ADVERTISEMENT

ದೇಶ ಕಂಡ ಅದ್ವಿತೀಯ ಎಂಜಿನಿಯರ್ ವಿಶ್ವೇಶ್ವರಯ್ಯ

ಸಂಸ್ಮರಣಾ ದಿನ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಿ.ಎನ್.ಲಲಿತಾ ನರಸಿಂಹಮೂರ್ತಿ ಅಭಿಮತ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 6:32 IST
Last Updated 8 ಫೆಬ್ರುವರಿ 2017, 6:32 IST
ಚಿಕ್ಕಬಳ್ಳಾಪುರ ತಾಲ್ಲೂಕು ಮುದ್ದೇನಹಳ್ಳಿಯಲ್ಲಿ ಮಂಗಳವಾರ ನಡೆದ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು
ಚಿಕ್ಕಬಳ್ಳಾಪುರ ತಾಲ್ಲೂಕು ಮುದ್ದೇನಹಳ್ಳಿಯಲ್ಲಿ ಮಂಗಳವಾರ ನಡೆದ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು   

ಚಿಕ್ಕಬಳ್ಳಾಪುರ: ‘ಬಡ ಕುಟುಂಬದಲ್ಲಿ ಹುಟ್ಟಿ, ಕಷ್ಟಪಟ್ಟು ಓದಿ ಅಸಾಧಾರಣ ಪಾಂಡಿತ್ಯ ಪಡೆದಿದ್ದ ಸರ್‌ ಎಂ.ವಿಶ್ವೇಶ್ವರಯ್ಯ ಅವರು ಮೈಸೂರಿನ ದಿವಾನರಾಗಿ  ಮಾಡಿದ ಸಾಧನೆ ಅದ್ವಿತೀಯವಾದುದು’ ಎಂದು ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಿ.ಎನ್.ಲಲಿತಾ ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಮುದ್ದೇನಹಳ್ಳಿಯಲ್ಲಿ ಮಂಗಳವಾರ ಬೆಂಗಳೂರಿನ ಅನಿಕೇತನ ಸಾಂಸ್ಕೃತಿಕ ಸಂಸ್ಥೆ, ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಮತ್ತು ಕೋಲಾರ ರೋಟರಿ ಕ್ಲಬ್‌ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿ ಜೀವನದಿಂದಲೇ ಆದರ್ಶ ವ್ಯಕ್ತಿತ್ವ ರೂಢಿಸಿಕೊಂಡಿದ್ದ ವಿಶ್ವೇಶ್ವರಯ್ಯ ಅವರು ನುಡಿದಂತೆ ನಡೆದವರು. ಶಿಸ್ತು ಹಾಗೂ ಕರ್ತವ್ಯ ಪಾಲನೆಯಲ್ಲಿ ಇನ್ನೊಬ್ಬರಿಗೆ ಮಾದರಿಯಂತೆ ಬದುಕಿದ ಅವರು ಎಂಜಿನಿಯರಿಂಗ್‌ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಅಪಾರವಾದುದು. ಮೈಸೂರು ಪ್ರಾಂತ್ಯದಲ್ಲಿ ಇವರು ಮಾಡಿರುವ ಸಾಧನೆಯನ್ನು ನೋಡಿ ಬರುವುದೇ ಒಂದು ವಿಶೇಷ ಅನುಭವ’ ಎಂದರು.

‘ಮಂಡ್ಯ ಜಿಲ್ಲೆಯಲ್ಲಿ ನಿರ್ಮಿಸಿರುವ ಕೃಷ್ಣರಾಜ ಸಾಗರ ಆಣೆಕಟ್ಟೆ ಲಕ್ಷಾಂತರ ರೈತರಿಗೆ ವರದಾನವಾಗಿದೆ. ಇಂದಿಗೂ ಆ ಭಾಗದ ಜನತೆ ವಿಶ್ವೇಶ್ವರಯ್ಯ ಅವರನ್ನು ದೇವರೆಂದು ಪೂಜಿಸುತ್ತಾರೆ. ಆ ಜಲಾಶಯದ ಗುಣಮಟ್ಟ ಕಂಡು ಇಡೀ ವಿಶ್ವವೇ ಬೆರಗುಗೊಳ್ಳುತ್ತಿದೆ. ಹೈದರಾಬಾದ್‌ ಸಮೀಪದ ಮೂಸಿ ನದಿಗೆ ಅಣೆಕಟ್ಟು ನಿರ್ಮಿಸುವಲ್ಲಿ ವಿಶ್ವೇಶ್ವರಯ್ಯ ಅವರು ಪ್ರಮುಖ ಪಾತ್ರ ವಹಿಸಿದ್ದರು’ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಕೈವಾರ ಶ್ರೀನಿವಾಸ್ ಮಾತನಾಡಿ, ‘ನಾಡಿನ ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆಪಡುವಂತೆ ಕನ್ನಡ ಸಾಹಿತ್ಯ ಪರಿಷತ್‌ನ್ನು ಸ್ಥಾಪಿಸಿದ ಕೀರ್ತಿ ವಿಶ್ವೇಶ್ವರಯ್ಯ ಅವರಿಗೆ ಸಲ್ಲುತ್ತದೆ.

