ADVERTISEMENT

ಬಿಸಿಲ ಬೇಗೆ: ಹಣ್ಣುಗಳ ಮೊರೆ ಹೋದ ಜನರು

ಚಿಂತಾಮಣಿಯಲ್ಲಿ ಹೆಚ್ಚಾಗುತ್ತಿರುವ ಉಷ್ಣಾಂಶ, ತಲೆ ಎತ್ತಿವೆ ಕಲ್ಲಂಗಡಿ ಅಂಗಡಿಗಳು

ಎಂ.ರಾಮಕೃಷ್ಣಪ್ಪ
Published 7 ಮಾರ್ಚ್ 2017, 9:25 IST
Last Updated 7 ಮಾರ್ಚ್ 2017, 9:25 IST
ಚಿಂತಾಮಣಿ: ನಗರದಲ್ಲಿ ಬಿರು ಬಿಸಿಲಿನ ಧಗೆಯಿಂದ ದಾಹ ತಣಿಸಿಕೊಳ್ಳಲು ಜನರು  ಕಲ್ಲಂಗಡಿ ಹಣ್ಣು ಮತ್ತು ಎಳನೀರು ಮೊರೆ ಹೋಗುತ್ತಿದ್ದಾರೆ. ಸಾಮಾನ್ಯವಾಗಿ ಶಿವರಾತ್ರಿಯ ನಂತರ ಬಿಸಿಲ ತಾಪ ಹೆಚ್ಚುತ್ತದೆ. ಬಿಸಿಲಿನ ಝಳ, ಸೆಕೆ ಕಾಲದಲ್ಲಿ ಕಲ್ಲಂಗಡಿ ಮತ್ತಿತರ ಹಣ್ಣಿನ ಅಂಗಡಿಗಳು ರಸ್ತೆಗಳಲ್ಲಿ ತಲೆ ಎತ್ತುವುದು ರೂಢಿ. ಮಾಮೂಲಿ ಬಿಸಿಲಿಗಿಂತ ಹೆಚ್ಚಿನ ತಾಪಮಾನ ಇರುವುದರಿಂದ ಜನರು  ಕಲ್ಲಂಗಡಿ ಹಣ್ಣುಗಳಿಗೆ ಮುಗಿಬೀಳುತ್ತಿದ್ದಾರೆ. ಸೋಮವಾರ ನಗರದಲ್ಲಿ 32 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ.
 
ನಗರದ ಬೆಂಗಳೂರು ರಸ್ತೆಯಲ್ಲಿ 3– 4 ಕಡೆ ಬೀದಿ ಬದಿಯಲ್ಲಿ ಹಣ್ಣಿನ ಅಂಗಡಿಗಳನ್ನು ತೆರೆದಿದ್ದು ವ್ಯಾಪಾರ ವಹಿವಾಟು ನಡೆಸುತ್ತಿವೆ. ಪಾದಾಚಾರಿಗಳು ವಿಶೇಷವಾಗಿ ಮಧ್ಯಾಹ್ನದ ಸಮಯದಲ್ಲಿ ಕಲ್ಲಂಗಡಿ ಸೇವನೆ ಮಾಡುವುದರ ಮೂಲಕ ಬಿಸಿಲ ಬೇಗುದಿಯಿಂದ ಸುಧಾರಿಸಿಕೊಳ್ಳುತ್ತಾರೆ.
 
ಜಿಲ್ಲೆಯಲ್ಲಿ ಯಾವುದೇ ನದಿ ನಾಲೆಗಳಿಲ್ಲದೆ ಕೇವಲ ಕೊಳವೆ ಬಾವಿಗಳ ಆಧಾರದಿಂದ ಕೃಷಿ ಚಟುವಟಿಕೆಗಳು ನಡೆಯುತ್ತಿವೆ. ಕಳೆದ 5– 6 ವರ್ಷಗಳಿಂದ ಸಮರ್ಪಕವಾಗಿ ಮಳೆಯಾಗದೆ ಕೆರೆ ಕುಂಟೆಗಳಲ್ಲಿ ನೀರನ್ನು ಕಾಣುವುದೇ ಅಪರೂಪವಾಗಿದೆ. ಕೊಳವೆ ಬಾವಿಗಳಲ್ಲೂ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದೆ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಕಲ್ಲಂಗಡಿ ಬೆಳೆಯು ಅಪರೂಪವಾಗಿದೆ.
 
