ADVERTISEMENT

ಇ–ಬಿಡ್ ವ್ಯವಸ್ಥೆಯಲ್ಲಿ ಗೊಂದಲ: ರೈತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 22 ಮೇ 2015, 10:19 IST
Last Updated 22 ಮೇ 2015, 10:19 IST

ಶಿಡ್ಲಘಟ್ಟ:  ನಗರದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಬುಧವಾರದಿಂದ ಇ–ಬಿಡ್ಡಿಂಗ್ ಆರಂಭಿಸಲಾಗಿದೆ. ಈ ಕುರಿತು ಸಮರ್ಪಕ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಗುರುವಾರ ಅಧಿಕಾರಿಗಳನ್ನು ರೈತರು ತರಾಟೆಗೆ ತೆಗೆದುಕೊಂಡರು.

ನಗರದ ಮಾರುಕಟ್ಟೆಯಲ್ಲಿ ಚನ್ನಪಟ್ಟಣ, ರಾಮನಗರದ ಮಾದರಿಯಲ್ಲಿ ಇ–ಬಿಡ್ ವ್ಯವಸ್ಥೆ ಆರಂಭಿಸಲಾಗಿದೆ. ಆದರೆ ಗುರುವಾರ ಗೂಡಿನ ಆವಕ ಹೆಚ್ಚಾದ ಹಿನ್ನೆಲೆಯಲ್ಲಿ ಗೊಂದಲದ ವಾತಾವರಣ ಕಂಡುಬಂತು.

ರೇಷ್ಮೆಗೂಡು ಹರಾಜು ಹಾಕಲು ಜಾಲರಿ ಸಿಗದ ಕಾರಣ ಓಡಾಡುವ ದಾರಿಯಲ್ಲೆಲ್ಲಾ  ಗೂಡುಗಳನ್ನು ಇರಿಸಬೇಕಾದ ಸ್ಥಿತಿ ನಿರ್ಮಾಣವಾಯಿತು. ಇದು ರೈತರ ಆಕ್ರೋಶಕ್ಕೆ ಕಾರಣವಾಯಿತು.

ಗೊಂದಲ: ಇ– ಬಿಡ್ ವ್ಯವಸ್ಥೆ ಜಾರಿಯಾದ ಹಿನ್ನೆಲೆಯಲ್ಲಿ ಗುರುವಾರ ನೆರೆಯ ಆಂಧ್ರ, ಚನ್ನಪಟ್ಟಣ, ರಾಮನಗರ ಸೇರಿದಂತೆ ಹಲವೆಡೆಯಿಂದ ಬಂದ ಗೂಡುಗಳಿಗೆ ಮೊದಲೇ ಜಾಲರಿ ನಿಗಪಡಿಸಲಾಗಿತ್ತು.

ಸ್ಥಳೀಯ ರೈತರು ಬೆಳಿಗ್ಗೆ 7 ಗಂಟೆಗೆ ಬಂದರೂ ಜಾಲರಿಗಳು ಸಿಗದೆ ಗೂಡನ್ನು ಹೊರಗೆ ಹಾಕುವಂತಾಯಿತು. ‘ನಮಗೆ ಟೋಕನ್‌ಗಳನ್ನೂ ಕೊಡುತ್ತಿಲ್ಲ, ಜಾಲರಿಗಳೂ ಇಲ್ಲ. ಮಾರುಕಟ್ಟೆ ಅಧಿಕಾರಿಗಳು ಮೊದಲೇ ಸ್ಥಳೀಯ ರೈತರಿಗೆ ಮಾಹಿತಿ ನೀಡಬೇಕಿತ್ತು.

ಕೌಂಟರ್‌ನಲ್ಲಿ ಟೋಕನ್ ತೆಗೆದುಕೊಂಡು ಹೋಗಿ ಜಾಲರಿಗಳಲ್ಲಿ ಹಾಕಿರುವವರ ಗೂಡಿಗೆ ಒಳ್ಳೆಯ ಬೆಲೆ ಬರುತ್ತದೆ, ಹೊರಗೆ ಹಾಕಿರುವ ಗೂಡಿಗೆ ಕಡಿಮೆ ಬೆಲೆ ಸಿಗುತ್ತದೆ. ಬಿಸಿಲಿನಲ್ಲಿ ಗೂಡೆಲ್ಲವೂ ಮೆತ್ತಗಾಗುತ್ತಿದೆ. ಒಂದು ತಿಂಗಳ ನಮ್ಮ ಶ್ರಮ ವ್ಯರ್ಥವಾಗಿದೆ’ ಎಂದು ರೈತರು ಬೇಸರ ವ್ಯಕ್ತಪಡಿಸಿದರು.

‘ಗೂಡಿಗೆ ಉತ್ತಮ ಧಾರಣೆ ಸಿಗದ ರೈತರಿಗೆ ನಷ್ಟಪರಿಹಾರ ಕೊಡಬೇಕು. ಮುಂದಿನ 15 ದಿನ ಯಥಾಸ್ಥಿತಿ ಮುಂದುವರಿಸಬೇಕು. ರೈತರಿಗೆ ಇ–ಬೀಡ್‌ ವ್ಯವಸ್ಥೆ ಮನವರಿಕೆಯಾದ ನಂತರವೇ ಹೊಸ ಪದ್ಧತಿ ಜಾರಿ ಮಾಡಬೇಕು ಎಂದು ರೈತರು ಒತ್ತಾಯಿಸಿದರು.

ಮಾರುಕಟ್ಟೆಯ ಉಪನಿರ್ದೇಶಕ ನರಸಿಂಹಮೂರ್ತಿ ಮಾತನಾಡಿ, ‘ಕಳೆದ ವಾರ ಎರಡು ಬಾರಿ ರೈತರು ಮತ್ತು ರೀಲರ್‌ಗಳೊಂದಿಗೆ ಸಭೆ ನಡೆಸಲಾಗಿತ್ತು. ಆಯುಕ್ತರೂ ಬಂದು ರೈತರು– ರೀಲರ್‌ಗಳಿಗೆ ಇ – ಬೀಡ್ ಪದ್ಧತಿಯ ಬಗ್ಗೆ ಮವರಿಕೆ ಮಾಡಿಕೊಟ್ಟಿದ್ದರು ಎಂದರು. ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಮಳ್ಳೂರು ಶಿವಣ್ಣ, ರೈತ ಸಂಘದ ಉಪಾಧ್ಯಕ್ಷ ಮುನಿನಂಜಪ್ಪ ಹಾಜರಿದ್ದರು.

ಇ–ಬಿಡ್ಡಿಂಗ್: ಹೊಸ ವ್ಯವಸ್ಥೆ
ಮಾರುಕಟ್ಟೆಗೆ ಗೂಡು ತಂದ ರೈತರು, ಪ್ರತ್ಯೇಕವಾಗಿ ತೆರೆದಿರುವ ಕೌಂಟರ್‌ಗಳಲ್ಲಿ  ಗೂಡಿನ ಪ್ರಮಾಣ, ಯಾವ ಬಿನ್‌ನಲ್ಲಿ ರೈತರಿಗೆ ಸ್ಥಳಾವಕಾಶವನ್ನು ಕಾಯ್ದಿರಿಸಲಾಗಿದೆ, ಎಷ್ಟು ಪ್ರಮಾಣದಲ್ಲಿ ಜಾಲರಿಗಳು ಬೇಕಾಗಿದೆ, ಎಂಬಿತ್ಯಾದಿ ಮಾಹಿತಿಯುಳ್ಳ ರಸೀದಿಯನ್ನು ಪಡೆದುಕೊಳ್ಳಬೇಕು.

ನಂತರ ರೈತರು ನೇರವಾಗಿ ತಮಗೆ ಕಾಯ್ದಿರಿಸಿರುವ ಜಾಲರಿಗಳಿಗೆ ಹೋಗಬೇಕು. ರೀಲರ್‌ಗಳು ತಮ್ಮ ಮೊಬೈಲ್‌ಗಳ ಮೂಲಕ ಗೂಡಿನ ದರ ನಿಗದಿಪಡಿಸುತ್ತಾರೆ. ಯಾವ ರೈತರ ಗೂಡು ಎಷ್ಟು ದರಕ್ಕೆ ಮಾರಾಟವಾಗಿದೆ ಎಂಬ ಮಾಹಿತಿಯನ್ನು ಟಿ.ವಿ. ಪರದೆಗಳ ಮೇಲೆ ಪ್ರದರ್ಶಿಸಲಾಗುತ್ತದೆ. ರೈತರಿಗೆ ದರ ಒಪ್ಪಿಗೆಯಾದರೆ ಮಾತ್ರ, ಮಾರಾಟ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ಬುಧವಾರ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5ರವರೆಗೆ ಕಂಪ್ಯೂಟರ್‌ ಮೂಲಕ ಗೂಡಿನ ಮೂಟೆಗಳಿಗೆ ಟೋಕನ್ ನೀಡಿ, ಬಿನ್‌ಗಳನ್ನು ನೀಡಲಾಗಿದೆ. ಸ್ಥಳೀಯರು ಮುಂಜಾನೆ ಬಂದ ಕಾರಣ ಬಿನ್‌ ಸಿಕ್ಕಿಲ್ಲ 
ನರಸಿಂಹಮೂರ್ತಿ, ಉಪನಿರ್ದೇಶಕರು, ರೇಷ್ಮೆ ಮಾರುಕಟ್ಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT