ADVERTISEMENT

ನಿರ್ವಹಣೆ ಇಲ್ಲದೆ ಪಾಳುಬಿದ್ದ ನಗರಸಭೆ ಉದ್ಯಾನ

7ನೇ ವಾರ್ಡ್‌ನ ನಾಗರಿಕರಿಗೆ, ಮಕ್ಕಳಿಗೆ ದಕ್ಕದ ಪಾರ್ಕ್‌ ಭಾಗ್ಯ; ಕುಡುಕರು, ಪುಂಡರಿಗೆ ಆಶ್ರಯ ತಾಣ

ಈರಪ್ಪ ಹಳಕಟ್ಟಿ
Published 6 ಮಾರ್ಚ್ 2017, 11:31 IST
Last Updated 6 ಮಾರ್ಚ್ 2017, 11:31 IST
ನಿರ್ವಹಣೆ ಇಲ್ಲದೆ ಪಾಳುಬಿದ್ದ ನಗರಸಭೆ ಉದ್ಯಾನ
ನಿರ್ವಹಣೆ ಇಲ್ಲದೆ ಪಾಳುಬಿದ್ದ ನಗರಸಭೆ ಉದ್ಯಾನ   
ಚಿಕ್ಕಬಳ್ಳಾಪುರ: ನಗರದ 7ನೇ ವಾರ್ಡ್‌ನ ಎನ್‌.ನರಸಿಂಹಯ್ಯ ಬಡಾವಣೆಯಲ್ಲಿ ನಗರಸಭೆ ವತಿಯಿಂದ ನಿರ್ಮಿಸಿರುವ ಉದ್ಯಾನವು ನಿರ್ವಹಣೆ ಇಲ್ಲದೆ ಪಾಳು ಬಿದ್ದು, ಸಾರ್ವಜನಿಕರ ಉಪಯೋಗಕ್ಕೆ ಬರದಷ್ಟು ಹಾಳಾಗಿ ಹೋಗಿದೆ. 
 
ಮುಖ್ಯಮಂತ್ರಿಗಳ ಸಣ್ಣ ಮತ್ತು ಮದ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯ (ಸಿಎಂಎಸ್ಎಂಟಿಡಿಪಿ) 2009–10ನೇ ಸಾಲಿನ ಅನುದಾನದಡಿ ಈ ಉದ್ಯಾನವನ್ನು ನಿರ್ಮಿತಿ ಕೇಂದ್ರ ನಿರ್ಮಾಣ ಮಾಡಿತ್ತು. ಆರಂಭದ ಕೆಲ ದಿನಗಳು ನಳನಳಿಸುತ್ತಿದ್ದ ಉದ್ಯಾನ ಬಳಿಕ ದಿನೇ ದಿನೇ ಕಳೆಗುಂದುತ್ತ, ಇದೀಗ ಕಳೆ ಬೆಳೆದು ಅಧ್ವಾನಗೊಂಡಿದೆ. 
 
ಸುತ್ತಲಿನ ಮಕ್ಕಳು ಸಂಭ್ರಮಿಸಬೇಕಾಗಿದ್ದ, ಸಾರ್ವಜನಿಕರ ವಾಯು ವಿಹಾರಕ್ಕೆ ಬಳಕೆಯಾಗಬೇಕಿದ್ದ ಉದ್ಯಾನ ಶಿಥಿಲಗೊಂಡು ಕಳಚಿ ಬೀಳುವ ಮನೆಯಂತಾಗಿದೆ. ಮಕ್ಕಳ ಮನರಂಜನೆಗಾಗಿ ಇಟ್ಟಿರುವ ಸಾಮಗ್ರಿಗಳು ತುಕ್ಕು ಹಿಡಿದು, ಮುರಿದು ಹಾಳಾಗಿ ಹೋಗಿವೆ. ಹಸಿರಿನ ವಾತಾವರಣದಿಂದ ಕೂಡಿರಬೇಕಾಗಿದ್ದ ಉದ್ಯಾನ ಇವತ್ತು ಅವ್ಯವಸ್ಥೆಯ ತಾಣವಾಗಿದೆ.
 
ಉದ್ಯಾನದಲ್ಲಿ ಹುಲ್ಲು, ಗಿಡಗಂಟಿಗಳು ಬೆಳೆದು ನಿಂತಿವೆ. ಹಾವು, ಚೇಳುಗಳು ಕಾಣಿಸಿಕೊಳ್ಳುತ್ತಿವೆ. ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯಲಾಗುತ್ತಿದೆ. ಹೀಗಾಗಿ ಸುತ್ತಲಿನ ಮಕ್ಕಳು ಇತ್ತ ತಿರುಗಿ ಕೂಡ ನೋಡುವುದಿಲ್ಲ. ಅದಕ್ಕಾಗಿ ಸ್ಥಳೀಯ ನಾಗರಿಕರಂತೂ ನಗರಸಭೆಯ ಅಧಿಕಾರಿಗಳಿಗೆ ನಿತ್ಯವು ಶಪಿಸುವಂತಾಗಿದೆ. 
 
ರಾತ್ರಿ ಸಮಯ ಕುಡುಕರು, ಪುಂಡರಿಗೆ ಆಶ್ರಯ ತಾಣವಾಗಿರುವ ಉದ್ಯಾನದೊಳಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇಲ್ಲ. ‘ಹೇಳುವವರಿಲ್ಲ ಮನೆ ಹಾಳು ಬಿತ್ತು’ ಎನ್ನುವಂತಾಗಿದೆ ಸದ್ಯ ಪಾರ್ಕ್‌ನ ಸ್ಥಿತಿ. ನಗರಸಭೆಯವರಂತೂ ಈ ಉದ್ಯಾನವನ್ನೇ ಮರೆತು ಬಿಟ್ಟಿದ್ದಾರೆ. ಒಪ್ಪವಾಗಿ ಇಟ್ಟುಕೊಳ್ಳುವಂತೆ ಸಾಕಷ್ಟು ಬಾರಿ ಹೇಳಿದರೂ ಪ್ರಯೋಜನವಾಗಲಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ. 
 
