ADVERTISEMENT

ಖಾಸಗಿ ವಾಹನ ಮೊರೆ ಹೋದ ಪ್ರಯಾಣಿಕರು

​ಪ್ರಜಾವಾಣಿ ವಾರ್ತೆ
Published 26 ಜುಲೈ 2016, 10:12 IST
Last Updated 26 ಜುಲೈ 2016, 10:12 IST

ಚಿಕ್ಕಬಳ್ಳಾಪುರ: ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸಾರಿಗೆ ನೌಕರರು ಸೋಮವಾರ ಕರೆ ನೀಡಿದ್ದ ಮುಷ್ಕರ ನಗರದಲ್ಲಿ ಯಶಸ್ವಿಯಾಯಿತು. ಬೆಳಿಗ್ಗೆಯಿಂದ ಒಂದೇ ಒಂದು ಸರ್ಕಾರಿ ಬಸ್‌ ರಸ್ತೆಗಿಳಿಯಲಿಲ್ಲ. ಹೀಗಾಗಿ ಜನರು ಪ್ರಯಾಣಕ್ಕಾಗಿ ದಿನವಿಡೀ ಖಾಸಗಿ ವಾಹನಗಳ ಮೊರೆ ಹೋಗಿದ್ದರು.

ಮುಷ್ಕರದ ವೇಳೆ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಪ್ರಯಾಣಿಕರಿಂದ ಗಿಜಿಗುಡುತ್ತಿದ್ದ ಬಸ್‌ ನಿಲ್ದಾಣಗಳು ಸೋಮವಾರ ಭಣಗುಟ್ಟುತ್ತಿದ್ದವು. ನಗರಸಭೆಯ ಬಸ್‌ ನಿಲ್ದಾಣದಲ್ಲಿ ಖಾಸಗಿ ಬಸ್‌ಗಳು ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದವು.

ಮುಖ್ಯ ರಸ್ತೆಗಳಲ್ಲಿ ನಿಂತು ಟ್ಯಾಕ್ಸಿ, ಕ್ಯಾಬ್, ಆಟೊ ಸೇರಿದಂತೆ ಖಾಸಗಿ ವಾಹನಗಳನ್ನು ನಿಲ್ಲಿಸಿ, ಪ್ರಯಾಣ ಬೆಳೆಸುತ್ತಿದ್ದ ದೃಶ್ಯ ಕಂಡು ಬಂತು. ಮುಷ್ಕರದ ಸಂದರ್ಭವನ್ನೇ ದುರುಪಯೋಗಪಡಿಸಿಕೊಂಡು ಖಾಸಗಿ ವಾಹನದವರು ಪ್ರಯಾಣಿಕರಿಂದ ಹೆಚ್ಚಿನ ಹಣ ಸುಲಿಗೆ ಮಾಡುವ ಸಾಧ್ಯತೆ ಇದ್ದ ಕಾರಣ ಸಾರಿಗೆ ಇಲಾಖೆ ಅಧಿಕಾರಿಗಳು ನಗರಲ್ಲೆಡೆ ಸಂಚರಿಸಿ ಆಟೊ ಸೇರಿದಂತೆ ಖಾಸಗಿ ವಾಹನಗಳ ದರ ಕುರಿತು ಪ್ರಯಾಣಿಕರಲ್ಲಿ ವಿಚಾರಿಸಿ, ಹೆಚ್ಚಿಗೆ ದರ ವಿಧಿಸದಂತೆ ವಾಹನ ಮಾಲೀಕರಿಗೆ ತಾಕೀತು ಮಾಡಿದರು.

ಉಚಿತ ಬಸ್ ವ್ಯವಸ್ಥೆ: ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ರೆಡ್ಡಿ ಅವರು ಸಾರ್ವಜನಿಕರಿಗೆ ಸಂಚಾರಕ್ಕೆ ಅನುಕೂಲ ಕಲ್ಪಿಸುವುದಕ್ಕಾಗಿ ಉಚಿತವಾಗಿ ಎರಡು ಖಾಸಗಿ ಬಸ್‌ಗಳನ್ನು ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದರು. ಆ ಪೈಕಿ ಒಂದು ಬಸ್‌ ಚಿಕ್ಕಬಳ್ಳಾಪುರದಿಂದ ಶಿಡ್ಲಘಟ್ಟ, ಚಿಂತಾಮಣಿ, ಜಂಗಮಕೋಟೆ ಮಾರ್ಗವಾಗಿ ಹೊಸಕೋಟೆಗೆ,  ಮತ್ತೊಂದು ಬಸ್ ಶಿಡ್ಲಘಟ್ಟದಿಂದ ದಿಬ್ಬೂರು ನಡುವೆ ಸಂಚರಿಸಿದವು. 

