ADVERTISEMENT

ಪ್ರಯಾಣಿಕರ ಪರದಾಟ: ಎಂದು ತಪ್ಪುವುದು ಈ ಗೋಳಾಟ

ಚಿಂತಾಮಣಿಯಲ್ಲಿ ಬಸ್‌ಗಳಿಗೆ ನೆಲೆ ಇಲ್ಲ; ಜನರ ಮನವಿಗೆ ಬೆಲೆ ಇಲ್ಲ

​ಪ್ರಜಾವಾಣಿ ವಾರ್ತೆ
Published 22 ಮೇ 2015, 10:27 IST
Last Updated 22 ಮೇ 2015, 10:27 IST
ಬಸ್ ನಿಲ್ದಾಣ ಸೌಲಭ್ಯ ಇಲ್ಲದ ಕಾರಣ ಚಿಂತಾಮಣಿಯ ರಸ್ತೆಗಳಲ್ಲಿ ನಿಲ್ಲುತ್ತಿರುವ ಖಾಸಗಿ ಬಸ್‌ಗಳು.
ಬಸ್ ನಿಲ್ದಾಣ ಸೌಲಭ್ಯ ಇಲ್ಲದ ಕಾರಣ ಚಿಂತಾಮಣಿಯ ರಸ್ತೆಗಳಲ್ಲಿ ನಿಲ್ಲುತ್ತಿರುವ ಖಾಸಗಿ ಬಸ್‌ಗಳು.   

ಚಿಂತಾಮಣಿ: ಜಿಲ್ಲೆಯ ಅತಿ ದೊಡ್ಡ ನಗರ, ವಾಣಿಜ್ಯ ನಗರಿ ಎಂದು ಹೆಸರು ಗಳಿಸಿರುವ ನಗರದಲ್ಲಿ ಸಮರ್ಪಕ ನಿಲ್ದಾಣ ಸೌಲಭ್ಯವಿಲ್ಲದ ಕಾರಣ ಖಾಸಗಿ ಬಸ್‌ಗಳು ಮುಖ್ಯರಸ್ತೆಯಲ್ಲಿ ಅತ್ತಿಂದಿತ್ತ ತಿರುಗಾಡುತ್ತಿರುತ್ತವೆ.

ನಗರದ ಪೊಲೀಸ್‌ ಠಾಣೆ ಹಿಂಭಾಗದಲ್ಲಿ ಅನೇಕ ವರ್ಷಗಳಿಂದ ಖಾಸಗಿ ಬಸ್‌ಗಳು ನಿಲ್ಲುತ್ತಿದ್ದವು. ಅಂಬೇಡ್ಕರ್‌ ಭವನ ನಿರ್ಮಾಣದ ಉದ್ದೇಶದಿಂದ ಈ ಸ್ಥಳವನ್ನು ಈಚೆಗೆ ತೆರವುಗೊಳಿಸಲಾಯಿತು.

ರಾಮಕುಂಟೆ ಪ್ರದೇಶದಲ್ಲಿ ನೂತನ ಬಸ್‌ ನಿಲ್ದಾಣಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ನಗರಸಭೆ ಪೌರಾಯುಕ್ತ ಮತ್ತು ಚುನಾಯಿತ ಪ್ರತಿನಿಧಿಗಳು ಬಸ್‌ ಮಾಲೀಕರಿಗೆ ಭರವಸೆ ನೀಡಿದ್ದರು.

ಆದರೆ ಈವರೆಗೆ ಹೊಸ ಬಸ್‌ ನಿಲ್ದಾಣದಲ್ಲಿ ಯಾವುದೇ ಸೌಕರ್ಯ ಕಲ್ಪಿಸಲಿಲ್ಲ. ಬೇರೆ ಕಡೆ ನಿಲ್ದಾಣ ಸ್ಥಾಪಿಸಲು ಪ್ರಯತ್ನವನ್ನೂ ಮಾಡಲಿಲ್ಲ. ನಿಲ್ಧಾಣ ಖಾಲಿ ಮಾಡಿಸುವಾಗ ತೋರಿಸಿದ ಆಸಕ್ತಿಯನ್ನು ನಗರಸಭೆಯ ಆಡಳಿತವು ನಂತರ ತೋರಿಸುತ್ತಿಲ್ಲ. ನಮಗೂ ಅದಕ್ಕೂ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಎಂದು ಬಸ್‌ ಮಾಲೀಕರು ಆರೋಪಿಸುತ್ತಾರೆ.

