ADVERTISEMENT

ಮಗನ ಸಿಡಿಮಿಡಿ, ಅಪ್ಪನ ಆಶೀರ್ವಾದ

ಶಿಡ್ಲಘಟ್ಟ: ಸೋತು ಗೆದ್ದ ‘ಆಪ್ತಮಿತ್ರ’, ಕೊನೆ ಗಳಿಗೆಯಲ್ಲಿ ವರಿಷ್ಠರ ಮನಗೆದ್ದ ಮೇಲೂರು ರವಿಕುಮಾರ್, ದೇವೇಗೌಡರ ನಿರ್ಧಾರಕ್ಕೆ ಆಕ್ರೋಶಗೊಂಡ ರಾಜಣ್ಣ

ಈರಪ್ಪ ಹಳಕಟ್ಟಿ
Published 24 ಏಪ್ರಿಲ್ 2018, 9:03 IST
Last Updated 24 ಏಪ್ರಿಲ್ 2018, 9:03 IST
ಒಂದಾನೊಂದು ಕಾಲದಲ್ಲಿ.. ಆಪ್ತ ಸ್ನೇಹಿತರಂತಿದ್ದ ಶಾಸಕ ಎಂ.ರಾಜಣ್ಣ ಮತ್ತು ಮೇಲೂರು ರವಿಕುಮಾರ್ ಅವರು ಕಾರ್ಯಕ್ರಮವೊಂದರಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರೊಂದಿಗೆ.
ಒಂದಾನೊಂದು ಕಾಲದಲ್ಲಿ.. ಆಪ್ತ ಸ್ನೇಹಿತರಂತಿದ್ದ ಶಾಸಕ ಎಂ.ರಾಜಣ್ಣ ಮತ್ತು ಮೇಲೂರು ರವಿಕುಮಾರ್ ಅವರು ಕಾರ್ಯಕ್ರಮವೊಂದರಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರೊಂದಿಗೆ.   

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವಿಚಾರದಲ್ಲಿ ‘ಚತುರ’ ರಾಜಕಾರಣಿ ಎಚ್.ಡಿ.ದೇವೇಗೌಡರು ಕೊನೆಯ ಗಳಿಗೆಯಲ್ಲಿ ಉರುಳಿಸಿದ ದಾಳಕ್ಕೆ ಶಾಸಕ ಎಂ.ರಾಜಣ್ಣ ಸೇರಿದಂತೆ ಅನೇಕರ ರಾಜಕೀಯ ಲೆಕ್ಕಾಚಾರಗಳ ತಲೆ ಕೆಳಗಾದವು.

ಕೆಲ ತಿಂಗಳಿಂದ ಗೊಂದಲದಲ್ಲಿಯೇ ಇದ್ದ ಶಿಡ್ಲಘಟ್ಟ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಪಕ್ಷ ನಿಷ್ಠ ಮುಖಂಡರು ಮತ್ತು ಕಾರ್ಯಕರ್ತರು ಸೋಮವಾರ ‘ದಿಢೀರ್’ ಬದಲಾದ ಪಕ್ಷದ ವರಿಷ್ಠರ ನಿರ್ಧಾರದಿಂದ ಮತ್ತಷ್ಟು ಗೊಂದಲಕ್ಕೆ ಒಳಗಾದರು. ಬೆಳಿಗ್ಗೆಯಿಂದ ಸಂತಸದಿಂದ ಮುಖಗಳೆಲ್ಲ ಮಧ್ಯಾಹ್ನದ ಹೊತ್ತಿಗೆ ಬಾಡಿದರೆ, ಬೆಳಿಗ್ಗೆಯಿಂದ ಬೆಂಗಳೂರಿನತ್ತಲೇ ದೃಷ್ಟಿ ನೆಟ್ಟವರು ಮಧ್ಯಾಹ್ನದ ನಂತರ ಮುಖ ಅರಳಿಸಿಕೊಂಡರು.

