ADVERTISEMENT

ಕುಸಿದ ಮಾವಿನ ಫಸಲು: ಹೆಚ್ಚಿದ ಧಾರಣೆ

ಅಕಾಲಿಕ ಮಳೆಯಿಂದ ಉತ್ಪಾದನೆ ಕುಂಠಿತ; ಸಂಕಷ್ಟದಲ್ಲಿ ಬೆಳೆಗಾರರು

​ಪ್ರಜಾವಾಣಿ ವಾರ್ತೆ
Published 26 ಮೇ 2018, 9:46 IST
Last Updated 26 ಮೇ 2018, 9:46 IST
ಸುಗ್ಗಿಯಲ್ಲಿ ಮರದೊಳಗೆ ಅಲ್ಲೊಂದು–ಇಲ್ಲೊಂದು ಕಾಯಿ ಕಾಣುತ್ತಿವೆ
ಸುಗ್ಗಿಯಲ್ಲಿ ಮರದೊಳಗೆ ಅಲ್ಲೊಂದು–ಇಲ್ಲೊಂದು ಕಾಯಿ ಕಾಣುತ್ತಿವೆ   

ಚಿಂತಾಮಣಿ: ಅಕಾಲಿಕ ಮಳೆ, ವಾತಾವರಣದ ಏರುಪೇರಿನಿಂದಾಗಿ ಹಣ್ಣುಗಳ ರಾಜ ಮಾವಿನ ಉತ್ಪಾದನೆ ಈ ವರ್ಷ ತೀವ್ರವಾಗಿ ಕುಸಿಯುವ ಸಾಧ್ಯತೆಗಳಿವೆ. ಇದರ ಹೊರೆ ಗ್ರಾಹಕರು ಮತ್ತು ಬೆಳೆಗಾರರ ಮೇಲೆ ಬೀರಲಿದೆ. ಇಳುವರಿ ಕೊರತೆಯಿಂದ ಮಾವಿನ ಹಣ್ಣಿನ ಬೆಲೆ ಗಗನಕ್ಕೆ ಏರಿದೆ. ದುಬಾರಿ ಬೆಲೆಯ ಕಾರಣ ಸಾಮಾನ್ಯ ಜನರಿಗೆ ಮಾವು ಹುಳಿಯಾಗುತ್ತಿದೆ.

ಈ ಬಾರಿ ಜನವರಿಯಲ್ಲಿ ಮಾವಿನ ನನೆ ಚೆನ್ನಾಗಿ ಬಂದಿತ್ತು. ಬಂಪರ್‌ ಫಸಲು ಬರುವ ನಿರೀಕ್ಷೆಯಲ್ಲಿ ರೈತರಿದ್ದರು. ಅಕಾಲಿಕವಾಗಿ ಮಳೆ ಬಂದಿದ್ದರಿಂದ ನನೆ ಉದುರಿತು. ಮಾರ್ಚ್‌ನಲ್ಲಿ ಮತ್ತೊಮ್ಮೆ ಬಂದ ಮಳೆಗೆ ಬೆಳೆಗೂ ಹಾನಿಯಾಯಿತು. ಈ ಎರಡು ಹಂತಗಳಲ್ಲಿ ಅರ್ಧದಷ್ಟು ಬೆಳೆಗೆ ಹಾನಿಯಾದರೆ, ಹವಾಮಾನದ ಏರುಪೇರು, ಮುಂಗಾರು ಮುಂಚೆಯೇ ಮಳೆ–ಗಾಳಿಯಾಗಿ, ರೋಗ ರುಜಿನುಗಳು ಕಾಡಿದವು. ಭೂಮಿಯಲ್ಲಿ ತೇವಾಂಶದ ಕೊರತೆ, ಬಿಸಿಲಿನ ತಾಪ, ಅಕಾಲಿಕ ಮಳೆಯಿಂದ ಹೂವು ಕಾಯಿಯಾಗಿ ಕಚ್ಚದೆ ಉದುರಿವೆ. ಹೀಗಾಗಿ ಫಸಲು ಇನ್ನಷ್ಟು ನಷ್ಟವಾಯಿತು.

