ADVERTISEMENT

ಕಳೆಯಿತು ವರುಷ, ತರಲಿಲ್ಲ ಹರುಷ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 6:24 IST
Last Updated 8 ನವೆಂಬರ್ 2017, 6:24 IST
ಚಿಕ್ಕಬಳ್ಳಾಪುರದ ಬಿ.ಬಿ.ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಶಾಖೆಯ ಎದುರು ಕಳೆದ ವರ್ಷದ ನವೆಂಬರ್‌ನಲ್ಲಿ ಕೂಪನ್‌ಗಾಗಿ ಮುಗಿಬಿದ್ದಿದ್ದ ಜನರು
ಚಿಕ್ಕಬಳ್ಳಾಪುರದ ಬಿ.ಬಿ.ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಶಾಖೆಯ ಎದುರು ಕಳೆದ ವರ್ಷದ ನವೆಂಬರ್‌ನಲ್ಲಿ ಕೂಪನ್‌ಗಾಗಿ ಮುಗಿಬಿದ್ದಿದ್ದ ಜನರು   

ಚಿಕ್ಕಬಳ್ಳಾಪುರ: ಕಳೆದ ವರ್ಷದಲ್ಲಿ ಸರಿಯಾಗಿ ಇದೇ ದಿನ (ನ.8) ಅನಿರೀಕ್ಷಿತ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಘೋಷಿಸಿದ ₹ 500 ಮತ್ತು ₹ 1,000 ಮುಖ ಬೆಲೆಯ ನೋಟುಗಳ ರದ್ದತಿ ತೀರ್ಮಾನ ಇಡೀ ದೇಶಕ್ಕೆ ಒಂದು ಕ್ಷಣ ‘ಶಾಕ್‌’ ನೀಡಿದಂತಿತ್ತು. ಸಂಜೆ ಹೊತ್ತಿಗೆ ಹೊರಬಿದ್ದ ಘೋಷಣೆ ಅದೇ ದಿನ ಮಧ್ಯರಾತ್ರಿ ಯಿಂದಲೇ ಜಾರಿಗೆ ಬರುತ್ತದೆ ಎನ್ನುವುದು ತಿಳಿದಾಗಲಂತೂ ಈ ದಿಢೀರ್‌ ‘ಅರ್ಥ ಕ್ರಾಂತಿ’ಯಿಂದ ಉಳಿದೆಡೆಯಂತೆ ಜಿಲ್ಲೆಯ ಜನರು ಕೂಡ ‘ಚಿಂತಾಕ್ರಾಂತ’ರಾಗಿ ಹೋಗಿದ್ದರು.

ನಂತರ ನಡೆದದ್ದೆಲ್ಲ ಇವತ್ತು ಇತಿಹಾಸ. ಆದರೆ ಈ ಒಂದು ವರ್ಷದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕೈಗೊಂಡ ‘ಮಹತ್ವ’ದ ನಿರ್ಣಯ ಕುರಿತು ಪರ ಮತ್ತು ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಲೇ ಬಂದಿವೆ. ಅಂತೆಯೇ ಇದೀಗ ಈ ಬಗ್ಗೆ ಜಿಲ್ಲೆಯ ಜನರ ಅಭಿಪ್ರಾಯಗಳನ್ನು ಕೇಳಲು ಹೋದರೆ ಸಿಹಿ–ಕಹಿ ಮಿಶ್ರಿತ ಪ್ರತಿಕ್ರಿಯೆಗಳು ಹೊರಬರುತ್ತಿವೆ.

‘ಭ್ರಷ್ಟಾಚಾರ ನಿರ್ಮೂಲನೆ, ಕಪ್ಪುಹಣ ಹೊರಗೆ ತೆಗೆಯುತ್ತೇವೆ ಎಂದು ಹೇಳಿಕೊಂಡು ಮೋದಿ ಅವರು ವಿವೇಚನಾ ರಹಿತವಾಗಿ ಕೈಗೊಂಡ ಈ ಕ್ರಮ ಜನಸಾಮಾನ್ಯರ ಜೀವನದ ಮೇಲೆ ಅಗಾಧ ದುಷ್ಪರಿಣಾಮ ಬೀರಿದೆ. ಆದರೂ ಜನಸಾಮಾನ್ಯರು ಇದನ್ನು ಸಹನೆಯಿಂದಲೇ ಸಹಿಸಿಕೊಂಡು ಬಂದಿದ್ದಾರೆ’ ಎಂದು ರೈತ ಮುಖಂಡ ಯಲುವಹಳ್ಳಿ ಸೊಣ್ಣೇಗೌಡ ತಿಳಿಸಿದರು.

