ADVERTISEMENT

ಕೊರತೆ ‘ಒರತೆ’ಯಾದರೂ ಆಲಿಸುವವರಿಲ್ಲ!

ಜಿಲ್ಲಾ ಅಸ್ಪತ್ರೆಯಲ್ಲಿ 6 ವರ್ಷದಿಂದ ನಡೆಯದ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಆರೋಗ್ಯ ರಕ್ಷಾ ಸಮಿತಿ ಸಭೆ

ಈರಪ್ಪ ಹಳಕಟ್ಟಿ
Published 25 ಮೇ 2017, 5:31 IST
Last Updated 25 ಮೇ 2017, 5:31 IST
ಚಿಕ್ಕಬಳ್ಳಾಪುರದ ನೂತನ ಜಿಲ್ಲಾ ಆಸ್ಪತ್ರೆ ಕಟ್ಟಡ
ಚಿಕ್ಕಬಳ್ಳಾಪುರದ ನೂತನ ಜಿಲ್ಲಾ ಆಸ್ಪತ್ರೆ ಕಟ್ಟಡ   

ಚಿಕ್ಕಬಳ್ಳಾಪುರ: ಜಿಲ್ಲಾ ಆಸ್ಪತ್ರೆಯ ಕಾರ್ಯವೈಖರಿ ಪರಿಶೀಲಿಸಬೇಕಾದ, ಸಾರ್ವಜನಿಕರ ಕುಂದುಕೊರತೆಯನ್ನು ಆಲಿಸಬೇಕಾದ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಆರೋಗ್ಯ ರಕ್ಷಾ ಸಮಿತಿಯ ಸಭೆ ಜಿಲ್ಲೆಯಲ್ಲಿ ಕಳೆದ ಆರು ವರ್ಷಗಳಿಂದ ನಡೆದೇ ಇಲ್ಲಾ!

‘ಆರು ವರ್ಷಗಳ ಹಿಂದೆ ಶಾಸಕರಾಗಿದ್ದ ಕೆ.ಪಿ. ಬಚ್ಚೇಗೌಡರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದಲ್ಲಿ ನಡೆದಿದ್ದ ಆರೋಗ್ಯ ರಕ್ಷಾ ಸಮಿತಿ ಸಭೆಯೇ ಕೊನೆಯ ಸಭೆ’ ಎಂದು ಜಿಲ್ಲಾ ಆಸ್ಪತ್ರೆಯ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ಅದನ್ನು ಹೊರತುಪಡಿಸಿದಂತೆ ಈವರೆಗೆ ಆಗೊಮ್ಮೆ ಈಗೊಮ್ಮೆ ನಡೆಯುವ ಆರೋಗ್ಯ ರಕ್ಷಾ ಸಮಿತಿ ಕಾರ್ಯಕಾರಿ ಸಮಿತಿ ಸಭೆಗಳು ಆಡಳಿತಾತ್ಮಕ ಕೆಲಸಗಳನ್ನು ಪರಿಶೀಲಿಸುತ್ತಿವೆ ವಿನಾ ಸಾರ್ವಜನಿಕರ ಕುಂದುಕೊರತೆ ಆಲಿಸುವ ಸಭೆ ನಡೆದಿಲ್ಲ.

ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ತನ್ನ ನಾಲ್ಕು ವರ್ಷಗಳ ಆಡಳಿತಾವಧಿಯಲ್ಲಿ ಈವರೆಗೆ ಜಿಲ್ಲೆ ಉಸ್ತುವಾರಿಗಳನ್ನಾಗಿ ಮೂರು ಸಚಿವರನ್ನು ನೇಮಕ ಮಾಡಿದೆ. ನೂತನ ಸರ್ಕಾರ ರಚನೆಯಾದ ಬಳಿಕ ಮೊದಲ ಬಾರಿಗೆ 2013 ಜೂನ್ ನಲ್ಲಿ ಆಹಾರ ಖಾತೆ ಸಚಿವ ದಿನೇಶ್ ಗುಂಡೂರಾವ್‌ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದರು.