ಅಪಘಾತ ಭೀತಿ: ಅಪಘಾತಕ್ಕೆ ಆಹ್ವಾನ ನೀಡುವ ರೀತಿಯಲ್ಲಿ ಖಾಸಗಿ ಬಸ್‌ಗಳು ಗುರುಭವನ, ಕೆನರಾ ಬ್ಯಾಂಕ್‌ ಹಾಗೂ ಪೆಟ್ರೋಲ್‌ ಬಂಕ್‌ಗಳ ಮುಂಭಾಗದ ರಸ್ತೆಗಳಲ್ಲಿ ನಿಲ್ಲುತ್ತಿವೆ. ಜನರು ಇಲ್ಲಿಯೇ ಬಸ್‌ಗಳಿಗೆ ಹತ್ತುವುದು– ಇಳಿಯುವುದು ಮಾಡುತ್ತಾರೆ. ಇದರಿಂದ ಮುಖ್ಯರಸ್ತೆಯಲ್ಲಿ ವಾಹನ– ಜನಸಂಚಾರಕ್ಕೆ ತೊಂದರೆಯಾಗಿದ್ದು, ಅಪಘಾತದ ಭೀತಿ ಎದುರಾಗಿದೆ.

ನಿಲ್ದಾಣಕ್ಕೆ ಬಾರದ ಬಸ್‌: ನಗರದಲ್ಲಿ ಸುಮಾರು 76 ಸಾವಿರ ಜನಸಂಖ್ಯೆ ಇದೆ. ಪ್ರತಿದಿನ ಬಂದು ಹೋಗುವವರು ಸೇರಿದರೆ ಒಟ್ಟು ಜನಸಂಖ್ಯೆ 1 ಲಕ್ಷ ದಾಟುತ್ತದೆ. ಪ್ರತಿದಿನ 180ಕ್ಕೂ ಹೆಚ್ಚು ಬಸ್‌ಗಳು ಬಂದು– ಹೋಗುತ್ತವೆ.

ಚಿತ್ರದುರ್ಗ, ತಿರುಪತಿ, ಕಡಪ, ಬೆಂಗಳೂರು ಸೇರಿದಂತೆ ದೂರದ ಊರುಗಳಿಗೆ ಹೋಗುವ ಬಸ್‌ಗಳು ನಿಲ್ದಾಣಕ್ಕೆ ಬರುತ್ತಿಲ್ಲ. ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ವಿಜಯಪುರ, ಹೊಸಕೋಟೆ, ಕೋಲಾರ, ಶ್ರೀನಿವಾಸಪುರ, ಚೇಳೂರು, ಬಾಗೇಪಲ್ಲಿ ಕಡೆಗೆ ಹೋಗುವ 50 ಬಸ್‌ಗಳು ಮಾತ್ರ ನಿಲ್ದಾಣಕ್ಕೆ ಬರುತ್ತವೆ. ಅವುಗಳಿಗೆ ನಿಲ್ದಾಣ ವ್ಯವಸ್ಥೆ ಮಾಡಲೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎನ್ನುವುದು ಮಾಲೀಕರ ದೂರು.

‘ನಿಲ್ದಾಣ ಸ್ಥಳ ಬದಲಾವಣೆಗೆ ಬಸ್ ಮಾಲೀಕರು ಒಪ್ಪುತ್ತಿಲ್ಲ. ಆದರೆ ಅವರೊಂದಿಗೆ ಸಭೆ ನಡೆಸಿ ಮನವೊಲಿಸುವ ಕೆಲಸವನ್ನು ಅಧಿಕಾರಿಗಳೂ ಮಾಡುತ್ತಿಲ್ಲ. ಯಾವುದಾದರೂ ಅನಾಹುತವಾಗಲಿ; ನಂತರ ನೋಡೋಣ ಎಂಬ ಧೋರಣೆಯನ್ನು ಅಧಿಕಾರಿಗಳು ತಾಳಿದ್ದಾರೆ’ ಎಂದು ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಮಾಮೂಲಿ ಕರಾಮತ್ತು: ಬಸ್‌ ನಿಲ್ದಾಣಕ್ಕೆ ಹೋಗದೆ ಮುಖ್ಯರಸ್ತೆಯಲ್ಲಿಯೇ ನಿಲ್ಲಿಸಿಕೊಳ್ಳುವ ಬಸ್‌ಗಳ ಕಂಡಕ್ಟರ್‌ಗಳು ದಿನಕ್ಕೆ ₹20 ಪೊಲೀಸ್ ಮಾಮೂಲಿ ನೀಡುವುದಾಗಿ ಒಪ್ಪಿಕೊಳ್ಳುತ್ತಾರೆ.   ಮಾಮೂಲಿ ಪಡೆಯುವ ಪೊಲೀಸರು ಅಪಘಾತಗಳ ಬಗ್ಗೆ ಏಕೆ ತಲೆಕೆಡಿಸಿಕೊಳ್ಳುತ್ತಾರೆ ಎಂದು ಜನರು ಪ್ರಶ್ನಿಸುತ್ತಾರೆ.

