ADVERTISEMENT

ಡೆಂಗಿ ನಿಯಂತ್ರಣಕ್ಕೆ ಸ್ವಚ್ಛತೆಯೇ ಮದ್ದು

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 5:38 IST
Last Updated 15 ಜುಲೈ 2017, 5:38 IST

ಚಿಕ್ಕಬಳ್ಳಾಪುರ: ‘ಮಳೆಗಾಲದ ಸಂದರ್ಭದಲ್ಲಿ ಸೊಳ್ಳೆಗಳಿಂದ ಹರಡುವ ಡೆಂಗಿ ಕಾಯಿಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ತಮ್ಮ ಮನೆ ಪರಿಸರ ಸ್ವಚ್ಛವಾಗಿಟ್ಟುಕೊಂಡು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು’ ಎಂದು ಶಾಸಕ ಡಾ.ಕೆ.ಸುಧಾಕರ್‌ ತಿಳಿಸಿದರು.

ನಗರದಲ್ಲಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ‘ಡೆಂಗಿ ವಿರೋಧಿ ದಿನಾಚರಣೆ’ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಡೆಂಗಿ ಜ್ವರವೂ ಗ್ರಾಮೀಣ ಪ್ರದೇಶಗಳಿಗಿಂತ ಹೆಚ್ಚು ನಗರ ಪ್ರದೇಶಗಳಲ್ಲಿ ಹರಡುವ ಸಾಧ್ಯತೆ ಇದೆ. ನಿಂತ ನೀರಿನಲ್ಲಿ ಸೊಳ್ಳೆ ಸಂತತಿ ಹೆಚ್ಚುವುದರಿಂದ ಇಂತಹ ಕಾಯಿಲೆಗಳ ಉಲ್ಭಣಕ್ಕೆ ಕಾರಣವಾಗುತ್ತದೆ. ಸೊಳ್ಳೆಗಳ ಹತೋಟಿಯೇ ಡೆಂಗಿ ಜ್ವರದ ನಿಯಂತ್ರಣದ ಮುಖ್ಯ ವಿಧಾನ. ಸಾರ್ವಜನಿಕರು ಮನೆಯಲ್ಲಿರುವ ಡ್ರಮ್‌, ಬ್ಯಾರಲ್‌, ಮಡಿಕೆ, ಟೈರ್‌, ತೆಂಗಿನ ಚಿಪ್ಪು ಹೀಗೆ ಎಲ್ಲೆಂದರಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಬೇಕು’ ಎಂದು ತಿಳಿಸಿದರು.

ADVERTISEMENT

‘ಜಿಲ್ಲೆಯಲ್ಲಿ ಕಳೆದ ವರ್ಷ 38 ಡೆಂಗಿ ಪ್ರಕರಣಗಳು ದಾಖಲಾಗಿದ್ದವು. ಈ ಬಾರಿ ಈವರೆಗೆ 17 ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯನ್ನು ಡೆಂಗಿ ಜ್ವರದಿಂದ ಸಂಪೂರ್ಣ ಮುಕ್ತಗೊಳಿಸಲು ನಗರಸಭೆ ಸ್ವಚ್ಛತೆಯ ಕಡೆಗೆ ಹೆಚ್ಚು ಗಮನಹರಿಸಬೇಕು. ಡೆಂಗಿ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವಿಜಯಕುಮಾರ್ ಮಾತನಾಡಿ, ‘ವೈರಸ್‌ನಿಂದ ಬರುವ ಡೆಂಗಿ ಜ್ವರ ಈಡೀಸ್ ಇಜಿಪ್ಟೈ ಸೊಳ್ಳೆ ಕಚ್ಚಿದರೆ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಸ್ವಚ್ಛ ನೀರಿನಲ್ಲಿ ವಾಸ ಮಾಡುವ ಈ ಸೊಳ್ಳೆ ಹಗಲು ಹೊತ್ತಿನಲ್ಲಿ ಮಾತ್ರ ಮನುಷ್ಯರನ್ನು ಕಚ್ಚುತ್ತದೆ. ಆದ್ದರಿಂದ ಸೊಳ್ಳೆ ಸಂತಾನ ತಡೆಗಟ್ಟುವ ನಿಟ್ಟಿನಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ಅಗತ್ಯ’ ಎಂದು ತಿಳಿಸಿದರು.

‘ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ತೀವ್ರ ನೋವು, ಮಾಂಸಖಂಡಗಳು ಮತ್ತು ಕೀಲುಗಳಲ್ಲಿ ನೋವು, ಬಾಯಿ, ಮೂಗು, ವಸಡುಗಳಿಂದ ರಕ್ತಸ್ರಾವ, ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವ ಕಾಣಿಸಿಕೊಳ್ಳುವುದು ಡೆಂಗಿ ರೋಗದ ಲಕ್ಷಣಗಳು.

ಇವು ಕಂಡಬಂದ ತಕ್ಷಣವೇ ನಾಗರಿಕರು ಆಸ್ಪತ್ರೆಗೆ ಹೋಗಿ ರಕ್ತ ಪರೀಕ್ಷೆ ಮಾಡಿಸಿಕೊಂಡು, ಸೂಕ್ತ ಚಿಕಿತ್ಸೆ ಪಡೆಯಬೇಕು. ಸುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ನಿಗಾ ವಹಿಸುವ ಜತೆಗೆ ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆ ನಿರೋಧಕಗಳು, ಸೊಳ್ಳೆ ಪರದೆಗಳನ್ನು ಬಳಸುವ ಮೂಲಕ ಸೊಳ್ಳೆಗಳು ಕಚ್ಚದಂತೆ ಎಚ್ಚರಿಕೆ ವಹಿಸಬೇಕು’ ಹೇಳಿದರು.

ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ. ಎನ್‌.ಕೇಶವ ರೆಡ್ಡಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜೆ. ಮಂಜುನಾಥ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರವಿಶಂಕರ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.