ADVERTISEMENT

ನೂತನ ಕಟ್ಟಡಕ್ಕೆ ಮಾರಾಟ ಮಳಿಗೆಗಳ ಸ್ಥಳಾಂತರ

ನಗರಸಭೆಯಿಂದ ಮಾಂಸದ ಅಂಗಡಿ ತೆರವು ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2014, 10:37 IST
Last Updated 27 ನವೆಂಬರ್ 2014, 10:37 IST

ಚಿಕ್ಕಬಳ್ಳಾಪುರ: ನಗರದ ಸಂತೆ ಮಾರುಕಟ್ಟೆ ಬೀದಿಯ ಹೊರಾವರಣದಲ್ಲಿ ಬುಧವಾರ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ದಿಢೀರ್‌ ತೆರವು ಕಾರ್ಯಾಚರಣೆ ನಡೆಸಿ ಮಾಂಸ ಮಾರಾಟ ಮಳಿಗೆಗಳನ್ನು ಸುಸಜ್ಜಿತ ವಾಣಿಜ್ಯ ಸಂಕೀರ್ಣಕ್ಕೆ ಸ್ಥಳಾಂತರಿಗೊಳಿಸಿದರು. ಹೊರಾ­ವರ­ಣ­ದಲ್ಲಿದ್ದ 8ಕ್ಕೂ ಹೆಚ್ಚು ಮಾರಾಟ ಮಳಿಗೆ­ಗಳನ್ನು ತೆರವುಗೊಳಿಸಿದ ಅವರು ನೂತನ ಕಟ್ಟಡ ಸಂಕೀರ್ಣದಲ್ಲಿ ವ್ಯಾಪಾರ ಮುಂದುವರೆಸುವಂತೆ ಸೂಚಿಸಿದರು.

ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 2ರವರೆಗೆ ನಡೆದ ತೆರವು ಕಾರ್ಯಾಚರಣೆಯಲ್ಲಿ ಹೊರಾ­ವ­ರಣದ ಸ್ಥಳವನ್ನು ನಗರಸಭೆ ವಶಕ್ಕೆ ತೆಗೆದು­ಕೊಂಡು ಮಳಿಗೆಗೆ  ಅಳವಡಿಸಲಾಗಿದ್ದ ಶೀಟು, ಪೈಪ್‌ಗಳನ್ನು ಪಡೆದುಕೊಳ್ಳಲಾಯಿತು. ಈ ಸ್ಥಳದಲ್ಲಿ ಯಾರೂ ಮಾಂಸ ಮಾರಾಟ ಮಾಡದಂತೆ ಸೂಚನೆಯನ್ನೂ ನೀಡಲಾಯಿತು.

ಹೊರಾರವಣದಲ್ಲಿ ಮಾಂಸ ಮಾರಾಟ ಮಾಡದಂತೆ ಕಳೆದ ಐದಾರು ವರ್ಷಗಳಿಂದ ವ್ಯಾಪಾರಸ್ಥರಿಗೆ ಸೂಚಿಸುತ್ತಿದ್ದರೂ ಪ್ರಯೋಜನ­ವಾಗಿರಲಿಲ್ಲ. ಮಾಂಸ ಮಾರಾಟಕ್ಕೆಂದೇ ಮಳಿಗೆಗಳನ್ನು ನಿರ್ಮಿಸಿದರೂ ವ್ಯಾಪಾರಿಗಳು ಅಲ್ಲಿ ಹೋಗಲಿಲ್ಲ. ಹೀಗಾಗಿ ತೆರವು ಕಾರ್ಯಾ­ಚರಣೆ ನಡೆಸಿ ಹೊರಾವರಣವನ್ನು ವಶಪಡಿಸಿ­ಕೊಂ­ಡೆವು ಎಂದು ನಗರಸಭೆಯ ಪರಿಸರ ಎಂಜಿನಿಯರ್‌ ಈರಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಹೊರಾವರಣದ ಸ್ಥಳವನ್ನು ಹಣ್ಣು– ತರಕಾರಿ ವ್ಯಾಪಾರಸ್ಥರಿಗೆ ನೀಡಬೇಕೆ ಅಥವಾ ವಾಹನಗಳ ನಿಲುಗಡೆಗೆ ಬಳಸಬೇಕೆ ಎಂಬುದರ ಬಗ್ಗೆ ಚಿಂತನೆ ಮಾಡಲಾಗುತ್ತಿದೆ. ನಗರಸಭೆ ಆಯುಕ್ತರು ನೀಡುವ ಸೂಚನೆ ಮೇರೆಗೆ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದರು.

ಸರಿಯಾದ ವ್ಯವಸ್ಥೆಯಿಲ್ಲ: ನೂತನ ಕಟ್ಟಡ ಸಂಕೀರ್ಣದಲ್ಲಿ ವ್ಯಾಪಾರ ವಹಿವಾಟು ಆರಂಭಿಸಿದ ಮಾಂಸ ಮಾರಾಟಗಾರರು ಮಳಿಗೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲದಿರುವ ಬಗ್ಗೆ ದೂರಿದರು. ಕಟ್ಟಡ ಸಂಕೀರ್ಣದಲ್ಲಿ ಎಲ್ಲಿಯೂ ಕೂಡ ಕಿಟಕಿ ಸೌಕರ್ಯ ಕಲ್ಪಿಸಿಲ್ಲ. ವಿದ್ಯುತ್ ಪೂರೈಕೆಯೂ ಇಲ್ಲ. ಮಳಿಗೆಗಳು ತುಂಬ ಇಕ್ಕಟ್ಟಾಗಿದ್ದು, ವ್ಯಾಪಾರ ನಡೆಸುವುದು ಕಷ್ಟ, ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ ಎಂದು ಮಾಂಸ ವ್ಯಾಪಾರಸ್ಥರು ದೂರಿದರು.

ಮಳಿಗೆಗಳನ್ನು ಪಡೆಯಲು ಹಣ ಪಾವತಿಸಿದ್ದೇವೆ. ಸೌಕರ್ಯ ಕಲ್ಪಿಸುವ ಬಗ್ಗೆ ನಗರಸಭೆಯವರು ಭರವಸೆ ನೀಡುತ್ತಿದ್ದಾರೆ ಹೊರತು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ನಮ್ಮ ವ್ಯಾಪಾರಕ್ಕೆ ಆಗುವ ತೊಂದರೆಗೆ ನಗರಸಭೆಯೇ ಹೊಣೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.