ADVERTISEMENT

ತಾಲ್ಲೂಕು ಆಡಳಿತ ವಿರುದ್ಧ ಧರಣಿ

ದಲಿತರ ಸಮಸ್ಯೆ ಬಗೆಹರಿಸಲು ವಿಫಲ: ದಲಿತ ಸಂಘರ್ಷ ಸಮಿತಿ ಆರೋಪ

​ಪ್ರಜಾವಾಣಿ ವಾರ್ತೆ
Published 17 ಜನವರಿ 2017, 9:09 IST
Last Updated 17 ಜನವರಿ 2017, 9:09 IST
ತಾಲ್ಲೂಕು ಆಡಳಿತ ವಿರುದ್ಧ ಧರಣಿ
ತಾಲ್ಲೂಕು ಆಡಳಿತ ವಿರುದ್ಧ ಧರಣಿ   

ಗೌರಿಬಿದನೂರು:  ತಾಲ್ಲೂಕಿನಲ್ಲಿ ದಲಿತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ತಾಲ್ಲೂಕು ಆಡಳಿತ ವಿಫಲವಾಗಿದೆ’ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಸೋಮವಾರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಎಚ್.ಎನ್. ಸನಂದ ಕುಮಾರ್ ಮಾತನಾಡಿ, ‘ತಾಲ್ಲೂಕಿನಲ್ಲಿ ದಲಿತರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ತಾಲ್ಲೂಕು ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ. ಪೊಲೀಸ್ ಇಲಾಖೆ ನಿಷ್ಕ್ರೀಯವಾಗಿದೆ’ ಎಂದು ದೂರಿದರು.

‘ತಾಲ್ಲೂಕಿನಲ್ಲಿ 20 ವರ್ಷಗಳಿಂದ ದಲಿತರು ಸರ್ಕಾರಿ ಜಮೀನು ಸಾಗುವಳಿ ಮಾಡುತ್ತಿದ್ದು ಸಾಗುವಳಿ ಚೀಟಿ ನೀಡುವಲ್ಲಿ ಹಾಗೂ ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನ ಕಲ್ಪಿಸುವಲ್ಲಿ ಹಾಗೂ ಒತ್ತುವರಿಯಾಗಿರುವ ಸ್ಮಶಾನಗಳನ್ನು ತೆರವುಗೊಳಿಸುವಲ್ಲಿ ತಾಲ್ಲೂಕು ಆಡಳಿತ  ವಿಫಲವಾಗಿದೆ. ಕೊಲೆ, ದರೋಡೆ, ಮಟ್ಕಾ, ಅಕ್ರಮ ಮರಳು ದಂಧೆ, ಮದ್ಯ ಮರಾಟ, ಜೂಜು ರಾಜಾರೋಷವಾಗಿ ನಡೆಯುತ್ತಿದೆ’ ಎಂದರು. ‘ತಾಲ್ಲೂಕಿನ ನಕ್ಕಲಹಳ್ಳಿ, ಬೇವಿನಹಳ್ಳಿ, ಕುರೂಡಿ ಗ್ರಾಮ ಪಂಚಾಯಿತಿಗಳಲ್ಲಿ ಶೇ 22.75 ನಿಧಿ ದುರುಪಯೋಗವಾಗಿದೆ. ಕೂಡಲೇ ಉನ್ನತ ಅಧಿಕಾರಿಗಳಿಂದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಜರುಗಿಸಬೇಕು’ ಎಂದು ಆಗ್ರಹಿಸಿದರು.

ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಕೆ.ಜಿ. ಲಕ್ಷ್ಮಿನಾರಾಯಣ ಮಾತನಾಡಿ, ‘ಪಟ್ಟಣದ ಆಚಾರ್ಯ ಕಾಲೇಜಿನ ಹಸಿರು ಮೈದಾನದಿಂದ  ತಾಲ್ಲೂಕು ಕಚೇರಿವರೆಗೂ ಪ್ರತಿಭಟನೆ ಮೆರವಣಿಗೆ ನಡೆಸುವ ಉದ್ದೇಶ ಇತ್ತು. ತಹಶೀಲ್ದಾರ್ ಹಾಗೂ ಪೊಲೀಸರು ಚುನಾವಣೆ ನೀತಿ ಸಂಹಿತೆ ಇದೆ ಎಂದು ಮೆರವಣೆಗೆ ರದ್ದುಪಡಿಸಿದ್ದು ಇದು ಪ್ರಜಾಪ್ರಭುತ್ವದ ಕಗ್ಗೊಲೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 
 
ಪ್ರತಿಭಟನಾಕಾರರು ತಹಶೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ದಲಿತ ಸಂಘರ್ಷ ಸಮಿತಿ ಮುಖಂಡ ರಾದ ಎಚ್.ಎಸ್. ನಂಜಂಡಪ್ಪ, ಸೋಮಶೇಖರ್, ವಿ. ನಾರಾಐಣಸ್ವಾಮಿ, ವೆಂಕಟರವಣಪ್ಪ, ಭಾಗ್ಯಮ್ಮ, ವೆಂಕಟೇಶ್, ಮಂಜುನಾಥ್, ಅಂಜಿ ನಪ್ಪ, ಕೇಶವ, ಚಲಪತಿ, ಗಂಗಾಧರಪ್ಪ, ಗೋಪಾಲ್, ಕದಿರಪ್ಪ, ನರಸಿಂಹಪ್ಪ, ಶಂಕರಪ್ಪ, ಚಿಕ್ಕಗಂಗಪ್ಪ, ಮೂರ್ತಿ, ಬಾಲಕೃಷ್ಣ, ರಾಮಕೃಷ್ಣಪ್ಪ, ಶಿವಣ್ಣ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.