‘ಬಸ್‌ ಸಂಚಾರ ಸ್ಥಗಿತಗೊಂಡಿರುವ ಕಾರಣ ಗ್ರಾಮೀಣ ಪ್ರದೇಶದ ಜನರು ಆಸ್ಪತ್ರೆ, ಬ್ಯಾಂಕ್, ಕಚೇರಿಗಳ ಕೆಲಸಕ್ಕೆ ಹೋಗಲು ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ಈ ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ’ ಎಂದು ಬಸ್ ನಿರ್ವಾಹಕ ಪ್ರವೀಣ್ ಕುಮಾರ್ ತಿಳಿಸಿದರು.

ಉಚಿತ ಬಸ್‌ ಸಂಚಾರ ವ್ಯವಸ್ಥೆ ಮಾಡಿರುವುದರಿಂದ ಸ್ವಲ್ಪ ಅನುಕೂಲವಾಗಿದೆ’ ಎಂದು ಜಂಗಮಕೋಟೆ ನಿವಾಸಿ ಪ್ರವೀಣ್‌ ಹೇಳಿದರು.
ರೈಲು ಸೇವೆ ವಿಸ್ತರಣೆ:  ಮುಷ್ಕರದಿಂದಾಗಿ ಬೆಂಗಳೂರಿಗೆ ಹೋಗುವ ಪ್ರಯಾಣಿಕರಿಗೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ಬೆಂಗಳೂರು–ದೇವನಹಳ್ಳಿ ನಡುವೆ ಸಂಚರಿಸುವ ರೈಲಿನ ಸೇವೆಯನ್ನು ಸೋಮವಾರ ಶಿಡ್ಲಘಟ್ಟದವರೆಗೆ ವಿಸ್ತರಿಸಲಾಗಿತ್ತಾದರೂ ಪ್ರಯಾಣಿಕರಿಲ್ಲದೆ ಭಣಗುಡುತ್ತಿತ್ತು.

ಮುಷ್ಕರದಿಂದಾಗಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಶಾಲಾ– ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಇನ್ನು ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದವಾದರೂ ಜನರಿಲ್ಲದೆ ಖಾಲಿ ಖಾಲಿಯಾಗಿದ್ದವು.

ಭಾನುವಾರ ಮಧ್ಯರಾತ್ರಿಯಿಂದಲೇ ಬಸ್‌ ನಿಲ್ದಾಣ, ಸಾರಿಗೆ ಇಲಾಖೆ ಕಚೇರಿ ಮತ್ತು ಡಿಪೊ ಸುತ್ತಲಿನ 100 ಮೀಟರ್‌ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದರು. ಇನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಅಪರಾಧ ಹಿನ್ನೆಲೆಯುಳ್ಳ ಕೆಲ ಜನರಿಗೆ ವಾರೆಂಟ್‌ ಜಾರಿ ಮಾಡಿ ಮುಷ್ಕರದ ವೇಳೆ ಕಾನೂನು ಸುವ್ಯವಸ್ಥೆಗೆ ಭಂಗ ತಂದರೆ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

ಸಿಬ್ಬಂದಿ ಬಂದರೆ ಸೇವೆ ಆರಂಭ: ‘ಸೋಮವಾರ ಒಂದೇ ಒಂದು ಬಸ್‌ ಕೂಡ ರಸ್ತೆಗಿಳಿದಿಲ್ಲ. ನಾಳೆಗೂ ಮುಂದು ವರಿಯುತ್ತದೆಯೋ ಎನ್ನುವ ಕುರಿತು ನಮಗೆ ಈವರೆಗೆ ಯಾವುದೇ ರೀತಿಯ ಸ್ಪಷ್ಟವಾದ ಮಾಹಿತಿ ಬಂದಿಲ್ಲ. ಒಂದೊಮ್ಮೆ ಚಾಲಕರು, ನಿರ್ವಾಹಕರು ಕರ್ತವ್ಯಕ್ಕೆ ಹಾಜರಾದರೆ  ಸೇವೆ ಆರಂಭಿಸುತ್ತೇವೆ. ಇಲ್ಲದಿದ್ದರೆ ನಾವು ಅಸಹಾಯಕರು’ ಎಂದು ವಿಭಾಗೀಯ ಸಾರಿಗೆ ಅಧಿಕಾರಿ ಎಂ.ನಂಜುಂಡಸ್ವಾಮಿ ತಿಳಿಸಿದರು.

