ADVERTISEMENT

ನಗರಕ್ಕೆ ಚೆಂದದ ಗಣಪ ಬಂದ

ಗಣೇಶ ಹಬ್ಬಕ್ಕೆ ಮೂರು ವಾರ ಬಾಕಿ: ಬರದ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2015, 10:25 IST
Last Updated 31 ಆಗಸ್ಟ್ 2015, 10:25 IST

ಚಿಕ್ಕಬಳ್ಳಾಪುರ: ಗೌರಿಗಣೇಶ ಹಬ್ಬದ ಆಚರಣೆಗೆ ಇನ್ನೂ ಮೂರು ವಾರ ಬಾಕಿಯಿದ್ದು, ಆಗಲೇ ಗಣೇಶನ ಮೂರ್ತಿಗಳು ಕಾಣಿಸಿಕೊಳ್ಳತೊಡಗಿವೆ. ನಗರದ ಎಂ.ಜಿ.ರಸ್ತೆ ಮತ್ತು ಬಿ.ಬಿ.ರಸ್ತೆ ಬದಿಗಳಲ್ಲಿ ಸಣ್ಣಪುಟ್ಟ ಮತ್ತು ಬೃಹದಾಕಾರದ ಗಣೇಶನ ಮೂರ್ತಿಗಳು ಜನರ ಗಮನ ಸೆಳೆಯುತ್ತಿವೆ.

ನಗರದ ಬಿ.ಬಿ.ರಸ್ತೆಯ ಒಂದು ಬದಿಯಲ್ಲಿ ಕೊಲ್ಕತ್ತದ ಕಲಾವಿದರು ಚೆಂದನೆಯ ಮೂರ್ತಿಗಳನ್ನು ಸಿದ್ಧಪಡಿಸುತ್ತಿದ್ದರೆ, ಮತ್ತೊಂದು ಬದಿಯಲ್ಲಿ ಸ್ಥಳೀಯ ಕಲಾವಿದರು ಮತ್ತು ಮಾರಾಟಗಾರರು ಮೂರ್ತಿಗಳನ್ನು ರಸ್ತೆ ಪಾದಚಾರಿ ಮಾರ್ಗದಲ್ಲಿಟ್ಟು ಜನರ ಗಮನ ಸೆಳೆಯಲು ಪ್ರಯತ್ನ ನಡೆಸಿದ್ದಾರೆ.

ಚಿಕ್ಕಬಳ್ಳಾಪುರ ತಾಲ್ಲೂಕಿನ ಕೆಲ ಗ್ರಾಮಗಳಿಂದ ಅಲ್ಲದೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ವಿಜಯಪುರ ಮುಂತಾದ ಕಡೆಯಿಂದಲೂ ಬಂದಿರುವ ಮೂರ್ತಿ ತಯಾರಕರು ಮತ್ತು ಮಾರಾಟಗಾರರು ಸ್ಥಳದಲ್ಲೇ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಿಕೊಂಡು ಉಳಿದುಕೊಂಡಿದ್ದಾರೆ.

ಸುಮಾರು ಹತ್ತು ವರ್ಷಗಳಿಂದ ಚಿಕ್ಕಬಳ್ಳಾಪುರಕ್ಕೆ ಗೌರಿಗಣೇಶನ ಮೂರ್ತಿಗಳನ್ನು ತಂದು ಮಾರುತ್ತಿದ್ದೇನೆ. ಈ ಬಾರಿ ಸ್ವಲ್ಪ ಮುಂಚಿತವಾಗಿ ಮೂರ್ತಿಗಳನ್ನು ಮಾರಾಟಕ್ಕೆ ಇಟ್ಟಿದ್ದೇನೆ. ಕೆಲವರು ಮೂರ್ತಿಗಳನ್ನು ಮುಂಗಡವಾಗಿ ಕಾಯ್ದಿರಿಸುತ್ತಾರೆ. ಹಬ್ಬ ಸಮೀಪಿಸುತ್ತಿದ್ದಂತೆಯೇ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತದೆ. ಬೆಲೆಯಲ್ಲೂ ಸಹ ಏರುಪೇರು ಆಗುತ್ತದೆ ಎಂದು ಮೂರ್ತಿ ತಯಾರಕ ಎಂ.ವೆಂಟೇಶ್‌ ತಿಳಿಸಿದರು.

ಫೈಬರ್‌ ಮತ್ತು ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ ಕೆಲವರು ಮೂರ್ತಿಗಳನ್ನು ಸಿದ್ಧಪಡಿಸಿದರೆ, ಇನ್ನೂ ಕೆಲವರು ಜೇಡಿ ಮಣ್ಣಿನಿಂದ ಮೂರ್ತಿ ತಯಾರಿಸುತ್ತಾರೆ. ಪರಿಸರ ಸಂರಕ್ಷಣೆಯ ಹಿತದೃಷ್ಟಿಯಿಂದ ಬಹುತೇಕ ಮಂದಿ ಜೇಡಿ ಮಣ್ಣಿನ ಮೂರ್ತಿಗಳನ್ನೇ ಹೆಚ್ಚು ಇಷ್ಟಪಡುತ್ತಾರೆ. ಫೈಬರ್‌ ಮೂರ್ತಿಗಳು ನೀರಿನಲ್ಲಿ ಬೇಗನೇ ಕರಗುವುದಿಲ್ಲ. ಆದರೆ ಜೇಡಿ ಮಣ್ಣಿನ ಮೂರ್ತಿಗಳು ನೀರಿನಲ್ಲಿ ಬೇಗನೇ ಕರಗುತ್ತವೆ.  ಪರಿಸರಕ್ಕೂ ಯಾವುದೇ ರೀತಿ ಹಾನಿಯಾಗುವುದಿಲ್ಲ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.