ADVERTISEMENT

ಕಾಲಮಿತಿಯೊಳಗೆ ಅನುದಾನ ಸದುಪಯೋಗಪಡಿಸಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 5:54 IST
Last Updated 12 ಜನವರಿ 2017, 5:54 IST

ಚಿಕ್ಕಬಳ್ಳಾಪುರ: ‘ಪ್ರಸಕ್ತ ಆರ್ಥಿಕ ವರ್ಷ ಕೊನೆಗೊಳ್ಳುವುದರೊಳಗೆ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಕಾಲಮಿತಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಿ, ಅನುದಾನ ಸದುಪಯೋಗಪಡಿಸಿಕೊಳ್ಳಬೇಕು. ಅನುದಾನ ರದ್ದಾಗದಂತೆ ನೋಡಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಜೆ.ಮಂಜುನಾಥ್‌ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಪಶು ಸಂಗೋಪನೆ, ಸಣ್ಣ ನೀರಾವರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಪ್ರಮುಖ ಇಲಾಖೆಯ ಅಧಿಕಾರಿಗಳು ಭೂಸೇನಾ ನಿಗಮ, ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗ (ಪಿಆರ್‌ಇಡಿ), ನಿರ್ಮಿತಿ ಕೇಂದ್ರವರಿಗೆ ವಹಿಸಿದ ಕಾಮಗಾರಿಗಳನ್ನು ನಿಗದಿತ ಗಡುವಿನೊಳಗೆ ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ಫೆಬ್ರುವರಿ ಹೊತ್ತಿಗೆ ಖಜಾನೆ ಬಂದ್‌ ಮಾಡಲಾಗುತ್ತದೆ. ಹೀಗಾಗಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ತ್ವರಿಗತಿಯಲ್ಲಿ ಪೂರ್ಣಗೊಳಿಸಲು ಗಮನ ಹರಿಸಿ. ಟೆಂಡರ್‌ ಕರೆಯುವುದಿದ್ದರೆ ಆದಷ್ಟು ಬೇಗ ಕರೆದು ತಿಂಗಳಾಂತ್ಯಕ್ಕೆ ಕಾರ್ಯಾದೇಶ ನೀಡಿ. ಒಂದೊಮ್ಮೆ ಅನುದಾನ ರದ್ದಾದರೆ ಸಂಬಂಧಪಟ್ಟ ಅಧಿಕಾರಿಯನ್ನೇ ಹೊಣೆಗಾರನ್ನಾಗಿ ಮಾಡಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಕ್ರಿಯಾಯೋಜನೆಯಲ್ಲಿ ಉಳಿಯುವ ಹಣವನ್ನು ಹಣಕಾಸು ಇಲಾಖೆಗೆ ಹಿಂತಿರುಗಿಸುವುದಾಗಿ 10 ದಿನಗಳ ಒಳಗೆ ಪತ್ರ ಬರೆಯಬೇಕು. ಫೆಬ್ರುವರಿ 16 ರಿಂದ ವಿಧಾನಸೌಧ ಅಧಿವೇಶನ ನಡೆಯಲಿದೆ. ಅದರಲ್ಲಿ ಹಣಕಾಸು ಇಲಾಖೆ ವತಿಯಿಂದ ಪೂರಕ ಬಜೆಟ್‌ ಮಂಡಿಸಲಾಗುತ್ತದೆ. ಆದ್ದರಿಂದ ಯಾವುದಾದರೂ ಯೋಜನೆಗೆ ಹೆಚ್ಚುವರಿ ಅನುದಾನದ ಅಗತ್ಯವಿದ್ದರೆ ಆ ಬಗ್ಗೆ ಈಗಲೇ ಹಣಕಾಸು ಇಲಾಖೆಗೆ ಪ್ರಸ್ತಾವ ಕಳುಹಿಸಿಕೊಡಬೇಕು’ ಎಂದು ತಿಳಿಸಿದರು.

ಮೇವಿನ ಬೀಜ ಸಿಗುತ್ತಿಲ್ಲ: ಸಭೆಯಲ್ಲಿ ಮಾತನಾಡಿದ ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಸಿ.ಪಾಂಡುರಂಗಪ್ಪ, ‘ಜಿಲ್ಲೆಯಲ್ಲಿ ಮೇವಿನ ಕೊರತೆ ನೀಗಿಸುವ ಉದ್ದೇಶದಿಂದ ಹಾಲು ಉತ್ಪಾದಕರ ಸಹಕಾರ ಸಂಘಗಳ ಜತೆ ಒಪ್ಪಂದ ಮಾಡಿಕೊಂಡು 2,500 ಜನರು 5,000 ಎಕರೆಯಲ್ಲಿ ಮೇವು ಬೆಳೆಯಲು ಮುಂದೆ ಬಂದಿದ್ದಾರೆ. ಈಗಾಗಲೇ ಕೆಎಂಎಫ್‌ ಕಡೆಯಿಂದ 10 ಸಾವಿರ ಮೇವಿನ ಬೀಜದ ಕಿಟ್‌ಗಳನ್ನು ಖರೀದಿಸಿ ಪೂರೈಸಲಾಗಿದೆ. ಇನ್ನೂ 42 ಸಾವಿರ ಕಿಟ್‌ಗಳ ಬೇಡಿಕೆ ಇದೆ. ಈ ಬಗ್ಗೆ ಜಿಲ್ಲಾಧಿಕಾರಿ ಅವರ ಗಮನಕ್ಕೆ ತರಲಾಗಿದೆ’ ಎಂದು ಹೇಳಿದರು.

