ADVERTISEMENT

ಆಧಾರ್‌ ಜೋಡಣೆಗಾಗಿ ರೈತರ ಪರದಾಟ

ಎಂ.ರಾಮಕೃಷ್ಣಪ್ಪ
Published 9 ಸೆಪ್ಟೆಂಬರ್ 2017, 8:57 IST
Last Updated 9 ಸೆಪ್ಟೆಂಬರ್ 2017, 8:57 IST

ಚಿಂತಾಮಣಿ: ಹಾಲು ಉತ್ಪಾದಕರ ಬ್ಯಾಂಕ್‌ ಖಾತೆಗಳ ಆಧಾರ್‌ ಸಂಖ್ಯೆ ಜೋಡಣೆಯ ವಿಳಂಬ, ಗೊಂದಲ, ಏರುಪೇರುಗಳಿಂದಾಗಿ ಸರ್ಕಾರದ ಪ್ರೋತ್ಸಾಹಧನ ಪಡೆಯಲು ಉತ್ಪಾಕರು ಪರದಾಡುವಂತಾಗಿದೆ. ತಾಲ್ಲೂಕಿನಲ್ಲಿ ಹಾಲು ಉತ್ಪಾದಕರು ಪ್ರತಿನಿತ್ಯ ಡೇರಿ ಕಚೇರಿ, ಬ್ಯಾಂಕ್‌ ಮತ್ತು ಒಕ್ಕೂಟದ ಕಚೇರಿಗಳಿಗೆ ಅಲೆದಾಡುತ್ತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿರುವುದು ಕಂಡುಬರುತ್ತದೆ.

ತಾಲ್ಲೂಕಿನಲ್ಲಿ 216 ಸಾಮಾನ್ಯ ಸಹಕಾರ ಸಂಘಗಳು ಹಾಗೂ 22 ಮಹಿಳಾ ಸೇರಿ ಒಟ್ಟು 238 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. 8459 ಪುರುಷರು, 2538 ಮಹಿಳೆಯರು ಸೇರಿ 10997 ಸದಸ್ಯರಿದ್ದಾರೆ. ಪ್ರತಿನಿತ್ಯ 1.30 ಲಕ್ಷ ಲೀಟರ್‌ ಹಾಲು ಸಂಗ್ರಹಣೆಯಾಗುತ್ತದೆ. ಸರ್ಕಾರ ಪ್ರತಿ ಲೀಟರ್‌ಗೆ ₹ 5 ಪ್ರೋತ್ಸಾಹಧನ ನೀಡುತ್ತಿದೆ ಎಂದು ವಿವರಿಸಿದರು.

ಉತ್ಪಾದಕರು ಪ್ರೋತ್ಸಾಹಧನ ಪಡೆಯಲು ತಮ್ಮ ಬ್ಯಾಂಕ್‌ ಖಾತೆಗೆ ಆಧಾರ್‌ ಸಂಖ್ಯೆಯನ್ನು ಜೋಡಿಸುವುದು ಕಡ್ಡಾಯ. ಜೋಡಣೆ ಮಾಡಲು ಸಮರ್ಪಕವಾದ ವ್ಯವಸ್ಥೆ ಇಲ್ಲ. ಒಕ್ಕೂಟ, ಬ್ಯಾಂಕ್‌ ಶಾಖೆಗಳು ಒಬ್ಬರು ಮತ್ತೊಬ್ಬರ ಕಡೆಗೆ ಕೈತೋರಿಸುತ್ತಾರೆ ಎಂದು ಉತ್ಪಾದಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ADVERTISEMENT

ಕೆಲವು ಉತ್ಪಾದಕರು ಏರ್‌ಟೆಲ್‌ ಮೊಬೈಲ್‌ಗಳು ಪಡೆಯಲು ನೀಡಿದ್ದ ಆಧಾರ್‌ ಜೋಡಣೆಯಾಗಿ ಪ್ರೋತ್ಸಾಹಧನ ಏರ್‌ಟೆಲ್‌ ಖಾತೆಗೆ ಜಮಾ ಆಗಿದೆ. ಅವರು ಮೊಬೈಲ್‌ ಖಾತೆಗೆ ಜಮಾ ಮಾಡಿಕೊಂಡಿದ್ದಾರೆ. ಈಗ ಪ್ರತಿಯೊಂದಕ್ಕೂ ಆಧಾರ್ ಸಂಖ್ಯೆ ಕಡ್ಡಾಯ ಮಾಡಿದ್ದರಿಂದ ಬ್ಯಾಂಕ್‌ಗಳು, ಮೊಬೈಲ್‌ಗಳು ಕಚೇರಿ ಸೇರಿ ವಿವಿಧೆಡೆ ಜೋಡಣೆ ಮಾಡಲಾಗಿರುತ್ತದೆ. ಇದರಿಂದಾಗಿ ಪ್ರೋತ್ಸಾಹಧನ ಯಾವುದೋ ಖಾತೆಗಳಿಗೆ ಜಮಾ ಆಗುತ್ತಿದೆ ಎಂದು ಫಲಾನುಭವಿಗಳು ದೂರುವರು.

