ADVERTISEMENT

ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2016, 10:18 IST
Last Updated 26 ಜುಲೈ 2016, 10:18 IST

ಗೌರಿಬಿದನೂರು: ಇಲಾಖೆ ಕಟ್ಟಡಗಳ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದರೆ ಹಾಗೂ ಕಾಮಗಾರಿ ವಿಳಂಬವಾದರೆ ನಿರ್ಮಿತಿ ಕೇಂದ್ರ ಹಾಗೂ ಭೂ ಸೇನೆ ಅಭಿವೃದ್ಧಿ ನಿಗಮದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್. ಕೇಶವರೆಡ್ಡಿ  ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಸೋಮವಾರ ನಡೆದ ತಾಲ್ಲೂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಸಭೆಗೆ ಹಾಜರಾಗದ ಬೆಸ್ಕಾಂ, ಪೊಲೀಸ್, ಲೋಕೋಪಯೋಗಿ, ಅಬಕಾರಿ, ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸುವಂತೆ ಇಒ ಮಹಮದ್ ಮುಬೀನ್ ಅವರಿಗೆ ಸೂಚಿಸಿದರು.

ಪ್ರಗತಿ ಪರಿಶೀಲನಾ ಸಭೆ ನಡೆಯುವ ಎರಡು ಮೂರು ದಿನಗಳ ಮುಂಚೆ ‘ಜನಪ್ರತಿನಿಧಿಗಳಿಗೆ ಯೋಜನೆಗಳ ಪ್ರಗತಿ ವರದಿಯ ಪ್ರತಿಗಳನ್ನು ನೀಡಬೇಕು. ಸಭೆ ನಡೆಯುವ ಸಂದರ್ಭದಲ್ಲಿ ಕೊಟ್ಟರೆ ಹೇಗೆ ಎಲ್ಲವನ್ನು ಓದಿ ತಿಳಿದುಕೊಂಡು ಚರ್ಚಿಸಲು ಸಾಧ್ಯ’ ಎಂದು ಪ್ರಶ್ನಿಸಿದರು.

‘ತಾಲ್ಲೂಕಿನಲ್ಲಿ ಮುಂಗಾರು ಮಳೆ ಸಕಾಲಕ್ಕೆ ಸುರಿಯುತ್ತಿದ್ದು ಶೇ 80 ರಷ್ಟು ರೈತರು ಉಳುಮೆ ಕಾರ್ಯ ಮುಗಿಸಿ ಬೀತ್ತನೆ ಬೀಜ ನಾಟಿಮಾಡಲಾಗಿದೆ. ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆಮಾಡಲಾಗಿದೆ.ತಾಲ್ಲೂಕಿನಲ್ಲಿ ಮೆಕ್ಕೆಜೋಳ, ನೆಲಗಡಲೆ, ತೊಗರಿ, ರಾಗಿ ಪ್ರಮುಖ ಬೆಳೆಗಳಾಗಿವೆ. ರೈತರಿಗೆ ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಳ್ಳು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ’ ಎಂದು ಕೃಷಿ ಇಲಾಖೆ ಸಹಾಯ ನಿರ್ದೇಶಕ ಎಸ್.ಎನ್. ಮಂಜುನಾಥ್ ಸಭೆಗೆ ತಿಳಿಸಿದರು.

‘ತಾಲ್ಲೂಕಿನಲ್ಲಿ ಶೇ 75 ರಷ್ಟು  ಅಂಗನವಾಡಿ ಕೇಂದ್ರಗಳಲ್ಲಿ ಸ್ವಚ್ಛತೆಯಿಲ್ಲದೆ ಗಬ್ಬು ನಾರುತ್ತಿವೆ. ಇದರ ಬಗ್ಗೆ ಸಿಡಿಪಿಒ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಬೇಕು’ ಎಂದು  ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ವಿ. ಮಂಜುನಾಥ್ ಸಿಡಿಪಿಒ ರಾಜೇಂದ್ರ ಪ್ರಸಾದ್ ರವರಿಗೆ ತಿಳಿಸಿದಿರು. ಅಧ್ಯಕ್ಷ ಪಿ.ಎನ್. ಕೇಶವರೆಡ್ಡಿ ಮಾತನಾಡಿ ‘ಒಂದು ತಿಂಗಳಿನಲ್ಲಿ ಎಷ್ಟು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ್ದಿರಾ’ ಎಂದು ಪ್ರಶ್ನಿಸಿದರು. ‘ಕಚೇರಿಯಲ್ಲಿ ಕುಳಿತುಕೊಂಡರೆ ಸಮಸ್ಯೆ ತಿಳಿಯುವುದಿಲ್ಲ ಅಂಗನವಾಡಿ ಕೇಂದ್ರಗಳಿಗೆ ಹೋಗಿ ಸಮಸ್ಯೆ ಅರಿಯಬೇಕು. ತಾಲ್ಲೂಕಿನ ಯಾವವ ಗ್ರಾಮದಲ್ಲಿ ಅಂಗನವಾಡಿ ಸ್ವಂತ ಕಟ್ಟಡವಿಲ್ಲ ಅದರ ಬಗ್ಗೆ  ನಾಳೆಯೇ ಬರವಣೆಗೆಯಲ್ಲಿ ಮಾಹಿತಿ ನೀಡಬೇಕು’ ಎಂದು  ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಾರಪ್ಪರೆಡ್ಡಿ,ಉಪಾಧ್ಯಕ್ಷೆ ರತ್ನಮ್ಮ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಚ್.ವಿ. ಮಂಜುನಾಥ್,ಅರುಂಧತಿ, ಸರಸ್ವತಮ್ಮ,ಭವ್ಯ ರಂಗನಾಥ್,ಡಿ. ನರಸಿಂಹಮೂರ್ತಿ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.