೆಗಳ ನಾಗರಿಕರು ನಮಗೆ ಇಂದಿಗೂ ಜಕ್ಕಲ ಮಡಗು ಕುಡಿಯುವ ನೀರು ಸಿಗುತ್ತಿಲ್ಲ ಎಂದು ಆಗಾಗ ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಇಂತಹ ಹೊತ್ತಿನಲ್ಲಿ ಟಿ.ಜಿ ಟ್ಯಾಂಕ್‌ ರಸ್ತೆಯಲ್ಲಿ ಪೂರೈಕೆಯಾಗುವ ಜಕ್ಕಲ ಮಡಗು ನೀರು ಅರ್ಧದಷ್ಟು ಮನೆಗಳಿಗೆ ತಲುಪಿದರೆ, ಉಳಿದರ್ಧ ಪೋಲಾಗುತ್ತಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಂತೆ ಗೋಚರಿಸುತ್ತದೆ.

ಟಿ.ಜಿ ಟ್ಯಾಂಕ್‌ ರಸ್ತೆಯಲ್ಲಿರುವ ಜಕ್ಕಲ ಮಡಗು ನೀರಿನ ಪೈಪ್‌ಲೈನ್‌ನಲ್ಲಿ ಸುಮಾರು ಏಳೆಂಟು ಕಡೆಗಳಲ್ಲಿ ನೀರು ಸೋರಿಕೆಯಾಗುತ್ತಿದೆ. ಕೆಲವೆಡೆ ಮನೆಗಳಿಗೆ ನೀಡಿರುವ ಸಂಪರ್ಕದಲ್ಲಿ ಸೋರಿಕೆ ಕಾಣಿಸಿಕೊಂಡಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಕುಡಿಯುವ ನೀರು ಚರಂಡಿ ಸೇರುವುದು ನೋಡಿ ‘ಹೊಟ್ಟೆ ಉರಿಯುತ್ತದೆ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ADVERTISEMENT

ಈ ರಸ್ತೆಗೆ ವಾರಕ್ಕೆ ಒಂದು ದಿನ ನೀರು ಪೂರೈಸಲಾಗುತ್ತದೆ. ಅದರಲ್ಲಿ ಅರ್ಧ ನೀರು ರಸ್ತೆಯ ಮೇಲೆ ಮಡುಗಟ್ಟಿ ನಿಲ್ಲುತ್ತದೆ. ನೀರು ಬಿಟ್ಟ ದಿನ ಈ ರಸ್ತೆ ಮಳೆಗಾಲ ನೆನಪಿಸುವಂತೆ ಗೋಚರಿಸುತ್ತದೆ. ಇದರಿಂದ ರಸ್ತೆ ಅಧ್ವಾನಗೊಳ್ಳುವ ಜತೆಗೆ ಸೊಳ್ಳೆಗಳ ಕಾಟ ಹೆಚ್ಚುತ್ತಿದೆ ಎಂದು ಸ್ಥಳೀಯರು ದೂರುತ್ತಾರೆ.

‘ನಗರಸಭೆಯವರು ವಾರಕ್ಕೊಮ್ಮೆ ನೀರು ಬಿಡುತ್ತಾರೆ. ಆ ನೀರು ಕೂಡ ಮೂರು ದಿನಕ್ಕಿಂತ ಹೆಚ್ಚು ಸಂಗ್ರಹಿಸಿಟ್ಟರೆ ಹುಳುಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಕುಡಿಯುವ ನೀರಿಗೆ ತುಂಬಾ ತೊಂದರೆಯಾಗುತ್ತಿದೆ. ವ್ಯರ್ಥವಾಗಿ ನೀರು ಹರಿಯುವುದನ್ನು ನಿಲ್ಲಿಸಿ ಮೂರು ದಿನಕ್ಕೊಮ್ಮೆ ನೀರು ಕೊಟ್ಟರೆ ನಮಗೆ ತುಂಬಾ ಅನುಕೂಲವಾಗುತ್ತದೆ’ ಎಂದು 9ನೇ ವಾರ್ಡ್‌ ನಿವಾಸಿ ಸದ್ದಾಂ ಹೇಳಿದರು.

