ADVERTISEMENT

ಎಲ್ಲೆಡೆ ಹಬ್ಬದ ವಾತಾವರಣ

ಟಿ.ನಂಜುಂಡಪ್ಪ
Published 25 ಡಿಸೆಂಬರ್ 2017, 8:14 IST
Last Updated 25 ಡಿಸೆಂಬರ್ 2017, 8:14 IST

ಗೌರಿಬಿದನೂರು: ಪಟ್ಟಣದ ಕ್ರಿಶ್ಚಿಯನ್ ಕಾಲೊನಿಯಲ್ಲಿರುವ ಸಿ.ಎಸ್.ಐ ಗರ್ನಿ ಸ್ಮಾರಕ ಚರ್ಚ್ 80 ವರ್ಷಗಳ ಇತಿಹಾಸ ಹೊಂದಿದೆ. ಪ್ರತಿ ಕ್ರಿಸ್‌ಮಸ್‌ ಸಂದರ್ಭದಲ್ಲಿ ಕಳೆಗಟ್ಟುವ ಈ ಚರ್ಚ್‌ ನೋಡುವುದೇ ಒಂದು ಸೊಗಸು.

ಸುಣ್ಣ, ಬಣ್ಣ ಬಳಿದುಕೊಂಡು, ವಿದ್ಯುತ್ ದೀಪಗಳಿಂದ ಅಲಂಕೃತ ಗೊಂಡು, ಬಣ್ಣ ಬಣ್ಣದ ನಕ್ಷತ್ರ ದೀಪಗಳಿಂದ ಕಂಗೋಳಿಸುತ್ತಿರುವ ಚರ್ಚ್‌ನಲ್ಲಿ ಸದ್ಯ ಹಬ್ಬದ ವಾತಾವರಣ ಮನೆ ಮಾಡಿದೆ. ಪ್ರವೇಶ ದ್ವಾರದಲ್ಲಿ ಗೊದಲಿ ನಿರ್ಮಿಸಲಾಗಿದೆ. ಕ್ರೈಸ್ತರು ಹಬ್ಬದ ಅಂಗವಾಗಿ ಕೆಲ ದಿನಗಳಿಂದ ಬಿಳಿ ಬಟ್ಟೆ ತೊಟ್ಟು ಸಾಂತಾಕ್ಲಾಸ್‌ ವೇಷಧಾರಿಯೊಂದಿಗೆ ಕ್ರೈಸ್ತರ ಮನೆಗಳಿಗೆ ಮೆರವಣಿಗೆಯಲ್ಲಿ ತೆರಳಿ ಭಜನೆ ಮಾಡಿ ಏಸುವಿನ ಸಂದೇಶವನ್ನು ಸಾರುತ್ತಿದ್ದರು.

ಪ್ರತಿಯೊಬ್ಬ ಕ್ರಿಶ್ಚಿಯನ್‌ರ ಮನೆಯಲ್ಲಿ ತಿಂಗಳು ಪೂರ್ತಿ ಹಬ್ಬದ ವಾತಾವರಣ ನಿರ್ಮಾಣವಾಗಿರುತ್ತದೆ. ಬಗೆ ಬಗೆ ಬಿಸ್ಕೆಟ್, ಕೇಕ್‌, ರೋಸ್ ಕುಕ್ಕ್, ಸಸ್ಯಹಾರ ಹಾಗೂ ಮಾಂಸ ಆಹಾರಗಳು ಸಿದ್ದಪಡಿಸಿ ಸಂಬಂಧಿಕರನ್ನು ಹಾಗೂ ತಮ್ಮ ಮನೆ ಸುತ್ತಮುತ್ತಲಿನ ಇತರೆ ಧರ್ಮಿಯರನ್ನು ಸ್ನೇಹಿತರನ್ನು ಕರೆದು ತಿಂಡಿ ತಿನುಸುಗಳು ಹಾಗೂ ಉಡುಗೊರೆ ನೀಡಿ ಸತ್ಕರಿಸುವ ಸಂಪ್ರದಾಯವಿದೆ.

ADVERTISEMENT

ಭಾನುವಾರ ರಾತ್ರಿ ಪ್ರತಿಯೊಬ್ಬರು ಚರ್ಚ್‌ಗೆ ಹೋಗಿ ಮೇಣದ ಬತ್ತಿ ಬೆಳಗಿಸಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕ್ರಿಸ್‌ಮಸ್‌ ದಿನವಾದ ಸೋಮವಾರ ಕ್ರಿಶ್ಚಿಯನ್ನರು ಹೊಸ ಬಟ್ಟೆ ತೊಟ್ಟು ಚರ್ಚ್‌ಗಳಿಗೆ ತೆರಳಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ, ಕೇಕ್‌ ಸೇವಿಸುವ ಮೂಲಕ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಆಯೋಜಿಸಲಾಗುತ್ತದೆ.

