ADVERTISEMENT

ಬದುಕಿದ್ದಾಗಲೇ ವೈಕುಂಠ ಸಮಾರಾಧನೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 9:10 IST
Last Updated 18 ಸೆಪ್ಟೆಂಬರ್ 2017, 9:10 IST
ಚಿಂತಾಮಣಿಯ ವಾಯುಪುತ್ರನಗರದಲ್ಲಿ ಬದುಕಿರುವಾಗಲೇ ವೈಕುಂಠ ಸಮಾರಾಧನೆ ಮಾಡಿಕೊಂಡಿರುವ ಮಾರಪ್ಪರೆಡ್ಡಿ
ಚಿಂತಾಮಣಿಯ ವಾಯುಪುತ್ರನಗರದಲ್ಲಿ ಬದುಕಿರುವಾಗಲೇ ವೈಕುಂಠ ಸಮಾರಾಧನೆ ಮಾಡಿಕೊಂಡಿರುವ ಮಾರಪ್ಪರೆಡ್ಡಿ   

ಚಿಂತಾಮಣಿ: ಜೀವಂತವಾಗಿರುವಾಗಲೇ ತಮ್ಮ ವೈಕುಂಠ ಸಮಾರಾಧನೆಯನ್ನು ತಾವೇ ಮಾಡಿಕೊಂಡಿರುವ ವಿಚಿತ್ರ ಪ್ರಕರಣ ನಗರದ ಹೊರವಲಯದ ಬುಕ್ಕನಹಳ್ಳಿ ರಸ್ತೆಯಲ್ಲಿರುವ ವಾಯುಪುತ್ರನಗರದಲ್ಲಿ ಭಾನುವಾರ ನಡೆದಿದೆ.

ಚೇಳೂರಿನರಾದ ಮಾರಪ್ಪರೆಡ್ಡಿ ಅವರು 7–8 ವರ್ಷಗಳ ಹಿಂದೆ ನಗರಕ್ಕೆ ಬಂದು ನಾರಾಯಣಪ್ಪ ಎಂಬುವವರ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ‘ನನ್ನ ತಂದೆ, ತಾಯಿ ಹಾಗೂ ಪತ್ನಿ ತೀರಿಕೊಂಡಾಗ ವೈಕುಂಠ ಸಮಾರಾಧನೆಗೆ ಯಾರೂ ಬರಲಿಲ್ಲ. ನಾನು ಸತ್ತಾಗ ಯಾರು ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ. ಅದಕ್ಕಾಗಿ ನನ್ನ ವೈಕುಂಠ ಸಮಾರಾಧನೆಯನ್ನು ನಾನೇ ಮಾಡಿಕೊಳ್ಳುತ್ತಿದ್ದೇನೆ’ ಎಂದು ಹೇಳುತ್ತಾರೆ.

ಮೃತಪಟ್ಟವರಿಗೆ ಅಂತ್ಯಕ್ರಿಯೆಯ ನಂತರ  ಸಂಪ್ರದಾಯದಂತೆ ನಡೆಸುವ ಎಲ್ಲ ಕ್ರಿಯೆಗಳನ್ನು ನಡೆಸಿದರು. ತನ್ನ ಪತ್ನಿಯ ಫೋಟೊವನ್ನು ಸಹ ಇಟ್ಟುಕೊಂಡಿದ್ದರು. ನೂರಾರು ಜನರಿಗೆ ಭರ್ಜರಿ ಮಾಂಸದ ಊಟದ ವ್ಯವಸ್ಥೆಯನ್ನು ಮಾಡಿದ್ದರು.

ADVERTISEMENT

ದಾನ: ‘ನನ್ನ ಶರೀರವನ್ನು ಕೋಲಾರದ ವೈದ್ಯಕೀಯ ಕಾಲೇಜಿಗೆ ದಾನ ಮಾಡಿದ್ದೇನೆ. ನಾನು ಸತ್ತ ನಂತರ ಶವವನ್ನು ತೆಗೆದುಕೊಂಡು ಹೋಗಲು ಕಾನೂನು ರೀತಿಯಲ್ಲಿ ಅನುಮತಿಯನ್ನು ಕಾಲೇಜಿಗೆ ನೀಡಿದ್ದೇನೆ’ ಎಂದು ತಿಳಿಸಿದರು.

‘ನಾನು ಸಾಕಷ್ಟು ಸ್ಥಿತಿವಂತನಾಗಿದ್ದೆ. ದಾಯಾದಿಗಳು ನನ್ನ ಮಗನನ್ನು ಹಾಳು ಮಾಡಿ ಆಸ್ತಿ ಲಪಾಟಾಯಿಸಲು ಸಂಚು ಮಾಡಿದ್ದರು. ಕೆಲವು ವರ್ಷಗಳ ಕಾಲ ಮಗ ನಾಪತ್ತೆಯಾಗಿದ್ದನು. ನಂತರ ಬಂದ ಮಗ, ಹೋಟೆಲ್‌ ನಡೆಸುವ ನೆಪದಿಂದ ನನ್ನಿಂದ ಲಕ್ಷಾಂತರ ಹಣ ಪಡೆದು ನನ್ನನ್ನೇ ಮನೆಯಿಂದ ಹೊರ ಹಾಕಿದನು’ ಎಂದು ವೃತ್ತಾಂತ ವಿವರಿಸಿದರು.

‘ಕೆಲ ವರ್ಷಗಳ ನಂತರ ಮಗನೇ ಸಹಪಾಠಿಗಳ ಜತೆ ಸೇರಿ ರಾಜಿ ಪಂಚಾಯಿತಿ ನೆಪದಲ್ಲಿ ಬಾಗೇಪಲ್ಲಿ ಪ್ರವಾಸಿ ಮಂದಿರಕ್ಕೆ ಕರೆಸಿ ಹಲ್ಲೆ ನಡೆಸಿದನು. ವೃದ್ಧಾಪ್ಯದಲ್ಲಿ ನನಗೆ ನ್ಯಾಯ ಒದಗಿಸಬೇಕು, ಮಗನಿಂದ ನನ್ನ ಹಣ, ಆಸ್ತಿಯನ್ನು ಕೊಡಿಸಿ ಕೊಡಬೇಕು ಎಂದು ಅಧಿಕಾರಿಗಳಿಂದ ಹಿಡಿದು ಮುಖ್ಯಮಂತ್ರಿ ವರೆಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಮಾರಪ್ಪರೆಡ್ಡಿ. ’ಈ ಎಲ್ಲ ಘಟನೆಗಳಿಂದ ವಿಚಲಿತನಾದೆ. ಹೀಗಾಗಿ ಬದುಕಿರುವಾಗಲೇ ನನ್ನ ವೈಕುಂಠ ಸಮಾರಾಧನೆಯನ್ನು ನಾನೇ ಮಾಡಿಕೊಳ್ಳುತ್ತಿದ್ದೇನೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.