ADVERTISEMENT

ಡಿ.ಪಾಳ್ಯ ರಸ್ತೆ ದುರಸ್ತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2017, 7:28 IST
Last Updated 10 ಸೆಪ್ಟೆಂಬರ್ 2017, 7:28 IST

ಗೌರಿಬಿದನೂರು: ತಾಲ್ಲೂಕಿನ ಹೋಬಳಿ ಕೇಂದ್ರವಾದ ಡಿ.ಪಾಳ್ಯ ರಸ್ತೆ ಸಂಪೂರ್ಣ ಹಾಳಾಗಿದೆ. ವಾಹನ ಸವಾರರು ಪ್ರತಿನಿತ್ಯ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಾ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣದಿಂದ ಹೋಬಳಿ ಕೇಂದ್ರವಾದ ಡಿ.ಪಾಳ್ಯ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮೊಣಕಾಲುದ್ದ ಗುಂಡಿಗಳು ಬಿದ್ದಿರುವ ಪರಿಣಾಮ ವಾಹನ ಸವಾರರರು ಸಂಚರಿಸಲು ಹರಸಾಹಸ ಪಡಬೇಕಾಗಿದೆ. ಇದೇ ಮಾರ್ಗವಾಗಿ ಪ್ರತಿನಿತ್ಯ ಪಟ್ಟಣಕ್ಕೆ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ.

ಪಟ್ಟಣದಿಂದ ಹನ್ನೆರಡು ಕಿ.ಮೀ ಉದ್ದದ ರಸ್ತೆಯಲ್ಲಿ ಗುಂಡಿ ಬಿದ್ದಿವೆ.ವಾಹನ ಸವಾರರು ರಸ್ತೆಯಲ್ಲಿನ ಗುಂಡಿಗಳನ್ನು ತಪ್ಪಿಸಲು ಹೋಗಿ ಎದುರುಗಡೆಯಿಂದ ಬರುವ ವಾಹನ ಸವಾರರಿಗೆ ಡಿಕ್ಕಿ ಸಂಭವಿಸಿದ ಅನೇಕ ನಿದರ್ಶನಗಳಿವೆ.

ADVERTISEMENT

ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ನಿಂತು ಗುಂಡಿ ಯಾವುದು. ರಸ್ತೆ ಯಾವುದು ಎನ್ನುವುದು ತಿಳಿಯದೇ ವಾಹನ ಸವಾರರು ಆಯ ತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಇನ್ನೂ ರಾತ್ರಿ ವೇಳೆಯಲ್ಲಿ ಸಂಚರಿಸಲು ಸಾಧ್ಯವೇ ಇಲ್ಲದಂತಾಗಿದೆ. ಹೋಬಳಿ ಕೇಂದ್ರ ಸೇರಿದಂತೆ ಈ ಭಾಗದ ಅನೇಕ ಗ್ರಾಮಗಳಿಂದ ಪಟ್ಟಣಕ್ಕೆ ಬರುವ ಶಾಲಾ ಕಾಲೇಜು ಮಕ್ಕಳಿಗೆ ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗಿ ಪರಿಣಮಿಸಿದೆ.

ರಸ್ತೆ ಉತ್ತಮವಾಗಿದ್ದ ಸಂದರ್ಭದಲ್ಲಿ ಪಟ್ಟಣಕ್ಕೆ ಕೇವಲ 20 ನಿಮಿಷಗಳಲ್ಲಿ ಹೋಗಬಹುದಾಗಿತ್ತು. ಆದರೆ, ಈಗ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿರುವುದರಿಂದ ಮೂವತ್ತರಿಂದ ನಲವತ್ತು ನಿಮಿಷವಾಗುತ್ತಿದೆ ಎಂದು ಗ್ರಾಮಸ್ಥ ಮಂಜುನಾಥ್  ಪ್ರಜಾವಾಣಿಗೆ ತಿಳಿಸಿದರು.

ಈ ಭಾಗದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ರಸ್ತೆ ದುರಸ್ತಿಗೆ ಅನೇಕ ಬಾರಿ ಮನವಿ ಮಾಡಲಾಗಿದೆ. ಆದಾಗ್ಯೂ ಗಮನ ಹರಿಸಿಲ್ಲ. ಕೂಡಲೇ ದುರಸ್ತಿಪಡಿಸದೇ ಇದ್ದಲ್ಲಿ ಎಂದು ಹೋರಾಟ ನಡೆಸಲಾಗುವುದು ಎಂದು ಗ್ರಾಮದ ನಿವಾಸಿ ಗಂಗಾಧರಪ್ಪ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.