ADVERTISEMENT

ಆರಂಭಿಕ ಚಿಕಿತ್ಸೆಯೇ ಕುಷ್ಠರೋಗಕ್ಕೆ ಮದ್ದು

ಆರಂಭಿಕ ಚಿಕಿತ್ಸೆಯೇ ಕುಷ್ಠರೋಗಕ್ಕೆ ಮದ್ದು

​ಪ್ರಜಾವಾಣಿ ವಾರ್ತೆ
Published 31 ಜನವರಿ 2017, 7:35 IST
Last Updated 31 ಜನವರಿ 2017, 7:35 IST
ಆರಂಭಿಕ ಚಿಕಿತ್ಸೆಯೇ ಕುಷ್ಠರೋಗಕ್ಕೆ ಮದ್ದು
ಆರಂಭಿಕ ಚಿಕಿತ್ಸೆಯೇ ಕುಷ್ಠರೋಗಕ್ಕೆ ಮದ್ದು   
ಚಿಕ್ಕಬಳ್ಳಾಪುರ: ‘ಪ್ರಸ್ತುತ ಸಮಾಜದಲ್ಲಿರುವ ಕುಷ್ಠರೋಗ ಕುರಿತ ಮೌಢ್ಯಗಳನ್ನು ತೊಡೆದು ಹಾಕುವ ಜತೆಗೆ ಜಿಲ್ಲೆಯನ್ನು ಕುಷ್ಠರೋಗ ಮುಕ್ತಗೊಳಿಸುವ ಕಾರ್ಯಕ್ಕೆ ಸಾರ್ವಜನಿಕರು ಆರೋಗ್ಯ ಇಲಾಖೆ ಜತೆ ಕೈಜೋಡಿಸಬೇಕು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರವಿಶಂಕರ್ ಹೇಳಿದರು. 
 
ಜಿಲ್ಲಾಡಳಿತ ನಗರದಲ್ಲಿ ಸೋಮವಾರ ಆಯೋಜಿಸಿದ್ದ ‘ಸ್ಪರ್ಶ್’ ಕುಷ್ಠ ಅರಿವು ಆಂದೋಲನಾ ಜಾಥಾಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. 
 
‘2020ರ ವೇಳೆ ರಾಜ್ಯವನ್ನು ಕುಷ್ಠರೋಗ ಮುಕ್ತಗೊಳಿಸಲು ಸರ್ಕಾರ ಯೋಜನೆ ರೂಪಿಸಿದೆ. ಅದಕ್ಕಾಗಿ ನಾವು ಜಿಲ್ಲೆಯನ್ನು ಕುಷ್ಠರೋಗ ಮುಕ್ತಗೊಳಿಸುವ ದಿಸೆಯಲ್ಲಿ ಹೆಚ್ಚು ಕೆಲಸ ಮಾಡಬೇಕಾಗಿದೆ. ಕುಷ್ಠರೋಗ ಅನುವಂಶೀಯ ಕಾಯಿಲೆಯಲ್ಲ. ಮೈಕ್ರೋ ಬ್ಯಾಕ್ಟೀರಿಯಂ ಲೆಪ್ರೆ ಎಂಬ ಸೂಕ್ಷ್ಮಾಣು ಜೀವಿಯಿಂದ ಬರುವ ಕಾಯಿಲೆ. ಇದನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಗುಣಪಡಿಸಬಹುದು’ ಎಂದು ತಿಳಿಸಿದರು. 
 
‘ವ್ಯಕ್ತಿಯ ದೇಹದ ಯಾವುದೇ ಭಾಗದಲ್ಲಿ ಸ್ಪರ್ಶ ಜ್ಞಾನವಿಲ್ಲದ ನೋವು, ನವೆ ಇಲ್ಲವೇ ತಿಳಿ, ಬಿಳಿ ಅಥವಾ ತಾಮ್ರ ಬಣ್ಣದ ಮಚ್ಚೆಗಳು ಕುಷ್ಠರೋಗದ ಲಕ್ಷಣಗಳಾಗಿರುತ್ತವೆ. ಆರೋಗ್ಯ ಸಹಾಯಕರು ಗ್ರಾಮೀಣ ಪ್ರದೇಶದಲ್ಲಿ ಕುಷ್ಠ ರೋಗ ಪತ್ತೆಗೆ ಹೋದ ಸಂದರ್ಭದಲ್ಲಿ ರೋಗಿಗಳಿಗೆ ಈ ಕಾಯಿಲೆ ಬಗ್ಗೆ ಅಗತ್ಯ ತಿಳಿವಳಿಕೆ ನೀಡಿ ಅರಿವು ಮೂಡಿಸಬೇಕು’ ಎಂದರು. 
 
‘ಪ್ರಸ್ತುತ ಜಿಲ್ಲೆಯಲ್ಲಿ 40 ಜನ ಕುಷ್ಠರೋಗ ಪೀಡಿತರಿದ್ದಾರೆ. ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.
 
ವಿದ್ಯಾರ್ಥಿಗಳು, ಕಿರಿಯ ಮಹಿಳಾ ಆರೋಗ್ಯ ತರಬೇತಿ ಸಂಸ್ಥೆಯ ಶಿಕ್ಷಣಾರ್ಥಿಗಳು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾದಲ್ಲಿ ಸಂಚರಿಸಿ ಕುಷ್ಠರೋಗದ ಕುರಿತು ಅರಿವು ಮೂಡಿಸಿದರು. 
 
ಹಿರಿಯ ಸಿವಿಲ್ ನ್ಯಾಯಾಧೀಶೆ ಎಸ್.ಶೋಭಾ ಜಾಥಾಗೆ ಚಾಲನೆ ನೀಡಿ, ಪ್ರತಿಜ್ಞಾವಿಧಿ ಬೋಧಿಸಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವಿಜಯ್‌ಕುಮಾರ್, ವೈದ್ಯರಾದ ಡಾ.ಕಿಶೋರ್, ಡಾ.ಪ್ರಕಾಶ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.