ADVERTISEMENT

ಬದುಕು ಕಟ್ಟಿಕೊಟ್ಟ ಕ್ರಿಕೆಟ್ ಬ್ಯಾಟ್ ವ್ಯಾಪಾರ

ನಗರದೊಂದಿಗೆ ನಂಟು ಬೆಸೆದುಕೊಂಡ ಮಹಾರಾಷ್ಟ್ರ ಮೂಲದ ಕುಟುಂಬ, ಕೈಗೆಟುಕುವ ಬೆಲೆಯಲ್ಲಿ ಬ್ಯಾಟ್‌ ಲಭ್ಯ

​ಪ್ರಜಾವಾಣಿ ವಾರ್ತೆ
Published 21 ಮೇ 2018, 12:18 IST
Last Updated 21 ಮೇ 2018, 12:18 IST
ಚಿಕ್ಕಬಳ್ಳಾಪುರದ ಅಗಲಗುರ್ಕಿ ಗೇಟ್‌ ಬಳಿ ಬ್ಯಾಟ್‌ ಖರೀದಿಯಲ್ಲಿ ನಿರತರಾದ ಯುವಕರು
ಚಿಕ್ಕಬಳ್ಳಾಪುರದ ಅಗಲಗುರ್ಕಿ ಗೇಟ್‌ ಬಳಿ ಬ್ಯಾಟ್‌ ಖರೀದಿಯಲ್ಲಿ ನಿರತರಾದ ಯುವಕರು   

ಚಿಕ್ಕಬಳ್ಳಾಪುರ: ಒಂದೆಡೆ ಐಪಿಎಲ್ ಹಂಗಾಮಾ ಜೋರಾಗಿದ್ದರೆ, ಇನ್ನೊಂದೆಡೆ ಗಲ್ಲಿ ಗಲ್ಲಿಗಳು, ಮೈದಾನದೊಳಗೆ ಚಿಣ್ಣರು, ವಿದ್ಯಾರ್ಥಿಗಳ ಕ್ರಿಕೆಟ್ ಹವಾ ಜೋರಾಗಿ ಕಂಡುಬರುತ್ತಿದೆ. ನಗರದ ಉಳ್ಳವರು ಮಕ್ಕಳಲ್ಲಿ ಮಳಿಗೆಗಳಲ್ಲಿ ಬ್ಯಾಟ್ ಖರೀದಿಸಿದರೆ, ಬಡ ಜನರು ನಗರದ ಹೊರವಲಯದ ಅಗಲಗುರ್ಕಿ ಗೇಟ್‌ ಬಳಿ ಇರುವ ಪುಟ್ಟ ಟೆಂಟ್‌ ಬಳಿ ಹೋಗುತ್ತಾರೆ.

ಕೌಶಲವಿದ್ದು, ದುಡಿಯುವ ಮನಸ್ಸಿದ್ದರೆ ಜಗತ್ತಿನ ಎಲ್ಲಿಯೆ ಇದ್ದರೂ ಬದುಕು ಸಾಗಿಸಬಹುದು ಎಂಬುದಕ್ಕೆ ಸುನೀಲ್‌ ಕುಟುಂಬ ಸಾಕ್ಷಿಯಾಗಿದೆ. ಮಹಾರಾಷ್ಟ್ರದ ಪುಟ್ಟ ಹಳ್ಳಿಯಿಂದ ಚಿಕ್ಕಬಳ್ಳಾಪುರಕ್ಕೆ ಬಂದು ಕ್ರಿಕೆಟ್ ಬ್ಯಾಟ್ ತಯಾರಿಸಿ, ಮಾರಾಟ ಮಾಡುತ್ತಿದ್ದಾರೆ. ಮಕ್ಕಳಾಟದ ಸಾಮಗ್ರಿಯೇ ಅವರ ಅನ್ನದ ಮಾರ್ಗವಾಗಿದೆ.

ಮಹಾರಾಷ್ಟ್ರದ ಧೂಲಿಯಾ ಜಿಲ್ಲೆಯ ಸುಳೆ ಗ್ರಾಮಕ್ಕೂ ಚಿಕ್ಕಬಳ್ಳಾಪುರಕ್ಕೆ ಅನೇಕ ವರ್ಷಗಳ ನಂಟು. ಒಂದೂವರೆ ತಿಂಗಳಿನಿಂದ ರಸ್ತೆ ಬದಿಯಲ್ಲಿ ಟೆಂಟ್ ಹಾಕಿಕೊಂಡು ಬ್ಯಾಟ್‌ ಮತ್ತು ಸ್ಟಂಪ್‌ ತಯಾರಿಸುವ ಕಾಯಕ ಶುರು ಇಟ್ಟುಕೊಂಡಿರುವ ಸುನೀಲ್‌ ಕುಟುಂಬ ಎರಡು ರಾಜ್ಯಗಳ ನಡುವೆ ನಂಟು ಬೆಸೆದಿದೆ. ಈಗ ಇವರು ನಗರದ ಜನರಿಗೆ ಪರಿಚಿತರಾಗಿದ್ದಾರೆ.

