ADVERTISEMENT

ನೂತನ ಜಿಲ್ಲಾಸ್ಪತ್ರೆಯಲ್ಲಿ ಓಪಿಡಿ ಕಾರ್ಯಾರಂಭ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2017, 10:06 IST
Last Updated 7 ಏಪ್ರಿಲ್ 2017, 10:06 IST

ಚಿಕ್ಕಬಳ್ಳಾಪುರ: ನಗರದ ನೂತನ ಜಿಲ್ಲಾಸ್ಪತ್ರೆಯಲ್ಲಿ ಗುರುವಾರ ಹೊರ ರೋಗಿಗಳ ವಿಭಾಗದ (ಓಪಿಡಿ) ಸೇವೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆ.ಮಂಜುನಾಥ್ ಚಾಲನೆ ನೀಡಿದರು.

ಬಳಿಕ ಅವರು ಇಡೀ ಆಸ್ಪತ್ರೆಯ ಕಟ್ಟಡವನ್ನು ಒಂದು ಸುತ್ತು ಹಾಕಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯಕುಮಾರ್ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರವಿಕುಮಾರ್ ಅವರಿಂದ ಮಾಹಿತಿ ಪಡೆದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜಿಲ್ಲಾ ಕೇಂದ್ರಕ್ಕೆ ಇಂತಹದೊಂದು ಆಸ್ಪತ್ರೆಯ ಅಗತ್ಯವಿತ್ತು. ಅದೀಗ ನನಸಾಗಿದೆ. ಈ ಆಸ್ಪತ್ರೆಗೆ ಅಗತ್ಯವಾದ ಮಾನವ ಸಂಪನ್ಮೂಲವನ್ನು ನೇಮಕ ಮಾಡಿಕೊಳ್ಳಲು ಅಧಿಕಾರಿಗಳು ಆದ್ಯತೆ ನೀಡಬೇಕಿದೆ. ಎರಡು ತಿಂಗಳ ಒಳಗೆ ಹಂತ ಹಂತವಾಗಿ ಪೂರ್ಣ ಪ್ರಮಾಣದಲ್ಲಿ ಆಸ್ಪತ್ರೆ ಕಾರ್ಯಾರಂಭ ಮಾಡಲು ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ’ಎಂದು ಹೇಳಿದರು.

ADVERTISEMENT

ಡಾ.ರವಿಕುಮಾರ್ ಮಾತನಾಡಿ, ‘₹ 32 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಿಸಲಾಗಿದೆ. ಇದೀಗ ಅಷ್ಟೇ ಮೊತ್ತದ ಯಂತ್ರೋಪಕರಣ, ಪೀಠೋಪಕರಣಗಳ ಅಗತ್ಯವಿದೆ. ಈಗಾಗಲೇ ₹2 ಕೋಟಿ ಮೊತ್ತದ ಯಂತ್ರೋಪಕರಣಗಳು ಆಸ್ಪತ್ರೆಗೆ ಬರುತ್ತಿವೆ. ಸದ್ಯ ಇರುವ ಸಿಬ್ಬಂದಿಯಲ್ಲಿಯೇ ಆಸ್ಪತ್ರೆ ನಡೆಸಲಾಗುತ್ತದೆ. ಮುಂದಿನ ದಿನಗಳಲ್ಲಿ ಅಗತ್ಯ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುತ್ತದೆ’ಎಂದು ತಿಳಿಸಿದರು.

‘ಮೇ ಅಂತ್ಯದೊಳಗೆ ಹಳೆ ಜಿಲ್ಲಾಸ್ಪತ್ರೆಯನ್ನು ನವೀಕರಿಸಲು ಹಸ್ತಾಂತರಿಸಬೇಕಿದೆ. ಅದು ಮುಂದಿನ ವರ್ಷದ ಒಳಗೆ 135 ಹಾಸಿಗೆಯುಳ್ಳ ತಾಯಿ ಮತ್ತು ಮಗು ಆರೈಕೆ ಆಸ್ಪತ್ರೆಯಾಗಿ ಬದಲಾಗಲಿದೆ. ಅದಕ್ಕಾಗಿಯೇ ಹೆಚ್ಚುವರಿ ಪ್ರಸೂತಿ ತಜ್ಞರನ್ನು ಅರವಳಿಕೆ, ಮಕ್ಕಳ ತಜ್ಞರು ನೇಮಕ ಮಾಡಿಕೊಳ್ಳಲಾಗುತ್ತದೆ’ ಎಂದು ತಿಳಿಸಿದರು.