ಕ್ರೈಸ್ತರಲ್ಲಿ ಕ್ಯಾಥೋಲಿಕ್ ಮತ್ತು ಪ್ರೊಟೆಸ್ಟೆಂಟ್ ಎಂಬ ಎರಡು ಪಂಗಡ ಗಳಿವೆ. ಪ್ರೊಟೆಸ್ಟೆಂಟ್ ಪಂಗಡದವರು ಏಸು ಕ್ರಿಸ್ತನನ್ನು ಪ್ರಾರ್ಥನೆ ಮಾಡಿದರೆ, ಕ್ಯಾಥೋಲಿಕ್ ಪಂಗಡದವರು ಮೇರಿ ಮಾತೆಯನ್ನು ಆರಾಧಿಸುತ್ತಾರೆ. ಕ್ಯಾಥೋಲಿಕ್ ಪಂಗಡ ದವರ ಬೈಬಲ್ ಪ್ರತ್ಯೇಕವಾಗಿರುತ್ತದೆ. ಸತ್ಯವೇದ ಬೈಬಲ್ ಗ್ರಂಥವನ್ನು ಪ್ರೊಟೆಸ್ಟೆಂಟ್ ಪಂಗಡ ದವರು ಬೋಧನೆ ಮಾಡುತ್ತಾರೆ.

‘ಕ್ರೈಸ್ತರ ಆರಾಧ್ಯ ದೈವ ಏಸು ಕ್ರಿಸ್ತ ಜಗತ್ತಿಗೆ ಪ್ರೀತಿ, ಕರುಣೆ ಸಂದೇಶಗಳನ್ನು ಸಾರಿದ ಮಹಾನ್ ಚೇತನ. ಸಾವಿನ ಸಂಕಟದಲ್ಲೂ ವಿಚಲಿತನಾಗದೆ ಲೋಕ ಕಲ್ಯಾಣಕ್ಕಾಗಿ ಮಿಡಿದ ಏಸುಕ್ರಿಸ್ತನ ವ್ಯಕ್ತಿತ್ವ ಇಂದಿಗೂ ಪ್ರಸ್ತುತ. ಹಿಂಸೆ, ಕ್ರೋಧ, ಅಸೂಯೆ ಆಧುನಿಕ ಸಮಾಜದ ಗುಣಗಳೆಂಬಂತೆ ವಿಶ್ವ ವ್ಯಾಪ್ತಿಯಾಗಿ ಹಬ್ಬುತ್ತಿರುವ ಈ ಸಂದರ್ಭದಲ್ಲಿ ಏಸುಕ್ರಿಸ್ತನ ಪ್ರೀತಿ, ಔದಾರ್ಯ, ಕ್ಷಮಾ ಗುಣ, ಪರಧರ್ಮ ಸಹಿಷ್ಣತೆ ಹಾಗೂ ವಿಶ್ವ ಭ್ರಾತೃತ್ವ ಭಾವನೆ ಪ್ರತಿಯೊಬ್ಬರಲ್ಲಿ ಮೂಡಬೇಕಾಗಿದೆ’ ಎನ್ನುತ್ತಾರೆ ಐಎಂಎಸ್ ಚರ್ಚ್ ಸಭಾಪಾಲಕ ರಾಬರ್ಟ್ ಶಾಮ್.

‘ಭಾರತದಲ್ಲಿ ತುಳಿತಕ್ಕೆ ಹಾಗೂ ಶೋಷಣೆಗೆ ಒಳಪಟ್ಟ ಅಸ್ಪೃಶ್ಯರಿಗೆ, ದೀನ ದಲಿತರಿಗೆ ಶಿಕ್ಷಣ, ಸಾಮಾಜಿಕ ಸ್ಥಾನ ಮಾನ, ಆರ್ಥಿಕ ಸಮಾನತೆ ಹಾಗೂ ಪ್ರೀತಿ ಪ್ರೇಮ ಹಂಚಿ ಸೌಹಾರ್ದತೆ ಸ್ಥಾಪಿಸುವಲ್ಲಿ ಕ್ರೈಸ್ತ ಮಿಷನರಿಗಳ ಪಾತ್ರ ಮಹತ್ವದಾಗಿದೆ. ಮದರ್ ತೇರೇಸಾ ದೀನ ದಲಿತರನ್ನು ಅನಾಥರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಸಾಕಷ್ಟು ಶ್ರಮಿಸಿದ್ದರು. ಅನೇಕ ಕ್ರೈಸ್ತ ಮಿಷನರಿಗಳು ಭಾರತಕ್ಕೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ’ ಎಂದು ಕ್ರಿಶ್ಚಿಯನ್ ಕಾಲೊನಿ ಸಿಎಸ್ಐ ಚರ್ಚ್ ಸಭಾಪಾಲಕ ಮ್ಯಾಥ್ಯೂ ರೋನಾಲ್ಡ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.