ADVERTISEMENT

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ

ಸಿಐಟಿಯು ಅಂಗನವಾಡಿ, ಆಶಾ, ಅಕ್ಷರದಾಸೋಹ ನೌಕರರ ಧರಣಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2016, 4:55 IST
Last Updated 6 ಫೆಬ್ರುವರಿ 2016, 4:55 IST
ಉದ್ಯೋಗ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು ಅಂಗನವಾಡಿ, ಅಕ್ಷರದಾಸೋಹ ಮತ್ತು ಆಶಾ ನೌಕರರ ಸಂಘದ ಸದಸ್ಯೆಯರು ಶುಕ್ರವಾರ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಉದ್ಯೋಗ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು ಅಂಗನವಾಡಿ, ಅಕ್ಷರದಾಸೋಹ ಮತ್ತು ಆಶಾ ನೌಕರರ ಸಂಘದ ಸದಸ್ಯೆಯರು ಶುಕ್ರವಾರ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.   

ಚಿಕ್ಕಬಳ್ಳಾಪುರ: ನಿಯಮಿತವಾಗಿ ವೇತನ ಬಿಡುಗಡೆ ಮಾಡುವುದು, ಸಾಮಾಜಿಕ ಭದ್ರತೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ, ಅಂಗನವಾಡಿ ನೌಕರರ ಸಂಘ ಮತ್ತು ಆಶಾ ನೌಕರರ ಸಂಘದ ಸದಸ್ಯೆಯರು ಶುಕ್ರವಾರ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಜಿಲ್ಲಾಡಳಿತ ಭವನದ ಮೆಟ್ಟಿಲುಗಳ ಮೇಲೆ ಕೂತು ದೀರ್ಘಕಾಲದವರೆಗೆ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು, ಉದ್ಯೋಗ ಭಧ್ರತೆ ಒದಗಿಸಬೇಕು ಮತ್ತು ಎಲ್ಲರಿಗೂ ಸರ್ಕಾರಿ ಸೌಲಭ್ಯಗಳು ದೊರೆಯುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ಸಿಐಟಿಯು ಸಂಘದ ಅಧ್ಯಕ್ಷೆ ಲಕ್ಷ್ಮಿದೇವಮ್ಮ ಮಾತನಾಡಿ, ಅಂಗನವಾಡಿ, ಆಶಾ ಮತ್ತು ಅಕ್ಷರದಾಸೋಹ ನೌಕರರು ಒಂದಿಲ್ಲೊಂದು ರೀತಿ ಶೋಷಣೆ ಮತ್ತು ದೌರ್ಜನ್ಯಕ್ಕೆ ಒಳಗಾಗುತ್ತಿದ್ದು, ಅವರಿಗೆ ರಕ್ಷಣೆ ಸಿಗುತ್ತಿಲ್ಲ. ನಿಯಮಿತವಾಗಿ ವೇತನ ಬಿಡುಗಡೆಯಾಗದ ಕಾರಣ ಅವರಿಗೆ ನೆಮ್ಮದಿಯ ಬದುಕು ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಂಸಾರ ನಿಭಾಯಿಸಲು ಕಷ್ಟವಾಗುತ್ತಿದೆ ಎಂದರು.

ಅಂಗನವಾಡಿ ನೌಕರರನ್ನು ಸರ್ಕಾರದ ಮೂರನೇ ಮತ್ತು ಸಹಾಯಕರನ್ನು ನಾಲ್ಕನೇ ದರ್ಜೆ ನೌಕರರನ್ನಾಗಿ ಪರಿಗಣಿಸಿ ಉದ್ಯೋಗ ಕಾಯಂಗೊಳಿಸಬೇಕು. ಪರಿಣಿತ ನೌಕರರಿಗೆ ಹೆಚ್ಚಿನ ವೇತನ ನೀಡಬೇಕು. ಅರ್ಹತೆಯುಳ್ಳ ನೌಕರರನ್ನು ಮೇಲ್ಚಿಚಾರಕಿರನ್ನಾಗಿ ನೇಮಿಸಬೇಕು.