ತಾಲ್ಲೂಕು ಮತ್ತು ಜಿಲ್ಲೆಯಲ್ಲಿ ಕಲ್ಲಂಗಡಿ ಬೆಳೆ ಮರೀಚಿಕೆಯಾಗಿದೆ. ನಗರಕ್ಕೆ ತಮಿಳುನಾಡಿನಿಂದ ಕಲ್ಲಂಗಡಿ ಹಣ್ಣುಗಳು ಸರಬರಾಜಾಗುತ್ತಿವೆ. ಕೆ.ಜಿ.ಗೆ ₹ 20 ರಿಂದ ₹ 25ವರೆಗೂ ಮಾರಾಟವಾಗುತ್ತಿದೆ. ಒಂದು ಹೋಳು ₹ 10 ರಂತೆ ಮಾರಾಟವಾಗುತ್ತಿದೆ.
 
ಎಳನೀರು ಮಾರಾಟಗಾರರು ಸೈಕಲ್‌ಗಳಲ್ಲಿ ಸಂಚರಿಸುತ್ತಾ ಹಾಗೂ ಕೆಲವು ನಿಗದಿತ ಸ್ಥಳಗಳಲ್ಲಿ ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದಾರೆ. ಕಲ್ಲಂಗಡಿ ಹಣ್ಣಿನ ಮಾರಾಟಗಾರರು ರಸ್ತೆ ಬದಿಗಳಲ್ಲಿ ದಾಸ್ತಾನು ಮಾಡಿಕೊಂಡು ಮಾರಾಟ ಮಾಡುತ್ತಿದ್ದಾರೆ. ನಗರದ ಬೆಂಗಳೂರು ರಸ್ತೆ, ಕೋಲಾರ ರಸ್ತೆ, ಶಿಡ್ಲಘಟ್ಟ ರಸ್ತೆ ಹಾಗೂ ಚೇಳೂರು ರಸ್ತೆಗಳಲ್ಲಿ ಹಲವಾರು ಅಂಗಡಿಗಳು ತಲೆ ಎತ್ತಿವೆ.
 
ಬಯಲು ಸೀಮೆಯ  ಹಾಗೂ ಸದಾ ಬರಗಾಲದ ವ್ಯಾಪ್ತಿಯಲ್ಲಿ ಬರುವ ಚಿಂತಾಮಣಿ ನಗರ ಹಾಗೂ ತಾಲ್ಲೂಕಿನಲ್ಲಿ ಕಲ್ಲಂಗಡಿಗೆ ಹೆಚ್ಚಿನ ಬೇಡಿಕೆ ಇದೆ. ಬಿಸಿಲಿಗೆ ಪದೇ ಪದೇ ನೀರು ಕುಡಿಯುವುದು ಸಾಮಾನ್ಯ. ದಣಿದ ಶರೀರ ಮತ್ತು ಮನಸ್ಸುಗಳಿಗೆ ಊಟವೂ ಬೇಡವಾಗಿ ತಂಪು ಪಾನೀಯಗಳ ಕಡೆಗೆ ಗಮನ ಹರಿಯುತ್ತದೆ.
 
ಎಳನೀರು, ಮಜ್ಜಿಗೆ, ವಿವಿಧ ಹಣ್ಣಿನ ರಸಗಳ ಕಡೆಗೆ ಮನಸ್ಸು ಹರಿಯುತ್ತದೆ. ಹಣ್ಣು ಹಾಗೂ ಹಣ್ಣಿನ ರಸ ಶರೀರಕ್ಕೆ ತಂಪು ಕೊಡುವುದರ ಜತೆಗೆ ಸ್ವಲ್ಪ ಮಟ್ಟಿಗೆ ಶಕ್ತಿಯನ್ನು ನೀಡುತ್ತದೆ. ಅದರಿಂದಾಗಿಯೇ ಹೆಚ್ಚಿನ ಜನರು ಹಣ್ಣಿನ ರಸ ಸೇವಿಸುತ್ತಾರೆ. ಇತರೆ ಎಲ್ಲ ಹಣ್ಣಗಳಿಗಿಂತಲೂ ಕಲ್ಲಂಗಡಿ ಹೆಚ್ಚಿನ ತಂಪು ಹಾಗೂ ನೀರಿನ ಅಂಶವನ್ನು ಒದಗಿಸುವುದರಿಂದ ಜನರು ಮುಗಿಬೀಳುತ್ತಾರೆ.
 
