ADVERTISEMENT

ಚರಂಡಿ ತುಂಬಾ ಹೂಳು, ತಪ್ಪುತ್ತಿಲ್ಲ ಗೋಳು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2017, 8:46 IST
Last Updated 4 ಸೆಪ್ಟೆಂಬರ್ 2017, 8:46 IST
ಚಿಕ್ಕಬಳ್ಳಾಪುರದ 8ನೇ ವಾರ್ಡ್‌ನಲ್ಲಿ ಮಡುಗಟ್ಟಿ ನಿಂತ ಚರಂಡಿ
ಚಿಕ್ಕಬಳ್ಳಾಪುರದ 8ನೇ ವಾರ್ಡ್‌ನಲ್ಲಿ ಮಡುಗಟ್ಟಿ ನಿಂತ ಚರಂಡಿ   

ಚಿಕ್ಕಬಳ್ಳಾಪುರ: ಹೂಳು ತುಂಬಿದ ಚರಂಡಿಗಳು, ಕಸಕಡ್ಡಿಗಳಿಂದ ಮುಚ್ಚಿದ ಕಾಲುವೆಗಳು, ಮಡುಗಟ್ಟಿ ನಿಲ್ಲುವ ಮಳೆ ನೀರು, ಎಲ್ಲಿ ನೋಡಿದರಲ್ಲಿ ಸೊಳ್ಳೆಗಳ ಹಾವಳಿ ಜೋರು.. ನಗರವನ್ನು ಒಂದು ಸುತ್ತು ಹಾಕಿದವರಿಗೆ ಗೋಚರಿಸುವ ದೃಶ್ಯಗಳಿವು.

ಮಳೆಗಾಲ ಪೂರ್ವದಲ್ಲಿ ನಗರದಲ್ಲಿರುವ ಚರಂಡಿ, ಕಾಲುವೆಗಳ ಹೂಳು ತೆಗೆದು ಸಜ್ಜುಗೊಳಿಸುವ ಕೆಲಸವನ್ನು ನಗರಸಭೆ ಮರೆತು ಬಿಟ್ಟಿದೆ. ಹೀಗಾಗಿ ನಗರದ ಅನೇಕ ಕಡೆಗಳಲ್ಲಿ ಅಧ್ವಾನಗೊಂಡಿರುವ ಮೋರಿಗಳು ಗೋಚರಿಸುತ್ತವೆ. ಅವುಗಳಿಂದ ದುರ್ವಾಸನೆ, ಸೊಳ್ಳೆಕಾಟ, ಸಾಂಕ್ರಾಮಿಕ ರೋಗ ಭೀತಿ ಎದುರಿಸುವ ನಾಗರಿಕರು ಅಳಲು ತೋಡಿಕೊಳ್ಳುತ್ತಾರೆ.

ಮುಖ್ಯವಾಗಿ ನಗರದ 6,8 ನೇ ವಾರ್ಡ್‌ಗಳು ಸೇರಿದಂತೆ ಬಹುಪಾಲು ವಾರ್ಡ್‌ಗಳಲ್ಲಿ ಕಟ್ಟಿಕೊಂಡ ಚರಂಡಿಗಳು ಸೃಷ್ಟಿಸಿದ ಅನೇಕ ಸಮಸ್ಯೆಯ ಕಥೆಗಳು ಕೇಳಲು ಸಿಗುತ್ತವೆ. ವಿವಿಧ ಕಡೆಗಳಲ್ಲಿ ಪುಟ್ಟ ಕಾಲುವೆಗಳು ತಮ್ಮ ಮೇಲೆ ಬಿದ್ದ ಅಧಿಕ ಒತ್ತಡವನ್ನು ನಿಭಾ­ಯಿಸಲು ಸಾಧ್ಯವಾಗದೆ ಹೆಚ್ಚುವರಿ ನೀರ­ನ್ನೆಲ್ಲ ರಸ್ತೆ ಕಡೆಗೆ ತಳ್ಳಲು ಆರಂಭಿಸಿದ್ದರಿಂದ ಸಮಸ್ಯೆಗಳು ಬಿಗಡಾಯಿಸುತ್ತಲೇ ಇದೆ.

ADVERTISEMENT

ನಗರದಲ್ಲಿ ‘ಸ್ವಚ್ಛ ಭಾರತ ಅಭಿಯಾನ’ ಕೇವಲ ರಸ್ತೆಯ ಮೇಲಿನ ಕಸ ಗುಡಿಸುವುದಕ್ಕೆ ಮಾತ್ರ ಸೀಮಿತವಾಗಿದ್ದು, ಹಲವು ಕಡೆಗಳಲ್ಲಿ ಕಾಲುವೆಗಳು ಕಸದ ತೊಟ್ಟಿಯಾಗಿವೆ. ನಗರಸಭೆ ಮತ್ತು ಜನಪ್ರತಿನಿಧಿಗಳು ನಡೆಸುವ ಸ್ವಚ್ಛತೆ ಅಭಿಯಾನ ಕಾರ್ಯಕ್ರಮಗಳು ಪ್ರಚಾರಕ್ಕೆ ಸೀಮಿತವಾಗಿವೆ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಮಳೆಗಾಲದಲ್ಲಿ ಹೂಳು ಎತ್ತಿದರೆ ಅದೇ ಮಳೆ ನೀರಿನಲ್ಲಿ ಆ ಹೂಳು ಮತ್ತೆ ಚರಂಡಿಯನ್ನು ಸೇರುತ್ತದೆ. ಹೀಗಾಗಿ ಬೇಸಿಗೆಯಲ್ಲೇ ಚರಂಡಿಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಬೇಕು ಎನ್ನುತ್ತಾರೆ ನಗರ ಯೋಜನಾ ತಜ್ಞರು. ಆದರೆ ನಗರದಲ್ಲಿ ಒಂದೆಡೆ ಮೋರಿಗಳನ್ನು ಸನ್ನದ್ಧ ಸ್ಥಿತಿಯಲ್ಲಿಡುವ ಕೆಲಸವೂ ನಡೆಯುತ್ತಿಲ್ಲ. ಇನ್ನೊಂದೆಡೆ ವೈಜ್ಞಾನಿಕವಾಗಿ ಚರಂಡಿಗಳ ನಿರ್ಮಿಸುವುದು ಆಗುತ್ತಿಲ್ಲ.

