ADVERTISEMENT

ಬೇಡಿಕೆ ಈಡೇರದಿದ್ದರೆ ಅರೆಬೆತ್ತಲೆ ಪ್ರತಿಭಟನೆ

15 ದಿನಗಳ ಒಳಗೆ ಸಾಗುವಳಿ ಪತ್ರ ವಿತರಣೆಗೆ ಸಮಾಜವಾದಿ ಪಕ್ಷ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2017, 5:56 IST
Last Updated 14 ಫೆಬ್ರುವರಿ 2017, 5:56 IST
ಚಿಕ್ಕಬಳ್ಳಾಪುರ: ‘ಜಿಲ್ಲೆಯಾದ್ಯಂತ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡಿರುವ ರೈತರಿಗೆ ಬಗರ್‌ ಹುಕುಂ ಸಾಗುವಳಿ ಯೋಜನೆಯಡಿ 15 ದಿನಗಳ ಒಳಗೆ ಸಾಗುವಳಿ ಪತ್ರ ನೀಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾ ಕೇಂದ್ರದಲ್ಲಿ ಬೃಹತ್ ಅರೆಬೆತ್ತಲೆ ಪ್ರತಿಭಟನೆ ನಡೆಸಲಾಗುತ್ತದೆ’ ಎಂದು ಸಮಾಜವಾದಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಪಾಳ್ಯ ಖಾದರ್‌ ಸುಬಾನ್‌ ಖಾನ್ ತಿಳಿಸಿದರು. 
 
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿರುವ ಹಲವಾರು ಸಮಸ್ಯೆಗಳ ಕುರಿತು ಅನೇಕ ಬಾರಿ ಜಿಲ್ಲಾಡಳಿತದ ಗಮನಕ್ಕೆ ತಂದರೂ ಈವರೆಗೆ ಸಮಸ್ಯೆಗಳಿಗೆ ಪರಿಹಾರಕ್ಕೆ ದೊರೆತಿಲ್ಲ. ಈ ನಿರ್ಲಕ್ಷ್ಯ ಧೋರಣೆಯಿಂದ ಬೇಸರ ಉಂಟಾಗಿದೆ. ಜನರಿಗೆ ಒಳ್ಳೆಯ ಆಡಳಿತ ನೀಡಬೇಕಾದ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ’ ಎಂದು ಆರೋಪಿಸಿದರು.
 
‘ಗೌರಿಬಿದನೂರು ತಾಲ್ಲೂಕಿನ ಹೊಸೂರು ಹೋಬಳಿಯ ಹೊಸಕೋಟೆ ಗ್ರಾಮದ ಸರ್ವೆ ನಂಬರ್ 71 ರಿಂದ 84ರ ವರೆಗೆ ಇರುವ ಸರ್ಕಾರಿ ಜಮೀನಿನಲ್ಲಿ ಸುಮಾರು 35 ವರ್ಷಗಳಿಂದ ಸ್ಥಳೀಯ ಭೂಹೀನರು ಜನರು ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಅವರನ್ನು ಒಕ್ಕಲೆಬ್ಬಿಸಲು ಹೊರಟಿರುವ ಕಂದಾಯ ಇಲಾಖೆ ಅಧಿಕಾರಿಗಳು ರಾಜಕಾರಣಿಗಳ ಪ್ರಭಾವಕ್ಕೆ ಮಣಿದು ಆ ಜಮೀನಿನಲ್ಲಿ ಯಾರು ಸ್ವಾಧೀನಾನುಭವದಲ್ಲಿ ಇಲ್ಲ ಎಂದು ಸರ್ಕಾರಕ್ಕೆ ಸುಳ್ಳು ವರದಿ ನೀಡಿದ್ದಾರೆ’ ಎಂದು ಹೇಳಿದರು. 
 
‘ಈ ಬಗ್ಗೆ ಪ್ರಶ್ನಿಸಲು ಹೋದ ರೈತರ ವಿರುದ್ಧ ಪೊಲೀಸರ ಮೂಲಕ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಅಲೆದಾಡುವಂತೆ ಮಾಡಿದ್ದಾರೆ. ಈ ಕೂಡಲೇ ಜಿಲ್ಲಾಡಳಿತ ರೈತರ ಮೇಲಿನ ಪ್ರಕರಣಗಳನ್ನು ವಾಪಸ್‌ ಪಡೆದು ಅವರು ಸಾಗುವಳಿ ಮಾಡುತ್ತಿದ್ದ ಜಮೀನಿಗೆ ಸಂಬಂಧಿಸಿದಂತೆ ಸಾಗುವಳಿ ಪತ್ರ ವಿತರಿಸಲು ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. 
 
‘ತಾಲ್ಲೂಕಿನ ಗುವ್ವಲಕಾನಹಳ್ಳಿ ಸರ್ವೆ ನಂಬರ್ 72/2 ರಲ್ಲಿ ನಿರ್ಮಿಸಲಾದ 150 ಮನೆಗಳನ್ನು ಸಕ್ರಮಗೊಳಿಸಿ ಸ್ಥಳೀಯರಿಗೆ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಬೇಕು. ಗುಡಿಬಂಡೆ ತಾಲ್ಲೂಕನ್ನು ಸ್ಮಾರ್ಟ್‌ಸಿಟಿ ಯೋಜನೆಗೆ ಸೇರಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಜಿಲ್ಲೆಯಾದ್ಯಂತ ಇರುವ ಮಹಿಳಾ ಸಂಘಗಳು ಮತ್ತು ರೈತರ ಸಾಲ ಮನ್ನಾ ಮಾಡಬೇಕು’ ಎಂದು ಒತ್ತಾಯಿಸಿದರು. ಸಮಾಜವಾದಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಕೆ.ಮುನಿನಾರಾಯಣ, ಮುಖಂಡರಾದ ಮುನಿಕೃಷ್ಣ ಇತರರು ಗೋಷ್ಠಿಯಲ್ಲಿದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.