ರಸ್ತೆಗೆ ಇಳಿಯದ ಬಸ್
ಗೌರಿಬಿದನೂರು: ಕೆಎಸ್ಆರ್ ಟಿಸಿ ಸಾರಿಗೆ ನೌಕರರ ಮುಷ್ಕರದ ಹಿನ್ನಲೆಯಲ್ಲಿ ಸೋಮವಾರ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿತ್ತು. ಭಾನುವಾರ ಸಂಜೆಯೇ ಚಾಲಕರು ಹಾಗೂ ನಿರ್ವಾಹಕರು ಬಸ್ ಗಳನ್ನು ಡಿಪೊದಲ್ಲಿ ನಿಲ್ಲಿಸಿ ಮನೆಗೆ ತೆರಳಿದ್ದರು. ಸೋಮವಾರ ಒಬ್ಬ ಸಿಬ್ಬಂದಿ ಸಹ ಡಿಪೊ ಕಡೆ ಸುಳಿಯಲಿಲ್ಲ. ಖಾಸಗಿ ಬಸ್ ಗಳು ಹಾಗೂ ಮ್ಯಾಕ್ಸಿ ಕ್ಯಾಬ್, ಆಟೊಗಳು ಎಂದಿನಂತೆ ಸಂಚರಿಸಿದವು.

ರಾಜ್ಯ ಮಟ್ಟದಲ್ಲಿ ತಗೆದುಕೊಳ್ಳುವ ತೀರ್ಮಾನದಂತೆ ಬಸ್  ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ ಎಂದು ತಾಲ್ಲೂಕು ಡಿಪೊ ಘಟಕದ ವ್ಯವಸ್ಥಾಪಕ ಶರೀಫ್ ತಿಳಿಸಿದರು.

ಕಂಗೆಟ್ಟ ಪ್ರಯಾಣಿಕರು
ಗುಡಿಬಂಡೆ: ಪಟ್ಟಣದಲ್ಲಿ ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಯಿತಾದರೂ ಜನ ಜೀವನ ಸಹಜ ಸ್ಥಿತಿಯಲ್ಲಿ ಮುಂದುವರಿದಿತ್ತು. ಮುಂಜಾಗ್ರತೆ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದರು.

ಕಾರ್ಯನಿಮಿತ್ತ ದೂರದ ಊರುಗಳಿಗೆ ತೆರಳಬೇಕಾಗಿದ್ದ ಪ್ರಯಾಣಿ ಕರು ಸೂಕ್ತ ಬಸ್ ಸಂಚಾರವಿಲ್ಲದೆ ಪರದಾಡುವಂತಾಯಿತು. ಸರ್ಕಾರಿ ಕಚೇರಿಗಳು, ಬ್ಯಾಂಕ್, ಅಂಚೆ ಕಚೇರಿ ಆಸ್ಪತ್ರೆ ಎಂದಿನಂತೆ ತಮ್ಮ ಕಾರ್ಯ ನಿರ್ವಹಿಸಿದವು. ಖಾಸಗಿ ಬಸ್ ಮತ್ತು ಆಟೊಗಳು ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗಲಿಲ್ಲ. ಬಸ್ ಸಂಚಾರ ಸ್ಥಗಿತಗೊಂಡ ಪರಿಣಾಮ ಪಟ್ಟಣದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲದೆ ಬಿಕೋ ಎನ್ನುವ ಪರಿಸ್ಥಿತಿ ಉಂಟಾಗಿತ್ತು.

ಮುಷ್ಕರ ಶಾಂತಿಯುತ
ಚಿಂತಾಮಣಿ: ಪಟ್ಟಣದಲ್ಲೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ನಡೆಸುತ್ತಿರುವ ಹೋರಾಟ ಸೋಮವಾರ ಶಾಂತಿಯುತವಾಗಿ ನಡೆಯಿತು.
ಸಂಸ್ಥೆಯ ಎಲ್ಲ ನೌಕರರು ಮುಷ್ಕರದಲ್ಲಿ ಭಾಗವಹಿಸಿದ್ದರು. ಯಾರು ಕೆಲಸಕ್ಕೆ ಹಾಜರಾಗಲಿಲ್ಲ, ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಖಾಸಗಿ ಬಸ್‌ಗಳು ಹೆಚ್ಚಿನ ಸಂಚಾರ ನಡೆಸುವ ಮೂಲಕ  ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದವು.

ಪ್ರತಿನಿತ್ಯ ಜನರಿಂದ ಗಿಜುಗುಡುತ್ತಿದ್ದ ಸರ್ಕಾರಿ ಬಸ್‌ ನಿಲ್ದಾಣ ಬಿಕೋ ಎನ್ನುತ್ತಿತ್ತು. ಕೆಲವು ಖಾಸಗಿ ಬಸ್‌ಗಳು ಮತ್ತು ಆಟೊಗಳು ಪರಿಸ್ಥಿತಿಯ ಲಾಭ ಪಡೆದುಕೊಂಡು  ಹೆಚ್ಚನ ದರವಸೂಲಿ ಮಾಡಿದವು ಎಂದು ಪ್ರಯಾಣಿಕರು ಆರೋಪಿಸಿದರು. ಒಟ್ಟಾರೆ ಸಾರಿಗೆ ನೌಕರರ ಮುಷ್ಕರ ಶಾಂತಿಯುತವಾಗಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.