‘ನೂತನ ಆಸ್ಪತ್ರೆಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಡಯಾಲಿಸಿಸ್‌ ಕೇಂದ್ರವನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದ್ದು, 12 ಯಂತ್ರಗಳ ಡಯಾಲಿಸಿಸ್‌ ಕೇಂದ್ರ ಸ್ಥಾಪನೆ ಮಾಡಲಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನವುಳ್ಳ ಸುಸಜ್ಜಿತವಾದ ಶಸ್ತ್ರಚಿಕಿತ್ಸಾ ಕೊಠಡಿಗಳು ನಿರ್ಮಾಣ ಗೊಳ್ಳುತ್ತಿವೆ. ಆಸ್ಪತ್ರೆಯ ಆವರಣದಲ್ಲಿ ನಾಗರಿಕ ಸೌಲಭ್ಯಗಳಾದ ನಂದಿನಿ ಹಾಲಿನ ಕೇಂದ್ರ, ಜನೌಷಧ ಮಳಿಗೆ, ಕ್ಯಾಂಟಿನ್, ಹಾಪ್‌ಕಾಮ್ಸ್‌ ಹಣ್ಣಿನ ಮಳಿಗೆ ತಲೆ ಎತ್ತಲಿವೆ’ ಎಂದು ಹೇಳಿದರು.

ಡಾ.ವಿಜಯಕುಮಾರ್, ‘ನೂತನ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ತಜ್ಞರು, ಮನೋರೋಗ ತಜ್ಞರು, ಚರ್ಮರೋಗ ತಜ್ಞರು, ಮೂಳೆ ತಜ್ಞರು, ನೇತ್ರ, ಮಕ್ಕಳು, ಎಆರ್‌ಟಿ (ಆ್ಯಂಟಿ ರಿಟ್ರೋವಲ್ ಥೆರಪಿ), ಸಮಗ್ರ ಆಪ್ತ ಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರ (ಐಸಿಟಿಸಿ) ಹೀಗೆ ಒಟ್ಟು 8 ವಿಭಾಗಗಳು ಸೇವೆ ಒದಗಿಸಲಿವೆ. ಇವು ಬೆಳಿಗ್ಗೆ 9 ಗಂಟೆ ಸಂಜೆ 4.30ರ ವರೆಗೆ ಕಾರ್ಯ ನಿರ್ವಹಿಸುತ್ತವೆ’ ಎಂದು ತಿಳಿಸಿದರು.

‘ಹಳೆ ಆಸ್ಪತ್ರೆಗೆ ಬರುವವರಿಗೆ ಕೂಡ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ಅಲ್ಲಿಯೂ ನಾವು ವೈದ್ಯಕೀಯ ಸೇವೆ ನೀಡುತ್ತೇವೆ.  ಹೊಸ ಆಸ್ಪತ್ರೆ ಬಳಿ 24 ಗಂಟೆಗಳ ಕಾಲ ಆಂಬುಲೆನ್ಸ್ ಒಂದನ್ನು ಸಜ್ಜಾಗಿ ಇರುತ್ತದೆ. ಅದರ ಮೂಲಕ ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಹಳೆ ಆಸ್ಪತ್ರೆಗೆ ರವಾನಿಸಲಾಗುತ್ತದೆ. ಮೇ ಅಂತ್ಯಕ್ಕೆ ಹೊಸ ಸಿಬ್ಬಂದಿ ನೇಮಕಾತಿ ಮುಗಿಯುತ್ತದೆ. ಹೊಸ ಕಟ್ಟಡದ ಸ್ವಚ್ಛತೆ ಕಾಪಾಡಿಕೊಳ್ಳಲು ಸಾರ್ವಜನಿಕರು ಕೈಜೋಡಿಸಬೇಕು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.