ಕನ್ನಡಿಗರ ಆರ್ಥಿಕ ಸಬಲೀಕರಣದ ಉದ್ದೇಶದಿಂದ ಅಂದೇ ಕೈಗಾರಿಕೀಕರಣಕ್ಕೆ ನಾಂದಿ ಹಾಡಿದ ಅವರು ಸೋಪು, ಲ್ಯಾಂಪ್ ಕಾರ್ಖಾನೆ, ಕಾಗದ, ಕಬ್ಬಿಣ, ಸಕ್ಕರೆ ಮುಂತಾದ ಕಾರ್ಖಾನೆಗಳನ್ನು ಸ್ಥಾಪಿಸಿ ನಿರುದ್ಯೋಗ ನಿವಾರಣೆಗೆ ಶ್ರಮಿಸಿದವರು’ ಎಂದರು.

ಅನಿಕೇತನ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೆ.ಮುನಿಕೃಷ್ಣಪ್ಪ ಮಾತನಾಡಿ, ‘ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಉತ್ತಮ ಆಶಯದೊಂದಿಗೆ ವಿದ್ಯಾಭ್ಯಾಸ ಮಾಡಿ ಹಲವು ಸಾಧನೆಗಳನ್ನು ಮಾಡಿದ ವಿಶ್ವೇಶ್ವರಯ್ಯ ನಮ್ಮೆಲ್ಲರ ಹೆಮ್ಮೆ. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ನಾವೆಲ್ಲ ದೇಶದ ಪ್ರಗತಿಗೆ ಸಹಕರಿಸಬೇಕಿದೆ’ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಚಿಕ್ಕಬಳ್ಳಾಪುರ ತಾಲ್ಲೂಕು ಘಟಕದ ಅಧ್ಯಕ್ಷ ಮಂಚನಬಲೆ ಶ್ರೀನಿವಾಸ್, ರೋಟರಿ ಕ್ಲಬ್, ಕೋಲಾರ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ರಾಮಚಂದ್ರಪ್ಪ, ಮುದ್ದೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಎಂ.ವಿ.ಲಕ್ಷ್ಮಿನರಸಿಂಹ, ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀನಿವಾಸ್, ಹಿರಿಯ ಸಾಹಿತಿ ಗೋಪಾಲಗೌಡ ಕಲ್ವಮಂಜಲಿ, ಸಾಹಿತಿಗಳಾದ ಸುಭಾನ್ ಪ್ರಿಯ, ಕೋಗಿಲಹಳ್ಳಿ ಕೃಷ್ಣಪ್ಪ, ಪ್ರಭಾ ನಾರಾಯಣಗೌಡ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನಿವೇಶನದ ಭರವಸೆ
‘ಮುದ್ದೇನಹಳ್ಳಿಯಲ್ಲಿ ಕನ್ನಡ ಭವನ ನಿರ್ಮಾಣ ಮಾಡುವ ಆಶಯವನ್ನು ಹೊಂದಿದ್ದು, ಅದಕ್ಕೆ ಸೂಕ್ತ ನಿವೇಶನ ದೊರೆತರೆ ಆದಷ್ಟು ಬೇಗ ಭವನ ನಿರ್ಮಾಣ ಮಾಡಲಾಗುವುದು’ ಎಂದು ಕೈವಾರ ಶ್ರೀನಿವಾಸ್ ಅವರ ಮನವಿಗೆ ಪ್ರತಿಕ್ರಿಯಿಸಿದ, ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಾ ನರಸಿಂಹ ಮೂರ್ತಿ ಅವರು  ಕನ್ನಡ ಭವನಕ್ಕೆ ನಿವೇಶನ ಮಂಜೂರು ಮಾಡುವುದಾಗಿ ಆಶ್ವಾಸನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT