ADVERTISEMENT

ಅಳಿವು ಉಳಿವಿನ ನಡುವೆ ರೇಷ್ಮೆ ಬೆಳೆಗಾರ

​ಪ್ರಜಾವಾಣಿ ವಾರ್ತೆ
Published 23 ಜುಲೈ 2017, 10:50 IST
Last Updated 23 ಜುಲೈ 2017, 10:50 IST

ಶಿಡ್ಲಘಟ್ಟ: ‘ರೇಷ್ಮೆ ಗೂಡಿನ ಬೆಲೆ ಸಾಲದು, ನಷ್ಟ ಹೊಂದುತ್ತಿದ್ದೇವೆ ಎಂದು ಬೆಂಬಲ ಬೆಲೆಗಾಗಿ ರೇಷ್ಮೆ ಬೆಳೆಗಾರರು ಹೋರಾಡುತ್ತಿದ್ದರೆ ಇನ್ನೊಂದೆಡೆ ಗಾಯದ ಮೇಲೆ ಬರೆ ಎಳೆದಂತೆ ಜಿಎಸ್‌ಟಿ ಮೂಲಕ ಬೆಲೆ ಕುಸಿಯುವ ಆತಂಕ ಬೆಳೆಗಾರರನ್ನು ಕಾಡುತ್ತಿದೆ’ ಎಂದು ಅಖಿಲ ಭಾರತ ಸುಂಕ ರಹಿತ ರೇಷ್ಮೆ ಆಮದು ವಿರೋಧಿ ಹೋರಾಟ ಸಮಿತಿ ಸಂಚಾಲಕ, ಜಿಲ್ಲಾ ರೇಷ್ಮೆ ಕೃಷಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮಳ್ಳೂರು ಶಿವಣ್ಣ ತಿಳಿಸಿದರು.

ಐದು ರಾಜ್ಯಗಳ ರೇಷ್ಮೆ ಬೆಳೆಗಾರರ ನಿಯೋಗದೊಂದಿಗೆ ದೆಹಲಿಯಲ್ಲಿ ವಿವಿಧ ಸಚಿವರನ್ನು ಭೇಟಿಯಾಗಿ ಜಿಎಸ್‌ಟಿಯಿಂದ ಆಗಬಹುದಾದ ಅಡ್ಡ ಪರಿಣಾಮ ವಿವರಿಸಿ, ಈ ಬಗ್ಗೆ ಪರಿಹಾರಕ್ಕೆ ಪರ್ಯಾಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ ಎಂದು ಅವರು ತಿಳಿಸಿದರು.

‘ದೇಶಾದ್ಯಂತ ಪ್ರತಿ ದಿನ ರೈತರು ಸುಮಾರು ₹ 12 ಕೋಟಿ ರೇಷ್ಮೆ ಗೂಡನ್ನು ಮಾರಾಟ ಮಾಡುತ್ತಿದ್ದಾರೆ. ಮಾರುಕಟ್ಟೆಗಳಲ್ಲಿ ರೈತರು ರೇಷ್ಮೆ ಗೂಡನ್ನು ಮಾರುವಾಗ ತಮ್ಮ ಅಭಿವೃದ್ಧಿಗಾಗಿ ಪಿಎಸ್‌ಎಫ್‌ಎ ಫಂಡ್‌ ಎಂದು ಶೇ 1ರಷ್ಟು ಕಟ್ಟುತ್ತಿದ್ದಾರೆ. ಅದೇ ರೀತಿ ಕೊಳ್ಳುವ ರೀಲರುಗಳೂ ಸಹ ಶೇ 1ರಷ್ಟು ಪಾವತಿಸುವರು.

ADVERTISEMENT

ಆದರೆ ರೇಷ್ಮೆ ಉದ್ದಿಮೆಯಲ್ಲಿ ಸುಂಕವನ್ನು ಮೊದಲಿನಿಂದಲೂ ಕಟ್ಟಿಲ್ಲ. ರೇಷ್ಮೆ ವಾಣಿಜ್ಯ ಬೆಳೆಯಾದರೂ ಇದನ್ನು ಗುಡಿ ಕೈಗಾರಿಕೆ ಎಂದೇ ಪರಿಗಣಿಸಲಾಗುತ್ತಿದೆ ಎಂದು ಆರೋಪಿಸಿದರು. ‘ದೇಶದ ರೇಷ್ಮೆ ಉತ್ಪಾದನೆಯಲ್ಲಿ ರಾಜ್ಯದ ಪಾಲು ಶೇ 60ರಷ್ಟಿದೆ. ರಾಜ್ಯದ ರೈತರು ₹ 1.75 ಲಕ್ಷ ಕೋಟಿ ಬಂಡವಾಳ ಹೂಡಿದ್ದಾರೆ.

