ADVERTISEMENT

ನೀರಿನ ಸಮಸ್ಯೆ: ಎಚ್ಚರ ವಹಿಸಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2017, 10:55 IST
Last Updated 11 ಏಪ್ರಿಲ್ 2017, 10:55 IST
ನೀರಿನ ಸಮಸ್ಯೆ: ಎಚ್ಚರ ವಹಿಸಿ
ನೀರಿನ ಸಮಸ್ಯೆ: ಎಚ್ಚರ ವಹಿಸಿ   

ಬಾಗೇಪಲ್ಲಿ: ತಾಲ್ಲೂಕಿನ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವವಾಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಆರ್.ನರೇಂದ್ರಬಾಬು ಅಧಿಕಾರಿಗಳಿಗೆ ಸಲಹೆ ನೀಡಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ತಾಲ್ಲೂಕಿನಲ್ಲಿ ಬರ ಆವರಿಸಿರುವುದರಿಂದ ಅಧಿಕಾರಿಗಳು ಸಮಯ ಪ್ರಜ್ಞೆಯಿಂದ ಕಾರ್ಯನಿರ್ವಹಿಸಬೇಕು.  ನೀರಿನ ಸಮಸ್ಯೆ ಬಗ್ಗೆ ಸಾರ್ವಜನಿಕರಿಂದ ದೂರು ಬರದಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದರು.

ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಯಾವ ಕ್ರಮ ಕೈಗೊಂಡಿದ್ದೀರಾ ಎಂದು ಒಳಚರಂಡಿ ಮತ್ತು ಕುಡಿಯುವ ನೀರು ಇಲಾಖೆಯ ಸಹಾಯಕ ಎಂಜಿನಿಯರ್‌ ರಾಮಲಿಂಗಾರೆಡ್ಡಿ  ಅವರನ್ನು ಪ್ರಶ್ನಿಸಿದರು. 

ADVERTISEMENT

ಇದಕ್ಕೆ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿ, ‘ಬೆಸ್ಕಾಂ ಇಲಾಖೆ ಹೊಸ ಕೊಳವೆಬಾವಿಗಳಿಗೆ ಸಕಾಲಕ್ಕೆ ವಿದ್ಯುತ್  ಸಂಪರ್ಕ ನೀಡುತ್ತಿಲ್ಲ.  ವಿದ್ಯುತ್ ಅಭಾವದಿಂದ ಹಲವು ಕಡೆಗಳಲ್ಲಿ ತೊಂದರೆಯಾಗುತ್ತಿದೆ’ ಎಂದು ತಿಳಿಸಿದರು.

ಬೆಸ್ಕಾಂ ಅಧಿಕಾರಿಯೊಬ್ಬರು ಮಧ್ಯ ಪ್ರವೇಶಿಸಿ,  ಮತ್ತೊಂದು ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಾದರೆ ತಡವಾಗುತ್ತದೆ ಎಂದು ತಿಳಿಸಿದರು.ಪಟ್ಟಣದ ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌಧ ಸಮೀಪ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ನಿವೇಶನ ಗುರುತಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ತಾಲ್ಲೂಕಿನ ಗೂಳೂರು ಮತ್ತು ಚೇಳೂರು ಹೋಬಳಿ ಕೇಂದ್ರಗಳಲ್ಲಿ ಜನ ಔಷಧಿ ಕೇಂದ್ರಗಳನ್ನು ತೆರೆಯಲು ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.  ಶೇ 98 ರಷ್ಟು ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ಹಾಕಲಾಗಿದೆ ಎಂದು ತಾಲ್ಲೂಕು ಆರೋಗ್ಯ ಆಡಳಿತ ಅಧಿಕಾರಿ ಡಾ.ಸತ್ಯನಾರಾಯಣರೆಡ್ಡಿ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಸರಸ್ವತಮ್ಮ ಶಿವರಾಮರೆಡ್ಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎ.ಮಂಜುನಾಥ,  ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ.ಈಶ್ವರಪ್ಪ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ತೇಜಾನಂದರೆಡ್ಡಿ, ತಾಲ್ಲೂಕು ಪಂಚಾಯಿತಿ ಸದಸ್ಯ ಶ್ರೀರಾಮ ನಾಯಕ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.