‘ನೀರು ಅಮೂಲ್ಯ ಮಿತವಾಗಿ ಬಳಸಿ ಎಂದು ಸಾಕಷ್ಟು ಜನರು ಭಾಷಣ ಮಾಡುತ್ತಲೇ ಇರುತ್ತಾರೆ. ಆದರೆ ಇಲ್ಲಿ ಹರಿದು ಗಟಾರ ಸೇರುವ ನೀರನ್ನು ನಿಲ್ಲಿಸಲು ಯಾರೂ ಕ್ರಮಕೈಗೊಳ್ಳುತ್ತಿಲ್ಲ. ನೀರು ಬಿಟ್ಟ ದಿನವಂತೂ ಮಕ್ಕಳು ಅಂಗಳಕ್ಕೆ ಬಂದು ನೀರಾಟಕ್ಕೆ ಇಳಿದು ಬಟ್ಟೆ ಗಲೀಜು ಮಾಡಿಕೊಳ್ಳುತ್ತಾರೆ. ಪಾದಚಾರಿಗಳು, ಸವಾರರು ಕಿರಿಕಿರಿ ಅನುಭವಿಸುತ್ತಾರೆ’ ಎಂದು ತಿಳಿಸಿದರು.

‘ಜನವರಿಯಿಂದ ನಗರಸಭೆ ವ್ಯಾಪ್ತಿಯಲ್ಲಿ ದಿನದ 24 ಗಂಟೆ ನಿರಂತರ ನೀರು ಪೂರೈಸಲಾಗುತ್ತದೆ ಎಂದು ಜನಪ್ರತಿನಿಧಿಗಳು ಭಾಷಣ ಮಾಡುತ್ತಿದ್ದಾರೆ. ಆಗ ಏನಾದರೂ ಈ ರೀತಿ ನೀರು ವ್ಯರ್ಥ ಮಾಡಿದರೆ ಜಕ್ಕಲ ಮಡಗು ಜಲಾಶಯ ಕೆಲವೇ ದಿನಗಳಲ್ಲಿ ಖಾಲಿಯಾಗುತ್ತದೆ. ಇಷ್ಟೊಂದು ನೀರು ಪೋಲಾಗುತ್ತಿದ್ದರೂ ಅದು ನಮಗೆ ಸಂಬಂಧವಿಲ್ಲ ಎನ್ನುವಂತೆ ನಗರಸಭೆಯವರು ವರ್ತಿಸುತ್ತಿರುವುದು ಬೇಸರ ಮೂಡಿಸಿದೆ’ ಎಂದು ಟಿ.ಜಿ ಟ್ಯಾಂಕ್‌ ರಸ್ತೆ ನಿವಾಸಿ ಅಶ್ವಿನಿ ಹೇಳಿದರು.

‘ಅನೇಕ ಕಡೆಗಳಲ್ಲಿ ಪೈಪ್‌ಲೈನ್‌ ಹಾನಿಗೊಂಡಿರುವುದರಿಂದ ಪೈಪ್‌ ಒಳಗೆ ಕಲುಷಿತ ನೀರು ಸೇರುತ್ತಿದೆ.  ಈ ಬಗ್ಗೆ ಕೂಡಲೇ ಗಮನ ಹರಿಸಬೇಕು. ಕುಲುಷಿತ ನೀರು ಕುಡಿಯುವುದರಿಂದ ಜನರು ರೋಗಗಳಿಗೆ ತುತ್ತಾಗುವ ಸಾಧ್ಯತೆ ಇದೆ’ ಎಂದು ಸ್ಥಳೀಯ ನಿವಾಸಿ ಪ್ರಮೀಳಾ ಖಾರವಾಗಿ ಪ್ರಶ್ನಿಸಿದರು. ‘ಸಮಸ್ಯೆ ನನ್ನ ಗಮನಕ್ಕೆ ಬಂದಿಲ್ಲ. ಸರಿ ಮಾಡಿಸುತ್ತೇವೆ’ ಎಂದು ನೀರು ಸರಬರಾಜು ಉಸ್ತುವಾರಿ ನೋಡಿಕೊಳ್ಳುವ ಕಿರಿಯ ಎಂಜಿನಿಯರ್‌ ರಾಮಚಂದ್ರಪ್ಪ ತಿಳಿಸಿದರು.

* * 

ಜಲಾಶಯ ತುಂಬಿದರೂ ನಮಗೆ ವಾರಕ್ಕೊಮ್ಮೆ ನೀರು ಬಿಡುತ್ತಿದ್ದಾರೆ. ಹೀಗೆ ನೀರು ವ್ಯರ್ಥವಾಗುತ್ತ ಹೋದರೆ 15 ದಿನ<br/>ಕ್ಕೊಮ್ಮೆ ನೀರು ಬಿಡುವ ಸ್ಥಿತಿ ಬರುತ್ತದೆ.
ಅಶ್ವಿನಿ ಟಿ.ಜಿ ಟ್ಯಾಂಕ್‌ ರಸ್ತೆ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.