ನಗರಸಭೆಯು ಅಧಿಕೃತವಾಗಿಯೇ ರಸೀದಿ ನೀಡಿ ₹15 ಕಂದಾಯ ವಸೂಲಿ ಮಾಡುತ್ತದೆ. ಒಂದು ದಿನಕ್ಕೆ 180 ಬಸ್‌ಗಳಿಂದ ₹15ರೂಪಾಯಿ ವಸೂಲಿಯಾದರೆ ಒಂದು ವರ್ಷಕ್ಕೆ ಇದು ₹10 ಲಕ್ಷದಷ್ಟು ದೊಡ್ಡ ಮೊತ್ತವಾಗುತ್ತದೆ. ಆದರೂ ನಗರಸಭೆ ಅಧಿಕಾರಿಗಳಿಗೆ ಖಾಸಗಿ ಬಸ್‌ಗಳು ಮತ್ತು ಪ್ರಯಾಣಿಕರಿಗೆ ಸೌಕರ್ಯ ಕಲ್ಪಿಸಬೇಕು ಎನಿಸುವುದಿಲ್ಲ ಎಂದು ಪ್ರಯಾಣಿಕರು ಬೇಸರ ತೋಡಿಕೊಳ್ಳುತ್ತಾರೆ. ಈ ಕುರಿತು ಪ್ರಶ್ನಿಸಿದಾಗ ‘ಬಸ್ ನಿಲ್ದಾಣದ ಬಗ್ಗೆ ನಗರಸಭೆಯನ್ನು ಪ್ರಶ್ನಿಸಿ’ ಎಂಬುದಷ್ಟೇ ಡಿವೈಎಸ್‌ಪಿ ಸಣ್ಣತಿಮ್ಮಪ್ಪ ಅವರ ಪ್ರತಿಕ್ರಿಯೆಯಾಗಿತ್ತು.

ಮುಖ್ಯಾಂಶಗಳು
* ರಸ್ತೆ ಮೇಲೆ ನಿಲ್ಲುತ್ತಿರುವ ಖಾಸಗಿ ಬಸ್‌
* ಬಿಕೋ ಎನ್ನುತ್ತಿರುವ ನೂತನ ಬಸ್‌ ನಿಲ್ದಾಣ
*  ಪ್ರಯಾಣಿಕರ ಪರದಾಟ

ಬಾಲಕರ ಸರ್ಕಾರಿ ಪ್ರೌಢಶಾಲೆ ಮತ್ತು ಪಾಲಿಟೆಕ್ನಿಕ್‌ ರಸ್ತೆಯಲ್ಲಿ ಬಸ್‌ಗಳನ್ನು ನಿಲ್ಲಿಸುವುದರಿಂದ ಜನರಿಗೆ ತೊಂದರೆಯಾಗುತ್ತಿದೆ. ಅನಾಹುತವಾಗಿ ಯಾರಾದರೂ ಸತ್ತರೆ ಮಾತ್ರ ಅಧಿಕಾರಿಗಳು ಎಚ್ಚೆತ್ತುಕೊಳ್ಳಬಹುದು.
ಸಿ.ಗೋಪಿನಾಥ್, ಜಿಲ್ಲಾ ಘಟಕದ ಅಧ್ಯಕ್ಷ, ಕರ್ನಾಟಕ ಪ್ರಾಂತ ರೈತಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.