ADVERTISEMENT

ಎಸ್‌.ಟಿ ಒಳ ಮೀಸಲಾತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2017, 7:16 IST
Last Updated 20 ಸೆಪ್ಟೆಂಬರ್ 2017, 7:16 IST

ಗೌರಿಬಿದನೂರು: ಪರಿಶಿಷ್ಟ ಪಂಗಡಕ್ಕೆ ಪ್ರತ್ಯೇಕವಾಗಿ ಒಳಮೀಸಲಾತಿ ಶೇ 12ಕ್ಕೆ ಹೆಚ್ಚಿಸುವುದು ಹಾಗೂ ವೀರ ಮದಕರಿ ನಾಯಕ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸುವಂತೆ ಆಗ್ರಹಿಸಿ ವೀರ ಮದಕರಿ ನಾಯಕರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕರ್ತರು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಪಟ್ಟಣದ ಉತ್ತರ ಪಿನಾಕಿನಿ ನದಿ ದಡದಿಂದ ಹೊರಟ ಸಂಘದ ಕಾರ್ಯಕರ್ತರು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ನಂತರ ತಮ್ಮ ಬೇಡಿಕೆ ಈಡೇರಿಕೆಗಾಗಿ ಉಪ ತಹಶೀಲ್ದಾರ್‌ ಆರುಂಧತಿ ಅವರಿಗೆ ಮನವಿ ಸಲ್ಲಿಸಿದರು.

ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎನ್. ಹನುಮಂತ ನಾಯಕ ಮಾತನಾಡಿ, ‘ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ ಇತರೆ ಜಾತಿಗಳನ್ನು ಸೇರ್ಪಡೆ ಮಾಡಿದ್ದರಿಂದ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದು, ಶೇ 3ರ ಮೀಸಲಾತಿಯಲ್ಲಿ ಯಾವುದೇ ಪ್ರಯೋಜನ ಇಲ್ಲದಂತಾಗಿದೆ ಎಂದರು.

ADVERTISEMENT

ರಾಜ್ಯದಲ್ಲಿ ಪರಿಶಿಷ್ಟ ಜನಾಂಗದ ಜನಸಂಖ್ಯೆ 45 ಲಕ್ಷಕ್ಕೂ ಅಧಿಕವಾಗಿದೆ. ಜನಸಂಖ್ಯೆ ಆಧಾರದ ಮೇಲೆ ಶೇ 12ರಷ್ಟು ಒಳಮೀಸಲಾತಿ ಕಲ್ಪಿಸಬೇಕು. ಪಟ್ಟಣದ ಹೊರವಲಯದ ಚನ್ನ ಭೈರೇನಹಳ್ಳಿ ಗ್ರಾಮಕ್ಕೆ ನಕಾಶೆ ಮೂಲಕ ಹುಲ್ಲು ಬನ್ನಿ ಜಮೀನುಗಳಲ್ಲಿ ರಸ್ತೆ ಇದ್ದರೂ ಸಮರ್ಪಕವಾದ ರಸ್ತೆ ನಿರ್ಮಾಣ ಮಾಡಿಲ್ಲ. ಇದಕ್ಕೆ ತಾಲ್ಲೂಕು ಆಡಳಿತ ಸಂಪೂರ್ಣ ನಿರ್ಲಕ್ಷ್ಯಿಸಿದೆ. ಗ್ರಾಮಕ್ಕೆ ಕೂಡಲೆ ಸಂಪರ್ಕ ರಸ್ತೆ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದರು.

ಅಲಕಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನುಮೇನಹಳ್ಳಿಯಲ್ಲಿ ನವ ಗ್ರಾಮ ಯೋಜನೆ ಹೆಸರಿನಲ್ಲಿ ಜಮೀನು ಖರೀದಿಗಾಗಿ ಫಲಾನುಭವಿಗಳಿಂದ ವಂತಿಗೆ ರೂಪದಲ್ಲಿ ಹಣ ಪಡೆಯ ಲಾಗಿದೆ. ಆದರೆ ಇದುವರೆಗೂ ಫಲಾನು ಭವಿಗಳಿಗೆ ನಿವೇಶನಗಳಾಗಲಿ, ಇಲ್ಲವೇ ವಸತಿ ವ್ಯವಸ್ಥೆ ಕಲ್ಪಿಸದೆ ವಂಚಿಸಲಾಗಿದೆ. ಇದಕ್ಕೆ ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿ ನಿಗಮ ಮಂಡಳಿಗಳಲ್ಲಿ ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಅಂತಿಮಗೊಳಿಸಬೇಕು ಎಂದರು.

ಸಂಘದ ಗೌರವಾಧ್ಯಕ್ಷ ತಿಪ್ಪಣ್ಣ ನಾಯಕ, ಉಪಾಧ್ಯಕ್ಷ ನಾಗ ರಾಜ, ಕಾರ್ಯದರ್ಶಿ ರಾಜಕುಮಾರ್, ಖಜಾಂಚಿ ಕಾಂತರಾಜ್, ಕಾನೂನು ಸಲಹೆಗಾರ ರಾಮಚಂದ್ರ, ಪದಾಧಿಕಾ ರಿಗಳಾದ ಕೃಷ್ಣಪ್ಪ, ರಾಜಪ್ಪ, ಕಿಟ್ಟಯ್ಯ, ಗಂಗಾಧರಪ್ಪ, ರಾಜು, ಅಶ್ವತ್ಥಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.