ಬಳಿಕ 2014 ಫೆಬ್ರುವರಿಯಿಂದ ಆ ಜವಾಬ್ದಾರಿ ಮೂಲಸೌಕರ್ಯ ಅಭಿವೃದ್ಧಿ ಮತ್ತು ವಾರ್ತಾ ಸಚಿವ ಆರ್. ರೋಷನ್ ಬೇಗ್ ಅವರು ಹೆಗಲೇರಿತು. ಸದ್ಯ 2016ರ ಜೂನ್‌ನಿಂದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಯಾವ ಸಚಿವರು ಆರೋಗ್ಯ ರಕ್ಷಾ ಸಮಿತಿ ಸಭೆಯ ಗೊಡವೆಗೆ ಹೋಗಿಲ್ಲ!

ಕುಂದುಕೊರತೆಗಳ ಒರತೆ
‘ಆಸ್ಪತ್ರೆಯಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಕುಡಿಯುವ ನೀರು ಸಿಗುವುದಿಲ್ಲ. ಡಯಾಲಿಸಿಸ್‌ ಘಟಕಗಳಲ್ಲಿ ಸಮಸ್ಯೆಗಳಿವೆ. ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ರೋಗಿಗಳಿಗೆ ಹೊರಗಡೆ ಔಷಧಿ ಬರೆದು ಕೊಡುತ್ತಾರೆ. ಚಿಕಿತ್ಸೆಗೆ ದಾಖಲಾದ ರೋಗಿಗಳಿಂದ ಹಣಕ್ಕೆ ಬೇಡಿಕೆ ಇಡುತ್ತಾರೆ. ಲಂಚ ನೀಡದೆ ಹೆರಿಗೆ ನಡೆಯುವುದಿಲ್ಲ. ಹುಚ್ಚು ನಾಯಿ, ಹಾವು ಕಡಿತಕ್ಕೆ ಔಷಧಿಗಳಿಲ್ಲ..’ ಆಸ್ಪತ್ರೆಗೆ ಭೇಟಿ ನೀಡಿದ ರೋಗಿಗಳನ್ನು ಮಾತಿಗೆಳೆದರೆ ಇಂತಹ ಅನೇಕ ಕುಂದುಕೊರತೆ ಗಳು ಒರತೆಯಂತೆ ಹರಿದು ಬರುತ್ತವೆ.

‘ಜಿಲ್ಲಾ ಆಸ್ಪತ್ರೆಯೊಳಗಿನ ಅವ್ಯವಸ್ಥೆ, ಭ್ರಷ್ಟಾಚಾರ ಕುರಿತು ನಾವು ಅನೇಕ ಬಾರಿ ಜಿಲ್ಲಾ ಆರೋಗ್ಯಾಧಿಕಾರಿ, ಶಸ್ತ್ರಚಿಕಿತ್ಸಕರು ಮತ್ತು ಜಿಲ್ಲಾಧಿಕಾರಿ ಅವರಿಗೆ ಲಿಖಿತವಾಗಿ ಮನವಿ ಕೊಟ್ಟಿದ್ದೇವೆ. ಆದರೆ ಏನೂ ಪ್ರಯೋಜನವಾಗಿಲ್ಲ. ಕಾಟಾಚಾರಕ್ಕೆ ಮನವಿ ತೆಗೆದುಕೊಂಡು ಭರವಸೆ ನೀಡುವ ಅಧಿಕಾರಿಗಳು ಕಟ್ಟುನಿಟ್ಟಾಗಿ ಕೆಲಸ ಮಾಡುತ್ತಿಲ್ಲ. ಸರ್ಕಾರಿ ಆಸ್ಪತ್ರೆಗೆ ಹೋಗುವ ಬಡ ರೋಗಿಗಳು ಖಾಸಗಿ ಔಷಧಿ ಮಳಿಗೆಗಳಲ್ಲಿ ಔಷಧಿ ಖರೀದಿಸುವುದು ಇಂದಿಗೂ ತಪ್ಪಿಲ್ಲ’ ಎಂದು ಆರೋಪಿಸುತ್ತಾರೆ ರೈತ ಮುಖಂಡರಾದ ಯಲುವಹಳ್ಳಿ ಸೊಣ್ಣೇಗೌಡ.

