ADVERTISEMENT

ಎರಡನೇ ದಿನವೂ ಶಾಂತಿಯುತ ಮುಷ್ಕರ

​ಪ್ರಜಾವಾಣಿ ವಾರ್ತೆ
Published 27 ಜುಲೈ 2016, 9:12 IST
Last Updated 27 ಜುಲೈ 2016, 9:12 IST

ಚಿಕ್ಕಬಳ್ಳಾಪುರ: ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರದ ಎರಡನೇ ದಿನವಾದ ಮಂಗಳವಾರವು ನಗರದಲ್ಲಿ ಪ್ರಯಾಣಿಕರು ಖಾಸಗಿ ವಾಹನಗಳ ಸಹಾಯದಿಂದ ಪ್ರಯಾಣ ಬೆಳೆಸಿದರು. ಆದರೆ ಸಂಜೆ 5 ಗಂಟೆ ಸುಮಾರಿಗೆ ಪೊಲೀಸ್‌ ವಾಹನಗಳ ಬೆಂಗಾವಲಿನಲ್ಲಿ ನಗರದಿಂದ ಚಿಂತಾಮಣಿ ಮತ್ತು ಗೌರಿಬಿದನೂರಿಗೆ ಎರಡು ಬಸ್‌ಗಳು ಪ್ರಯಾಣ ಬೆಳೆಸಿದವು.

‘ಸಂಜೆ ವೇಳೆಗೆ ಚಿಕ್ಕಬಳ್ಳಾಪುರ ಡೀಪೊಗೆ ಇಬ್ಬರು ಚಾಲಕರು ಮತ್ತು ಒಬ್ಬ ನಿರ್ವಾಹಕ ಕರ್ತವ್ಯಕ್ಕೆ ಹಾಜರಾದರು. ಅವರಲ್ಲಿ ಒಬ್ಬ ಚಾಲಕ, ನಿರ್ವಾಹಕ ಒಂದು ಬಸ್‌ನಲ್ಲಿ ಗೌರಿಬಿದನೂರಿಗೆ ಸೇವೆ ಆರಂಭಿಸಿದರೆ, ಚಿಂತಾಮಣಿಗೆ ಚಾಲಕ ಮಾತ್ರ ಬಸ್‌ ತೆಗೆದುಕೊಂಡು ಹೋದರು’ ಎಂದು ಡೀಪೊ ವ್ಯವಸ್ಥಾಪಕ ಬಿ.ಅಪ್ಪಿರೆಡ್ಡಿ ತಿಳಿಸಿದರು.

ಮುಂಜಾಗ್ರತಾ ಕ್ರಮವಾಗಿ ಬಸ್‌ನ ಹಿಂದೆ ಮತ್ತು ಮುಂದೆ ಒಂದು ಪೊಲೀಸ್‌ ಜೀಪ್‌ ನಿಯೋಜಿಸಲಾಗಿತ್ತು. ಜತೆಗೆ ಬಸ್‌ನಲ್ಲಿ ಕೆಲ ಪೊಲೀಸ್ ಮತ್ತು ಸಾರಿಗೆ ಇಲಾಖೆ ಸಿಬ್ಬಂದಿ ಪ್ರಯಾಣ ಬೆಳೆಸಿದರು.

‘ಜಿಲ್ಲೆಯಲ್ಲಿರುವ ನಾಲ್ಕು ಡೀಪೊಗಳ ಪೈಕಿ ಚಿಕ್ಕಬಳ್ಳಾಪುರ ಡೀಪೊಗೆ ಮಂಗಳವಾರ ಸಂಜೆ ವೇಳೆಗೆ ಮೂವರು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾದರು. ಅವರ ಸಹಾಯದಿಂದ ಎರಡು ಬಸ್‌ಗಳ ಸಂಚಾರ ಆರಂಭಿಸಲಾಯಿತು. ಚಾಲಕರು, ನಿರ್ವಾಹಕರು ನಾಳೆ ಬೆಳಿಗ್ಗೆಯಿಂದ ಕರ್ತವ್ಯಕ್ಕೆ ಹಾಜರಾಗುವ ಸಾಧ್ಯತೆ ಇದೆ. ಸದ್ಯ ನಮಗೆ ಪೊಲೀಸ್ ರಕ್ಷಣೆಯಲ್ಲಿ ಬಸ್‌ ಸಂಚಾರ ಆರಂಭಿಸುವಂತೆ ಮೇಲಾಧಿಕಾರಿಗಳು ಆದೇಶಿಸಿದ್ದಾರೆ’ ಎಂದು ವಿಭಾಗೀಯ ಸಾರಿಗೆ ಅಧಿಕಾರಿ ಎಂ.ನಂಜುಂಡಸ್ವಾಮಿ ತಿಳಿಸಿದರು.

ಬಿಕೋ ಎಂದ ನಿಲ್ದಾಣಗಳು
ನಗರದ ಬಸ್‌ ನಿಲ್ದಾಣಗಳು ಮಂಗಳವಾರ ಕೂಡ ಬಸ್‌ಗಳು, ಪ್ರಯಾಣಿಕರ ಗಲಾಟೆ ಇಲ್ಲದೆ ಬಿಕೋ ಎನ್ನುತ್ತಿದ್ದವು. ನಗರಸಭೆಯ ಬಸ್‌ ನಿಲ್ದಾಣದಿಂದ ಬೆರಳೆಣಿಕೆಯಷ್ಟು ಖಾಸಗಿ ಬಸ್‌ಗಳು ಸಂಚರಿಸುತ್ತಿದ್ದವಾದರೂ ಪ್ರಯಾಣಿಕರ ಸಂಖ್ಯೆ ಮಾತ್ರ ವಿರಳವಾಗಿತ್ತು. ಬಹುತೇಕ ಪ್ರಯಾಣಿಕರು ಟ್ಯಾಕ್ಸಿ, ಕ್ಯಾಬ್, ಆಟೊದಂತಹ ಸಣ್ಣ ಪುಟ್ಟ ವಾಹನಗಳ ಮೊರೆ ಹೋಗಿದ್ದರು. ಕೆಲವೆಡೆ ಪ್ರಯಾಣಿಕರು ವಾಹನಗಳಿಗಾಗಿ ಪರದಾಡುತ್ತಿದ್ದ ದೃಶ್ಯಗಳು ಕಂಡುಬಂದವು.

ಮುಷ್ಕರ ನಿರತ ಸಾರಿಗೆ ನೌಕರರು ಮೌನಕ್ಕೆ ಶರಣಾಗಿ, ಮನೆಯಲ್ಲಿಯೇ ತಂಗಿದ ಕಾರಣ ನಗರದಲ್ಲಿ ಯಾವುದೇ ರೀತಿಯ ಪ್ರತಿಭಟನೆ, ಗಲಾಟೆ, ಅಹಿತಕರ ಘಟನೆಗಳು ನಡೆಯಲಿಲ್ಲ. ಹೀಗಾಗಿ ಎರಡೂ ದಿನವು ಮುಷ್ಕರ ಶಾಂತಿಯುತವಾಗಿ ನಡೆಯಿತು.

ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ಜಿಲ್ಲಾಧಿಕಾರಿ ಅವರು ಮಂಗಳವಾರ ಕೂಡ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದರು. ಜತೆಗೆ ಅಹಿತಕರ ಘಟನೆಗಳನ್ನು ತಡೆಗಟ್ಟಲು ಬಸ್‌ ನಿಲ್ದಾಣ, ಡೀಪೊ, ಘಟಕಗಳ ಸುತ್ತ ನಿಷೇಧಾಜ್ಞೆ ಜಾರಿ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.