ಕುಡಿಯುವ ನೀರು ಶುದ್ಧೀಕರಿಸುವ ಘಟಕ ನಿರ್ಮಿಸುವ ಕಾಮಗಾರಿಗಳ ಕುರಿತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಂಗಾಮಿ ಕಾರ್ಯಪಾಲಕ ಎಂಜಿನಿಯರ್‌ ನರಸಿಂಹಮೂರ್ತಿ ಅವರಿಂದ ಮಾಹಿತಿ ಪಡೆದ ಸಿಇಒ ಮಂಜುನಾಥ್ ಅಪೂರ್ಣಗೊಂಡಿರುವ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸಿ.ಆರ್.ಸುಬ್ರಮಣಿ ಅವರಿಂದ ವಿದ್ಯಾರ್ಥಿ ನಿಲಯಗಳ ಸಮಸ್ಯೆಗಳು ಮತ್ತು ಸಿಬ್ಬಂದಿ ವೇತನದ ಬಗ್ಗೆ ಮಾಹಿತಿ ಪಡೆಯುತ್ತಿದ್ದ ವೇಳೆ  ಸಿಇಒ ಅವರು ಚಿಂತಾಮಣಿ ಸರ್ಕಾರಿ ಮೆಟ್ರಿಕ್‌ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಸಮಸ್ಯೆಗಳ ಕುರಿತು ವಿಚಾರಿಸಿದರು. ಈ ವೇಳೆ ಸುಬ್ರಮಣಿ ಅವರು, ‘ಆ ಹಾಸ್ಟೆಲ್‌ನಲ್ಲಿ ನಿರ್ಮಿತಿ ಕೇಂದ್ರದವರು ಸೋಲಾರ್‌ ವಾಟರ್‌ ಹೀಟರ್‌ ರಿಪೇರಿ ಮಾಡಿಸುವ ಉದ್ದೇಶದಿಂದ ತೆಗೆದಿಟ್ಟಿದ್ದಾರೆ. ಅನೇಕ ತಿಂಗಳುಗಳಾದರೂ ಈವರೆಗೆ ಅದನ್ನು ರಿಪೇರಿ ಮಾಡಿಸಿ ಅಳವಡಿಸುವ ಕೆಲಸ ನಡೆದಿಲ್ಲ. ಚಳಿಗಾಲ ಇರುವುದರಿಂದ ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿ ಇದರಿಂದ ತುಂಬಾ ತೊಂದರೆಯಾಗುತ್ತಿದೆ’ ಎಂದು ಹೇಳಿದರು.

ಈ ವೇಳೆ ನಿರ್ಮಿತಿ ಕೇಂದ್ರದ ಅಧಿಕಾರಿಯನ್ನು ಉದ್ದೇಶಿಸಿ ಮಂಜುನಾಥ್,  ‘ವಾರದೊಳಗೆ ಸೋಲಾರ್‌ ವಾಟರ್‌ ಹೀಟರ್‌ ರಿಪೇರಿ ಮಾಡಿಸಿ ಅಳವಡಿಸುವ ಮೂಲಕ ಸಮಸ್ಯೆ ಸರಿಪಡಿಸುವ ಕೆಲಸ ಮಾಡಬೇಕು’ ಎಂದು ಸೂಚಿಸಿದರು. ‘ಪ್ರಜಾವಾಣಿ’ ಬುಧವಾರದ ಸಂಚಿಕೆಯಲ್ಲಿ ‘ಒಳಗೆಲ್ಲ ಹುಳುಕು, ಭಯದಲ್ಲೇ ಬದುಕು’ ಎನ್ನುವ ಶೀರ್ಷಿಕೆಯಡಿ ಚಿಂತಾಮಣಿ ಸರ್ಕಾರಿ ಮೆಟ್ರಿಕ್‌ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಸಮಸ್ಯೆಗಳನ್ನು ಅನಾವರಣಗೊಳಿಸಿತ್ತು.

ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿ.ಸಿದ್ದರಾಮಯ್ಯ, ಮುಖ್ಯ ಲೆಕ್ಕಾಧಿಕಾರಿ ಎಂ.ಎಚ್.ನಾಗೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.