‘ನನ್ನ ಆಡಳಿತಾವಧಿ ಕೊನೆಯ ಹಂತದ ವರೆಗೂ ನಾನು ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ಆಸ್ಪತ್ರೆಗೆ ಸಂಬಂಧಿಸಿದ ಕುಂದುಕೊರತೆ ಬಗೆಹರಿಸುವ ಕೆಲಸ ಮಾಡಿರುವೆ. ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ದೀಪಗಳು, ಡಯಾಲಿಸಿಸ್‌ ಘಟಕ, ಪ್ರಯೋಗಾಲಯ, ರಕ್ತನಿಧಿ ಶಾಖೆ ಹೀಗೆ ಅನೇಕ ಮೂಲಸೌಕರ್ಯ ಒದಗಿಸಲು ಶ್ರಮಿಸಿರುವೆ. ಆಗಿನ ಉಸ್ತುವಾರಿ ಸಚಿವರಾಗಿದ್ದ ಮಮ್ತಾಜ್ ಅಲಿಖಾನ್‌ ಅವರು ಕೂಡ ಸಭೆಗಳನ್ನು ನಡೆಸುತ್ತಿದ್ದರು. ಆದರೆ ಈಗಿನ ಜನಪ್ರತಿನಿಧಿಗಳಿಗೆ ಆಸ್ಪತ್ರೆ ಎಂದರೆ ನಿರ್ಲಕ್ಷ್ಯ’ ಎಂದು ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ತಿಳಿಸಿದರು.

‘ಹಳೆಯ ಜಿಲ್ಲಾ ಆಸ್ಪತ್ರೆಯಲ್ಲಿ ಹತ್ತಾರು ಸಮಸ್ಯೆಗಳಿವೆ. ಇನ್ನೂ ಉದ್ಘಾಟನೆಗೊಂಡು ವರ್ಷ ಸಮೀಪಿಸುತ್ತ ಬಂದರೂ ನೂತನ ಜಿಲ್ಲಾ ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗಿಲ್ಲ. ರೋಗಿಗಳ ಪರದಾಟ ಮಾತ್ರ ನಿಂತಿಲ್ಲ. ಇದೆಲ್ಲ ಗೊತ್ತಿದ್ದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಲೇ ಬರುತ್ತಿದ್ದಾರೆ. ಬೆಕ್ಕಿನ ಕೊರಳಿಗೆ ಗಂಟಿ ಕಟ್ಟುವವರು ಯಾರು ಹೇಳಿ’ ಎಂದು ಪ್ರಶ್ನಿಸಿದರು.

‘ಉಸ್ತುವಾರಿ ಸಚಿವರಿಗೆ ತಾನು ಅಂತಹದೊಂದು ಸಮಿತಿಗೆ ಅಧ್ಯಕ್ಷ ಎಂಬುದು ಗೊತ್ತಿದೆಯೋ ಇಲ್ಲವೋ? ಸಂಬಂಧಪಟ್ಟ ಅಧಿಕಾರಿಗಳಾದರೂ ಸಭೆ ಕರೆದು ಸಚಿವರಿಗೆ ಅವರ ಕರ್ತವ್ಯದ ನೆನಪು ಮಾಡಿಕೊಡಬೇಕಿತ್ತು. ಆದರೆ ಇವತ್ತು ಯಾವ ಜನಪ್ರತಿನಿಧಿಗಳಿಗೆ ಕೂಡ ಜನರ ಆರೋಗ್ಯದ ಕಾಳಜಿ ಬೇಕಿಲ್ಲ. ದೇಶ ಮತ್ತು ರಾಜ್ಯದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಸಂಪೂರ್ಣ ನಾಶವಾಗಿ, ಅದು ಕೂಡ ವ್ಯವಹಾರವಾಗಿ ಬದಲಾಗಿದೆ’ ಎಂದು ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ ಜಿ.ವಿ. ಶ್ರೀರಾಮರೆಡ್ಡಿ ಬೇಸರ ವ್ಯಕ್ತಪಡಿಸಿದರು.

‘ಬಹುತೇಕ ಜನಪ್ರತಿನಿಧಿಗಳಿಗೆ ಶಿಕ್ಷಣ, ಆರೋಗ್ಯ ಕೂಡ ಮೂಲಭೂತ ಹಕ್ಕುಗಳು ಎನ್ನುವುದು ತಿಳಿದಿಲ್ಲ. ಇವತ್ತು ಸರ್ಕಾರಿ ಆಸ್ಪತ್ರೆಗಳಿಗೆ ಮೂಗು ಮುಚ್ಚಿಕೊಂಡು ಹೋಗಬೇಕಾದ ಸ್ಥಿತಿ ತಂದಿಟ್ಟವರು ಸಭೆ ಸೇರಿ ಬಡವರ ಆರೋಗ್ಯದ ಬಗ್ಗೆ ವಿಚಾರಿಸಬೇಕು ಎಂದು ನಿರೀಕ್ಷೆ ಮಾಡುವವ ಬಗ್ಗೆ ಕನಿಕರ ಎನಿಸುತ್ತದೆ’ ಎಂದು ವಿಷಾದಿಸಿದರು.

