ADVERTISEMENT

ಪ್ರೋತ್ಸಾಹಕ್ಕೆ ಕಾರ್ಯಕ್ರಮ ಆಯೋಜನೆ

ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಗಂಗಮ್ಮ ಪ್ರಕಟ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2016, 11:02 IST
Last Updated 28 ಸೆಪ್ಟೆಂಬರ್ 2016, 11:02 IST

ಗೌರಿಬಿದನೂರು: ಸಂಗೀತ ಮತ್ತು ನೃತ್ಯದಲ್ಲಿ ವಿಶೇಷವಾಗಿ ಸಾಧನೆ ಮಾಡಿರುವ ಸ್ಥಳೀಯ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಲು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಗಂಗಮ್ಮ ಕೇಶವಮೂರ್ತಿ ತಿಳಿಸಿದರು.

ಮಂಗಳವಾರ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವ್ಯಾಪ್ತಿಯಲ್ಲಿ ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಸುಗಮ ಸಂಗೀತ, ನೃತ್ಯ, ಹರಿಕಥೆ, ಗಮಕ  6 ಪ್ರಕಾರ ಒಳಗೊಂಡಿದ್ದು. ಇದರಲ್ಲಿ ವಿಶೇಷ ಸಾಧನೆ ಮಾಡಿರುವ ಕಲಾವಿದರನ್ನು ಗುರುತಿಸಿ ಅವರಿಗೆ ಶಿಷ್ಯ ವೇತನ ನೀಡಲಾಗುತ್ತಿದೆ ಎಂದರು.
ಇಂದಿನ ಆಧುನಿಕ ಬದುಕಿನಲ್ಲಿ ಸಂಗೀತ, ಸಾಹಿತ್ಯ ಚಟುವಟಿಕೆ ಕಣ್ಮರೆಯಾಗುತ್ತಿದೆ. ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಅಕಾಡೆಮಿಗಳ ಕೆಲಸವಾಗಿದೆ ಎಂದರು.

ಪಟ್ಟಣದ  ಡಾ.ಎಚ್.ಎನ್. ಕಲಾಭವನದಲ್ಲಿ ಅಕ್ಟೋಬರ್ 3ರಂದು ಬೆಳಿಗ್ಗೆ 10 ಗಂಟೆಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ಜಿಲ್ಲಾ ಸಂಗೀತ ನೃತ್ಯೋತ್ಸವ  ಹಮ್ಮಿಕೊಳ್ಳಲಾಗಿದೆ.   ವಾಸುಕಿ ಶರ್ಮ ಮತ್ತು ತಂಡದವರಿಂದ ಗಮಕ ಕಾರ್ಯಕ್ರಮ, ಡಿ.ವಿ. ನಾಗರಾಜ್ ತಂಡದವರಿಂದ ಶಾಸ್ತ್ರೀಯ ಸಂಗೀತ, ಸುಚೀಂದ್ರ ಮತ್ತು ತಂಡದವರಿಂದ ನೃತ್ಯೋಲ್ಲಾಸ, ಸ್ಥಳೀಯ ಕಲಾವಿದೆ ಗುಣರಂಜಿನಿ ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ ಸುಗಮ ಸಂಗೀತ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ವಿಧಾನಸಭಾ ಉಪಾಧ್ಯಕ್ಷ ಎನ್.ಎಚ್.ಶಿವಶಂಕರರೆಡ್ಡಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಗಂಗಮ್ಮ ಕೇಶವಮೂರ್ತಿ, ರಿಜಿಸ್ಟ್ರಾರ್ ಬನಶಂಕರಿ ಅಂಗಡಿ, ಸಂಚಾಲಕ ಅಶೋಕ್‌ಕುಮಾರ್, ಎಇಎಸ್ ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ವಿ.ಕೃಷ್ಣಮೂರ್ತಿ, ಪ್ರಾಧ್ಯಾಪಕ ಡಾ.ಪಾಂಡುರಂಗ ನಾಯಕ್, ಉಪನ್ಯಾಸಕಿ ನಾಗಜ್ಯೋತಿ ಗುಣರಂಜನಿ, ಡಾ.ಶೈಲಜಾ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.