ADVERTISEMENT

ಜಾತಿ ಸಮಸ್ಯೆಗೆ ಸಾಮಾಜಿಕ ಔಷಧಿ ನೀಡಿದ ಸರ್ವಜ್ಞ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2017, 6:28 IST
Last Updated 21 ಫೆಬ್ರುವರಿ 2017, 6:28 IST
ಚಿಕ್ಕಬಳ್ಳಾಪುರ ನಗರದಲ್ಲಿ ನಡೆದ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕುಂಬಾರ ಸಮುದಾಯದ ಗಣ್ಯರನ್ನು ಸನ್ಮಾನಿಸಲಾಯಿತು.
ಚಿಕ್ಕಬಳ್ಳಾಪುರ ನಗರದಲ್ಲಿ ನಡೆದ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕುಂಬಾರ ಸಮುದಾಯದ ಗಣ್ಯರನ್ನು ಸನ್ಮಾನಿಸಲಾಯಿತು.   
ಚಿಕ್ಕಬಳ್ಳಾಪುರ: ‘16ನೇ ಶತಮಾನದಲ್ಲಿ ಹುಟ್ಟಿ ಹೊಸ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ಸರ್ವಜ್ಞ ತನ್ನ ತ್ರಿಪದಿಗಳ ಮೂಲಕ ಜಾತಿ ಮತ್ತು ಮತಾಂಧ ಸಮಸ್ಯೆಗಳಿಗೆ ಸರ್ವಕಾಲಕ್ಕೂ ಸಲ್ಲುವ ಸಾಮಾಜಿಕ ಔಷಧಿಯನ್ನು ಕೊಟ್ಟಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಅಭಿಪ್ರಾಯಪಟ್ಟರು. 
 
ನಗರದದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಅವರು  ಮಾತನಾಡಿದರು. 
 
‘ಜಾತೀಯತೆ, ಧರ್ಮಾಂಧತೆಯಿಂದ ಮಾನವೀಯ ಮೌಲ್ಯಗಳು ಕುಸಿದಿದ್ದ ಸಂದರ್ಭದಲ್ಲಿ ಹುಟ್ಟಿ ಬಂದ ಸರ್ವಜ್ಞ ಜನಪದ ಭಾಷೆಯಲ್ಲಿ ಎಲ್ಲರಿಗೂ ಅರ್ಥವಾಗುವಂತೆ ಸಾಹಿತ್ಯ ಸೃಷ್ಠಿಸಿದ್ದಾರೆ. ಅವರ ಪ್ರತಿಯೊಂದು ತ್ರಿಪದಿಯೂ ಇಂದಿನ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ಔಷಧೀಯ ಗುಣವಿದೆ. ಆದ್ದರಿಂದ ಸರ್ವಜ್ಞನ ವಚನಗಳನ್ನು ಓದಿ ಪ್ರಚಾರ ಮಾಡುವ ಕೆಲಸ ಮಾಡಬೇಕಿದೆ’ ಎಂದು ಹೇಳಿದರು.
 
‘ಶಿಕ್ಷಣದಿಂದ ವಂಚಿತರಾಗಿದ್ದರೂ ಸಮಾಜದ ಅಸಮಾನತೆಗಳ ವಿರೋಧಿಸುತ್ತಾ ಬೆಳೆದವರು ಸರ್ವಜ್ಞ. ಕಠಿಣವಾದದ್ದನ್ನು ಸರಳವಾಗಿ ಹೇಳುವುದನ್ನು ಕರಗತ ಮಾಡಿಕೊಂಡಿದ್ದ ಇವರು ಸಾಮಾನ್ಯ ಜನರಲ್ಲಿ ಜಾತಿ ನಿರ್ಮೂಲನೆ ಬಗ್ಗೆ ಅರಿವು ಮೂಡಿಸಿದ್ದಾರೆ. ಮೂಲಭೂತವಾದಿಗಳ ಮನಸ್ಸು ಕರಗಿಸುವ ಬಲ್ಲವರೂ ಆಗಿದ್ದರು’ ಎಂದು ಹೇಳಿದರು.
 
ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಂ.ಮುನಿಯಪ್ಪ ಮಾತನಾಡಿ, ‘ಸಮಾಜವನ್ನು ಸಮಾನತೆಯ ಹಾದಿಗೆ ತರುವಲ್ಲಿ ಶ್ರಮಿಸಿದ ಸರ್ವಜ್ಞರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರ ಮಹಾನ್ ವ್ಯಕ್ತಿಗಳ ಜಯಂತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಅದರಲ್ಲಿ ಸರ್ವಜ್ಞನ ಜಯಂತಿಯು ಒಂದು. ಇವರ ಜಯಂತಿ ಆಚರಣೆಗೆ ಮಾತ್ರ ಸೀಮಿತವಾಗದೆ ಅವರ ಆಶಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
 
‘ಇಂದು ಮಾನವೀಯ ಮೌಲ್ಯಗಳ ಜತೆಗೆ ನಾವು ಆರ್ಥಿಕವಾಗಿ ಸಬಲರಾಗಬೇಕಿದೆ. ಅದಕ್ಕಾಗಿ ಮೊದಲು ವಿದ್ಯೆಯನ್ನು ಪಡೆಯಬೇಕು. ಎಲ್ಲಾ ಸಮುದಾಯದವರು ಸ್ವಾರ್ಥ ಬಿಟ್ಟು ಎಲ್ಲರೊಂದಿಗೆ ಸಹೋದರರಂತೆ ಬಾಳ್ವೆ ನಡೆಸಬೇಕು ಎಂದು ತಿಳಿಸಿದರು.
 
ಕುಂಬಾರ ಸಮುದಾಯದ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ಚಿಕ್ಕಬಳ್ಳಾಪುರ ಜಿಲ್ಲಾ ಕುಂಬಾರರ ಸಂಘದ ವತಿಯಿಂದ ಸರ್ವಜ್ಞ ಮೂರ್ತಿಯ ಭಾವಚಿತ್ರವುಳ್ಳ ಕ್ಯಾಲೆಂಡರ್‌ ಬಿಡುಗಡೆ ಮಾಡಲಾಯಿತು.
 
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕ ಬಿ.ಎಸ್.ವೆಂಕಟಾಚಲಪತಿ, ತಹಶೀಲ್ದಾರ್ ಆರ್.ಮೋಹನ್, ಕುಂಬಾರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ನಾರಾ ಯಣಸ್ವಾಮಿ ಮತ್ತಿತರರು ಹಾಜರಿದ್ದರು.
 
**
ಮಡಿಕೆ ಮಾಡಿದರು
ಆಧುನಿಕತೆಯ ಪ್ರಭಾವದಿಂದ ನಶಿಸುತ್ತಿರುವ ಕುಂಬಾರಿಕೆ ವೃತ್ತಿಯನ್ನು ಉಳಿಸುವ ನಿಟ್ಟಿನಲ್ಲಿ ಆಧುನಿಕ ಯಂತ್ರದಿಂದ ಮಣ್ಣಿನ ಮಡಿಕೆ ಮತ್ತಿತರ ಅಲಂಕಾರಿಕ ವಸ್ತುಗಳನ್ನು ಮಾಡುವ ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ಕಾರ್ಯಕ್ರಮದಲ್ಲಿ ತೋರಿಸಲಾಯಿತು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.