ವರ್ಷ ಕಳೆದರೂ ಸ್ಥಾಯಿ ಸಮಿತಿ ಇಲ್ಲ!
‘ಆರೋಗ್ಯ ವ್ಯವಸ್ಥೆ ಮೇಲೆ ನೀಗಾ ಇಡಬೇಕಾದ್ದದ್ದು ಜಿಲ್ಲಾ ಪಂಚಾಯಿತಿ ಕರ್ತವ್ಯ. ಆದರೆ ಜಿಲ್ಲಾ ಪಂಚಾಯಿತಿ ಯಲ್ಲಿ ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದು ವರ್ಷ ಕಳೆದರೂ ಈವರೆಗೆ ಯಾವುದೇ ಸ್ಥಾಯಿ ಸಮಿತಿ ರಚನೆಯಾಗಿಲ್ಲ’ ವೃತ್ತಿಯಿಂದ ವೈದ್ಯರಾಗಿರುವ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ್ ದೂರಿದರು.

ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಈವರೆಗೆ ಅಸ್ತಿತ್ವಕ್ಕೆ ಬರದ ಕಾರಣ ಎಷ್ಟರ ಮಟ್ಟಿಗೆ ಅವ್ಯವಸ್ಥೆ ಉಂಟಾಗಿದೆ ಎನ್ನುವುದಕ್ಕೆ ಆಸ್ಪತ್ರೆಯ ಸ್ಥಿತಿ ಮತ್ತು ಪರೀಕ್ಷೆಗಳ ಫಲಿತಾಂಶ ನೋಡಿದರೆ ಸಾಕು ತಿಳಿಯುತ್ತದೆ’ ಎಂದೂ ಅವರು ಆರೋಪಿಸಿದರು.

ಕೊಡುವಂತಿಲ್ಲ ಆದ್ರೂ ಕೊಡ್ತಾರೆ
‘ಯಾವುದೇ ಕಾರಣಕ್ಕೂ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಔಷಧಿಗಳನ್ನು ಹೊರಗಡೆ ಬರೆದುಕೊಡುವಂತಿಲ್ಲ. ಒಂದೊಮ್ಮೆ ಆಸ್ಪತ್ರೆ ದಾಸ್ತಾನಿನಲ್ಲಿ ಔಷಧಿ ಇಲ್ಲದೆ ಇದ್ದ ಪಕ್ಷದಲ್ಲಿ ಆರೋಗ್ಯ ರಕ್ಷಾ ಸಮಿತಿ ನಿಧಿಯಲ್ಲಿ ಅಗತ್ಯ ಔಷಧಿಗಳನ್ನು ಖರೀದಿಸಿ ರೋಗಿಗಳಿಗೆ ಉಚಿತವಾಗಿ ನೀಡಬೇಕು. ಅದಕ್ಕಾಗಿಯೇ ನಿತ್ಯ ₹5 ಸಾವಿರ ಔಷಧಿ ಖರೀದಿಸಲು ಅವಕಾಶವಿದೆ’ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರವಿಶಂಕರ್.

ಆದರೆ ರೋಗಿಗಳಿಗೆ ಹೊರಗಡೆ ಔಷಧಿ ಬರೆಯುವ ಸರ್ಕಾರಿ ವೈದ್ಯರ ಪರಿಪಾಟ ಮಾತ್ರ ನಿಂತಿಲ್ಲ. ಈ ಆರೋಪಕ್ಕೆ ಪುಷ್ಟಿ ನೀಡುವಂತೆ ನೂತನ ಜಿಲ್ಲಾ ಆಸ್ಪತ್ರೆ ಆರಂಭಕ್ಕೂ ಮೊದಲೇ ಅದರ ಎದುರು ಹತ್ತಾರು ಹೊಸ ಔಷಧಿ ಮಳಿಗೆಗಳು ತಲೆ ಎತ್ತಿ ನಿಂತಿವೆ.