ಅಗತ್ಯವಿರುವ ಕಡೆಯಲೆಲ್ಲ ಪೂರ್ಣಪ್ರಮಾಣದ ಅಂಗನವಾಡಿ ಕೇಂದ್ರಗಳನ್ನು ತೆರೆದು ನೌಕರರಿಗೆ ಸಮಾನ ವೇತನ ಮತ್ತು ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಬಿಸಿಯೂಟ ಯೋಜನೆಗೆ ಕಳೆದ ವರ್ಷದ ಬಜೆಟ್‌ನಲ್ಲಿ ಕಡಿತಗೊಳಿಸಲಾದ ಹಣ ವಾಪಸ್ ನೀಡಬೇಕು. ನೌಕರರಿಗೆ ಕನಿಷ್ಠ ಕೂಲಿ ₹ 15 ಸಾವಿರ, ಸಾಮಾಜಿಕ ಭದ್ರತೆ ಮತ್ತು ಸರ್ಕಾರಿ ಸೌಲಭ್ಯಗಳನ್ನು ಒದಗಿಸಬೇಕು. ಬಿಸಿಯೂಟ ಯೋಜನೆಯನ್ನು 12ನೇ ತರಗತಿಯವರೆಗೆ ವಿಸ್ತರಿಸಬೇಕು. ಹಾಜರಾತಿ ಆಧಾರದ ಮೇಲೆ ಕೆಲಸದಿಂದ ಕೈ ಬಿಡುವುದು ನಿಲ್ಲಿಸಬೇಕು. ಬರಗಾಲ ಮತ್ತು ರಜೆ ದಿನಗಳಲ್ಲಿ ವೇತನ ನೀಡಬೇಕು ಎಂದು ಅವರು ಒತ್ತಾಯಿಸಿದರು.

ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್‌ ಯೋಜನೆಗೆ ಕಡಿತ ಮಾಡಲಾದ ಹಣ ಬಿಡುಗಡೆ ಮಾಡಬೇಕು. ಪ್ರೋತ್ಸಾಹಧನ ಬದಲು ಮಾಸಿಕ ವೇತನ ನೀಡಬೇಕು. ತುರ್ತು ಸಂದರ್ಭಗಳಲ್ಲಿ ಗರ್ಭಿಣಿಯರಿಗೆ ಹೆರಿಗೆ ಮಾಡಿಸಲು ಆಶಾ ನೌಕರರಿಗೆ ತರಬೇತಿ ನೀಡಬೇಕು. ಆಶಾ ನೌಕರರ ಮೇಲೆ ಅಧಿಕಾರಿಗಳಿಂದ ಆಗುತ್ತಿರುವ ದೌರ್ಜನ್ಯ ತಡೆಗಟ್ಟಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಸಿಐಟಿಯು ಸಂಘದ ಅಧ್ಯಕ್ಷ ಸಿದ್ದಗಂಗಪ್ಪ ಮಾತನಾಡಿ, ಹೋರಾಟದಿಂದ ಮಾತ್ರವೇ ಗೆಲುವು ಪಡೆಯಲು ಸಾಧ್ಯವಿದೆ. ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಬೇಕಿದೆ. ಸರ್ಕಾರಕ್ಕೆ ನಮ್ಮ ಸವಾಲು, ಸಂಕಷ್ಟ ತಿಳಿಪಡಿಸಬೇಕಿದೆ ಎಂದರು.

ಸಂಘಟನೆಯ ಮುಖಂಡ ಬಿ.ಎನ್. ಮುನಿಕೃಷ್ಣಪ್ಪ, ಅಂಗನವಾಡಿ ನೌಕರರಾದ ವೆಂಕಟಲಕ್ಷ್ಮಮ್ಮ, ನಾರಾಯಣಮ್ಮ, ನಾಗರತ್ನಮ್ಮ, ಸೌಭಾಗ್ಯಮ್ಮ, ಅಶ್ವತ್ಥಮ್ಮ, ಮಂಜುಳಾ, ಭಾಗ್ಯಮ್ಮ, ವೆಂಕಟರತ್ನಮ್ಮ, ವಿಜಯಭಾರತಿ, ವೆಂಕಟರೋಣಮ್ಮ, ಆಯಿಷಾಬಿ, ಗಾಯತ್ರಿ, ಅಕ್ಷರದಾಸೋಹ ನೌಕರರಾದ ಕೆ.ಆರ್‌.ಮಂಜುಳಾ, ರಾಜಮ್ಮ, ವೆಂಕಟಲಕ್ಷ್ಮಿ, ಭಾರತಿ, ಮುನಿಲಕ್ಷ್ಮಿ, ಗೀತಾ, ಸರಸಮ್ಮ, ಆಶಾ ನೌಕರರಾದ ಲಕ್ಷ್ಮಿದೇವಮ್ಮ, ಕಲ್ಪನಾ, ವೆಂಕಟಲಕ್ಷ್ಮಮ್ಮ, ವಿಜಯಲಕ್ಷ್ಮಿ, ಅಂಜಲಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.