‘ನಗರದ ಮೂಲಸೌಕರ್ಯಗಳಲ್ಲಿ ಒಂದಾದ ಚರಂಡಿಗಳು ನಗರದ ನೈರ್ಮಲ್ಯ ಕಾಪಾಡುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ. ಆದರೆ ನಗರದಲ್ಲಿ ಚರಂಡಿಗಳೇ ಅನೇಕ ಸಮಸ್ಯೆಗಳ ಮೂಲವೂ ಆಗಿವೆ. ನಗರ ಜಿಲ್ಲಾ ಕೇಂದ್ರವಾಗಿ 10 ವರ್ಷಗಳನ್ನು ಪೂರೈಸಿದರೂ ಈವರೆಗೆ ಸುಸಜ್ಜಿತ ಕಾಲುವೆಗಳು ಕಂಡಿಲ್ಲ. ಇದು ನಮ್ಮ ಜನಪ್ರತಿನಿಧಿಗಳ ಇಚ್ಛಾಶಕ್ತಿಯನ್ನು ಪ್ರತಿಬಿಂಬಿಸುತ್ತದೆ’ ಎನ್ನುತ್ತಾರೆ 8ನೇ ವಾರ್ಡ್‌ ನಿವಾಸಿ ಚಂದ್ರಶೇಖರ್.

‘6, 8ನೇ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಚರಂಡಿಗಳದ್ದೇ ದೊಡ್ಡ ಸಮಸ್ಯೆ. ಜೋರಾಗಿ ಮಳೆ ಸುರಿದರೆ ಇಲ್ಲಿ ಚರಂಡಿ ಎಲ್ಲಿದೆ, ರಸ್ತೆ ಹೇಗಿದೆ ಎಂದು ಹುಡುಕಾಡಬೇಕಾದ ಸ್ಥಿತಿ ತಲೆದೋರುತ್ತದೆ. ಚರಂಡಿ ಸಮಸ್ಯೆಯಿಂದಾಗಿ ಅನೇಕರು ಬೇರೆ ಬಡಾವಣೆಗಳಿಗೆ ವಸತಿ ಸ್ಥಳಾಂತರಿಸಿದ ಉದಾಹರಣೆಗಳು ಇಲ್ಲಿ ಸಿಗುತ್ತವೆ. ಕೊಳಚೆಯನ್ನೆಲ್ಲಾ ಊರಾಚೆ ಸಾಗಿಸಿ ಮನೆ ಪರಿಸರ ಸ್ವಚ್ಛವಾಗಿಡಬೇಕಾದ ಮೋರಿಗಳೇ ಇಲ್ಲಿನ ನಾಗರಿಕರಿಗೆ ದುಸ್ಪಪ್ನವಾಗಿವೆ’ ಎಂದು ಆಟೊ ಚಾಲಕ ಶ್ರೀನಿವಾಸ್‌ ಬೇಸರ ವ್ಯಕ್ತಪಡಿಸಿದರು.

‘ನಗರದಲ್ಲಿ ಸರಿಯಾಗಿ ತ್ಯಾಜ್ಯ ಸಂಗ್ರಹಿಸುವ ಸ್ಥಳಗಳನ್ನು ಗುರುತಿಸಿಲ್ಲ. ಹೀಗಾಗಿ ನಾಗರಿಕರು ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುತ್ತಾರೆ. ಅದು ಜೋರಾಗಿ ಗಾಳಿ, ಮಳೆ ಕಾಣಿಸಿಕೊಂಡರೆ ಚರಂಡಿ ಸೇರುತ್ತದೆ. ಪೌರಕಾರ್ಮಿಕರು ಚರಂಡಿಯಲ್ಲಿರುವ ಕಸವನ್ನು ಎತ್ತುವುದೇ ಇಲ್ಲಾ. ಅದು ಅಲ್ಲಲ್ಲಿ ಕಟ್ಟಿಕೊಂಡು ಚರಂಡಿಯಲ್ಲಿ ಹೂಳು ನಿಲ್ಲುವಂತೆ ಮಾಡಿ ಕೊನೆಗೆ ಚರಂಡಿಯ ಅಸ್ತಿತ್ವವನ್ನೇ ನಿಷ್ಪ್ರಯೋಜಕ ಮಾಡುತ್ತದೆ. ಇದಕ್ಕೆ ಪ್ರತಿವರ್ಷ ಚರಂಡಿ ಸುಸಜ್ಜಿತವಾಗಿಡುವ ಕೆಲಸವೇ ಮದ್ದು’ ಎನ್ನುತ್ತಾರೆ ಪ್ರಶಾಂತ್ ನಗರದ ನಿವಾಸಿ ವಿವೇಕ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.