ADVERTISEMENT

ಕೋದಂಡ ರಾಮಸ್ವಾಮಿ ಬ್ರಹ್ಮರಥೋತ್ಸವ

ಮಾಘ ಮಾಸ ಷಷ್ಠಿ: ದವನ, ಹೂವು, ಬಾಳೆಹಣ್ಣು ಎಸೆದು ಹರಕೆ ತೀರಿಸಿಕೊಂಡ ಭಕ್ತರು

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2017, 6:31 IST
Last Updated 4 ಫೆಬ್ರುವರಿ 2017, 6:31 IST
ಚೇಳೂರಿನ ಕೋದಂಡ ರಾಮಸ್ವಾಮಿ ಬ್ರಹ್ಮ ರಥೋತ್ಸವ ಅದ್ಧೂರಿಯಾಗಿ ಸಡಗರ ಮತ್ತು ಸಂಭ್ರಮದಿಂದ ನರವೇರಿತು.
ಚೇಳೂರಿನ ಕೋದಂಡ ರಾಮಸ್ವಾಮಿ ಬ್ರಹ್ಮ ರಥೋತ್ಸವ ಅದ್ಧೂರಿಯಾಗಿ ಸಡಗರ ಮತ್ತು ಸಂಭ್ರಮದಿಂದ ನರವೇರಿತು.   
ಚೇಳೂರು: ಕೋದಂಡ ರಾಮಸ್ವಾಮಿ ಬ್ರಹ್ಮರಥೋತ್ಸವವು ಮಾಘ ಮಾಸ ಷಷ್ಠಿಯ ಮಾರನೆ ದಿನವಾದ ಶುಕ್ರವಾರ ಸಡಗರ ಮತ್ತು ಸಂಭ್ರಮದಿಂದ ನಡೆಯಿತು.
 
ಶಾಸಕ ಸುಬ್ಬಾರೆಡ್ಡಿ ರಥೋತ್ಸವಕ್ಕೆ ಚಾಲನೆ ನೀಡಿದರು. ರಥಕ್ಕೆ ದವನ, ಹೂವು, ಬಾಳೆಹಣ್ಣು ಎಸೆದು ಭಕ್ತಾದಿಗಳು ಹರಕೆ ತೀರಿಸಿಕೊಂಡರು.
ರಥೋತ್ಸವ ಸಲುವಾಗಿ ದೇವಸ್ಥಾನದಲ್ಲಿ ವಿವಿಧ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಮೂಲ ದೇವರಿಗೆ ಪಂಚಾಮೃತ ಅಭಿಷೇಕ, ಹೋಮ, ವೇದ, ಉಪನಿಷತ್ತುಗಳ ಮಂತ್ರಗಳ ಘೋಷಣೆ ಮೊಳಗಿದವು.
 
ವಿವಿಧ ಹಣ್ಣು ಮತ್ತು ಹೂವುಗಳಿಂದ ಅಲಂಕಾರಗೊಳಿಸಿದ್ದ ಕೋದಂಡ ರಾಮಸ್ವಾಮಿ ಮೂರ್ತಿಯನ್ನು ರಥದಲ್ಲಿ ಕೂರಿಸಿ ಪ್ರಮುಖ ರಥ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಕಿಕ್ಕಿರಿದು ನೆರದಿದ್ದ ಸಾವಿರಾರು ಭಕ್ತರು ಹೂ, ಬಾಳೆ ಹಣ್ಣನ್ನು ರಥಕ್ಕೆ ಎಸೆದು ಧನ್ಯರಾದರು.
 
ಸ್ಥಳೀಯ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಬಂದಿದ್ದ ಭಕ್ತಾದಿಗಳು ಬೆಳ್ಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ವಿವಿಧ ಸಂಘ- ಸಂಸ್ಥೆಗಳ ಸದಸ್ಯರು ಭಕ್ತಾದಿಗಳಿಗಾಗಿ ಕೋಸಂಬರಿ, ಮಜ್ಜಿಗೆ, ಪಾನಕ, ನೀರಿನ ಪ್ಯಾಕೆಟ್, ಪ್ರಸಾದ ಹಾಗೂ ಮಾರುತಿ ಸೇವಾ ಸಮಿತಿಯಿಂದ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಿದ್ದರು. 
 
ಡೊಳ್ಳು ಕುಣಿತ, ಚಕ್ಕಲಭಜನೆ, ಕೋಲಾಟೆ ಹಾಗೂ ಚಾಕವೇಲು ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಎಸ್.ವೆಂಕಟರವಣಾಚಾರಿ ಅವರ ನೇತೃತ್ವದಲ್ಲಿ ಶಾಲಾ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
 
ಬಗೆ-ಬಗೆಯ ತಿಂಡಿ ತಿನಿಸುಗಳು, ಆಟಿಕೆ ವಸ್ತುಗಳು, ಗೃಹೋಪಯೋಗಿ ವಸ್ತುಗಳು ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿ ನಡೆಯಿತು.
 
ರಥೋತ್ಸವದ ಅಂಗವಾಗಿ ಜ. 28 ರಿಂದ ವಿವಿಧ ಧಾರ್ಮಿಕ ಪೂಜಾ ವಿಧಿ ವಿಧಾನಗಳು ಪ್ರಾರಂಭವಾಗಿದ್ದು, ಫೆ. 6ರಂದು ಮುಗಿಯಲಿವೆ.
 
ರಥೋತ್ಸವದಲ್ಲಿ ಆಂಧ್ರಪ್ರದೇಶ ತಂಬಾಳ್ಳಪಲ್ಲಿ ಶಾಸಕ ಜಿ.ಶಂಕರ್, ಜಿಲ್ಲಾ ಪಂಚಾಯಿತಿ ಸದಸ್ಯ ಅರುಣಾ ಅಮರನಾಥರೆಡ್ಡಿ, ನಾಡಕಚೇರಿ ಪ್ರಭಾರ ಕಂದಾಯ ನಿರೀಕ್ಷಕ ಎನ್.ರಾಮಾನಂದ್ ಮತ್ತಿತರರು ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.