ಲಾಭ ನಷ್ಟಗಳೊಂದಿಗೆ ರೈತರು ರೇಷ್ಮೆಯನ್ನು ನಂಬಿದ್ದಾರೆ. ಆದರೆ ಹೊಸ ನೀತಿಯಿಂದ ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ’ ಎಂದು ಹೇಳಿದರು. ಸರಕು ಮತ್ತು ಸೇವಾ ತೆರಿಗೆಯ ಅನ್ವಯ ರೈತರ ಗೂಡಿನ ನಂತರದ ಚಟುವಟಿಕೆಗಳಾದ ನೂಲು ಬಿಚ್ಚಾಣಿಕೆ, ಹುರಿ ಮಾಡುವುದು, ಬಣ್ಣ ಹಚ್ಚುವುದು, ಬಟ್ಟೆ ಮಾಡುವುದು, ಪಾಲಿಷ್‌ ಮಾಡುವುದು ಮೊದಲಾದ ಪ್ರತಿಯೊಂದು ಹಂತದಲ್ಲೂ ಶೇ 5ರಷ್ಟು ಸರಕು ಮತ್ತು ಸೇವಾ ತೆರಿಗೆ ಬೀಳಲಿದೆ.

ಈಗ ಪ್ರತಿ ಹಂತದಲ್ಲೂ ತೆರಿಗೆ ಹಾಕುವುದರಿಂದ ಎಲ್ಲರೂ ಖರೀದಿಸುವಾಗ ಅಷ್ಟೊಂದು ಪ್ರಮಾಣದಲ್ಲಿ ಹಣ ಕಡಿಮೆಯಾಗುವುದು. ಇದರ ಒಟ್ಟಾರೆ ಪ್ರಕ್ರಿಯೆಯಲ್ಲಿ ರೇಷ್ಮೆ ಬೆಳೆಯುವ ರೈತ ನಷ್ಟ ಅನುಭವಿಸಬೇಕಾಗುತ್ತದೆ ಎಂದು ತಿಳಿಸಿದರು.

ಇದುವರೆಗೆ ಪ್ರತಿ ಕೆಜಿ ಬೈವೋಲ್ಟಿನ್‌ ರೇಷ್ಮೆ ಗೂಡಿನ ಬೆಲೆ ₹ 550ರಿಂದ 600ವರೆಗೆ ಇತ್ತು. ಸಿಬಿ ಗೂಡು ಕೆ.ಜಿಗೆ ₹ 350ರಿಂದ 500 ವರೆಗೆ ಇದೆ. ಈಗ ಜಿಎಸ್‌ಟಿ ಕಾರಣಕ್ಕಾಗಿ ಕೆಜಿ ಗೂಡಿಗೆ ₹ 200 ಸಿಗುವುದೂ ಕಷ್ಟವಾಗಲಿದೆ.

ಆಂಧ್ರ, ತಮಿಳುನಾಡು, ಕೇರಳ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಪರವಾಗಿ ಒಟ್ಟು ಐದು ಮಂದಿ ರೇಷ್ಮೆ ಬೆಳೆಗಾರ ಮುಖಂಡರು ಈ ಆತಂಕವನ್ನು ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ನಿರ್ಮಲಾ ಸೀತಾರಾಮ್‌ ಹಾಗೂ ಇತರ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಜಿಎಸ್‌ಟಿಯಿಂದ ರೇಷ್ಮೆ ಕೈಬಿಡಬೇಕು ಎಂದು ಒತ್ತಾಯಿಸಿದ್ದೇವೆ’ ಎಂದು ಹೇಳಿದರು. ಕೇಂದ್ರ ಸರ್ಕಾರ ರೇಷ್ಮೆ ಬೆಳೆಗಾರರಿಗೆ ಅನುಕೂಲ ಮಾಡಿಕೊಡದಿದ್ದರೆ ಹೋರಾಟಕ್ಕೆ ಇಳಿಯುವುದು ಅನಿವಾರ್ಯ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.