ADVERTISEMENT

ನೌಕರರು ವೃತ್ತಿ ಗೌರವಕ್ಕೆ ಮನ್ನಣೆ ನೀಡಿ

ಗ್ರಾಮ ಪಂಚಾಯಿತಿ ನೌಕರರಿಗೆ ಅಭಿನಂದನಾ ಸಮಾರಂಭದಲ್ಲಿ ಶಾಸಕ ಡಾ.ಕೆ.ಸುಧಾಕರ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 8:29 IST
Last Updated 21 ಮಾರ್ಚ್ 2018, 8:29 IST

ಚಿಕ್ಕಬಳ್ಳಾಪುರ: ನೌಕರರು ಸಣ್ಣ ಹುದ್ದೆ ಎಂಬ ಸಂಕುಚಿತ ಮನೋಭಾವ ಬದಿಗಿಟ್ಟು ವೃತ್ತಿ ಗೌರವವನ್ನು ಎತ್ತಿಹಿಡಿದಾಗ ಮಾತ್ರ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಶಾಸಕ ಡಾ.ಕೆ.ಸುಧಾಕರ್‌ ತಿಳಿಸಿದರು.

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾ ಯಿತಿ ಸಹಯೋಗದಲ್ಲಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ನೌಕರರಿಗೆ ಅಭಿ ನಂದನಾ ಸಮಾರಂಭದಲ್ಲಿ ಮಾತನಾಡಿದರು.

ಅನೇಕ ನೌಕರರು ಮಾಡುವ ವೃತ್ತಿಯಲ್ಲಿ ಬೆಳೆಸಿಕೊಂಡಿರುವ ಕೀಳಿ ರಿಮೆ ಸಮಾಜಕ್ಕೆ ದೊಡ್ಡ ಕಂಟಕ. ವೃತ್ತಿ ಸ್ಥಾನಮಾನಕ್ಕಿಂತ ಕಾಯಕ ನಿಷ್ಠೆ, ಪ್ರಾಮಾಣಿಕತೆ ಮುಖ್ಯ. ಆಗ ಗೌರವ ಸಿಗುತ್ತದೆ. ತಾತ್ಸರ ಭಾವನೆಯಿಂದ ವೃತ್ತಿಯಲ್ಲಿ ಬೇಜಾಬ್ದಾರಿತನ ತೋರಿದರೆ ಸಮಾಜ ಎಂದಿಗೂ ಕ್ಷಮಿಸದು’ ಎಂದು ಹೇಳಿದರು.

ADVERTISEMENT

‘ಸಮಾಜದಲ್ಲಿ ಪ್ರತಿಯೊಬ್ಬರು ನೌಕರರಿಗೆ ಗೌರವ ಕೊಡುವ ಸೌಜನ್ಯ ಬೆಳೆಸಿಕೊಳ್ಳಬೇಕು. ಅದೇ ರೀತಿಯಲ್ಲಿ ನೌಕರರು ಜನರೊಂದಿಗೆ ಪ್ರೀತಿ, ಸ್ನೇಹವನ್ನು ಸಂಪಾದಿಸಿಕೊಳ್ಳಬೇಕು. ಗ್ರಾಮಗಳ ಅಭಿವೃದ್ಧಿ ಹೊಣೆ ಪಿಡಿಒ ಮತ್ತು ಸಿಬ್ಬಂದಿ ಮೇಲೆ ಹೆಚ್ಚಾಗಿದೆ. ನೌಕರರು ರಾಜಕೀಯ ಪಕ್ಷಗಳ ಹಿತಾಸಕ್ತಿಗೆ ಮಣಿಯದೇ ಜನರ ಸಮಸ್ಯೆಗೆ ಸ್ಪಂದಿಸಿ, ಆತ್ಮ ಸಾಕ್ಷಿಗೆ ಅನುಗುಣವಾಗಿ ಕರ್ತವ್ಯ ನಿರ್ವಹಿ ಸಬೇಕು’ ಎಂದು ಸಲಹೆ ನೀಡಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಯಾವುದೇ ಸೇವಾ ಭದ್ರತೆ ಇಲ್ಲದೆ 20 ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ನೌಕರರನ್ನು ಕಾಯಂ ಮಾಡಿದ್ದಾರೆ. ನೌಕರರಿಗೆ ತಿಂಗಳಿಗೆ ಕನಿಷ್ಠ ₹ 13 ಸಾವಿರ ಸಂಬಳ ನೀಡುವ ಜತೆಗೆ ನಿವೃತ್ತಿ ನಂತರ ಪಿಂಚಣಿ ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ’ ಎಂದು ಅವರು ವಿವರಿಸಿದರು.

‘ಬಾಪೂಜಿ ಕೇಂದ್ರ , ಕಂದಾಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆಗೆ ಸಂಬಂಧಿಸಿದ ಸೇವೆಗಳನ್ನು ಪಂಚಾ ಯಿತಿ ಮಟ್ಟದಲ್ಲಿ ಜನರಿಗೆ ಒದಗಿಸಲು ಸರ್ಕಾರ ಕ್ರಮ ಕೈಗೊಂಡಿದೆ. ನೌಕರರು ಸಮನ್ವಯದಿಂದ ಕೆಲಸ ಮಾಡಲು ಆದ್ಯತೆ ನೀಡಬೇಕು ಎಂದು ನುಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ ಮಾತನಾಡಿ, ‘ಗ್ರಾಮೀಣ ಭಾಗದಲ್ಲಿ ಕಷ್ಟಪಟ್ಟು ದುಡಿಯುವ ಜನರಿದ್ದಾರೆ. ಜಲಗಾರ ರನ್ನು ಸರ್ಕಾರಿ ನೌಕರರನ್ನಾಗಿ ಸರ್ಕಾರ ಪರಿಗಣಿಸಿದೆ. ಬೇಸಿಗೆ ಕಾಲದಲ್ಲಿ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಜನರ ಅಗತ್ಯಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು ಎಂದು ಹೇಳಿದರು.

ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಯಲುವಹಳ್ಳಿ ಎನ್‌.ರಮೇಶ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಎಂ. ಮುನಿಯಪ್ಪ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ನಾಗೇಶ್‌, ನಗರಸಭೆ ಅಧ್ಯಕ್ಷ ಮುನಿಕೃಷ್ಣ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮರಳುಕುಂಟೆ ಕೃಷ್ಣಮೂರ್ತಿ, ನಗರಸಭೆ ಆಯುಕ್ತ ಉಮಾಕಾಂತ್‌, ತಾಲ್ಲೂಕು ಪಂಚಾಯಿತಿ ಇಒ ಸಂಜೀವಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ನಾರಾಯಣಪ್ಪ, ತಿರುಮಳಪ್ಪ ಇದ್ದರು.

**

ಗ್ರಾಮ ಪಂಚಾಯಿತಿ ಅಧಿಕಾರಿ ಗಳು ಜನರನ್ನು ಕಚೇರಿಗೆ ಅಲೆಸುವುದನ್ನು ತಪ್ಪಿಸಿ ಸಾರ್ವಜನಿಕರ ಕುಂದು ಕೊರತೆ ಬಗೆಹರಿಸಿ ಸಮಯ ಪ್ರಜ್ಞೆ ಕಾಪಾಡಬೇಕು
– ಡಾ.ಕೆ.ಸುಧಾಕರ್‌, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.