ಕೆಲವು ಉತ್ಪಾದಕರ ಬಳಿ ಆಧಾರ್‌ ಗುರುತಿನ ಚೀಟಿಯೇ ಇಲ್ಲ. ಕೆಲವರು ತಮ್ಮ ವ್ಯಾಪ್ತಿಯ ಬ್ಯಾಂಕುಗಳಲ್ಲಿ ಆಧಾರ್‌ ಸಂಖ್ಯೆಯನ್ನು ಜೋಡಿಸಲು ನೀಡಿದ್ದಾರೆ. ಉತ್ಪಾದಕರು ಖಾತೆ ಹೊಂದಿರುವ ಪ್ರಾದೇಶಿಕ ಬ್ಯಾಂಕ್‌ ಶಾಖೆಗಳು ಆಧಾರ್‌ ಸಂಖ್ಯೆ ಜೋಡಿಸಲು ವಿಳಂಬ ಮಾಡುತ್ತಿರುವ ಕಾರಣ ಉತ್ಪಾದಕರಿಗೆ ಪ್ರೋತ್ಸಾಹಧನ ಸಕಾಲದಲ್ಲಿ ಸಿಗುತ್ತಿಲ್ಲ. ಪ್ರೋತ್ಸಾಹಧನವನ್ನು ಖಾತೆಗಳಿಗೆ ಜಮಾ ಮಾಡಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮಕ್ಕೆ ಒಕ್ಕೂಟವು ಹಾಕಿರುವ ವಾಪಸ್‌ ಬರುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಒಕ್ಕೂಟದ ಅಧಿಕಾರಿಗಳು ಮುತುವರ್ಜಿ ವಹಿಸಿ ಜೋಡಣೆ ಮಾಡಿಸಿಕೊಡುತ್ತಿದ್ದಾರೆ. 10997 ಸದಸ್ಯರಲ್ಲಿ ಇನ್ನೂ ಸುಮಾರು 2 ಸಾವಿರದಷ್ಟು ಉತ್ಪಾದಕರ ಖಾತೆಗಳು ಆಧಾರ್‌ ಜೋಡಣೆಯಾಗಬೇಕಾಗಿದೆ.ನೋಟುಗಳು ರದ್ದಾದ ನಂತರ ಆಧಾರ್‌ ಜೋಡಣೆ ಕಡ್ಡಾಯ ಮಾಡಲಾಗಿದೆ.  ಮೊದಲ ಬಾರಿಗೆ ಜೋಡಣೆ ನಡೆಯುತ್ತಿರುವುದರಿಂದ ಆರಂಭದಲ್ಲಿ ವಿಳಂಬವಾಗುವುದು ಸಹಜ, ಹೀಗಿದ್ದರೂ ಉತ್ತಮ ಪ್ರಗತಿಯನ್ನು ಸಾಧಿಸಲಾಗಿದೆ. ಶೀಘ್ರವೇ ಶೇ 100ರಷ್ಟು ಸಾಧನೆ ಮಾಡಲಾಗುವುದು ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

ಆಧಾರ್‌ ಸಂಖ್ಯೆ ಜೋಡಣೆ ಉತ್ಪಾದಕರಿಗೆ ದೊಡ್ಡ ಸಂಕಷ್ಟವಾಗಿದೆ. ಒಬ್ಬರು ಮತ್ತೊಬ್ಬರ ಕಡೆಗೆ ಕೈತೋರಿಸುತ್ತಾರೆ. ಇದಕ್ಕೆ ಯಾರು ಹೊಣೆಗಾರರು ಎಂಬುದೇ ಗೊತ್ತಾಗುತ್ತಿಲ್ಲ. ಆದರೂ ಒಕ್ಕೂಟದ ಅಧಿಕಾರಿಗಳ ನೆರವಿನಿಂದ ಶೇ 80ರಷ್ಟು ಸಾಧನೆ ಮಾಡಲಾಗಿದೆ. ಶೀಘ್ರವಾಗಿ ಜೋಡಣೆ ಮಾಡುವಂತೆ ಶಾಖೆಗಳಿಗೆ ಆದೇಶ ನೀಡುವಂತೆ ಕೋರಿ ಲೀಡ್‌ ಬ್ಯಾಂಕುಗಳಿಗೆ ಪತ್ರ ಬರೆಯಲಾಗಿದೆ ಎಂದು ಕೋಚಿಮುಲ್‌ ನಿರ್ದೇಶಕವೈ.ಬಿ. ಅಶ್ವತ್ಥನಾರಾಯಣಬಾಬು ಹೇಳುವರು.

ಜಂಗಮಶೀಗೆಹಳ್ಳಿ ಗ್ರಾಮದ ಹಾಲು ಉತ್ಪಾದಕ ನಾಗರಾಜ್, ‘ಡೇರಿಯಲ್ಲಿ ಪ್ರೋತ್ಸಾಹಧನ ವಿತರಿಸುತ್ತಿದ್ದ ಕ್ರಮ ಚೆನ್ನಾಗಿತ್ತು. ಆಧಾರ್‌ ಸಂಖ್ಯೆ ಜೋಡಣೆ ಮಾಡಿ ಬ್ಯಾಂಕ್‌ ಖಾತೆಗಳಿಗೆ ಜಮಾ ಮಾಡುವ ವ್ಯವಸ್ಥೆ ಪ್ರಾರಂಭವಾದ ಮೇಲೆ ಸಂಕಷ್ಟ ಎದುರಾಗಿದೆ. ಉತ್ಪಾದಕರ ಪ್ರೋತ್ಸಾಹಧನ ಯಾವುದೋ ಖಾತೆಗಳಿಗೆ ಜಮಾ ಆಗಿದೆ. ಅದನ್ನು ಮರಳಿ ಪಡೆಯಲು ಸಾಕಷ್ಟು ಹೆಣಗಾಡಬೇಕಾಗಿದೆ’ ಎನ್ನುವರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.