ADVERTISEMENT

ಜೆರಾಕ್ಸ್‌ ಅಂಗಡಿಗಳಲ್ಲಿ ಬಿಕರಿಯಾಗುತ್ತಿವೆ ಅರ್ಜಿ!

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2017, 8:59 IST
Last Updated 9 ಸೆಪ್ಟೆಂಬರ್ 2017, 8:59 IST
ಗೌರಿಬಿದನೂರು ಪಟ್ಟಣದ ಗಾಂಧಿ ವೃತ್ತದಲ್ಲಿ ಸಾಲ ಮನ್ನಾ ಅರ್ಜಿಗಳನ್ನು ಮಾರಾಟ ಮಾಡುತ್ತಿದ್ದ ಜೆರಾಕ್ಸ್ ಅಂಗಡಿಗಳಿಗೆ ಶುಕ್ರವಾರ ಪುಟ್ಟಣ್ಣಯ್ಯ ಬಣದ ರೈತ ಸಂಘದ ಮುಖಂಡರು ಮುತ್ತಿಗೆ ಹಾಕಿ ಅರ್ಜಿ ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದರು.
ಗೌರಿಬಿದನೂರು ಪಟ್ಟಣದ ಗಾಂಧಿ ವೃತ್ತದಲ್ಲಿ ಸಾಲ ಮನ್ನಾ ಅರ್ಜಿಗಳನ್ನು ಮಾರಾಟ ಮಾಡುತ್ತಿದ್ದ ಜೆರಾಕ್ಸ್ ಅಂಗಡಿಗಳಿಗೆ ಶುಕ್ರವಾರ ಪುಟ್ಟಣ್ಣಯ್ಯ ಬಣದ ರೈತ ಸಂಘದ ಮುಖಂಡರು ಮುತ್ತಿಗೆ ಹಾಕಿ ಅರ್ಜಿ ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದರು.   

ಗೌರಿಬಿದನೂರು: ಕೋಡಿಹಳ್ಳಿ ಚಂದ್ರಶೇಖರ್ ಬಣದ ರೈತ ಸಂಘದ ವತಿಯಿಂದ ನಡೆಸುತ್ತಿರುವ ಸಾಲ ಮನ್ನಾಗೆ ಅರ್ಜಿ ಸಲ್ಲಿಸುವ ಚಳುವಳಿಯ ಅರ್ಜಿಗಳನ್ನು ಮಾರಾಟ ಮಾಡುತ್ತಿದ್ದ ಪಟ್ಟಣದ ಕೆಲ ಜೆರಾಕ್ಸ್‌ ಅಂಗಡಿಗಳಿಗೆ ಶುಕ್ರವಾರ ಮತ್ತಿಗೆ ಹಾಕಿದ ಪುಟ್ಟಣ್ಣಯ್ಯ ಬಣದ ಕಾರ್ಯಕರ್ತರು ಅರ್ಜಿಗಳನ್ನು ವಿತರಿಸದಂತೆ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತಸಂಘದ (ಪುಟ್ಟಣ್ಣಯ್ಯ ಬಣ) ತಾಲ್ಲೂಕು ಘಟಕದ ಅಧ್ಯಕ್ಷ ಲೋಕೇಶ್ ಗೌಡ, ‘ಕೋಡಿಹಳ್ಳಿ ಚಂದ್ರಶೇಖರ್ ಬಣದ ರೈತ ಸಂಘದ ಮುಖಂಡರು ಇವತ್ತು ಸಾಲ ಮನ್ನಾ ಅರ್ಜಿ ಸಲ್ಲಿಸುವುದನ್ನೇ ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ. ಅರ್ಜಿ ಶುಲ್ಕದ ನೆಪದಲ್ಲಿ ಅಮಾಯಕ ರೈತರಿಂದ ₨60 ರಿಂದ 100ವರೆಗೆ ಪಡೆಯಲಾಗುತ್ತಿದೆ. ಆ ಅರ್ಜಿಗಳನ್ನು ಜೆರಾಕ್ಸ್‌ ಮಳಿಗೆಗಳಲ್ಲಿ ಮುದ್ರಿಸಿ ಮಾರಾಟ ಮಾಡುವುದನ್ನೇ ಕೆಲವರು ಕಾಯಕ ಮಾಡಿಕೊಂಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮುಗ್ಧ ರೈತರು ತಮ್ಮ ಸಾಲ ಮನ್ನಾ ಆಗುತ್ತದೆ ಎಂಬ ನಂಬಿಕೆಯಿಂದ ಜೆರಾಕ್ಸ್ ಅಂಗಡಿಗಳಲ್ಲಿ ಹಣ ಕೊಟ್ಟು ಅರ್ಜಿ ಪಡೆದು ಭರ್ತಿ ಮಾಡಿ, ಅದಕ್ಕೆ ಪಹಣಿ, ಆಧಾರ್ ನಕಲುಗಳನ್ನು ಲಗತ್ತಿಸಿ, ತಾಲ್ಲೂಕು ಕಚೇರಿಗೆ ಸಲ್ಲಿಸಲು ಅಲೆದಾಡುತ್ತಿದ್ದಾರೆ. ಈ ಸಂದರ್ಭವನ್ನು ಬಂಡವಾಳ ಮಾಡಿಕೊಂಡಿರುವ ಕೆಲ ಜೆರಾಕ್ಸ್ ಅಂಗಡಿ ಮಾಲೀಕರು ಅರ್ಜಿ ಮುದ್ರಿಸಿ ಮಾರಾಟ ಮಾಡಿ ರೈತರಿಗೆ ವಂಚಿಸುತ್ತಿದ್ದಾರೆ. ಈ ಬಗ್ಗೆ ಕೆಲವರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ’ ಎಂದು ಹೇಳಿದರು.

