ADVERTISEMENT

ಜೂನ್ 1ರಂದು ವಿಧಾನ ಸೌಧ ಮುತ್ತಿಗೆ

ರೈತ ಸಂಘ ಹಾಗೂ ಹಸಿರು ಸೇನೆಯಿಂದ ರ್‍ಯಾಲಿ

​ಪ್ರಜಾವಾಣಿ ವಾರ್ತೆ
Published 22 ಮೇ 2017, 4:54 IST
Last Updated 22 ಮೇ 2017, 4:54 IST

ಗೌರಿಬಿದನೂರು: ‘ಬಯಲು ಸೀಮೆಗೆ ಕೃಷಿ ಆಧಾರಿತ ನೀರಾವರಿ ಯೋಜನೆ ಜಾರಿ ಮಾಡುತ್ತೇವೆ ಎಂದು ಸರ್ಕಾರ ಕೊಟ್ಟ ಮಾತಿಗೆ ತಪ್ಪಿದೆ. ಇದನ್ನು ಖಂಡಿಸಿ ಜೂನ್ 1ರಂದು ವಿಧಾನಸೌಧ ಮುತ್ತಿಗೆ ಬೈಕ್‌ ರ್‍ಯಾಲಿ ಹಮ್ಮಿಕೊಳ್ಳಾಗಿದೆ’ ಎಂದು ರೈತ ಸಂಘ ಹಾಗೂ ಹಸಿರು ಸೇನೆ  ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ತಿಳಿಸಿದರು.

ಪಟ್ಟಣದ  ಉತ್ತರ ಪಿನಾಕಿನಿ ನದಿ ದಡದ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ ರ್‍ಯಾಲಿ ಅಂಗವಾಗಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

‘ಬಯಲು ಸೀಮೆ ಜಿಲ್ಲೆಗಳು10 ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿವೆ. ಇಪ್ಪತ್ತು ಮೂವತ್ತು ಎಕರೆ ಜಮೀನುಳ್ಳ ರೈತರು ಉದ್ಯೋಗಕ್ಕಾಗಿ ವಲಸೆ ಹೋಗುವ ಸ್ಥಿತಿ ಇದೆ’ ಎಂದರು. 

‘ನೀರಾವರಿ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಿದ್ದು ಇದನ್ನು ಖಂಡಿಸಿ ವಿಧಾನಸೌಧ ಮುತ್ತಿಗೆ ಹಮ್ಮಿಕೊಳ್ಳಲಾಗುವುದು’ ಎಂದರು.

‘ಜನಪ್ರತಿನಿಧಿಗಳಿಗೆ ಮತ್ತು ಸರ್ಕಾರಕ್ಕೆ ಚುರುಕು ಮುಟ್ಟಿಸಲು ಈ ಚಳವಳಿ ಹಮ್ಮಿಕೊಳ್ಳಲಾಗಿದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹಕ್ಕುಪಡೆಯಲು ಮುಂದಾಗಬೇಕು’ ಎಂದ ಕೋರಿದರು.

ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಕೋಲಾಟ ನರಸಿಂಹರೆಡ್ಡಿ ಮಾತನಾಡಿ, ‘ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬೈಕ್ ರ್‍ಯಾಲಿಯಲ್ಲಿ ಭಾಗವಹಿಸುವಂತೆ ಮಾಹಿತಿ ನೀಡಲಾಗಿದೆ. ತಾಲ್ಲೂಕಿನಿಂದ ಕನಿಷ್ಠ 2ಸಾವಿರ ರೈತರು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಪಾಲ್ಗೊಳ್ಳವ ನಿರೀಕ್ಷೆ ಇದೆ’ ಎಂದರು.

ಗುಡಿಬಂಡೆ ರೈತ ಸಂಘದ ಅಧ್ಯಕ್ಷ ರಾಮನಾಥ್, ಮುಖಂಡರಾದ ಹುಸೇನ್ ಪುರ ಪ್ರಭಾಕರ್, ಪ್ರಕಾಶ್, ಮಂಜುನಾಥ್, ವೆಂಕಟರೆಡ್ಡಿ, ರಾಮಕೃಷ್ಣರೆಡ್ಡಿ, ಬಾಲಪ್ಪ, ಜಯರಾಮ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT