ADVERTISEMENT

ಮದ್ಯದಂಗಡಿ ತೆರವಿಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 5:41 IST
Last Updated 15 ಜುಲೈ 2017, 5:41 IST

ಚಿಕ್ಕಬಳ್ಳಾಪುರ: ಗ್ರಾಮದ ಬಳಿ ತೆರೆದಿರುವ ಮದ್ಯದ ಅಂಗಡಿಯನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಮುಸ್ಟೂರು ಗ್ರಾಮದ ನೂರಾರು ಮಹಿಳೆಯರು ಶುಕ್ರವಾರ ಅಂಗಡಿಗೆ ಬೀಗ ಹಾಕಿ, ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.

ಮದ್ಯದಂಗಡಿಯಿಂದ ಸ್ಥಳೀಯ ಜನರ ನೆಮ್ಮದಿ ಹಾಳಾಗುವ ಜತೆಗೆ ವಿವಿಧ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಆದ್ದರಿಂದ ಯಾವುದೇ ಕಾರಣಕ್ಕೂ ಇಲ್ಲಿ ಅಂಗಡಿ ತೆರೆಯಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ರಾಜಾಕಾಂತ್, ‘ಅಪಘಾತಗಳನ್ನು ತಡೆಗಟ್ಟಲು, ಪ್ರಯಾಣಿಕರು ಮತ್ತು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಸುಪ್ರೀಂ ಕೋರ್ಟ್‌ ಹೆದ್ದಾರಿ ಬದಿ ಬಾರ್‌ಗಳನ್ನು ಬಂದ್‌ ಮಾಡಲು ಆದೇಶಿಸಿದೆ. ಇಂತಹ ಸಂದರ್ಭದಲ್ಲಿ ಹೆದ್ದಾರಿ ಬದಿಯ ಬಾರ್‌ಗಳನ್ನು ಶಾಲೆ, ವಸತಿ ಪ್ರದೇಶ, ದೇವಸ್ಥಾನ ಇರುವ ಕಡೆಗಳಲ್ಲಿ ಸ್ಥಳಾಂತರಿಸಿದರೆ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಲಿದೆ’ ಎಂದರು.

ADVERTISEMENT

‘ಮದ್ಯದಂಗಡಿ ತೆರೆಯಲು ವಾಣಿಜ್ಯ ಪ್ರದೇಶದಲ್ಲಿ ಮಾತ್ರ ಪರವಾನಗಿ ನೀಡಲಾಗುತ್ತದೆ. ಆದರೆ ತಿಪ್ಪೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಜನವಸತಿ ಪ್ರದೇಶದಲ್ಲಿ ತೆರೆಯುತ್ತಿರುವ ಬಾರ್‌ಗೆ ಪರವಾನಗಿ ನೀಡಲಾಗಿದೆ. ಇದನ್ನು ಖಂಡಿಸಿ ಗ್ರಾಮಸ್ಥರು ಜುಲೈ 7 ರಂದು ಕೂಡ ಪ್ರತಿಭಟನೆ ನಡೆಸಿ ಬಾಗಿಲು ಅಂಗಡಿ ಮುಚ್ಚಿಸಿದ್ದರು. ಪರವಾನಗಿ ನೀಡಿದ ಒಂದು ವಾರದೊಳಗೆ ಸಾರ್ವಜನಿಕ ಆಕ್ಷೇಪಣೆಗಳು ಬಂದರೆ ಪರವಾನಗಿ ರದ್ದುಪಡಿಸಲು ಅವಕಾಶವಿದೆ’ ಎಂದು ತಿಳಿಸಿದರು.

‘ಸ್ಥಳೀಯರ ಆಕ್ಷೇಪಣೆಯಿಂದ ಕಾನೂನುಬದ್ಧವಾಗಿ ಮದ್ಯದಂಗಡಿಯ ಪರವಾನಗಿ ರದ್ದುಗೊಂಡಿದೆ. ಆದರೂ ಮದ್ಯದಂಗಡಿ ಮಾಲೀಕರು ಕೆಲ ಪಟ್ಟಭದ್ರ ಹಿತಾಸಕ್ತಿಗಳು, ಭಲಾಢ್ಯರ ಕುಮ್ಮಕ್ಕಿನಿಂದ ಪರವಾನಗಿ ಮದ್ಯದಂಗಡಿ ತೆರೆಯಲು ಮುಂದಾಗಿದ್ದಾರೆ. ಇದರಿಂದ ಅನಾಹುತಗಳು ಆಗುವ ಮುನ್ನವೇ ಅಬಕಾರಿ ಇಲಾಖೆ ಮತ್ತು ಜಿಲ್ಲಾಡಳಿತ ಎಚ್ಚೆತ್ತುಕೊಳ್ಳುವುದು ಒಳಿತು’ ಎಂದರು.