ADVERTISEMENT

‘ಅರ್ಜಿ ಸಲ್ಲಿಸಿದರೆ ಸಾಲ ಮನ್ನಾ ಆಗುತ್ತದೆ ಎಂದು ರಾಜ್ಯ ಅಥವಾ ಕೇಂದ್ರ ಸರ್ಕಾರ ಎಲ್ಲಿಯೂ ಹೇಳಿಲ್ಲ. ಅರ್ಜಿ ಸಲ್ಲಿಸಿದ ಮಾತ್ರಕ್ಕೆ ಸಾಲ ಮನ್ನಾ ಆಗುತ್ತದೆ ಎನ್ನುವುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಸಾಂಕೇತಿಕವಾಗಿ ಅರ್ಜಿ ಸಲ್ಲಿಸಿ ನಾವು ಸಾಲ ಮನ್ನಾಗೆ ಒತ್ತಾಯಿಸಬಹುದಷ್ಟೇ. ಆದ್ದರಿಂದ ರೈತರು ಮೋಸ ಹೋಗದಂತೆ ಜಾಗೃತರಾಗಬೇಕು’ ಎಂದು ತಿಳಿಸಿದರು.

ರೈತ ಮುಖಂಡ ಪ್ರಭಾಕರ್ ಮಾತನಾಡಿ, ‘ಕೆಲ ರೈತರ ಮುಖಂಡರು ರೈತ ಸಂಘದ ಹೆಸರು ಹೇಳಿಕೊಂಡು ಹಸಿರು ಶಾಲುಗಳು ಹಾಕಿಕೊಂಡು ಹಣ ವಸೂಲಿ ದಂಧೆಯಲ್ಲಿ ಮುಳುಗಿದ್ದಾರೆ. ರೈತರ ಸಮಸ್ಯೆಗಳನ್ನು ಪರಿಹರಿಸುವವರೇ ರೈತರಿಂದ ಹಣ ವಸೂಲಿ ಮಾಡಿದರೆ ಹೇಗೆ? ಇಂತಹ ಕಪಟನಾಟಕ ಸಂಘಟನೆಗಳ ಮುಖಂಡರನ್ನು ರೈತರು ಯಾವುದೇ ಕಾರಣಕ್ಕೂ ನಂಬಬಾರದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.