ADVERTISEMENT

‘ಕೇಂದ್ರದ ಈ ನಿರ್ಧಾರದಿಂದಾಗಿ ಕೃಷಿ ಉತ್ಪನ್ನಗಳು ಬೆಲೆ ಕಳೆದುಕೊಂಡು ರೈತರು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದರು. ವಿಶೇಷವಾಗಿ ಈ ಭಾಗದಲ್ಲಿ ರೇಷ್ಮೆ ಬೆಳೆಗಾರರು ಹಣಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಬಡವರು ಬ್ಯಾಂಕ್‌ನ ಸರದಿ ಸಾಲಿನಲ್ಲಿ ನಿಂತು ಹೀನಾಮಾನ ಕಷ್ಟ ಅನುಭವಿಸಿದರು. ಸಣ್ಣ ಸಣ್ಣ ವ್ಯಾಪಾರಿಗಳು ದಿವಾಳಿಯಾದರು. ಇಷ್ಟಾದರೂ ಈ ಯೋಜನೆಯ ಧ್ಯೇಯಗಳು ಈಡೇರಲಿಲ್ಲ. ಸಂಪೂರ್ಣ ವಿಫಲವಾದವು’ ಎಂದು ಹೇಳಿದರು.

‘ಕಳೆದ ನವೆಂಬರ್ 8ರ ನಂತರ ನಮ್ಮ ಜನ ಸ್ವಲ್ಪ ಕಷ್ಟ ಪಟ್ಟಿದ್ದಾರೆ. ಅದರ ಪರಿಣಾಮ ಹೊಸ ವರ್ಷದಲ್ಲಿ ಎರಡ್ಮೂರು ತಿಂಗಳು ಇತ್ತು. ಸುಮಾರು ಆರು ತಿಂಗಳು ಆರ್ಥಿಕ ವಹಿವಾಟು, ಎಟಿಎಂಗಳಲ್ಲಿ ಹಣ ಲಭ್ಯತೆ ನ.8ರ ಮೊದಲು ಇದ್ದಂತೆ ಇರಲಿಲ್ಲ. ಬಳಿಕ ಪರಿಸ್ಥಿತಿ ಸುಧಾರಿಸುತ್ತ ಹಳಿಗೆ ಬಂತು’ ಎನ್ನುತ್ತಾರೆ ಜಿಲ್ಲೆಯ ಲೀಡ್‌ ಬ್ಯಾಂಕ್‌ ವಿಭಾಗೀಯ ವ್ಯವಸ್ಥಾಪಕ ಕೆ.ಎಸ್.ಭಟ್‌.

‘ಜಿಲ್ಲೆಯಲ್ಲಿ 25 ಬ್ಯಾಂಕ್‌ಗಳ 164 ಬ್ಯಾಂಕ್‌ ಶಾಖೆಗಳಿವೆ. ನೋಟು ಬದಲಾವಣೆಯ ನಿರ್ಧಾರದ ನಂತರ 2.05 ಲಕ್ಷಕ್ಕೂ ಅಧಿಕ ಹೊಸ ಖಾತೆಗಳು ತೆರೆದವು. ಸದ್ಯ ಜಿಲ್ಲೆಯಲ್ಲಿ ಸುಮಾರು 16 ಲಕ್ಷ ಖಾತೆಗಳಿವೆ. ಈ ಪೈಕಿ ಶೇ 25 ರಿಂದ 30 ರಷ್ಟು ಗ್ರಾಹಕರು ತಮ್ಮ ಆರ್ಥಿಕ ವಹಿವಾಟಿಗೆ ಕಾರ್ಡ್ ಬಳಸಲು ಆರಂಭಿಸಿದ್ದಾರೆ. ಡಿಜಿಟಲ್‌ ವಹಿವಾಟಿನ ಪ್ರಮಾಣ ತುಂಬಾ ಹೆಚ್ಚಾಗಿದೆ’ ಎಂದು ತಿಳಿಸಿದರು.

‘ಸ್ಮಾರ್ಟ್‌ಫೋನ್‌ಗಳ ಮೂಲಕ ಹಣ ರವಾನೆ ಮತ್ತು ಸ್ವೀಕೃತಿಯನ್ನು ತುಂಬ ಸುಲಭಗೊಳಿಸಲಿರುವ ಮತ್ತು ನಗದುರಹಿತ ವರ್ಗಾವಣೆ ಸೌಲಭ್ಯ ವಿಸ್ತರಣೆಗೆ ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು (ಎನ್‌.ಪಿ.ಸಿ.ಐ) ಅಭಿವೃದ್ಧಿಪಡಿಸಿದ ಯುಪಿಐ ಆ್ಯಪ್ (ಯುನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌) ಸೌಲಭ್ಯದ ಬಳಕೆ ಗಣನೀಯವಾಗಿ ಹೆಚ್ಚಾಗಿದೆ. ಕಾಲೇಜು ವಿದ್ಯಾರ್ಥಿಗಳು, ಯುವಜನರು ನವನವೀನ ಆ್ಯಪ್‌ ಮೂಲಕ ಬ್ಯಾಕಿಂಗ್ ವಹಿವಾಟು ಸುಲಭಗೊಳಿ ಸಿಕೊಂಡಿದ್ದಾರೆ’ ಎಂದು ಹೇಳಿದರು.

‘ದಿನದ 24 ಗಂಟೆಗಳ ಕಾಲ ನಡೆಯುವ ಡಿಜಿಟಲ್ ವಹಿವಾಟಿನಿಂದ ಬ್ಯಾಂಕ್‌ ಶಾಖೆಗಳಲ್ಲಿ ನಗದು ವ್ಯವಹಾರ ಕಡಿಮೆಯಾಗಿ ಬ್ಯಾಂಕ್‌ನಿಂದ ಇತರ ಸಾಲ ಸೌಲಭ್ಯಗಳಿಗೆ ಆದ್ಯತೆ ನೀಡುವ ಸ್ಥಿತಿ ಬರುತ್ತದೆ ಎನ್ನುವುದು ನನ್ನ ಆಶಯ’ ಎಂದರು.

‘ಇವತ್ತು ದೇಶದ ಆರ್ಥಿಕ ವ್ಯವಸ್ಥೆ ಸಂಪೂರ್ಣವಾಗಿ ನಶಿಸುವಂತಹ ಸ್ಥಿತಿಗೆ ಮೋದಿ ತಂದು ನಿಲ್ಲಿಸಿದ್ದಾರೆ. ದೊಡ್ಡ ದೊಡ್ಡ ಉದ್ಯಮಿಗಳ ಬಳಿ ಇದ್ದ ಕಪ್ಪುಹಣವನ್ನು ಬಿಳಿಯಾಗಿಸಲು ಅವರು ಇಂತಹ ನಿರ್ಧಾರ ಕೈಗೊಂಡಿದ್ದಾರೆ. ಇದರಿಂದ ದೇಶದ ದುಡಿಯುವ ವರ್ಗವಾದ ರೈತರು, ಕೂಲಿಕಾರರು, ಬಡವರಿಗೆ ತೀವ್ರ ಸಮಸ್ಯೆ ಅನುಭವಿಸಬೇಕಾಯಿತು’ ಎಂದು ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಎಂ.ಪಿ. ಮುನಿವೆಂಕಟಪ್ಪ ಹೇಳಿದರು.

‘ವರ್ಷದಾದ್ಯಂತ ರೈತರು ತೀವ್ರ ಸಮಸ್ಯೆ ಎದುರಿಸುತ್ತಲೇ ಬಂದಿದ್ದಾರೆ. ಬಹುರಾಷ್ಟ್ರೀಯ ಕಂಪೆನಿಗಳ ಏಜೆಂಟ್‌ರಂತೆ ವರ್ತಿಸುತ್ತಿರುವ ಮೋದಿ ಅವರು ಇವತ್ತು ಜನಸಾಮಾನ್ಯರಿಗೆ ಮೋಸ ಮಾಡಿದ್ದಾರೆ. ಕೇಂದ್ರದ ಈ ನಿರ್ಧಾರ ಪ್ರತಿಭಟಿಸಿ ನಾವು ಸಿಪಿಎಂ ಪಕ್ಷದ ವತಿಯಿಂದ ಬುಧವಾರ (ನ.8) ದೇಶದಾದ್ಯಂತ ಕಪ್ಪುದಿನ ಆಚರಿಸುತ್ತಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.