ಹೂಗಳಿಂದ ಕಂಗೊಳಿಸುತ್ತಿದ್ದ ಮರಗಳು ಈಗ ಖಾಲಿಯಾಗಿವೆ. ನನೆಯಿಂದ ತುಂಬಿ ತುಳುಕುತ್ತಿದ್ದ ಗಿಡದಲ್ಲಿ ಅಲ್ಲೊಂದು–ಇಲ್ಲೊಂದು ಕಾಯಿಗಳು ಕಾಣುತ್ತಿವೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಉತ್ಪಾದನೆ ತೀವ್ರವಾಗಿ ಕುಸಿಯಲಿದೆ. ಈ ವರ್ಷ ಶೇ 40 ರಷ್ಟು ಇಳುವರಿ ನಿರೀಕ್ಷಿಸಬಹುದು ಎಂಬುದು ಅಧಿಕಾರಿಗಳ ಅಂದಾಜು.

ADVERTISEMENT

ತಾಲ್ಲೂಕಿನಲ್ಲಿ ಬಾದಾಮಿ, ತೋತಾಪುರಿ, ಮಲ್ಲಿಕಾ, ನೀಲಂ, ಬೆನಿಷಾ, ಬಂಗನಪಲ್ಲಿ ಪ್ರಮುಖ ತಳಿಗಳ‌ನ್ನು ಬೆಳೆಯಲಾಗುತ್ತಿದೆ. ರಾಜಗೀರ್‌, ಸಕ್ಕರೆಗುತ್ತಿ, ಮಲಗೋವಾ ತಳಿಗಳೂ ಇವೆ. ಜೂನ್‌ ಮೊದಲ ವಾರದಲ್ಲಿ ಬೆಳೆ ಮಾರುಕಟ್ಟೆಗೆ ಬರಲಿದೆ.

ಇಳುವರಿ ಕಡಿಮೆ ಆಗಿದ್ದರಿಂದ ಸಹಜವಾಗಿ ಬೆಲೆ ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ ರಸಪುರಿ ಕೆ.ಜಿ.ಗೆ ₹ 40–50 ಇದ್ದುದು, ಇದೀಗ ₹ 80ಕ್ಕೆ ಏರಿದೆ. ಮಲಗೋವಾ ಕೆ.ಜಿಗೆ ₹ 100–120ಕ್ಕೆ ಮಾರಾಟವಾದರೆ, ಅತ್ಯಂತ ಕಡಿಮೆ ಬೆಲೆಗೆ (ಕೆಜಿಗೆ ₹ 40ಕ್ಕೆ) ಸಿಗುತ್ತಿದ್ದ ನೀಲಂ ಈಗ ಬಂಪರ್‌ (ಕೆ.ಜಿ.ಗೆ ₹ 80ಕ್ಕೆ) ಏರಿದೆ. ಎಲ್ಲ ತಳಿಯ ಮಾವಿನ ಹಣ್ಣುಗಳ ಬೆಲೆ ದುಬಾರಿಯಾಗಿವೆ.

ಮಾವು ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ 1.62 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯುತ್ತಿದ್ದರೆ ಅದರಲ್ಲಿ ಶೇ 40ರಷ್ಟು ಪಾಲು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕು ಮತ್ತು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿವೆ. ಹೀಗಾಗಿ ಇವು ಮಾವಿನ ಮಡಿಲು ಎಂದೇ ಖ್ಯಾತಿ ಗಳಿಸಿವೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಾವು ಬೆಳೆಯುವ ಪ್ರದೇಶ 15,778 ಹೆಕ್ಟೇರ್‌ನಷ್ಟು ಇದ್ದರೆ, ಚಿಂತಾಮಣಿ ತಾಲ್ಲೂಕಿನಲ್ಲಿ 6947 ಹೆಕ್ಟೇರ್‌ನಲ್ಲಿ ಮಾವು ಬೆಳೆಯುತ್ತಾರೆ.