ಆದರೆ ರಸ್ತೆ ಬದಿಯಲ್ಲಿ ಕತ್ತರಿಸಿ ಮಾರುವ ಹಣ್ಣುಗಳ ಸೇವನೆಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ನಗರದ ಬಹುತೇಕ ಕಡೆಗಳಲ್ಲಿ ಕತ್ತರಿಸಿ ಮಾರಾಟ ಮಾಡುವುದು ಸಾಮಾನ್ಯವಾಗಿದೆ. ರೋಗ ಹರಡುವ ನೊಣಗಳು ಹಾಗೂ ಇತರ ಕೀಟಗಳು ಸಿಹಿಗಾಗಿ ಕತ್ತರಿಸಿ ಹಣ್ಣಿಗೆ ಮುತ್ತಿಕೊಳ್ಳುತ್ತವೆ. ಜತೆಗೆ ದೂಳು ಮೆತ್ತಿಕೊಳ್ಳುತ್ತದೆ. ಇಂತಹ ಹಣ್ಣನ್ನು ತಿನ್ನುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಕತ್ತರಿಸಿದ ಹಣ್ಣುಗಳನ್ನು ಮುಚ್ಚಿಟ್ಟ ಬಾಕ್ಸ್‌ಗಳಲ್ಲಿಟ್ಟು ಮಾರಾಟ ಮಾಡುವುದು ಸೂಕ್ತ.
 
ಎಳನೀರು ಅತ್ಯಂತ ಶ್ರೇಷ್ಠ ಪಾನೀಯವಾಗಿದ್ದು, ಆಸ್ಪತ್ರೆಗಳಲ್ಲಿ ರೋಗಿಗಳಿಗೂ ನೀಡುತ್ತಾರೆ. ತಾಜಾ ಎಳನೀರಿಗೆ ಗ್ರಾಹಕರು ಒತ್ತು ನೀಡುವುದರಿಂದ ಕೊಯ್ಲು ಮಾಡಿದ 2–3 ದಿನಗಳಲ್ಲಿ ಮಾರಾಟ ಮಾಡಲೇ ಬೇಕಾಗುತ್ತದೆ. ಚಳಿಗಾಲದಲ್ಲಿ ₹ 20  ಇದ್ದ ಎಳನೀರು ಬಿಸಿಲು ಏರುತ್ತಿದ್ದಂತೆ ₹ 25 ಏರಿಕೆಯಾಗಿದೆ. ಬಿಸಿಲು ವಿಪರೀತವಾಗುತ್ತಿರುವುದು, ಜಾತ್ರೆ, ರಥೋತ್ಸವಗಳಿಂದ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದೆ. ಮುಂದಿನ 2 ತಿಂಗಳು ಹಣ್ಣು ಮಾರುಕಟ್ಟೆಯಲ್ಲಿ ಆವಕ ಮತ್ತು ಬೇಡಿಕೆ ಇದೆ ಎನ್ನುತ್ತಾರೆ ಹಣ್ಣು ಮಾರಾಟಗಾರ ನಾಗೇಶ್‌.                                           
 
 
* ಬಿಸಿಲು ವಿಪರೀತವಾಗುತ್ತಿರು ವುದು. ಮುಂದಿನ 2 ತಿಂಗಳು ಕಾಲ ಹಣ್ಣು ಮಾರುಕಟ್ಟೆಯಲ್ಲಿ ಆವಕ ಮತ್ತು ಬೇಡಿಕೆ ಇರುತ್ತದೆ.
ನಾಗೇಶ್‌,ಹಣ್ಣು ಮಾರಾಟಗಾರ
 
* ರಾಸಾಯನಿಕ ಮಿಶ್ರಣವಾಗಿರುವ ತಂಪು ಪಾನೀಯಗಳನ್ನು ಸೇವಿಸುವುದಕ್ಕಿಂತ ತಾಜಾ ಹಣ್ಣನ್ನು ಸೇವಿಸುವುದು ಒಳ್ಳೆಯದು. ಸ್ನೇಹಿತರೊಂದಿಗೆ ಹರಟೆ ಹೊಡೆಯುತ್ತಾ ಕಲ್ಲಂಗಡಿ ಹಣ್ಣು ತಿನ್ನುವುದು ಒಂದು ರೀತಿಯ ಮಜಾ ಕೊಡುತ್ತದೆ
-ಸುರೇಶ್‌, ಗ್ರಾಹಕ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.