ADVERTISEMENT

ಎಎಸ್‌ಐ ಮೇಲೆ ಹಲ್ಲೆ; ಬಂಧನ

​ಪ್ರಜಾವಾಣಿ ವಾರ್ತೆ
Published 23 ಮೇ 2017, 4:53 IST
Last Updated 23 ಮೇ 2017, 4:53 IST

ಚಿಕ್ಕಬಳ್ಳಾಪುರ: ಬೈಕ್ ನಿಧಾನವಾಗಿ ಓಡಿಸುವಂತೆ ಹೇಳಿದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ (ಡಿಎಆರ್) ಎಎಸ್‌ಐ ಶಿವಪ್ಪ ಅವರಿಗೆ ಅವಾಚ್ಯವಾಗಿ ನಿಂದಿಸಿ, ಹಲ್ಲೆ ಮಾಡಿದ ಆರೋಪದ ಮೇಲೆ ಶಿಡ್ಲಘಟ್ಟ ನಿವಾಸಿ, ಕ್ಯಾಬ್‌ ಚಾಲಕ ಗಜೇಂದ್ರ ಎಂಬುವನನ್ನು ನಗರ ಪೊಲೀಸ್ ಠಾಣೆ ಪೊಲೀಸರು ಸೋಮವಾರ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಏನಿದು ಘಟನೆ? ‘ಅಣಕನೂರು ಜೈಲಿನಲ್ಲಿರುವ ಖೈದಿಯೊಬ್ಬನನ್ನು ಗೌರಿಬಿದನೂರು ನ್ಯಾಯಾಲಯಕ್ಕೆ ಹಾಜರು ಪಡಿಸಲು ತೆರಳುತ್ತಿದ್ದ ಸಿಬ್ಬಂದಿಯನ್ನು ಎಎಸ್‌ಐ ಶಿವಪ್ಪ ಅವರು ಬೆಳಿಗ್ಗೆ 10.30ರ ಸುಮಾರಿಗೆ ಟೆಂಪೊ ಟ್ರಾವೆಲರ್‌ನಲ್ಲಿ ಜೈಲಿನಿಂದ ಕರೆದುಕೊಂಡು ಬಂದು ಗೌರಿಬಿದನೂರು ಬಸ್‌ ನಿಲ್ದಾಣ ಬಳಿ ಬಿಟ್ಟು, ನಂತರ ತುರ್ತು ಕೆಲಸದ ಮೇಲೆ ಡಿಎಆರ್ ಮೈದಾನದತ್ತ ಹೊರಟಿದ್ದರು’ ಎಂದು ಪೊಲೀಸರು ತಿಳಿಸಿದರು.

‘ವಾಸವಿ ಕಲ್ಯಾಣ ಮಂಟಪದಲ್ಲಿ ನಡೆದ ಸಂಬಂಧಿಕರ ಮದುವೆಗೆ ಪತ್ನಿಯೊಂದಿಗೆ ಬೈಕ್ ಮೇಲೆ ನಗರಕ್ಕೆ ಬಂದಿದ್ದ ಆರೋಪಿ ಗಜೇಂದ್ರ, ಶಿವಪ್ಪ ಅವರ ವಾಹನ ಪೊಲೀಸ್ ವೃತ್ತದ ಬಳಿ ಬರುವ ಸಂದರ್ಭದಲ್ಲಿ ಗಂಗಮ್ಮನ ಗುಡಿ ರಸ್ತೆಯಲ್ಲಿ ವೇಗವಾಗಿ ಬಂದಿದ್ದಾನೆ. ಇದನ್ನು ನೋಡಿದ ಎಎಸ್‌ಐ ನಿಧಾನವಾಗಿ ಹೋಗುವಂತೆ ಸನ್ನೆ ಮಾಡಿದ್ದಾರೆ. ಇಷ್ಟಕ್ಕೆ ಪೊಲೀಸ್ ವಾಹನಕ್ಕೆ ಬೈಕ್ ಅಡ್ಡಹಾಕಿದ ಆರೋಪಿ ಶಿವಪ್ಪ ಅವ್ಯಾಚ ಶಬ್ದಗಳಿಂದ ನಿಂದಿಸಿ ಉದ್ಧಟನ ತೋರಿದ್ದಾನೆ’ ಎಂದು ಹೇಳಿದರು.

ADVERTISEMENT

‘ಈ ಸಂದರ್ಭದಲ್ಲಿ ವಾಹನದಿಂದ ಇಳಿದು ಬಂದ ಶಿವಪ್ಪ ಅವರು ಬೈಕ್‌ ಕೀ ಕಿತ್ತುಕೊಂಡು ಪೊಲೀಸ್ ಠಾಣೆಗೆ ಬಂದು ಬೈಕ್ ತೆಗೆದುಕೊಂಡು ಹೋಗುವಂತೆ ಹೇಳಿ ಬೈಕ್‌ ಏರಲು ಮುಂದಾಗಿದ್ದಾರೆ. ಆಗ ಅವರ ಶರ್ಟ್‌ನ ಕಾಲರ್ ಹಿಡಿದು ಎಳೆದು ಮಾತಿನ ಚಕಮಕಿ ನಡೆಸಿದ ಆರೋಪಿ, ಶಿವಪ್ಪ ಅವರ ಕಪಾಳಕ್ಕೆ ಹೊಡೆದಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ಸಮೀಪದಲ್ಲಿಯೇ ಕರ್ತವ್ಯದ ಮೇಲಿದ್ದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಆರೋಪಿಯನ್ನು ಠಾಣೆಗೆ ಕರೆತಂದರು. ಈ ಬಗ್ಗೆ ದೂರು ದಾಖಲಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.