ತಿಳ್ಕೊಂಡ ಹೇಳ್ಲಾ..!
ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಪ್ರಶ್ನಿಸಿದರೆ, ‘ತಿಳ್ಕೊಂಡ ಹೇಳ್ಲಾ ನಾನು. ವಾಪಸ್ ಕರೆ ಮಾಡುತ್ತೇನೆ’ ಎಂದು ಹೇಳಿದರು. ಆದರೆ ಕರೆ ಮಾಡಲಿಲ್ಲ. ಒಂದು ಗಂಟೆ ಬಿಟ್ಟು ಪುನಃ ಕರೆ ಮಾಡಿ ವಿಚಾರಿಸಿದರೆ, ‘ತಿಳ್ಕೊಂಡ ಹೇಳ್ತೇನಿ ಇರಿ’ ಎಂದರೆ ವಿನಾ ಸಮರ್ಪಕ ಉತ್ತರ ನೀಡಲಿಲ್ಲ.

ADVERTISEMENT

3 ತಿಂಗಳಾದರೂ ಉತ್ತರವಿಲ್ಲ!
‘ಅನೇಕ ವರ್ಷಗಳಿಂದ ಉಸ್ತುವಾರಿ ಸಚಿವರು ಸಭೆ ನಡೆಸಿಲ್ಲ. ಜಿಲ್ಲಾಮಟ್ಟದ ಆರೋಗ್ಯ ರಕ್ಷಾ ಸಮಿತಿಗೆ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಒಬ್ಬ ಸದಸ್ಯನ ಹೆಸರು ಸೂಚಿಸುವಂತೆ 3 ತಿಂಗಳ ಹಿಂದೆಯೇ ಉಸ್ತುವಾರಿ ಸಚಿವರಿಗೆ ಪತ್ರ ಬರೆದು ಕೇಳಿಕೊಂಡಿದ್ದೇವೆ. ಸಚಿವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯಕುಮಾರ್‌ ತಿಳಿಸಿದರು.

ಔಷಧಿ ದುಡ್ಡು ಅನ್ಯ ಉದ್ದೇಶಕ್ಕೆ?
‘ಆರೋಗ್ಯ ರಕ್ಷಾ ಸಮಿತಿ ಅನುದಾನದಲ್ಲಿ ನಿತ್ಯ ₹ 5 ಸಾವಿರ ಮೌಲ್ಯದ ಅಗತ್ಯ ಔಷಧಿಗಳನ್ನು ಖರೀದಿಸಲು ಅವಕಾಶವಿದೆ’ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರವಿಶಂಕರ್. ಆದರೆ ಜಿಲ್ಲಾ ಆಸ್ಪತ್ರೆಯಲ್ಲಿ ಆ ನಿಧಿಯನ್ನು ಔಷಧಿ ಖರೀದಿಗೆ ಬಿಟ್ಟು ಅನ್ಯ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತಿದೆ. ‘ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತಿ ತಿಂಗಳಿಗೆ ಅಂದಾಜು ₹ 2.50 ಲಕ್ಷ ಆರೋಗ್ಯ ರಕ್ಷಾ ಸಮಿತಿ ನಿಧಿ ಸಂಗ್ರಹವಾಗುತ್ತದೆ.

ಅದನ್ನು ಹೊರಗುತ್ತಿಗೆ ಸಿಬ್ಬಂದಿಗೆ ಸಂಬಳ, ಜನರೇಟರ್‌ ಡಿಸೇಲ್ ಖರೀದಿಗೆ, ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ರವಾನಿಸಲು ಆಂಬುಲೆನ್ಸ್ ಡಿಸೇಲ್‌ ಖರ್ಚಿಗೆ, ವಾಹನಗಳ ನಿರ್ವಹಣೆ ಮತ್ತು ರಿಪೇರಿಗೆ ಬಳಕೆ ಮಾಡುತ್ತಿದ್ದೇವೆ’ ಎಂದು ಜಿಲ್ಲಾಸ್ಪತ್ರೆಯ ಕೇಸ್‌ ವರ್ಕರ್ ಮಂಜುನಾಥ್ ಸ್ವಾಮಿ ತಿಳಿಸಿದರು.

*
ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಹಣ ಇಲ್ಲದವರು ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ಅಂತಹ ಬಡವರ ಸಮಸ್ಯೆಗಳ ಬಗ್ಗೆ ಚರ್ಚಿಸುವುದು ಯಾರಿಗೆ ಬೇಕಿದೆ?
ಜಿ.ವಿ. ಶ್ರೀರಾಮರೆಡ್ಡಿ
ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.