ADVERTISEMENT

ಅಲೆಮಾರಿ ಜೀವನ ನಡೆಸುವ ಈ ಕುಟುಂಬ ವರ್ಷದ ಬಹುಪಾಲು ಕರ್ನಾಟಕದ ವಿವಿಧ ನಗರಗಳಲ್ಲಿ ಠಿಕಾಣಿ ಹೂಡಿ, ವ್ಯಾಪಾರ ನಡೆಸುತ್ತ ವರ್ಷವಿಡೀ ರಾಜ್ಯ ಸುತ್ತು ಹಾಕುತ್ತದೆ. ಹೊಸಪೇಟೆ, ಕೊಪ್ಪಳ, ರಾಯಚೂರು, ಮಂಗಳೂರು, ತಿಪಟೂರು, ಭದ್ರಾವತಿ, ವಿಜಯಪುರ, ಬಾಗಲಕೋಟೆ, ಕೋಲಾರ, ಬಳ್ಳಾರಿ, ಗದಗ, ಚಿಕ್ಕಬಳ್ಳಾಪುರ.. ಹೀಗೆ ಪ್ರಮುಖ ನಗರಗಳಲ್ಲಿ ಸುನೀಲ್ ಕುಟುಂಬದ ಬಂಡಿ ಸಂಚರಿಸುತ್ತದೆ.

‘ಚಿಕ್ಕಬಳ್ಳಾಪುರ ನಗರಕ್ಕೆ ಆರೇಳು ವರ್ಷಗಳಿಂದ ಪ್ರತಿ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಬ್ಯಾಟ್‌ಗಳ ವ್ಯಾಪಾರ ಮಾಡಲು ಬರುತ್ತಿದ್ದೇವೆ. ಈ ಅವಧಿಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇರುವ ಕಾರಣ ಬ್ಯಾಟ್ ಮಾರಾಟ ಬಲು ಜೋರಾಗಿ ನಡೆಯುತ್ತದೆ. ಆದರೆ ಈ ಬಾರಿ ಸ್ವಲ್ಪ ವ್ಯಾಪಾರ ಮಂಕಾಗಿದೆ. ನಿತ್ಯ ಏಳೆಂಟು ಬ್ಯಾಟ್‌ ಸಿದ್ಧಪಡಿಸುತ್ತೇವೆ. ಅದರಲ್ಲಿ ನಾಲ್ಕೈದು ಮಾರಾಟವಾಗುತ್ತಿವೆ’ ಎನ್ನುತ್ತಾರೆ ಸುನೀಲ್‌.

‘ಬ್ಯಾಟ್ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳನ್ನು ಸಮೀಪದ ಊರುಗಳಲ್ಲೇ ಪತ್ತೆ ಮಾಡಿ ಖರೀದಿ ಮಾಡುತ್ತೇವೆ. ಈಗಾಗಲೇ 250–400 ಬ್ಯಾಟ್‌ಗಳಿಗಾಗುವಷ್ಟು ಮರದ ತುಂಡುಗಳ ಸಂಗ್ರಹ ಇದೆ. ಇನ್ನೂ ಎರಡು ತಿಂಗಳಿಗಾಗುವಷ್ಟು ಬ್ಯಾಟ್‌ ತಯಾರಿಸಬಹುದು. ಗಂಟೆಗೆ ಒಂದು ಬ್ಯಾಟ್ ತಯಾರಿಸುತ್ತೇವೆ. ಬೇಡಿಕೆ ಇದ್ದರೆ ಹೆಚ್ಚು ತಯಾರಿಸುತ್ತೇವೆ’ ಎಂದು ಹೇಳುವರು.