ಈ ಕ್ಷೇತ್ರದಲ್ಲಿ ಆರು ತಿಂಗಳ ಹಿಂದೆ ಸ್ಪರ್ಧೆಯ ವಿಚಾರವಾಗಿ ಶಾಸಕ ಎಂ.ರಾಜಣ್ಣ ಮತ್ತು ಮುಖಂಡ ಮೇಲೂರು ಬಿ.ಎನ್‌.ರವಿಕುಮಾರ್‌ ನಡುವೆ ಶುರುವಾದ ತಿಕ್ಕಾಟ ಚುನಾವಣೆ ಹೊಸ್ತಿಲಲ್ಲಿ ಜೆಡಿಎಸ್‌ ಪಾಳಯದಲ್ಲಿ ‘ಬಣ’ ರಾಜಕೀಯ ಶುರುವಿಟ್ಟುಕೊಂಡಿತ್ತು. ಆದರೆ ವರಿಷ್ಠರು ಎರಡು ತಿಂಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ‘ವಿಕಾಸ ಪರ್ವ’ ಸಮಾವೇಶದಲ್ಲಿ ರಾಜಣ್ಣ ಅವರಿಗೆ ಟಿಕೆಟ್ ಘೋಷಿಸುವ ಮೂಲಕ ‘ಯಾರಿಗೆ ಟಿಕೆಟ್?’ ಎಂಬ ಗೊಂದಲಕ್ಕೆ ತೆರೆ ಎಳೆದಿದ್ದರು.

ADVERTISEMENT

ಆದರೆ ಅಷ್ಟಕ್ಕೆ ತಣ್ಣಗಾಗದ ರವಿಕುಮಾರ್ ‘ಬಂಡಾಯ’ದ ಬಾವುಟ ಹಿಡಿದು ತಮ್ಮದೇ ಬೆಂಬಲಿಗರ ಪಡೆ ಕಟ್ಟಿಕೊಂಡು ಪ್ರಚಾರಕ್ಕೆ ಇಳಿದಿದ್ದರು. ಆದರೆ ಎಲ್ಲಿಯೂ ರವಿಕುಮಾರ್ ಜೆಡಿಎಸ್ ವರಿಷ್ಠರ ಮೇಲೆ ಮುನಿಸು ತೋರಿಸಿರಲಿಲ್ಲ. ಬದಲು ‘ನನ್ನ ನಡೆ ಜನರ ಕಡೆ’ ಅಭಿಯಾನ ಆರಂಭಿಸಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಬೆಂಬಲಿಗರೊಂದಿಗೆ ಕ್ಷೇತ್ರದಾದ್ಯಂತ ಮನೆ ಮನೆಗೆ ಸುತ್ತಿದರು. ತಮ್ಮ ಕರಪತ್ರದಲ್ಲಿ ದೇವೇಗೌಡರ ಭಾವಚಿತ್ರವನ್ನೇ ಬಳಸಿಕೊಂಡು ಮತದಾರರನ್ನು ‘ಭಾವನಾತ್ಮಕ’ವಾಗಿ ಸೆಳೆಯುವ ತಂತ್ರಕ್ಕೆ ಮೊರೆ ಹೋಗಿದ್ದರು.

ಕೇಳಿದವರಿಗೆಲ್ಲ, ‘ದೇವೇಗೌಡರ ಆಶೀರ್ವಾದ, ಶ್ರೀರಕ್ಷೆ ನನ್ನ ಮೇಲಿದೆ. ಹೀಗಾಗಿ ಕ್ಷೇತ್ರದಲ್ಲಿ ಅವರ ಹೆಸರಿನಲ್ಲಿ ಅನೇಕ ವರ್ಷಗಳಿಂದ ಜನ ಸೇವೆ ಮಾಡುತ್ತ ಬಂದಿರುವೆ. ಆದರೆ ಪಕ್ಷದಲ್ಲಿ ಕೆಲವರು ನನಗೆ ಟಿಕೆಟ್ ತಪ್ಪಿಸುವ ಕೆಲಸ ಮಾಡಿದರು. ಜೆಡಿಎಸ್‌ನಿಂದ ಟಿಕೆಟ್ ಸಿಗದಿದ್ದರೂ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ’ ಎನ್ನುತ್ತ ಬಂದಿದ್ದರು.

