ADVERTISEMENT

ಜೆಡಿಎಸ್‌ ಕಾರ್ಯಕರ್ತರಿಂದ ವಿಜಯೋತ್ಸವ

ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ರಮೇಶ್‌ ಬಾಬು ಗೆಲುವು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 6:29 IST
Last Updated 8 ಫೆಬ್ರುವರಿ 2017, 6:29 IST

ಚಿಕ್ಕಬಳ್ಳಾಪುರ: ವಿಧಾನ ಪರಿಷತ್ತಿನ ಆಗ್ನೇಯ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ರಮೇಶ್ ಬಾಬು ಅವರು ಗೆಲುವು ಸಾಧಿಸಿದ ಪ್ರಯುಕ್ತ ನಗರದಲ್ಲಿ ಮಂಗಳವಾರ ಜೆಡಿಎಸ್‌ ಮುಖಂಡರು ಮತ್ತು ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ನಗರದ ಅಂಬೇಡ್ಕರ್‌ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ಜೆಡಿಎಸ್ ಕಾರ್ಯಕರ್ತರು ಜೆಡಿಎಸ್ ಪಕ್ಷ ಮತ್ತು ಮುಖಂಡರಿಗೆ ಜೈಕಾರ ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ನಾಗರಾಜ್, ‘ಆಗ್ನೇಯ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಯಲ್ಲಿ ಪ್ರಬುದ್ಧ ಮತದಾರರು ಜೆಡಿಎಸ್‌ಗೆ ಅಧಿಕಾರ ನೀಡಿದ್ದಾರೆ.

ಬಿಜೆಪಿ  ನಾಯಕ ಈ ಹಿಂದೆ ಹೇಳುತ್ತಿದ್ದಂತೆ 2018ರ ವಿಧಾನಸಭೆ ಚುನಾವಣೆಗೆ ಈ ಚುನಾವಣೆ ಫಲಿತಾಂಶ ದಿಕ್ಸೂಚಿ ಎನ್ನುವ ಮಾತುಗಳನ್ನು ಅವರು ಒಪ್ಪಲೇ ಬೇಕು. ಮುಂಬರುವ ಚುನಾವಣೆಯಲ್ಲಿ ಮತದಾರರ ಒಲವು ಜೆಡಿಎಸ್‌ ಪರವಾಗಿರುತ್ತದೆ’ ಎಂದು ತಿಳಿಸಿದರು.

‘ಆಂಧ್ರಪ್ರದೇಶ ಮತ್ತು ತಮಿಳುನಾಡು ಸೇರಿದಂತೆ ಅನೇಕ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಯಾವ ರೀತಿ ಜನರ ಒಲವಿದೆಯೋ ಅದೇ ರೀತಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್‌ ಪರವಾದ ಅಲೆ ಮೂಡಲಿದೆ. ಮುಂದಿನ ಬಾರಿ ಜೆಡಿಎಸ್‌ ಅಧಿಕಾರಕ್ಕೆ ಬರಬೇಕು ಮತ್ತು ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಬೇಕು ಎನ್ನುವ ಭಾವನೆ ಜನರಲ್ಲಿ ಬರುತ್ತಿದೆ’ ಎಂದು ಅಭಿಪ್ರಾಯಪಟ್ಟರು.

ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಮಾತನಾಡಿ, ‘ಪ್ರಜ್ಞಾವಂತ ಮತದಾರರು ಈ ಚುನಾವಣೆಯಲ್ಲಿ ಜೆಡಿಎಸ್ ಆಡಳಿತ ಬಯಸಿ ಮತ ಹಾಕಿರುವುದನ್ನು ನೋಡಿದರೆ ರಾಜ್ಯದಲ್ಲಿ ಮತದಾರರು ಜೆಡಿಎಸ್‌ ಬಯಸುತ್ತಿದ್ದಾರೆ ಎನ್ನುವುದು ತಿಳಿಯುತ್ತದೆ. ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಠೇವಣಿ ಕಳೆದುಕೊಂಡು, 14ನೇ ಸ್ಥಾನದಲ್ಲಿರುವುದು ಜನರಲ್ಲಿ ಕಾಂಗ್ರೆಸ್‌ ಬಗ್ಗೆ ಯಾವ ರೀತಿ ಅಭಿಪ್ರಾಯಗಳಿವೆ ಎಂದು ಸೂಚಿಸುತ್ತದೆ’ ಎಂದರು.

‘ಈ ಹಿಂದೆ ಕೆಲ ಅಕ್ರಮ ಮಾಡುವ ಮೂಲಕ ಕಾಂಗ್ರೆಸ್‌ನವರು ಅನೇಕ ಚುನಾವಣೆಗಳಲ್ಲಿ ಗೆದ್ದಿರಬಹುದು. ಎಪಿಎಂಸಿ ಚುನಾವಣೆಯಲ್ಲಿ ಸ್ಥಳೀಯ ಅಧಿಕಾರಿಗಳ ಕೈವಾಡದಿಂದ ಫಲಿತಾಂಶ ಬದಲಾಗಿತ್ತು. ಆದರೆ ಈ ಫಲಿತಾಂಶ ಕಾಂಗ್ರೆಸ್‌ಗೆ ರಾಜ್ಯದಲ್ಲಿ ನೆಲೆ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟಿದೆ. 

ಅದೇ ರೀತಿ ಈ ರಾಜ್ಯಕ್ಕೆ ಕುಮಾರಸ್ವಾಮಿ ಅವರ ಸರ್ಕಾರ ಅಗತ್ಯವಾಗಿ ಬೇಕಾಗಿದೆ ಎಂಬುದನ್ನು ಉಪ ಚುನಾವಣೆ ಫಲಿತಾಂಶ ಬಿಂಬಿಸುತ್ತದೆ’ ಎಂದು ಹೇಳಿದರು.

ಜೆಡಿಎಸ್‌ ಮುಖಂಡರಾದ ಕೆ.ಸಿ.ರಾಜಾಕಾಂತ್, ಕೊಳವನಹಳ್ಳಿ ಮುನಿರಾಜು, ಲಾಯರ್ ನಾರಾಯಣಸ್ವಾಮಿ, ಪಿ.ಶ್ರೀನಿವಾಸ್, ಬಂಡ್ಲು ಶ್ರೀನಿವಾಸ್ ಮತ್ತಿತರರು ವಿಜಯೋತ್ಸವದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT