ADVERTISEMENT

ಚೆಕ್‌ಡ್ಯಾಮ್‌ ಈಗ ಭರ್ತಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2014, 10:21 IST
Last Updated 22 ಆಗಸ್ಟ್ 2014, 10:21 IST

ಚಿಕ್ಕಬಳ್ಳಾಪುರ: ತಾಲ್ಲೂಕಿನ ನಂದಿ ಹೋಬಳಿ ವ್ಯಾಪ್ತಿಯಲ್ಲಿ ಈಚೆಗೆ ಸುರಿದ ಮಳೆಯಿಂದಾಗಿ ಕಾಲುವೆ, ಚೆಕ್‌ಡ್ಯಾಮ್‌, ಕುಂಟೆ ಮುಂತಾದವು ಭರ್ತಿಯಾಗಿದ್ದು, ಈಗ ಎತ್ತ ಕಣ್ಣು ಹಾಯಿಸಿದರೂ ಅತ್ತ ನೀರು ಕಾಣಸಿಗುತ್ತದೆ. ನೀರು ಕಂಡು ರೈತರು ಹರ್ಷದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗುತ್ತಿದ್ದಾರೆ.

ನಂದಿಬೆಟ್ಟ, ಚನ್ನರಾಯಸ್ವಾಮಿ ಬೆಟ್ಟ, ಅಂಗಟ್ಟ ಮುಂತಾದವುಗಳಿಂದ ಹರಿದು ಬರುತ್ತಿರುವ ಮಳೆ ನೀರು ನಂದಿ ಕ್ರಾಸ್‌ ಸುತ್ತಮುತ್ತಲಿನ ಕಾಲುವೆ, ಚೆಕ್‌ಡ್ಯಾಮ್‌ಗಳಲ್ಲಿ ಶೇಖರಣೆಯಾಗುತ್ತಿದೆ. ಸುಮಾರು 15ರಿಂದ 20 ದಿನ ಚೆಕ್‌ಡ್ಯಾಮ್‌ನಲ್ಲಿ ನೀರು ಶೇಖರಣೆಯಾಗಲಿದ್ದು, ಇನ್ನಷ್ಟು ಒಳ್ಳೆಯ ಮಳೆಯಾದರೆ ಅನುಕೂಲವಾಗುತ್ತದೆ ಎಂದು ರೈತರು ಹೇಳುತ್ತಾರೆ.

ಜಿಟಜಿಟಿ ಮಳೆಯಿಂದ ಯಾವುದೇ ಪ್ರಯೋಜನವಾಗಿಲ್ಲವೆಂದು ಬೇಸರದಿಂದಲೇ ಜಮೀನಿನಲ್ಲಿ ಆಲೂಗಡ್ಡೆ, ರಾಗಿ, ಕೋಸು ಮುಂತಾದವು ಬಿತ್ತನೆ ಮಾಡಿದ್ದೆವು. ಆದರೆ ಮಂಗಳವಾರ ಉತ್ತಮ ಮಳೆಯಾದ್ದರಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದೇವೆ ಎಂದು ನಂದಿ ಕ್ರಾಸ್‌ ರೈತ ಗೋಪಾಲಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಮಳೆ ನಿಂತು ಹೊರಬಂದು ನೋಡಿದಾಗ, ನಮಗೆಲ್ಲ ಅಚ್ಚರಿ ಕಾದಿತ್ತು. ನಿರೀಕ್ಷೆಗೂ ಮೀರಿ ಒಳ್ಳೆಯ ಮಳೆಯಾಗಿದೆ. ಚೆಕ್‌ಡ್ಯಾಮ್‌ನಲ್ಲಿ ನೀರು ಇಂಗಿದಷ್ಟು ಅಂತರ್ಜಲ ವೃದ್ಧಿಯಾಗುತ್ತದೆ.

ನೀರಿನ ಕೊರತೆ ಎದುರಿಸುತ್ತಿರುವ ಕೊಳವೆಬಾವಿಗಳಲ್ಲೂ ನೀರು ಸಿಗುತ್ತದೆ. ಈ ನೀರನ್ನು ಸದ್ಬಳಕೆ ಮಾಡಿಕೊಂಡು ಕಾಲುವೆ, ಚೆಕ್‌ಡ್ಯಾಮ್‌ಗಳಲ್ಲಿರುವ ತ್ಯಾಜ್ಯವನ್ನು ತೆರವುಗೊಳಿಸಬೇಕು. ಚೆಕ್‌ಡ್ಯಾಮ್‌ ನೀರು ಸರಾವಗವಾಗಿ ಹರಿಯುವಂತೆ ಮಾಡಬೇಕು ಎಂದು ಅವರು ತಿಳಿಸಿದರು.

ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಅಧಿಕಾರಿಗಳು ಮಳೆ ನೀರು ವ್ಯರ್ಥವಾಗದಂತೆ ನಿಗಾ ವಹಿಸಬೇಕು. ಕಾಲುವೆಗೆ ಅಡ್ಡಲಾಗಿರುವ ಕಳೆಗಿಡಗಳನ್ನು, ತ್ಯಾಜ್ಯವನ್ನು ತೆರವುಗೊಳಿಸಬೇಕು. ಕೆರೆಗಳಲ್ಲಿ ತುಂಬಿರುವ ಹೂಳನ್ನು ತೆರವುಗೊಳಿಸಲು ಕ್ರಮ ತೆಗೆದುಕೊಳ್ಳಬೇಕು.

ಎಷ್ಟೇ ಪ್ರಮಾಣದಲ್ಲಿ ನೀರು ಹರಿದು ಬಂದರೂ ಅದು ದೀರ್ಘ ಕಾಲದವರೆಗೆ ಬಳಕೆಯಾಗುವಂತಹ ವ್ಯವಸ್ಥೆ ಮಾಡಬೇಕು. ಕೆರೆ ಹೂಳನ್ನು ತೆಗೆದುಕೊಳ್ಳಲು ಇದು ಸಕಾಲ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.