ಈ ನಡುವೆ ಶಿಡ್ಲಘಟ್ಟಕ್ಕೆ ಭೇಟಿ ನೀಡಿದ್ದ ಜೆಡಿಎಸ್ ವರಿಷ್ಠ ಎಚ್‌.ಡಿ.ಕುಮಾರಸ್ವಾಮಿ ಅವರು ಸಹ ಕ್ಷೇತ್ರದಲ್ಲಿನ ಈ ‘ಬಂಡಾಯ’ ಕಂಡು ಕಿಡಿಕಾರಿದರು. ‘ದೇವೇಗೌಡರ ಫೋಟೊ ಹಿಡಿದು ಬರುವವರನ್ನು ನಂಬಬೇಡಿ. ಹಣ ಚೆಲ್ಲಿ ಜನರನ್ನು ಗೆಲ್ಲಲು ಸಾಧ್ಯವಿಲ್ಲ. ಕ್ಷೇತ್ರದಲ್ಲಿನ ಬಂಡಾಯಕ್ಕೆ ಲಕ್ಷ್ಯ ಕೊಡಬೇಡಿ. ಶಾಸಕ ರಾಜಣ್ಣ ಅವರನ್ನು ಬೆಂಬಲಿಸಿ. ವಿರೋಧ ಪಕ್ಷದಲ್ಲಿದ್ದರೂ ಶಕ್ತಿ ಮೀರಿ ರಾಜಣ್ಣ ಅಭಿವೃದ್ಧಿಗೆ ಕೆಲಸ ಮಾಡಿದ್ದಾರೆ. ಅವರ ಮಾವ ಮುನಿಶಾಮಪ್ಪ ಅವರು ನನಗೆ ತಂದೆ ಸಮಾನರು’ ಎಂದು ರವಿಕುಮಾರ್ ಅವರನ್ನು ಟೀಕಿಸಿ ಹೋಗಿದ್ದರು.

ಕುಮಾರಸ್ವಾಮಿ ಅವರು ಭೇಟಿಯ ನಂತರ ರವಿಕುಮಾರ್ ಬಂಡಾಯದ ಬಗ್ಗೆ ರಾಜಣ್ಣ ಅವರು ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಸೋಮವಾರ ಮಾವ ಮುನಿಶಾಮಪ್ಪ ಅವರ ಪುಣ್ಯತಿಥಿ, ಇನ್ನೊಂದೆಡೆ ನಾಮಪತ್ರ ಸಲ್ಲಿಸುವ ಕಾರ್ಯಕ್ರಮಗಳಲ್ಲಿ ಬಿಡುವಿಲ್ಲದೆ ತೊಡಗಿಸಿಕೊಂಡಿದ್ದ ಅವರಿಗೆ ಮಧ್ಯಾಹ್ನದ ಹೊತ್ತಿಗೆ ‘ಆಪ್ತಮಿತ್ರ’ ನೀಡಿದ ‘ಶಾಕ್’ ಅರಗಿಸಿಕೊಳ್ಳಲು ಆಗಲಿಲ್ಲ.

ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್‌ನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡು ತನ್ನ ಪರವಾಗಿ ಓಡಾಡಿದ್ದ ಸ್ನೇಹಿತನೇ ಈ ಬಾರಿ ಜೆಡಿಎಸ್ ಅಧಿಕೃತ ಅಭ್ಯರ್ಥಿ ಎಂದು ‘ದೊಡ್ಡ’ ಗೌಡರು ಘೋಷಣೆ ಮಾಡಿದ್ದು, ಚುನಾವಣೆ ಸಿದ್ಧತೆಯಲ್ಲಿದ್ದ ಶಾಸಕರಿಗೆ ‘ದಿಗ್ಭ್ರಮೆ’ ಮೂಡಿಸಿದೆ ಎನ್ನಲಾಗಿದೆ.

‘ಸೋತು’ ಹೋಗಿದ್ದಾನೆ ಎಂದು ಭಾವಿಸಿಕೊಂಡ ಸ್ನೇಹಿತ ಸೋಮವಾರ ಮಧ್ಯಾಹ್ನದ ಹೊತ್ತಿಗೆ ‘ಗೆದ್ದ’ವರಂತೆ ಬೃಹತ್ ಮೆರವಣಿಗೆಯಲ್ಲಿ ನಾನೇ ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಿಕೊಂಡು ನಾಮಪತ್ರ ಸಲ್ಲಿಸಲು ಹೋದ ದೃಶ್ಯ ಕಂಡು ರಾಜಣ್ಣ ಅಕ್ಷರಶಃ ಕುದ್ದು ಹೋಗಿದ್ದರು.

ಈ ಕುರಿತು ಕೇಳಿದರೆ, ‘ಈ ರೀತಿ ಮಾಡುವುದಾದರೆ ವರಿಷ್ಠರು ಮೊದಲು ಏಕೆ ನನಗೆ ಬಿ.ಫಾರ್ಮ್ ಕೊಡಬೇಕಿತ್ತು? ಇದೀಗ ನನಗೆ ಬಿ.ಫಾರ್ಮ್ ತಪ್ಪಿಸಲು ವರಿಷ್ಠರು ಕಾರಣ ಕೊಡಬೇಕು. ನನ್ನ ಮುಂದಿನ ನಡೆಯನ್ನು ಬೆಂಬಲಿಗರೊಂದಿಗೆ ಚರ್ಚಿಸಿ ಘೋಷಿಸುತ್ತೇನೆ’ ಎಂದು ಹೇಳಿದರು.

