ADVERTISEMENT

ಬಡ್ತಿ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2017, 9:06 IST
Last Updated 4 ಏಪ್ರಿಲ್ 2017, 9:06 IST
ಬಡ್ತಿ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ
ಬಡ್ತಿ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ   

ಚಿಕ್ಕಬಳ್ಳಾಪುರ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರ ಬಡ್ತಿ ಮೀಸಲಾತಿಯನ್ನು ಮುಂದುವರೆಸಬೇಕು ಎಂದು ಆಗ್ರಹಿಸಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ನೌಕರರ ಸಮನ್ವಯ ಸಮಿತಿಯ ಜಿಲ್ಲಾ ಘಟಕದ ಪದಾಧಿಕಾರಿಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಅಂಬೇಡ್ಕರ್‌ ಭವನದಿಂದ ಜಿಲ್ಲಾಡಳಿತ ಭವನದ ವರೆಗೆ ಕಾಲ್ನಡಿಗೆ ಜಾಥಾ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎನ್.ಅನುರಾಧಾ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಸಮನ್ವಯ ಸಮಿತಿಯ ಮುಖಂಡ ಎಲ್. ಯಂಕಾನಾಯಕ್, ‘ಎಲ್ಲರಿಗೂ ಸಮಾನ ಪ್ರಾತಿನಿಧ್ಯ ದೊರೆಯಬೇಕು ಎನ್ನುವುದು ಪ್ರಜಾಪ್ರಭುತ್ವದ ಮೂಲ ಆಶಯ. ಸಾಮಾಜಿಕ, ಶೈಕ್ಷಣಿಕ ಅಸಮಾನತೆಗೆ ತುತ್ತಾಗಿರುವ ಸಮುದಾಯಗಳಿಗೆ ಎಲ್ಲ ಹಂತದಲ್ಲೂ ಸಮಾನ ಪ್ರಾಶ್ಯಸ್ತ ಕಲ್ಪಿಸಿಕೊಡುವ ಉದ್ದೇಶದಿಂದ ಮೀಸಲಾತಿ ಜಾರಿಗೆ ತರಲಾಗಿದೆ’ ಎಂದು ಹೇಳಿದರು.

ADVERTISEMENT

 ಕೋರ್ಟ್ ಇತ್ತೀಚೆಗೆ ಪರಿಶಿಷ್ಟ ಜಾತಿಗಳಿರುವ ಶೇ 15, ಪರಿಶಿಷ್ಟ ಪಂಗಡಗಳಿಗಿದ್ದ ಶೇ 3ರಷ್ಟು ಬಡ್ತಿ ಮೀಸಲಾತಿ ನೀಡುವ ರಾಜ್ಯ ಸರಕಾರದ 2002ರ ಆದೇಶವನ್ನು ರದ್ದು ಪಡಿಸಿದೆ. ಇದರಿಂದ ಬಡ್ತಿ ಮೀಸಲಾತಿಗೆ ಒಳಪಡುವ ಮತ್ತು 2002ರಿಂದ ಮುಂಬಡ್ತಿ ಪಡೆದಿರುವ 36 ವಿವಿಧ ಇಲಾಖೆಗಳ ಸುಮಾರು 10 ಸಾವಿರ ಕ್ಕೂ ಹೆಚ್ಚು ಎಸ್‌ಸಿ, ಎಸ್‌ಟಿ ನೌಕರರಿಗೆ ಅನ್ಯಾಯವಾಗಲಿದೆ’ ಎಂದು ತಿಳಿಸಿದರು.

‘ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮರುಪರಿಶೀಲನಾ ಅರ್ಜಿ ಸಲ್ಲಿಸಬೇಕು. ಎಸ್‌ಸಿ ಎಸ್‌ಟಿ ನೌಕರರ ಬಡ್ತಿಯಲ್ಲಿ ಮೀಸಲಾತಿ ನೀಡಿದರೆ ಆಡಳಿತ ದಕ್ಷತೆಗೆ ಧಕ್ಕೆಯಾಗುವುದಿಲ್ಲ. ಉನ್ನತ ಹುದ್ದೆಗಳಲ್ಲಿ ಕೂಡ ಎಸ್‌ಸಿ ಎಸ್‌ಟಿ ನೌಕರರ ಪ್ರಾತಿನಿಧ್ಯ ಕೊಡಬೇಕು ಎಂಬ ಅಂಶವನ್ನು ರಾಜ್ಯ ಸರ್ಕಾರ ಕೋರ್ಟ್ ಮುಂದೆ ಇಡಬೇಕು’ ಎಂದು ಒತ್ತಾಯಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ನಾರಮಾಕಲಹಳ್ಳಿ ಕೃಷ್ಣಪ್ಪ ಮಾತನಾಡಿ, ‘ಅಂಬೇಡ್ಕರ್ ಅವರು ದೇಶದ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡುವ ಉದ್ದೇಶದಿಂದ ಸಂವಿಧಾನ ರಚಿಸಿದರು. ಅದರಿಂದಾಗಿ ಸ್ವಾತಂತ್ರ್ಯಾ ನಂತರ ದೀನದಲಿತರು ಒಂದಷ್ಟು ಚೇತರಿಸಿಕೊಳ್ಳುತ್ತಿದ್ದಾರೆ ಎನ್ನುವ ಹೊತ್ತಿನಲ್ಲಿಯೇ ಬಡ್ತಿ ಮೀಸಲಾತಿ ಮಸೂದೆಯನ್ನು ತೆಗೆದು ಹಾಕಿ ದಲಿತ ಸಮುದಾಯಕ್ಕೆ ಅನ್ಯಾಯ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.

‘ರಾಜ್ಯ ಸರ್ಕಾರ ಕೋರ್ಟ್‌ಗೆ ಈ ಕೂಡಲೆ ಮರು ಪರಿಶೀಲನಾ ಅರ್ಜಿಯನ್ನು ಸಲ್ಲಿಸಿ, ನುರಿತ ವಕೀಲರನ್ನು ನೇಮಕ ಮಾಡಿ ಅಗತ್ಯ ಸಾಕ್ಷಧಾರ, ದಾಖಲೆಗಳನ್ನು ಒದಗಿಸಬೇಕು. ಬಡ್ತಿ ಮೀಸಲಾತಿ ಮಸೂದೆಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಸಂವಿಧಾನದ 117ನೇ ತಿದ್ದುಪಡಿ ವಿಧೇಯಕವನ್ನು ಅಂಗೀಕರಿಸಬೇಕು. ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು’ ಎಂದು ಒತ್ತಾಯಿಸಿದರು.
ಸಮಿತಿ ಮುಖಂಡರಾದ ಕಂದಾಯ ಇಲಾಖೆಯ ಮಂಜುನಾಥ್, ರಾಜ್ಯ ಲೆಕ್ಕಪತ್ರ ಇಲಾಖೆ ರಾಜಣ್ಣ, ಕೆಎಸ್‌ಆರ್‌ಟಿಸಿಯ ಶ್ರೀನಿವಾಸ್, ಅಶ್ವತ್ಥನಾರಾಯಣ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.