‘ಚಿಕ್ಕಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ಚಿಕ್ಕ ಬ್ಯಾಟ್‌ಗಳನ್ನು ಸಹ ಸಿದ್ದಪಡಿಸಿ ಕೊಡುತ್ತೇವೆ. ಚಿಕ್ಕ ಬ್ಯಾಟ್‌ ಒಂದಕ್ಕೆ ₹ 90, ದೊಡ್ಡ ಬ್ಯಾಟ್‌ ₹ 300, ಸ್ಟಂಪ್‌ಗಳು ₹ 300ಕ್ಕೆ ಮಾರಾಟವಾಗುತ್ತಿವೆ. ಬ್ಯಾಟ್‌ ತಯಾರಿಸುವುದು ಮರಗೆಲಸದಂತೆ ಒರಟಿನ ಕಲೆಯಲ್ಲ. ನಯ, ನಾಜೂಕಿನ ಕುಸುರಿ ಕೆಲಸ. ಸ್ವಲ್ಪ ವ್ಯತ್ಯಾಸವಾದರೂ ಗ್ರಾಹಕರು ಬ್ಯಾಟ್‌ ಖರೀದಿಸುವುದಿಲ್ಲ. ಬ್ಯಾಟು ತಯಾರಿಕೆಗೆ ಇಂತಿಷ್ಟೇ ಅಳತೆ, ತೂಕ ಎಲ್ಲವೂ ಇರುತ್ತದೆ. ಸದ್ಯ ನಿತ್ಯ ₹ 1500 ವರೆಗೆ ವ್ಯಾಪಾರ ಆಗುತ್ತದೆ’ ಎಂದು ವಿವರಿಸುವರು.

‘ಓದುವುದಕ್ಕಾಗಿ ಬೇರೆ ಊರಿನಲ್ಲಿರುವ ಮಕ್ಕಳು ಬೇಸಿಗೆ ರಜೆಗಾಗಿ ಮನೆಗೆ ಬಂದಿದ್ದಾರೆ. ಅವರಿಗೆ ಕ್ರಿಕೆಟ್‌ ಆಡುವ ಹುಚ್ಚು. ಹೀಗಾಗಿ ಅವರಿಗೆ ಬ್ಯಾಟ್ ತೆಗೆದುಕೊಂಡು ಹೋಗೋಣ ಎಂದು ಇಲ್ಲಿಗೆ ಬಂದೆ. ಕಡಿಮೆ ಬೆಲೆಯಲ್ಲಿ ಉತ್ತಮ ಎನ್ನಬಹುದಾದ ಬ್ಯಾಟ್‌ ಇಲ್ಲಿವೆ. ಮಕ್ಕಳ ಆಟಕ್ಕೆ ಅನುಕೂಲ. ಮಕ್ಕಳ ಎತ್ತರಕ್ಕೆ ತಕ್ಕ ಗಾತ್ರದ ಬ್ಯಾಟ್‌ಗಳು ಇಲ್ಲಿ ಸಿಗುತ್ತವೆ. ಆರಂಭಿಕವಾಗಿ ಅಭ್ಯಾಸ ಮಾಡಲು ಇಷ್ಟು ಸಾಕು’ ಎಂದು ಅಗಲಗುರ್ಕಿ ನಿವಾಸಿ ಮಹೇಶ್‌ ಹೇಳಿದರು.

‘ಮನೆಯಲ್ಲಿ ಮಕ್ಕಳ ಆಟಕ್ಕೆ ಬ್ಯಾಟ್‌ ಬೇಕು. ಕ್ರೀಡಾ ಸಾಮಗ್ರಿಗಳ ಅಂಗಡಿಯಲ್ಲಿ ಖರೀದಿಸಿದರೆ ಇದೇ ಬ್ಯಾಟ್‌ಗೆ ಕನಿಷ್ಠ ₹ 800ರಿಂದ 1500 ಕೊಡಬೇಕು. ಆದರೆ ಇಲ್ಲಿ ನಮಗೆ ₹ 100ರಿಂದ ₹ 300 ವರೆಗೆ ಸಿಗುತ್ತವೆ. ಸಣ್ಣ ಮಕ್ಕಳಿಗೆ ದುಬಾರಿ ದರದ ಬ್ಯಾಟ್‌ ಕೊಡಿಸುವುದರಲ್ಲಿ ಅರ್ಥವೂ ಇಲ್ಲ. ಇಲ್ಲಿ ಈ ಕುಟುಂಬಕ್ಕೆ ವ್ಯಾಪಾರವಾಯಿತು. ನಮಗೂ ಅನುಕೂಲವಾಗಿದೆ’ ಎನ್ನುತ್ತಾರೆ ಇಲ್ಲಿಯ ನಿವಾಸಿ ವೆಂಕಟೇಶ.

**
ಬ್ಯಾಟು ತಯಾರಿಸುವುದು ನಾಜೂಕಿನ ಕೆಲಸ, ಇದು ನಮ್ಮ ಹಿರಿಯರಿಂದ ಬಳುವಳಿಯಾಗಿ ಒಲಿದ ಕಲೆ. ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ
ಸುನೀಲ್‌, ಬ್ಯಾಟ್ ವ್ಯಾಪಾರಿ ‌

ಕೆಂಪೇಗೌಡ ಎನ್.ವೆಂಕಟೇನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.