ರಾಜಣ್ಣ ನಿರ್ಧಾರತ್ತ ಎಲ್ಲರ ಚಿತ್ತ

ಕ್ಷೇತ್ರದಲ್ಲಿರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿರುವ ಜೆಡಿಎಸ್ ಸದಸ್ಯರು ಸದ್ಯ ರವಿಕುಮಾರ್‌ ಅವರೊಂದಿಗೆ ಗುರುತಿಸಿಕೊಂಡಿದ್ದಾರೆ ಎನ್ನಲಾಗಿದೆ. ಜತೆಗೆ ಸೋಮವಾರ ನಾಮಪತ್ರ ಸಲ್ಲಿಕೆ ವೇಳೆ ಅವರು ತೋರಿದ ‘ಶಕ್ತಿ’ ಪ್ರದರ್ಶನ ಕೂಡ ಜೋರಾಗಿಯೇ ಇತ್ತು. ಇದೀಗ ರಾಜಣ್ಣ ಪಕ್ಷೇತರರಾಗಿ ಕಣಕ್ಕಿಳಿದು ಸ್ನೇಹಿತನಿಗೆ ‘ಸವಾಲ್’ ಹಾಕಿ ತೊಡೆ ತಟ್ಟುತ್ತಾರಾ? ಅಥವಾ ವೈಷಮ್ಯ ಮರೆತು ಗೆಳೆಯನಿಗೆ ಸಹಾಯ ಮಾಡುತ್ತಾರಾ ಎನ್ನುವುದು ಸದ್ಯ ಚರ್ಚೆಯಲ್ಲಿರುವ ಪ್ರಶ್ನೆ. ಹೀಗಾಗಿ ಈ ಕ್ಷೇತ್ರದಲ್ಲಿ ಇದೀಗ ಎಲ್ಲರ ಚಿತ್ತ ರಾಜಣ್ಣ ಅವರತ್ತ ನೆಟ್ಟಿದೆ.

ಗೆದ್ದ ವ್ಯಕ್ತಿ ನಿಷ್ಠೆ

ಜೆಡಿಎಸ್ ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ ಎಂದು ಓಡಾಡಿಕೊಂಡಿದ್ದ ರವಿಕುಮಾರ್ ಈ ನಡುವೆ ಪತ್ರಿಕಾಗೋಷ್ಠಿಯಲ್ಲಿ, ‘ನಾನು ಪಕ್ಷ ನಿಷ್ಠೆಗಿಂತ ವ್ಯಕ್ತಿ ನಿಷ್ಠ ವ್ಯಕ್ತಿ. ದೇವೇಗೌಡರು ಒಂದೊಮ್ಮೆ ನನ್ನನ್ನು ಕರೆದು ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಸೂಚಿಸಿದರೆ ಆ ಕ್ಷಣದಿಂದಲೇ ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ’ ಎಂದು ಹೇಳಿಕೊಂಡಿದ್ದರು. ಆದರೆ ಸೋಮವಾರದ ಬೆಳವಣಿಗೆ ನೋಡಿದರೆ ಪಕ್ಷ ನಿಷ್ಠರ ಎದುರು ವ್ಯಕ್ತಿ ನಿಷ್ಠರು ಗೆದ್ದಂತೆ ತೋರಿತು.

ಕುಮಾರಸ್ವಾಮಿ ರವಿಕುಮಾರ್ ನಡೆಗೆ ಸಿಡಿಮಿಡಿಗೊಂಡರೆ, ದೇವೇಗೌಡರೇ ಸ್ವತಃ ಚುನಾವಣಾಧಿಕಾರಿಗೆ, ‘ರಾಜಣ್ಣ ಅವರ ಉಮೇದುವಾರಿಕೆ ಹಿಂದಕ್ಕೆ ಪಡೆದು ರವಿಕುಮಾರ್ ಅವರನ್ನು ಅಧಿಕೃತ ಅಭ್ಯರ್ಥಿ ಎಂದು ಪರಿಗಣಿಸುವಂತೆ ಕೋರಿ’ ಎಂದು ಪತ್ರ ಬರೆದಿದ್ದಾರೆ. ಒಮ್ಮತವಿಲ್ಲದ ಅಪ್ಪ–ಮಕ್ಕಳ ನಿರ್ಧಾರಗಳಿಂದ ಪಕ್ಷ ನಿಷ್ಠರು ಇರುಸುಮುರಿಸಿಗೆ ಒಳಗಾಗ ಬೇಕಾಗಿ ಬಂದಿದೆ ಎನ್ನಲಾಗಿದೆ.