ಎಂ.ರಾಮಕೃಷ್ಣಪ್ಪ

ಮಾವು ಮಾರುಕಟ್ಟೆ ವ್ಯವಸ್ಥೆಯಾಗಲಿ

ಮಾವು ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಹೀಗಾಗಿ ಬೆಲೆ ಏರಿಕೆಯ ಲಾಭ ಬೆಳೆಗಾರರ ಕೈಗೆ ಸಿಗುತ್ತಿಲ್ಲ. ದಲ್ಲಾಳಿಗಳ ಹಿಡಿತದಲ್ಲಿ ಮಾವು ಮಾರುಕಟ್ಟೆ ಸಿಲುಕಿ, ಬೇಡಿಕೆ ಇದ್ದರೂ ದಳ್ಳಾಳಿಗಳು ಬೆಲೆ ಕಡಿಮೆ ಮಾಡಿ ಲಾಭ ಸಂಪಾದಿಸುತ್ತಿದ್ದಾರೆ. ತೂಕ ಮತ್ತು ಗುಣಮಟ್ಟದ ನಿಗದಿಯಲ್ಲಿಯೂ ಬೆಳೆಗಾರರು ವಂಚನೆಗೆ ಒಳಗಾಗುತ್ತಿದ್ದಾರೆ. ಇದನ್ನು ತಪ್ಪಿಸಿಕೊಳ್ಳಲು ಶ್ರೀನಿವಾಸಪುರ ಮಾರುಕಟ್ಟೆಗೆ ಬೆಳೆ ಒಯ್ಯುವಂತಾಗಿದೆ ಎಂಬುದು ಬೆಳೆಗಾರ ವೆಂಕಟರಾಜು ಅವರ ಅಳಲು. ತಾಲ್ಲೂಕಿನಲ್ಲಿ ಮಾವಿನ ಮಾರಾಟಕ್ಕೆ ಎಲ್ಲ ಸೌಲಭ್ಯಗಳನ್ನು ಒಳಗೊಂಡ ವೈಜ್ಞಾನಿಕ ಮಾರುಕಟ್ಟೆ ಅಗತ್ಯವಿದೆ. ಪಾರದರ್ಶಕ ಮಾರಾಟ ವ್ಯವಸ್ಥೆ ಮೂಲಕ ಬೆಳೆಗಾರರಿಗೆ ಆಗುತ್ತಿರುವ ವಂಚನೆ ತಪ್ಪಿಸಲು ಆದ್ಯತ ನೀಡಬೇಕು. ಇಲ್ಲವಾದರೆ ಬೆಳೆಗಾರರು ತೂಕ ಮತ್ತು ಬೆಳೆ ಗುಣಮಟ್ಟದ ನಿಗದಿಯಲ್ಲಿ ನಷ್ಟ ಅನುಭವಿಸುವುದು ತಪ್ಪಲ್ಲ. ಅಲ್ಲದೆ ತಕ್ಷಣವೇ ಹಣ ಪಾವತಿಸುವ ವ್ಯವಸ್ಥೆಯೂ ಆಗಬೇಕು ಎಂದು ಬೆಳೆಗಾರ ಮುದ್ದುಲಹಳ್ಳಿ ನಾರಾಯಣಸ್ವಾಮಿ ಆಗ್ರಹಿಸುವರು.

**
ಹಿಂದಿನ ವರ್ಷಗಳಲ್ಲಿ ಮಳೆ ಇಲ್ಲದೆ ಉತ್ಪನ್ನ ಕಡಿಮೆ ಆಗುತ್ತಿತ್ತು. ಆದರೆ ಈ ಬಾರಿ ಅಕಾಲಿಕ ಮಳೆ, ಹವಾಮಾನ ವೈಪರೀತ್ಯದಿಂದ ಮಾವಿನ ಇಳುವರಿ ಕುಸಿದಿದೆ
– ನಾರಾಯಣಸ್ವಾಮಿ, ಮುದ್ದುಲಹಳ್ಳಿ, ಮಾವು ಬೆಳೆಗಾರ 
**
ಮಾವಿನ ಬೆಳೆ ಕೊಯ್ಲೋತ್ತರ ನಿರ್ವಹಣೆ ಕುರಿತು ಬೆಳೆಗಾರರಿಗೆ ತರಬೇತಿ ನೀಡಲಾಗುತ್ತಿದೆ. ಹಣ್ಣಿನ ಗ್ರೇಡಿಂಗ್‌ ಮತ್ತು ಪ್ಯಾಕಿಂಗ್‌ ಅರಿವು ಮೂಡಿಸಲಾಗುತ್ತಿದೆ
ಆನಂದ್‌, ಹಿರಿಯ ಸಹಾಯಕ ನಿರ್ದೇಶಕ. ತೋಟಗಾರಿಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.