‘ನಗರಕ್ಕೆ ಹೊಂದಿಕೊಂಡಿರುವ ಗ್ರಾಮದಿಂದ ನಿತ್ಯ ನಗರಕ್ಕೆ ನೂರಾರು ಜನರು ಹಾಲು, ಸೋಪ್ಪು, ತರಕಾರಿ ತರಲು ಈ ರಸ್ತೆಯಲ್ಲೇ ಸಂಚರಿಸುತ್ತಾರೆ. ಅದಲ್ಲದೇ ಗೇರಹಳ್ಳಿ, ಅವಲಗುರ್ಕಿ, ಎಸ್‌.ಗೊಲ್ಲಹಳ್ಳಿ, ಕೇತೇನಹಳ್ಳಿ ಗ್ರಾಮಗಳಿಂದ ನಗರಕ್ಕೆ ಗಾರ್ಮೆಂಟ್ಸ್‌ ಕಂಪೆನಿಗಳಿಗೆ ನೂರಾರು ಮಹಿಳೆಯರು, ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಬರುತ್ತಾರೆ. ಇಲ್ಲಿ ಮದ್ಯದಂಗಡಿ ತೆರೆಯುವುದರಿಂದ ಸಾರ್ವಜನಿಕ ಬದುಕಿನ ಮೇಲೆ ಪರಿಣಾಮವಾಗಲಿದೆ’ ಎಂದು ಮುಷ್ಟೂರು ನಿವಾಸಿ ಚಂದ್ರಶೇಖರ್‌ ಹೇಳಿದರು.
‘ಮದ್ಯ ಸೇವನೆಯಿಂದ ಗ್ರಾಮದ ಜನರು ಮೊದಲೇ ಹಾಳಾಗುತ್ತಿದ್ದಾರೆ. ಇಲ್ಲಿ ಬಾರ್‌ ಶುರುವಾದರೆ ಊರಿನ ಮಹಿಳೆಯರು ಮತ್ತು ಮಕ್ಕಳು ಮತ್ತಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಕಿರಿಕಿರಿ ಉಂಟಾಗುತ್ತದೆ. ಮಹಿಳೆಯರು ಮನೆಯಿಂದ ಹೊರಗೆ ಬರುವುದು ದುಸ್ತರವಾಗುತ್ತದೆ. ಊರಿನ ಪರಿಸರ ಹಾಳು ಮಾಡುವ ಇಂತಹ ಅಂಗಡಿ ನಮಗೆ ಬೇಡ’ ಎಂದು ಸ್ಥಳೀಯ ನಿವಾಸಿ ರಾಧಮ್ಮ ತಿಳಿಸಿದರು.

ಪ್ರತಿಭಟನಾ ಸ್ಥಳಕ್ಕೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಶಿವಸ್ವಾಮಿ ಭೇಟಿ ನೀಡಿ ಅಬಕಾರಿ ಇಲಾಖೆ ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚಿಸುವುದಾಗಿ ಭರವಸೆ ನೀಡಿದ ಬಳಿಕ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು. ತಾಲ್ಲೂಕು ಪಂಚಾಯಿತಿ ಸದಸ್ಯ ಸತೀಶ್, ತಿಪ್ಪೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಂಕ್ರಪ್ಪ, ರಮೇಶ್, ಮುನಿಕೃಷ್ಣಪ್ಪ, ಮುನಿಸ್ವಾಮಿರೆಡ್ಡಿ, ಗ್ರಾಮಸ್ಥರಾದ ಮುನಿಗೋವಿದಪ್ಪ, ಅಂಜಲಿ, ಶ್ರೀನಿವಾಸ್‌, ಮಂಜುಳಾ, ಲಕ್ಷ್ಮೀ, ಪದ್ಮ, ಆನಂದಮ್ಮ , ದ್ಯಾವಮ್ಮ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.