ಬಿಜೆಪಿ ಅಭ್ಯರ್ಥಿಯಾಗಲು ರಾಜಣ್ಣ ಯತ್ನ?

ಎಂ.ರಾಜಣ್ಣ ಅವರು ಜೆಡಿಎಸ್ ತೊರೆದು ಬಿಜೆಪಿ ‘ಹುರಿಯಾಳು’ ಆಗುವ ನಿಟ್ಟಿನಲ್ಲಿ ಸೋಮವಾರ ಸಂಜೆಯಿಂದ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಶಿಡ್ಲಘಟ್ಟ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ಗೆ ಮುಖಂಡರಾದ ಡಿ.ಆರ್‌.ಶಿವಕುಮಾರಗೌಡ, ನಾರ್ಥ್‌ಈಸ್ಟ್ ಸುರೇಶ್, ಬಿ.ಸಿ.ನಂದೀಶ್ ಆಕಾಂಕ್ಷಿಗಳಾಗಿದ್ದರು. ಈ ಪೈಕಿ ಶಿವಕುಮಾರಗೌಡ ಅವರ ಹೆಸರು ಮುಂಚೂಣಿಯಲ್ಲಿತ್ತು. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿಯಾಗಿದ್ದ ಅವರಿಗೆ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ ಪ್ರಕರಣವೊಂದರಲ್ಲಿ ಇತ್ತೀಚೆಗೆ ಸಿವಿಲ್ ನ್ಯಾಯಾಲಯ ಒಂದು ವರ್ಷ ಸಜೆ ಶಿಕ್ಷೆ ಮತ್ತು ಹತ್ತು ಸಾವಿರ ದಂಡ ವಿಧಿಸಿತ್ತು.

ಹೀಗಾಗಿ ಬಿಜೆಪಿ ಹೈಕಮಾಂಡ್ ಶಿವಕುಮಾರಗೌಡ ಅವರಿಗೆ ಟಿಕೆಟ್ ನೀಡುವ ನಿರ್ಧಾರ ಕೈಬಿಟ್ಟು ಸುರೇಶ್ ಅವರಿಗೆ ಬಿ.ಫಾಂ ನೀಡಲು ತೀರ್ಮಾನಿಸಿತ್ತು. ಇದೀಗ ಜೆಡಿಎಸ್‌ ಪಾಳೆಯದೊಳಗಿನ ಭಿನ್ನಮತ ಸ್ಫೋಟದಿಂದ ತನ್ನ ನಿರ್ಧಾರ ಪರಾಮರ್ಶಿಸುತ್ತಿದ್ದು, ರಾಜಣ್ಣ ಅವರಿಗೆ ಗಾಳ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ.

ಸದ್ಯ ರಾಜಣ್ಣ ಅವರು ಹೊಸಕೋಟೆಯ ಬಿಜೆಪಿ ಮುಖಂಡ ಬಿ.ಎನ್.ಬಚ್ಚೇಗೌಡ ಅವರ ಮೂಲಕ ಬಿಜೆಪಿ ಹೈಕಮಾಂಡ್‌ಗೆ ಬಿ.ಫಾಂಗಾಗಿ ಮನವಿ ಸಲ್ಲಿಸಿದ್ದು, ಮಾತುಕತೆ ಪ್ರಗತಿಯಲ್ಲಿದೆ ಎಂದು ತಿಳಿದುಬಂದಿದೆ. ಮಂಗಳವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು ರಾಜಣ್ಣ ಅವರ ಮುಂದಿನ ನಡೆ ಮಧ್ಯಾಹ್ನದ ಹೊತ್ತಿಗೆ ಸ್ಪಷ್ಟವಾಗಲಿದೆ.

**

ನನ್ನಿಂದ ಪಕ್ಷಕ್ಕೆ ಏನಾದರೂ ದ್ರೋಹವಾಗಿದೆಯೇ? ಅಥವಾ ನಾನು ರಾಜಕೀಯ ವ್ಯಭಿಚಾರ ಮಾಡಿದ್ದೇನಾ. ಅದಕ್ಕೆ ವರಿಷ್ಠರು ಉತ್ತರ ಕೊಡಲೇಬೇಕು 
– ಎಂ.ರಾಜಣ್ಣ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.