‘ಒಂದೇ ಒಂದು ದಿನ ನಗರಸಭೆಯವರು ಇತ್ತ ತಲೆ ಹಾಕಿದ್ದು ನಾವು ನೋಡಿಲ್ಲ. ನಾವೇ ದಿನಾಲೂ ಪಾರ್ಕ್‌ನಲ್ಲಿರುವ ಕೆಲ ಗಿಡಗಳಿಗೆ ನೀರು ಹಾಕುತ್ತೇವೆ. ಮೊದಲೇ ನಗರದಲ್ಲಿ ಗಿಡಗಳು ಇಲ್ಲದೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಉದ್ಯಾನವನ್ನು ಚೆನ್ನಾಗಿ ನಿರ್ವಹಣೆ ಮಾಡುವ ಮೂಲಕ ಸಾರ್ವಜನಿಕರಿಗೆ ಉತ್ತಮ ಪರಿಸರ ನಿರ್ಮಿಸಿಕೊಡಬೇಕಾದವರು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ರಾಜು.
 
‘ನಗರದಲ್ಲಿ ನಗರಸಭೆಗೆ ಸೇರಿದ 20ಕ್ಕೂ ಅಧಿಕ ಉದ್ಯಾನಗಳಿವೆ. ಆ ಪೈಕಿ ಚೆನ್ನಯ್ಯ ಪಾರ್ಕ್‌ ಬಿಟ್ಟರೆ ಉಳಿದಂತೆ ಯಾವ ಉದ್ಯಾನ ಕೂಡ ಸಾರ್ವಜನಿಕರು ತಿರುಗಿ ನೋಡುವ ಸ್ಥಿತಿಯಲ್ಲಿ ಇಲ್ಲ. ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಿಸುವ ಉದ್ಯಾನಗಳೇ ಸಾರ್ವಜನಿಕರ ಬಳಕೆಗೆ ಸಿಗುತ್ತಿಲ್ಲ. ಇದು ದುರಂತವಲ್ಲದೆ ಮತ್ತೇನು’ ಎಂದು ಪ್ರಶ್ನಿಸುತ್ತಾರೆ ವಿಶ್ವೇಶ್ವರಯ್ಯ ಬಡಾವಣೆ ನಿವಾಸಿ ಮಂಜುನಾಥ್. 
 
‘ಮನೆ ಪಕ್ಕ ಹಾಳು ಬಿದ್ದ ಪಾರ್ಕ್‌ ಇರುವುದರಿಂದ ಇಲ್ಲಿಗಳ ಕಾಟ ಹೆಚ್ಚಾಗಿದೆ. ನಗರಸಭೆಯವರಿಗೆ ಉದ್ಯಾನದ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಹೇಳಿದರೆ ಕಿವಿ ಮೇಲೆ ಹಾಕಿಕೊಳ್ಳುವುದಿಲ್ಲ. ನಾವೇ ಯಾರಿಗಾದರೂ ನೂರೋ ಇನ್ನೋರೊ ಕೊಟ್ಟು ಆಗಾಗ ಪಾರ್ಕ್‌ನಲ್ಲಿರುವ ಕಸ ಸ್ವಚ್ಛಗೊಳಿಸುತ್ತೇವೆ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಲಕ್ಷ್ಮೀ.
 
ಕೂಡಲೇ ಪಾರ್ಕ್‌ ಸ್ವಚ್ಛಗೊಳಿಸುವ ಜತೆಗೆ ಹಾಳಾಗಿ ಹೋಗಿರುವ ಮಕ್ಕಳ ಮನರಂಜನೆ ಮತ್ತು ಆಟಿಕೆ ಸಾಮಗ್ರಿಗಳನ್ನು ಸರಿಪಡಿಸಬೇಕು. ಆಸನವ್ಯವಸ್ಥೆ ಮಾಡಿಸಬೇಕು. ವಿವಿಧ ಬಗೆಯ ಗಿಡಗಳನ್ನು ನಾಟಿ ಮಾಡಿಸುವ ಜತೆಗೆ ಅವುಗಳ ನಿರ್ವಹಣೆ ಕಾಳಜಿ ತೋರಬೇಕು. ಸ್ಥಳೀಯರ ವಾಯುವಿಹಾರಕ್ಕೆ ಉದ್ಯಾನವನ್ನು ಸಜ್ಜುಗೊಳಿಸಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ. 
 
ಸ್ಥಳೀಯ ನಗರಸಭೆ ಸದಸ್ಯರ ನಿರ್ಲಕ್ಷ್ಯ ಮನೋಭಾವದಿಂದ ನಾಗರಿಕರು ಉದ್ಯಾನ ಸೌಲಭ್ಯದಿಂದ ವಂಚಿತರಾಗಬೇಕಾಗಿ ಬಂದಿದೆ. ಉದ್ಯಾನ ಅಭಿವೃದ್ಧಿ ವಿಚಾರವಾಗಿ ಯಾರೂ ಮಾತನಾಡುತ್ತಿಲ್ಲ.
ನಾಗರಾಜ್‌, 7ನೇ ವಾರ್ಡ್ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.