ADVERTISEMENT

ಉಚಿತ ಬಸ್‌ಪಾಸ್‌ ನೀಡಲಿ

ಮಾಸಾಶನ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಶಾಸಕ ಸುಧಾಕರ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 11:13 IST
Last Updated 13 ಜುಲೈ 2017, 11:13 IST

ಚಿಕ್ಕಬಳ್ಳಾಪುರ: ‘ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಸೀಮಿತಗೊಳಿಸಿರುವ ಉಚಿತ ಬಸ್‌ಪಾಸ್‌ ನೀಡುವ ಯೋಜನೆಯನ್ನು ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೂ ವಿಸ್ತರಿಸಬೇಕು’ ಎಂದು ಶಾಸಕ ಡಾ.ಕೆ.ಸುಧಾಕರ್ ಹೇಳಿದರು

ನಗರದ ಪಿಎಲ್‌ಡಿ ಬ್ಯಾಂಕ್ ಆವರಣದಲ್ಲಿ ಬುಧವಾರ ಕಂದಾಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಮಾಸಾಶನ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸೀಮಿತ ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ ಈ ಯೋಜನೆಯನ್ನು ಜಾರಿಗೊಳಿಸಿದರೆ ವಿದ್ಯಾರ್ಥಿಗಳ ನಡುವೆ ತಾರತಮ್ಯ ಮಾಡಿದಂತಾಗುತ್ತದೆ. ಜಾತಿ ವ್ಯವಸ್ಥೆ ಮತ್ತಷ್ಟು ಬೇರೂರಲು ಕಾರಣವಾಗುತ್ತದೆ. ಆದ್ದರಿಂದ ಸರ್ಕಾರ ಈ ವಿಚಾರದಲ್ಲಿ ಮರು ಚಿಂತನೆ ಮಾಡುವ ಅಗತ್ಯವಿದೆ’ ಎಂದು ತಿಳಿಸಿದರು.

ADVERTISEMENT

‘ರಾಜ್ಯದಲ್ಲಿ ಸತತ ಬರಗಾಲದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನ್ನದಾತರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸರ್ಕಾರ ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ ಸಾಲದ ಪೈಕಿ ₹ 50 ಸಾವಿರ ಸಾಲ ಮನ್ನಾ ಮಾಡುವ ಮೂಲಕ ರೈತಪರ ಕಾಳಜಿ ಮೆರೆದಿದೆ. ಬರ ನಿರ್ವಹಣೆಗೆ ಸಹಾಯ ಮಾಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಕೇಳಿಕೊಂಡರೆ ಕೇಂದ್ರ ಸ್ಪಂದಿಸಲಿಲ್ಲ’ ಎಂದು ಆರೋಪಿಸಿದರು.

‘ದಲಿತರ ಮತಗಳನ್ನು ಸೆಳೆಯುವ ಉದ್ದೇಶದಿಂದ ಕೆಲ ರಾಜಕಾರಣಿಗಳು ದಲಿತರ ಮನೆಯಲ್ಲಿ ಊಟ ಮಾಡುವ ನಾಟಕವಾಡುತ್ತಿದ್ದಾರೆ. ಅವರಿಗೆ ದಲಿತರ ಬಗ್ಗೆ ನಿಜವಾದ ಕಾಳಜಿ ಇದ್ದರೆ ದಲಿತರನ್ನೇ ತಮ್ಮ ಮನೆಗಳಲ್ಲಿ ಊಟಕ್ಕೆ ಕರೆದುಕೊಂಡು ಹೋಗಲಿ. ಇಂತಹ ನಾಟಕಗಳಿಗೆ ಜನರು ಮರಳಾಗುವುದಿಲ್ಲ’ ಎಂದು ಹೇಳಿದರು.

ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ 399 ಫಲಾನುಭವಿಗಳಿಗೆ ಕಾರ್ಯಕ್ರಮದಲ್ಲಿ ಮಾಸಾಶನ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಅನಸೂಯಮ್ಮ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನಾಗೇಶ್, ಎಪಿಎಂಸಿ ಅಧ್ಯಕ್ಷ ಗೋವಿಂದಸ್ವಾಮಿ, ತಹಶೀಲ್ದಾರ್ ನರಸಿಂಹಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.